ಶುಕ್ರವಾರ, ಜುಲೈ 29, 2011

ಮಾಯಾಂಗನೆ....


                   "ನೀ ನಿದ್ದೆ ಮಾಡಿಬಿಟ್ಟರೆ, ನಿನ್ನಜ್ಜ ಬರ್ತಾನಾ ಎಬ್ಬಿಸ್ಲಿಕ್ಕೆ!!?" ಎನ್ನುವ ಮನಸಿನ ಕುಟುಕಿನ ಮಾತಿಗೆ, ನಿದ್ದೆಯಭಾರಕ್ಕೆ ಮುಚ್ಚುತ್ತಿರುವ ಕಣ್ಣನ್ನ ಕಷ್ಟಪಟ್ಟು ತೆರೆದು ಕುಳಿತೆ. ಆದರೂ ಸಹ ಪೂರ್ವಾಭ್ಯಾಸದಂತೆ, ಏರಿಳಿತದ ರಸ್ತೆಯಲ್ಲಿ ಸಾಗುತಿದ್ದ ಬಸ್ಸು ನನಗೆ, ಕಂದನಾಗಿದ್ದಾಗಿನ ಅಮ್ಮ ತೂಗುವ ತೊಟ್ಟಿಲಂತೆ ಭಾಸವಾಗಿ ನಿದ್ದೆ ಒತ್ತರಿಸಿಕೊಂಡು ಬರುತ್ತಲೇ ಇತ್ತು. ಪೂರ್ವಾಭ್ಯಾಸವೆಂದು ನಾನಿಲ್ಲಿ ಯಾಕೆ ಹೇಳುತ್ತಿರುವೆನೇಕೆಂದರೆ, "ಚಿಂತೆಯಿಲ್ಲದಿರುವವನು ಸಂತೆಪೇಟೆಯಲ್ಲೂ ಕೂಡ ಗಡದ್ದಾಗಿ ನಿದ್ದೆ ತೆಗೆಯ ಬಲ್ಲವನಂತೆ!!" ಹ್ಹ.. ಹ್ಹ..! ಹೀಗೆ ಹೇಳುತ್ತಿರುವೆನೆಂದು ನನಗೆ ಚಿಂತೆಯೇ ಇಲ್ಲವೆಂದುಕೊಳ್ಳಬೇಡಿ; ನಿದ್ದೆಗೂ ನನಗೂ... ಯಾವ ಜನುಮದ ನಂಟೋ!? ನಾನೆಲ್ಲಿ ಹೋದರಲ್ಲಿ ನನ್ನೋಟ್ಟಿಗೇ ಗಂಟು ಕಟ್ಟಿಕೊಂಡು ಹೊರಟೇ ಬಿಡುತ್ತದೆ. ಅವಕಾಶ ಸಿಕ್ಕಾಗಲೆಲ್ಲ ತನ್ನ ಗಂಟನ್ನ.. ಚಿಂತೆಯಿರಲಿ, ಏನೇ ಇರಲಿ ಬಿಚ್ಚತೊಡಗಿಬಿಡುತ್ತದೆ. ಹಾಗೆ ಗಂಟುಬಿಚ್ಚುವ ಸ್ಥಳದಲ್ಲಿ ಬಸ್ಸೆಂದರೆ ಪಂಚಪ್ರಾಣ ನಿದ್ದೆಗೆ! "ಸ್ವಾಮೀ....ಈ ಸ್ಟಾಪು ಎಲ್ಲಿ ಬರುತ್ತೆ? ಇನ್ನೂ ಎಷ್ಟು ದೂರವಿದೆ? ತಾವೆಲ್ಲಿ ಇಳಿಯುವವರು?" ಎಂದು ನಾ ಇಳಿಯುವ ಸ್ಟಾಪಿನ ಬಗ್ಗೆ ಪಕ್ಕಕೂತ ಸಹಪ್ರಯಾಣಿಕನಲ್ಲಿ ಕೇಳಿ, ತಿಳಿದುಕೊಂಡು, "ಸ್ವಲ್ಪ, ಆ ಸ್ಟಾಪ್ ಬಂದ ತಕ್ಷಣ ತಿಳಿಸಿ ಬಿಡುತ್ತೀರಾ...??" ಎಂದು ಪಾಪದ ಮುಖಮಾಡಿಕೊಂಡು ಕೇಳಿದ ತಕ್ಷಣ, ತನ್ನ ಮೇಲೆ ಬಿದ್ದ ಹೊಸ ಜವಾಬ್ದಾರಿಗೆ ಬದ್ಧನಾಗಿ, ಕತ್ತನ್ನ ಉದ್ದಗೊಳಿಸುತ್ತಾ ಆಗಾಗ ನೋಡುವ ಹೊಸ ಸ್ನೇಹಿತನನ್ನ ನೋಡುತ್ತಾ, ಮನಸ್ಸಿನಲ್ಲೇ ನಕ್ಕು, ಮೆಚ್ಚಿಕೊಳ್ಳುತ್ತಾ, ನಾನು ಮಾತ್ರಾ ನಿದ್ದೆಯ ಗಂಟಿನೊಳಗೆ ಹುದುಗಿಕೊಂಡುಬಿಡುತಿದ್ದೆ! ಕೆಲವೊಮ್ಮೆ ಇದಕ್ಕೆ ವ್ಯತಿರೇಕವೂ ಕೂಡ ಆಗಿದ್ದಿದೆ! ಗಂಟು ಮುಖದವ ಬಂದು ಕುಳಿತರೆ, ಅವನಿಂದ "ಗೊತ್ತಿಲ್ಲಾರೀ..." ಎನ್ನುವ ಒಣಮಾತಿನಿಂದ, ಅವನ ಮೇಲೆ, "ನನ್ನ ನಿದ್ದೆಗೆ ಭಂಗತಂದ ಕಾರಣದಿಂದ ಅವನಿಗೆ ನರಕಕ್ಕೇ ಹೋಗುವ ಸ್ಥಿತಿ ಬಂತಲ್ಲ....!" ಎಂದು  ನೊಂದುಕೊಳ್ಳುವ ಪರಿಸ್ಥಿತಿ ನನ್ನದಾಗುತಿತ್ತು! ಏನಿದ್ದರೂ..ಪರೋಪಕಾರಿಗಳೇ ತುಂಬಿಕೊಂಡಿರುವ ನಮ್ಮಲ್ಲಿ, ನೂರಕ್ಕೆ ಹತ್ತರಷ್ಟು ಮಾತ್ರ ಅಂತವರಿಂದ ನನಗೀ ಅನುಭವವಾಗಿರೋದು. ಆದ್ರಿಂದ ನನ್ನದ್ಯಾವಾಗಲೂ ಸುಖಪ್ರಯಾಣವೇ!!
                            
                                
                        ಆದರೆ, ಈ ದಿನ ಮಾತ್ರ ನನಗೆ ಆ ಸೌಭಾಗ್ಯವಿಲ್ಲವೆನಿಸಿ, ಪಕ್ಕದ ಸೀಟು ಖಾಲಿಯಿಂದ ನನ್ನ ಅಣುಕಿಸುತಿದ್ದರೆ, ನಿದ್ದೆ ಮಾತ್ರ ತನ್ನಗಂಟನ್ನ ಬಿಚ್ಚಲು ಹಾತೊರೆಯುತಿತ್ತು!  ಪುನಃ ಕಣ್ಣನ್ನ ಗಟ್ಟಿಯಾಗೊಮ್ಮೆ ಉಜ್ಜಿ, ಸಂಪೂರ್ಣವಾಗಿ ತೆರೆದು ಪುನಃ ಕುಳಿತೆ, ಬಸ್ಸಿನಲ್ಲಿ ಹೆಚ್ಚು ಜನರಿದ್ದಂಗಿರಲಿಲ್ಲ. ಕಂಡೆಕ್ಟರ್ ಸಾಹೇಬ ಡ್ರೈವರ್ ಹತ್ತಿರ ಏನೋ ಹರಟುತಿದ್ದ. ಏನು ಮಾತನಾಡುತ್ತಿರ ಬಹುದೆಂದು