ಶುಕ್ರವಾರ, ಅಕ್ಟೋಬರ್ 14, 2011

ಮಾಯಾಂಗನೆ ೩- ತಪ್ಪಿದ ಲೆಕ್ಕಾಚಾರ....!!

                 ನಾಗಲೋಕವನ್ನೇ ಪ್ರವೇಶಿಸುವಂತೆ ಒಂದೇ ಓಟದಲ್ಲಿ ಓಡುತಿತ್ತು ಬಸ್ಸು. "ಡ್ರೈವರ್, ಯುವಕನಿರಬೇಕು" ಅಂದುಕೊಂಡೆ. ಮೋಡ ಹನಿಹಾಕುತ್ತಿರುವುದರಿಂದ ಕಿಟಕಿಗಳೆಲ್ಲಾ ಮುಚ್ಚಿದ್ದು, ಉಸಿರು ಕಟ್ಟಿಸುವ ಅನುಭೂತಿಯನ್ನುಂಟುಮಾಡುತಿತ್ತು. ಅಸಾಧ್ಯವನ್ನ ತಡೆಯಲಾರದೇ ಗಾಜನ್ನ ಸರಿಸಿದೆ. ತಟ್ಟನೆ ಮಳೆಯ ತುಂತುರು ಮಿಶ್ರಿತ ಗಾಳಿ ಮುಖಕ್ಕೆ ರಾಚಿ... ಹಾಯ್..! ಎನ್ನುವಂತೆ ಮಾಡಿತು.


           ಆ ತಂಪಿಗೇ ಮುಖವೊಡ್ಡಿದೆ......
        ಆ ಒಂದು ಕ್ಷಣ!! ಮನವು ಎಲ್ಲವ ಬಿಟ್ಟು ಶೂನ್ಯಕ್ಕೆ ಪ್ರವೇಶಿಸಿದಂತಾಯಿತು. ಅಲ್ಲಿ ನಾ ನಿರಲಿಲ್ಲ..,. ಏನೂ ಇರಲಿಲ್ಲ... ಅಮೂರ್ತ! ಇರುವುದು ಏನಾದರೂ ಇದ್ದರೆ ತಾನೇ ಅರಿಯುವುದು!? ಪ್ರಯತ್ನಿಸುವುದು! ಏರುವುದು! ಆ ಸಮಯ..... ಯಾವುದಕ್ಕೂ ವಿಲೋಮವಿಲ್ಲ. ಪರಮಸುಖ. ಹಿತ. ಆನಂದ. ತಿಳಿ. ಅದು ಭಾವವಲ್ಲ! ಭಾವಕ್ಕೆ ಯಜಮಾನ. ಜಾಯಮಾನಕ್ಕೆ ನಿಲುಕುವಂತದ್ದಲ್ಲ.ಲೆಕ್ಕವಿಲ್ಲ. ಆಚಾರವಿಲ್ಲ. ಲೆಕ್ಕಾಚಾರವೂ ಇಲ್ಲ. ಪ್ರೀತಿಯಲ್ಲ. ದಳ್ಳುರಿಯಲ್ಲ. ನಿಶಭ್ದವಲ್ಲ. ಶಭ್ದವಿಲ್ಲ. ಶಬ್ಧವೂ ಇಲ್ಲ. ಸ್ಥಿತಿಯಲ್ಲ. ತಿಥಿಯೂ ಅಲ್ಲ. ಜಾಡ್ಯವಲ್ಲ. ಬಯಕೆಯಿಲ್ಲ. ಬಾಯಾರಿಕೆಯಿಲ್ಲ. ಆಕಾಶ!!!




