ಗುರುವಾರ, ಜುಲೈ 20, 2017

ಸಣ್ಣಕಥೆ: 'ಅನಾಥ'



ಅನಾಥನಾಗಿ ಬಿದ್ದಿದ್ದೆ ರಸ್ತೆಯಲ್ಲಿ.

ಮಧ್ಯರಾತ್ರಿಯ ಸಮಯವಾದ್ದರಿಂದ ಇತ್ತಕಡೆ ಯಾರೂ ಸುಳಿದಾಡುವ ಲಕ್ಷಣಗಳೇನೂ ಕಂಡುಬರುತ್ತಿಲ್ಲ. ಕಾರಣ ಮುಖ್ಯರಸ್ತೆಯೇನೂ ಇದಲ್ಲ. ಸ್ವಲ್ಪ ದೂರದಲ್ಲೇನೋ ಒಂದು ಮನೆಯಿದೆ ಅನಿಸುತ್ತಿದೆ. ಆದರೆ ನನ್ನ ಕೂಗು ಅಲ್ಲಿಗೆ ಮುಟ್ಟಿಸುವಷ್ಟು ನನ್ನಲ್ಲಿಯೇ ತ್ರಾಣವಿಲ್ಲವಾಗಿದೆ. ತಲೆಯನ್ನು ಆಕಡೆ ಈಕಡೆ ತಿರುಗಿಸಿ ನೋಡುವಷ್ಟು ಶಕ್ತಿಯಿದೆಯಷ್ಟೇ. ನಾನು ಬಿದ್ದಾಗ ಬೈಕ್ ಸೀದಾ ನನ್ನ ಕಾಲ ಮೇಲೆ ಬಿದ್ದದ್ದರಿಂದ ಅಸಾಧ್ಯ ನೋವು ಕಾಲಿನಿಂದ ಮೇಲೆ ಸೊಂಟದ ಕಡೆಗೆ ಹರಿದು ಬರುತ್ತಿರುವುದನ್ನು ಹಲ್ಲು ಕಚ್ಚಿ ಹೇಗೋ ಸಹಿಸುತ್ತಿರುವೆ. ಅಸಾಧ್ಯ ನೋವಿನಿಂದಲೋ ಏನೋ ಅರೆಪ್ರಜ್ಞಾವಸ್ಥೆಗೆ ಜಾರಿದೆ. ಈಗ ಕಣ್ಣುಗಳು ಮಾತ್ರಾ ಮಿಟುಕಿಸುತ್ತ, ಆಕಾಶದಲಿ ಕಾಣುವ ಮಿಣು ಮಿಣು ನಕ್ಷತ್ರಗಳನು ನೋಡಲಷ್ಟೇ ಸಾಧ್ಯವಾಗಿದೆ.

“ಮನಸಿನ ಕೆಲವೊಂದು ವ್ಯವಹಾರಗಳಿಗೆ ನಾನೊಬ್ಬ ಪಾತ್ರಧಾರಿ, ಮತ್ತೆಲ್ಲವುಗಳಿಗೆ ನಾ ಮೂಕ ಪ್ರೇಕ್ಷಕ” ಎಂಬಂತೆ, ಈಗ ಮನಸಿನಲಿ ನಡೆವ ನಾಟಕಗಳಿಗೆ ನಾನೀಗ ಪ್ರೇಕ್ಷಕನಾಗಿದ್ದೇನೆ. ಪ್ರಜ್ಞೆಯಲ್ಲಿರುವಾಗ ನಾನು ಮಾಡಿದ್ದೇ ಸರಿಯೆಂಬ ತೀರ್ಮಾನಕ್ಕೆ ಬರುವವರು, ಅರೆಪ್ರಜ್ಞಾವಸ್ಥೆಯಲ್ಲಿ ಮಾತ್ರಾ ಮನಸಿನಲಿ ನಡೆವ ಸರಿ-ತಪ್ಪುಗಳ ವಿಶ್ಲೇಷಣೆಗೆ ಪ್ರೇಕ್ಷಕನಾಗಿರುವುದಕ್ಕಷ್ಟೇ ಸಾಧ್ಯವಾಗುತ್ತಿದೆ. ನಾನೀಗ ಪಾತ್ರಧಾರಿಯಲ್ಲ. ನನ್ನ ಪಾತ್ರವನ್ನು ಮತ್ತಾರೋ ನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ.

ಹೌದು. ಎಷ್ಟು ಸುಲಭ. ತಪ್ಪನ್ನು ಬೇರೆಯವರ ಮೇಲೆ ಹಾಕಿ ಜಾರಿಕೊಳ್ಳುವುದು. ಈಗಷ್ಟೇ ನಾನು ನೋಡಿದೆನಲ್ಲ. ಆತ ತಾನು ಮಾಡಿದ ತಪ್ಪನ್ನು ತನ್ನ ಟೀಂ ಮೇಂಬರ್ ಮೇಲೆ ದಾಟಿಸಿ ಎಷ್ಟು ನಿರಾಳವಾದ. ಇನ್ನು ತಪ್ಪು ಒಪ್ಪಿಕೊಂಡಿದ್ದರೆ ಏನಾಗಬಹುದಿತ್ತು? ಪ್ರಮೋಷನ್ ತಪ್ಪುತಿತ್ತು. ಅಷ್ಟೇ.
ಆದಿನ, ಆತ ತಪ್ಪು ಒಪ್ಪಿಕೊಂಡಿದ್ದರೆ ಪ್ರಮೋಷನ್ ಖುಷಿಯಲ್ಲಿ ಫ್ರೆಂಡ್ಸೊಟ್ಟಿಗಿನ ಪಾರ್ಟಿ ಈ ಮಧ್ಯರಾತ್ರಿಯವರೆಗೆ ನಡೆಯುತ್ತಿರಲಿಲ್ಲ. ಈಗ ನಾನು ಈ ಸ್ಥಿತಿಯಲ್ಲಿರುತ್ತಿರಲಿಲ್ಲ.

ತಪ್ಪಾದ್ದ ಒಪ್ಪಿಕೊಳ್ಳುವಿಕೆ ಅಷ್ಟು ಸುಲಭವೇ? ತಪ್ಪ ಮರೆಮಾಚುವ ಅಭ್ಯಾಸದ ಘಟನೆಗಳು ಈಗಿನವರೆಗೆ ಅಸಂಖ್ಯಾತ ನಕ್ಷತ್ರಗಳಷ್ಟೇ ಕಾಣಿಸಿಕೊಳ್ಳುತ್ತಿವೆ. ಒಂದೊಂದು ತಪ್ಪೂ ಒಂದೊಂದು ಅವಕಾಶವಾಗಿತ್ತು, ಒಪ್ಪಿಕೊಂಡು ತಿದ್ದಿಕೊಳ್ಳಲು.

ಅವುಗಳಲ್ಲೆದರ ಪ್ರತಿಫಲ.

ನಾನಿನ್ನೂ ಅನಾಥನಾಗೇ ಬಿದ್ದುಕೊಂಡಿರುವೆ.
~

ಚಿತ್ರ ಕೃಪೆ: ಗೂಗಲ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