ಗುರುವಾರ, ಜುಲೈ 20, 2017

ಇಳಿಜಾರು




‘ನೀನು ಮೊದಲ ಹಾಗಿಲ್ಲ’ ಎಂದು ಅವಳು ಬೇಸರದಿ, ನುಡಿದು ನಡೆದಾಗ..

‘ನಾನೇನು ಬದಲಾಗಿದ್ದೇನೆ? ನಿನಗೆ ನನ್ನಲ್ಲಿನ ಸಲಿಗೆ ಹೆಚ್ಚಾಗಿದೆಯಷ್ಟೇ. ನಾನೇನೂ ಬದಲಾಗಿಲ್ಲ’, ಎನ್ನುತ ತನ್ನ ತಾನು ಸಮರ್ಥಿಸಿಕೊಳ್ಳುವಾಗ ಮನಸಿನ ಒಂದು ಮೂಲೆಯಲ್ಲಿ ‘ಸುಳ್ಳು.. ಸುಳ್ಳು..’ ಎಂದು ಅರಚಿಕೊಳ್ಳುವುದು ಆತನ ಗಮನಕ್ಕೆ ಬಂದಿಲ್ಲ ಅಂತೇನೂ ಅಲ್ಲ, ತನ್ನ ತನವ ಅಷ್ಟು ಸಲೀಸಾಗಿ ಹೊರ ತೆರೆದಿಡಲಾದೀತೆ?

‘ಹೌದು ಕಣೇ ನಾನು ಬದಲಾಗಿದ್ದೇನೆ. ನಿನ್ನ ಮೊದಲಬಾರಿ ಕಂಡಾಗ ಹೊಳೆದಿದ್ದವು ಈ ಕಣ್ಣುಗಳು, ನೀನಾಡಿದ ಕೆಲವೇ ಕೆಲವು ಮಾತುಗಳನು ದುಂಬಿಯ ಝೇಂಕರಿಸಿದಾಗಿನ ಸದ್ದಿನಂತೆ ಆಹ್ಲಾದಿಸಿದ್ದೆ. ನಿನ್ನ ನಗುವಿಗೆ ನನ್ನ ನಗುವನೂ ಸೇರಿಸಿ ಹೊಂದಿಸಲು ಯತ್ನಿಸಿದ್ದೆ. ನಿನ್ನ ಕೆಂದಾವರೆಯ ಕೆನ್ನೆಯನೊಮ್ಮೆ ಚಿವುಟಬೇಕೆಂಬ ನನ್ನ ಕೈಬೆರೆಳುಗಳ ಆಸೆಯ ಹೇಗೋ ತಡೆಹಿಡಿದಿದ್ದೆ. ಅಷ್ಟು ಸಲೀಸಾಗಿ ನನ್ನ ತನವ ಹೊರಹಾಕಲಾಗುತ್ತದೆಯೇ?’

‘ಆಶ್ಚರ್ಯಕರ ಎಂಬಂತೆ ನಮ್ಮಿಬ್ಬರ ಪರಿಚಯ ಸ್ನೇಹವಾಯಿತು, ಆ ಮೊದಲ ಆಕರ್ಷಣೆಯು ಪ್ರೇಮದ ತುತ್ತೂರಿಯನೂ ಊದಿದ್ದೂ ಆಗಿ.. ಈಗ ಮಾತ್ರಾ ಅದನು ಊದಲು ಉಸಿರೇ ಖಾಲಿಯಾದಂತಾದರೂ, ಊದುವುದ ಬಿಡದೆ ಮತ್ತೆ ಮತ್ತೆ ಅದನ್ನೇ ಯತ್ನಿಸುತ್ತಿದ್ದರೆ, ಹೊರ ಬರುವ ಅಪಸ್ವರವ ನೀನು ಗಮನಿಸದೇ ಇರಲು ಸಾಧ್ಯವೇ? ಆ ಗಮನಿಸುವಿಕೆಯಿಂದಲೇ ಈ ದಿನ ಈ ಮಾತುಗಳನ್ನಾಡಿ ನಡೆದಿದ್ದು ನೀನು’.

‘ನನ್ನೊಳಗಿನ ಪ್ರೇಮ ನೀವೇದಿಸುವಕೊಳ್ಳುವವರೆಗೆ ನೀನು ಬಲು ಆಕರ್ಷಣೀಯವಾಗಿದ್ದ ನನಗೆ, ಬರುಬರುತ್ತಾ ಸಪ್ಪೆಯಾಗುತಿರುವೆ. ಪ್ರೇಮದಲಿ ಕುರುಡಾಗಿದ್ದ ನಾನು ನಿನ್ನನ್ನು ಪೂರಾ ಗಮನಿಸೇ ಇರಲಿಲ್ಲ. ಚಿತ್ತಾಕರ್ಷಕವಾಗಿದ್ದ ನೀನೀಗ ಚಿತ್ತಚಾಂಚಲ್ಯವನುಂಟುಮಾಡುತಿರುವೆ. ಹೇಳಿದ್ದೆ ಹೇಳಿ ಹೇಳಿ ಕೇಳಿಸುವ ನಿನ್ನ ಮಾತುಗಳು ಈ ತಲೆಗೆ ಎರಡು ಕಿವಿಗಳನು ಕೊರೆದಿದೆ. ನಿನ್ನ ನಗುವಲ್ಲಿನ ಬೆಳದಿಂಗಳೇ ಈಗಿಲ್ಲ. ಆ ಸೂರ್ಯನಂತೆಯೇ ನಾನೂ.. ಹಗಲಿಗೆ ಗೊತ್ತಾಗದಂತೆ ರಾತ್ರಿಯ ಬಚ್ಚಿಟ್ಟಂತೆ, ನನ್ನ ಭಾವಭ್ರಮಣೆಯನ್ನು ಮುಚ್ಚಿಡುತ್ತಲೇ ಬಂದರೂ.. ಸಂಜೆಯಗತ್ತಲನು ನೀನು ಗಮನಿಸದೇ ಇರಲು ಸಾಧ್ಯವೇ?’

‘ನೀನು ಜಾವದ ತಂಪು ಇಬ್ಬನಿ ಹನಿ, ಹೊತ್ತೇರುತ್ತಿದ್ದಂತೆ ಸುಡುತ್ತಿರುವಂತೆ ಅನಿಸುತಿರುವೆ. ಅದಕೆಂದೇ ನಿನ್ನ ಭಾರಕೆ ನಾ ಬಾಗಿದ ಎಲೆಯಾಗಿ ನಿನ್ನ ಜಾರಿಸಿಕೊಳ್ಳುವ ತವಕದಲ್ಲಿದ್ದಂತ್ತಿದ್ದೆ...

‘ಆದರೆ..ಆದರೆ.. ನೀ ಹೀಗೆ ನಡೆದಾಗ..ನೀ ನನ್ನೊಡನೆ ಹರಿದಾಗಿನ ತೇವ ನೆನಪಾಗಿ ಉಳಿದು ನನ್ನ ಕಾಡುತಿದೆಯಲ್ಲ!

ನಾನೇ ಬಾಗಿದ ಎಲೆಯೇ..? ನೀನೇ ನನ್ನಿಂದ ಜಾರುವಂತಿದ್ದೆನೇ?

ನನ್ನ ಅವಿವೇಕದ ಬಾಗು ನಿನ್ನ ಜಾರಿಸಿತು..!

ಛೇ! ಸಮಯ ಮೀರಿತೇ!

ಜಾರಬೇಡಗೆಳತಿ… ನನ್ನಿಂದ…

~


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