          "ಥೂ...!! ಮುಚ್ಚ್ರಿ ಕಿಡ್ಕೀನ. ಮಳೆನೀರೆಲ್ಲಾ... ಒಳನುಗ್ತಾ ಇದೆ..." ತಟ್ಟಿ ಎಚ್ಚರಿಸಿದಂತಾಯಿತು, ಹಿಂದಿನ ಸೀಟಿನಿಂದ ಬಂದ ಗೊಗ್ಗರು ಗಂಟಲಿನ ಧ್ವನಿ. ಪಟಪಟನೆ ಕಿಡಕಿಯ ಮುಚ್ಚಿಕುಳಿತೆ. ಅಲ್ಲಿಗೇ ನನ್ನ ಮನದ ಆ ಕಿಂಡಿಯೂ ಮುಚ್ಚಿದಂತಾಯಿತು.ಮತ್ತೆ ಮನದಾ ಸ್ಥಿತೆಗೆ ಹೋಗುವ ಪ್ರಯತ್ನಮಾಡಿದೆ... ಊ.. ಹೂಂ..!
          ಇನ್ನಿಲ್ಲಿರುವುದು ಲೆಕ್ಕಾಚಾರದಲ್ಲಿ ತೊಡಗಿರುವ ಅಂಕಿಗಳು ಮಾತ್ರಾ! ಭಾರತೀಯ... ಶೂನ್ಯವನ್ನೇ ಹೇಗೆ ಕಂಡುಹಿಡಿದಿರಬಹುದು! ಒಂದು ಕಲ್ಪನೆಗೆ ಬಂದಂತಾಯಿತು. ನಮ್ಮವರು ತಿಳಿಸಿದ್ದ ಶೂನ್ಯವೇ ಬೇರೆ! ತಿಳಿದದ್ದೇ ಬೇರೆ! ಅರಿತುಕೊಂಡಿರುವುದು ಮಾತ್ರಾ ಹೊರಗಿನಿಂದ ಬೀಸಿದ ಸೊನ್ನೆಯ ಮುಂದಿರುವ ಲೆಕ್ಕಾಚಾರವನ್ನ!  ಅಂಕಿಗಳಮುಂದೆ ಸುತ್ತುವ ಸೊನ್ನೆಯನ್ನು ಮಾತ್ರಾ!! ಬರೇ ಸೊನ್ನೆ!!!!


           ಬಸ್ಸು ಯಾವುದೋ ಪುಟ್ಟ ಪಟ್ಟಣದಲ್ಲಿ ನಿಂತು, ಹೊರಟಿದ್ದು ಈಗ ನನ್ನ ಗಮನಕ್ಕೆ ಬಂತು! ಮೊದಲಿಷ್ಟೂ ರಷ್ ಇಲ್ಲದ್ದು.. ಈಗ ಸುಮಾರು ಎಲ್ಲಾ ಸೀಟುಗಳು ತುಂಬಿದೆ. ಕಂಡೆಕ್ಟರ್ ಸಾಹೇಬ ಎಲ್ಲಾ ಸೀಟುಗಳ ಲೆಕ್ಕಾಚಾರದಲ್ಲಿ ತೊಡಗಿ, ಬ್ಯುಸಿಯಾಗಿದ್ದ. ಆತನನ್ನೇ ನೋಡುತ್ತಾ ನನ್ನ ಯೋಚನಾ ಲಹರಿಯೊಳಗೆ ನುಗ್ಗಿದೆ. ಈಗ ಬಸ್ಸೇ ನಾನಂತೆ ಅನಿಸತೊಡಗಿತು! ಹಿಂದೆ-ಮುಂದೆ ಓಡ್ಯಾಡುತ್ತಿರುವ ಆ ಕಂಡೆಕ್ಟರ್ ಮನಸ್ಸಾದ. ಪ್ರಯಾಣಿಕರೆಲ್ಲಾ (ಮನೋ)ವ್ಯಾಪಾರಿ(ರ)ಗಳು! ಡ್ರೈವರ್, ಹತ್ತಿರ ಹೋಗಿ ನೋಡದೆಂತೂ ಅರಿಯದ ಆತ್ಮ! ಕಂಡೆಕ್ಟರ್ ತನ್ನ ಲೆಕ್ಕಾಚಾರಾದ ವ್ಯಾಪಾರದಲ್ಲಿ ಬ್ಯುಸಿ-ಬ್ಯುಸಿ ಇದ್ದು ಬಿಟ್ಟಿದ್ದಾನೆ!! ವ್ಯಾಪಾರಿಗಳು ಹತ್ತಿಇಳಿಯುತ್ತಿರುವುದಷ್ಟೇ ಮಾಡುತ್ತಿದ್ದಾರೆ.... ಚಿಲ್ಲರೆ ಇರುವವರು, ಚಿಲ್ಲರೆ ಜನ, ಚಿಣ್ಣರು,ನೋಡಿ ನಗುವ ಮಂದಿ, ನಗಿಸುವ ವಂದಿಮಾಗಧರು, ಹಿರಿ-ಕಿರಿಯರು, ಕಿರಿ-ಕಿರಿ ಮಾಡುವವರು, ಟಿಕೆಟ್ ಕೊಳ್ಳುವವರು, ಟಿಕೆಟ್ ಇಲ್ಲದೇನೇಯೇ..... ನಡೆದುಬಿಡುವವರು! ಅಡ್ಡಕಸುಬಿನವರೂ, ಉದ್ದುದ್ದ ಕಸುಬಿನವರೂ, ಬಿದ್ದು-ಜೋತಾಡುವವರೂ,ಕುಳಿತು ಕೂರುವವರೂ..! ಸೆರಗು ಮುಚ್ಚಿರುವವರು, ಜಾರಿಸುವವರೂ!! ಲೂಸುಗಳು...! ಫುಲ್ ಟೈಟ್ ಗಳು!! ವಂದಾ ಎರಡಾ!!?? ಯಾರಿದ್ದರೇನು ತನ್ನ ವ್ಯಾಪರವನ್ನಾ ಮಾಡಿ-ಮುಗಿಸಲೇಬೇಕು!!! ಎಲ್ಲರ ಲೆಕ್ಕಾಚಾರ ಮುಗಿಸಲೇಬೇಕು. ಟಿಕೆಟ್ ಕೊಳ್ಳುವವರಿಗೆ ಟಿಕೆಟ್ ಕೊಡಬೇಕು!! ಸಮಯಾವಕಾಶ ನೋಡಿ ಚಿಲ್ಲರೆಯನ್ನ ಜೇಬಿಗಿಳಿಸಿ, ಲೆಕ್ಕಾನಾಚಾರಗೊಳಿಸಬೇಕು!! ಕತ್ರಿಯಲ್ಲಿ ಕೈ ಯಾಡಿಸಿ ಖಾಲಿಮಾಡಿ, ಖಾತ್ರಿಮಾಡಿಕೊಳ್ಳಬೇಕು.  ಇಲ್ಲದಿದ್ದರೆ ಚಿತ್ರವಿಲ್ಲದ ಗುಪ್ತ ನ ಕೈಗೆ ತುತ್ತಾಗಿ ದಂಡವೆನ್ನುವ ಕರ್ಮದ ಗಂಟನ್ನ... ಮತ್ತೊಂದು ಜನುಮದ ನಂಟಿನಲ್ಲಿ ಬಿಚ್ಚಿ ಹಳಸಿದನ್ನವನ್ನ ಉಣ್ಣಬೇಕಾಗಬಹುದು. ಬಸ್ಸೇ ನಾನಾದರೆ, ತೆರಳುವ ಮಾರ್ಗವನ್ನ, ಹತ್ತಿಸಿಕೊಳ್ಳುಬೇಕಾದ ಮಂದಿಯನ್ನ ವಿಚಾರಿಸಿಕೊಳ್ಳುತ್ತಿರಬೇಕು. ತುಕ್ಕಾಗಿ ನಿಂತಾಗ ನೆನಪುಗಳನ್ನ ಮಧುರವಾಗಿ ನೆನಪಿಸಿಕೊಳ್ಳುವಂತಿರಬೇಕೇ ಹೊರತು... ಗಬ್ಬು ನಾರಿಸುವಂತಿರಬಾರದು ಅಲ್ಲವೇ!?? ಈ ಯೋಚನೆಯ ಪ್ರಶ್ನೆಗೆ ಉತ್ತರ "ಹೌದು...." ಎನ್ನುವಂತೆ ನನ್ನ ತಲೆಯನ್ನೂ ಆಡಿಸುತ್ತಾ.... ಕೆಳಮಾಡಿ, ಮೇಲೆತ್ತಿದೆ......
           ಏತ್ತಿದ ತಲೆಯ ದೃಷ್ಟಿಕೆಳಮಾಡಲು ಬಿಡಲೇ ಇಲ್ಲಾ! ಹಾಗೇ ಸ್ಥಿರವಾಗಿ ನಿಲ್ಲಿಸಿಬಿಟ್ಟಿತು. ಜೊತೆ-ಜೊತೆಗೆ ನನ್ನೀ ಹೃದಯದ ಬಡಿತದ ಲೆಕ್ಕಾಚಾರವನ್ನೂ ತಪ್ಪಿಸುವಂತೆ ಮಾಡಿತೊಂದು ಆಕಾರ! . ಸರಿಯಾಗಿ ನನ್ನೆದುರಾಗಿ.... ಮಾಯಾಂಗನೆ ಕುಳಿತಿದ್ದಾಳೆ, ಡ್ರೈವರ್- ಹಿಂಭಾಗದಲ್ಲಿದ್ದ ಹಿಮ್ಮುಖಮಾಡಿಕುಳಿತುಕೊಳ್ಳುವ ಸೀಟಿನಲ್ಲಿ!


          ಕತ್ತಲೆಂಬ ಬೆಳದಿಂಗಳ, ನಕ್ಷತ್ರಗಳ ಕಾಂತಿಯ ಸರೋವರದಲ್ಲಿ ಮಿಂದು, ಎದ್ದುಬಂದ ಹೊಂಬಣ್ಣವೇ ಮೈಯಾಗಿಸಿಕೊಂಡು ಎದ್ದುಬಂದಿರುವಳ್ತೋಂತಿದ್ದಳು, ಅವಳು. ಆ ಕಾಂತಿಗೆ ಮತ್ತೂ ಮೆರುಗನ್ನ ಕೊಡುತಿತ್ತು.... ಅವಳುಟ್ಟ ಆ ಕೆಂಪುಗುಲಾಬಿಯ ಬಣ್ಣದ ಸೀರೆ.
           ಮುಂದೆಲೆಯ ಒಂದಂಚಿನಲ್ಲಿ ಜಾರಿಸಿ ತೆಗೆಯಲ್ಪಟ್ಟ ಬೈ-ತಲೆ, ಕತ್ತಲೆಯ ಬಾನಿಗೆ ಮಿಂಚು; ಮಿಂಚಿನ ಕಾಂತಿಯ ನೀಡುವಂತಿತ್ತು. ತೆಳುವಿಶಾಲವಾದ ಅವಳ ಹಣೆಯಲ್ಲಿ, ಹರಡಿನಿಂತ ಬಾಳೆಯೆಲೆಯ ಮೇಲೆ ಬಿದ್ದ, ಬಾಳೇಯದೇ ಹೂವಿನಂತಿದ್ದ ಬಿಂದಿ ಕುಳಿತಿತ್ತು.
         ಹಗಲಿನಲ್ಲಿ ಕತ್ತಲೆಗೆ ಸ್ಥಳವಿಲ್ಲವೆಂದು ತಿಳಿದು, ಹಗಲಿನ ಬೆಳುಗನ್ನೇ ಪಟಲವನ್ನಾಗಿಸಿ, ಕತ್ತಲೆಯ ಕಪ್ಪು ಮಧುರತೆಯನ್ನೇ ಗೋಲಮಾಡಿ ಅಕ್ಷಿಪಟಲವನ್ನಾಗಿಸಿ ಮನಬಂದಂತೆ ಓಡಾಡಿಕೊಂಡಿರಲು ಬಿಟ್ಟಂತಿತ್ತು ಆ ಅವಳ ಕಣ್ಣುಗಳಲಿ. ತುಸು ಬಾಗಿದ, ಬ್ರಹ್ಮನಿಗೆ ತಪ್ಪಿದ ಲೆಕ್ಕಾಚಾರದಿಂದ ಗಿಣಿಯ ಕೊಕ್ಕನ್ನೇ ತಂದು ಇಲ್ಲಿ ಜೋಡಿಸಿದಂತಿತ್ತು.... ಆ ಅವಳ ಮೂಗು.




        ಇನ್ನು ಅವಳ ಆ ತುಟೀಗಳೋ........ ಆಗತಾನೇ ಅರಳಿದ ತೆಳುಗುಲಾಬಿಯ ಪಕಳೆಗಳೋ ಎಂದು ಭ್ರಮಿಸಿ, ಅದರ ಮೇಲೆ ಕುಳಿತು, ಸವಿತ್ರನ ಕಿರಣಗಳಿಗೆ ಮೈಯೊಡ್ಡಿ, ನವ-ನೂತನ ಪ್ರಭೆಯನ್ನ ಬೀರುವ ಆ ಬಿಂದುಗಳು..... ತಾನಾಗ ಬೇಕೆಂದು ಬಯಸಿ, ಸೋತು... ಮಳೆಯ ಹನಿಗಳು; ಕಣ್ಣೀರಿನಂತೆ ಮುಚ್ಚಿದ ಕಿಟಕಿಯ ಗಾಜಿನ ಮೇಲೆ ಬಿದ್ದು ಜಾರುವಂತೆ ತೋರುತಿತ್ತು.
        ಅದೇ ತರಣನ ಸಂಜೆಯ ಎಳೆಕಿರಣಕ್ಕೆ ಮಿರಿ-ಮಿರಿ ಮಿಂಚುತ್ತಿರುವ ಮೃದು ಮರಳಿನಂತಿರುವ ಅವಳ ಕಪೋಲವನ್ನ ನೋಡಿ , ಎಲ್ಲೋ ನುಗ್ಗಿದ ಗಾಳಿಯು; ಕಿಚ್ಚಿನಿಂದ ವಾರಿಧಿಯನ್ನ ದಡಕ್ಕೆ ತಂದೆರುಚವಂತೆ, ಅವಳ ಕೇಶರಾಶಿಯನ್ನೇ ತಂದೋಡ್ಡುತ್ತಿದ್ದ. ಆ ಅದನ್ನ ಸರಿಸಲು ಬರುವ ಅವಳ ಆ ಕೈ ತಾವರೆಯ ದಂಟಿನಂತಿದ್ದು, ಬೆರಳುಗಳು, ತಾವರೆ ಬಾಗಿ ಜಲವನ್ನ ತಾಕುವಂತೆ ಸವರಿ ನಿಲ್ಲುವಂತೆ ಕಾಣುತಿತ್ತು.
           ಅವಳು ಕುಳಿತಿರುವ ಭಂಗಿ, ಮೈ-ಮಾಟವೋ.... ಪರ್ವತಾಗ್ರದಿಂದ ಹುಟ್ಟಿ ಪಾದಾಂತದವರೆಗೆ ತಾನೆಷ್ಟು ವಯ್ಯಾರವಾಗಿ ಹರಿದರೆ ಚೆಂದಕಾಣೋವನೋ... ಎನ್ನುವುದನ್ನ ನೋಡಿಕೊಳ್ಳುವ ಬಯಕೆಯಂತೆ ನಿರ್ಮಿಸಿಕೊಂಡಿರುವ ಏರು-ತಗ್ಗುಗಳನ್ನ ಒಪ್ಪವಾಗಿ ನಿರ್ಮಿಸಿಕೊಂಡಿರುವಂತಿತ್ತು.
          
            ಹೀಗೆ... ಅವಳನ್ನು ನೋಡುತ್ತಿದ್ದಂತೆಯೇ......ನನ್ನ ನಾ ಮರೆತಿದ್ದೆ...... ನಾ ಅವಳಾಗಿದ್ದೆ... ನಾ ತಟ್ಟಿದ್ದೆ ನನ್ನಾ... ಮನದ ಕದವ. ಪುನಃ ತೆರೆದಿತ್ತು ಆ ಕದವು..... ಅಲ್ಲಿ ಈಗ ಆಗಿನ ಶೂನ್ಯವಿಲ್ಲ...... ಅವಳಿದ್ದಳು! ಸಕಲ ವರ್ಣಗಳ ಆತ್ಮವು ಶ್ವೇತಾ.... ನನ್ನ ಆತ್ಮವು ಅವಳು...... ಅವಳೇ!!!????


20 ಕಾಮೆಂಟ್‌ಗಳು:

  1. ಮಳೆ ನೀರು ಮುಖಕ್ಕೆ ತಾಗಿದಾಗ ಆದ ಅನುಭವದ ವಿವರಣೆ ಚಲೋ ಇದ್ದು. ಮಾಯಾಂಗನೆ ನ ಚಲೋ ವರ್ಣನೆ ಮಾಡಿದ್ಯೋ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪರಿಧಿಗೆ ಬರುವ ಪ್ರಕೃತಿ, ಘಟನೆ, ಸ್ತ್ರೀ ...ಎಲ್ಲವೂ ನಿಮ್ಮ ವರ್ಣನೆಯ ಭವ್ಯತೆಯಲ್ಲಿ ಮಿ೦ದು ಹೊಸ ರೂಪವನ್ನೆ ಪಡೆದಿವೆ!

    ಪ್ರತ್ಯುತ್ತರಅಳಿಸಿ
  3. ಓದಿ... ನಡೆದವರಿಗೆ ನಮನಗಳು.. :)ಓದಿ ಅಭಿಪ್ರಾಯ ತಿಳಿಸಿದವರಿಗೆ ಅನಂತ ಧನ್ಯವಾದಗಳು... :) ನನ್ನ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಿಸಿದ್ದೀರಾ.. ಪ್ರಯತ್ನಿಸುತ್ತೇನೆ.. :)

    ಪ್ರತ್ಯುತ್ತರಅಳಿಸಿ
  4. ಅದ್ಬುತವಾದ ಶಬ್ದ ಜೋಡಣೆ ಮಾಡಿದ್ದೆ. ಆ "ಮಾಯಾಂಗನೆ" ಹೇಳ ಶಬ್ದನೆ ಚೊಲೊ ಇದ್ದು. ನಿಜವಾಗಿ ಗೆಳೆಯ ................ ನೀನು ಹಿಂಗೆ ಬರಿತಾ ಇರು. ನಂಗ ಮನಾಸರೆ ಓದಿ ಖುಷಿ ಪಡ್ತ್ಯ.

    ಪ್ರತ್ಯುತ್ತರಅಳಿಸಿ
  5. ಬರವಣಿಗೆ ಚೊಲೋ ಇದ್ದು. ಹುಡುಗಿ ಬಗ್ಗೆ ಬರೆದದ್ದು ಸೂಪರ್. ಅಂದ ಹಾಗೆ ಯಾರು ಆ ಮಾಯಾಂಗನೆ?? ;)

    ಪ್ರತ್ಯುತ್ತರಅಳಿಸಿ
  6. ಗೋಪಾಲಕೃಷ್ಣರವರೆ..

    ಬಹಳ ಸುಂದರವಾಗಿ ಒಳಗಿನ ತುಮಲಗಳನ್ನು ಬಿಡಿಸಿಟ್ಟಿದ್ದೀರಿ..

    ನಿಮ್ಮ ಬರವಣಿಗೆಯ ಶೈಲಿ ಕೂಡ ಇಷ್ಟವಾಯಿತು...

    ಇನ್ನಷ್ಟು ಹೊಸ ನಿರೀಕ್ಷೆಗಳು..
    ಬರೆಯಿರಿ..

    ಪ್ರೀತಿಯಿಂದ

    ಪ್ರಕಾಶಣ್ಣ..

    ಪ್ರತ್ಯುತ್ತರಅಳಿಸಿ
  7. uttama baraha. cholo iddu.

    nannadondu prashne. ottinalli mayangane nimma bennu hattiruvaLo? athava mayangane bennu hattirruviro?

    ಪ್ರತ್ಯುತ್ತರಅಳಿಸಿ
  8. ನಿಮ್ಮದೇ ಆದ ಶೈಲಿಯನ್ನು ಹೊರಸೂಸಲು ಪ್ರಯತ್ನಿಸುತ್ತಾ ಮಾಯಾಂಗನೆಯನ್ನು ಬರೆದು ಸ್ತುತಿಸಿದ್ದೀರಿ, ಕಾರ್ಯ ಮುನ್ನಡೆಯಲಿ, ಶುಭಮಸ್ತು !

    ಪ್ರತ್ಯುತ್ತರಅಳಿಸಿ
  9. ತುಂಬಾ ಚೆನ್ನಾಗಿ ನಿರೂಪಿಸಿದ್ದಿರಿ ...ಚೆನ್ನಾಗಿದೆ..

    ಪ್ರತ್ಯುತ್ತರಅಳಿಸಿ
  10. ನಿಮ್ಮ ವಿವರಣಾತ್ಮಕ ಪದ ಗಳು ಮುದ ನೀಡಿದವು.....ಕಣ್ಣಿಗೆ ಸಿಕ್ಕಾಪಟ್ಟೆ ಕೆಲಸ ಕೊಡ್ತ್ರಿ ಹೇಳಾತು ಬಸ್ಸಿನಲ್ಲಿ....

    ಪ್ರತ್ಯುತ್ತರಅಳಿಸಿ
  11. ತುಂಬಾ ಖುಷಿಯಾಯ್ತು ಜೀಕೆ. ಮೊದಲ ಬಾಲಿಶತನ ಈ ಸಲದ ಮಾಯಾಂಗನೆಯಲ್ಲಿಲ್ಲ. ವಿಧದ ಭಾವನೆಗಳು. ಮಾಯಾಂಗನೆ ಅನ್ನೋ ವಿಚಿತ್ರ ವ್ಯವಹಾರ ಒಳನೋಟಕ್ಕೆ ಸಾಕ್ಷಿಯಾಗಲಿ .. ಮುಂದುವರೆಯಲಿ.

    ಕೆಲವೊಂದು ಅಕ್ಷರ ತಪ್ಪುಗಳಿವೆ, ಓದಿಕೊಂಡು ತಿದ್ದಿಕೊಳ್ಳಿ ..

    ಪ್ರತ್ಯುತ್ತರಅಳಿಸಿ