ಆಲಿಸಲು ಪ್ರಯತ್ನಿಸಿದೆ, ನಡುವೆ ಮೂರು ಸೀಟುಗಳ ಅಂತರವಿದ್ದು ದೂರವಾದ್ದರಿಂದ, ಬಸ್ಸಿನ ಧ್ವನಿಯೂ ಕೂಡ ಅವರ ಮಾತಿನಲ್ಲಿಯೇ ಬೆರೆತು ಹೋದದ್ದರಿಂದ, ಅವರು ಮಾತನಾಡುವಿಕೆ ಕೇವಲ ಅಸ್ಪಷ್ಟ ಧ್ವನಿಯಾಗಿ ಮಾತ್ರವೇ ಕಿವಿಗೆ ಬಂದು ಬಡಿಯುತಿತ್ತು. ಅದರಲ್ಲಿ ಸೋತು ಪಕ್ಕದ ಸೀಟುಗಳಲ್ಲಿ ತಿರುಗಿಸಿದೆ. ಸುಮಾರು ಐದು ವರ್ಷದ ಹುಡುಗ, ಬಸ್ಸು ಮುಂದೆ-ಮುಂದೆ ಹೋಗುತ್ತಿರುವುದರಿಂದ, ಹಿಂದೆ-ಹಿಂದೆ ಓಡುತ್ತಿರುವ ಮರ-ಗಿಡಗಳನ್ನು ನೋಡುವ ಕುತೂಹಲಕ್ಕೆ ತಲೆಯನ್ನು ಹೊರಹಾಕಿ ನೋಡಲು ಪ್ರಯತ್ನಿಸುತಿದ್ದರೆ, ಅವನ ತಾಯಿ, ಅವನನ್ನ ಎಳೆದು ಕುಕ್ಕರಿಸುತಿದ್ದಳು. ಹಾಗೆಯೇ ಕುಳಿತ ಅವನು "ನಾಯಿ ಬಾಲ ಡೊಂಕೇ" ಎನ್ನುವಂತೆ,  ಪುನಃ ತಲೆ ನಿಧಾನವಾಗಿ ಹೊರನಡೆದು ಬಿಡುತಿತ್ತು! ಹೀಗೆ ಅವನನ್ನ ಕುಳ್ಳರಿಸಲು ಪಾಡುಪಡುತಿದ್ದಳವಳು!! ಅವರ ಮುಂದಿನ ಸೀಟಿನಲ್ಲಿ ಮುದಿ ದಂಪತಿಗಳು ಕುಳಿತಿದ್ದರಷ್ಟೇ! ಮತ್ತೆ ಅಂತಹ ವಿಶೇಷತೆಯೇನೂ ಕಂಡು ಬರದೇ, ಬೇಸರದಿಂದೆಂಬಂತೆ ಜೋಲಿಹೊಡೆಯುತ್ತಿದ್ದ ಬಸ್ಸಿನ ಕಿಟಕಿಯಿಂದ, ದೂರಕ್ಕೆ ಕಣ್ಣಾಡಿಸತೊಡಗಿದೆ.....
                                        ದೂರದಲ್ಲಿ ಹಸಿರು ಬೆಟ್ಟವೊಂದು ನಮ್ಮ ಬಸ್ಸಿಗೇ ರೇಸು ಕೊಡುವಂತೆ ನಮ್ಮ ಜೊತೆನೇ ಓಡಿ-ಓಡಿ ಬರುತ್ತಿರುವಂತೆ ಭಾಸವಾಗುತಿತ್ತು. ಅದರ ಬುಡದಲ್ಲಿನ ತಿಳಿಹಸಿರಿನ ಗದ್ದೆಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲಲ್ಲಿ ಪುಟ್ಟ-ಪುಟ್ಟ ಕೆರೆಗಳು... ಕೆಂಪು-ಕೆಂಪು ಹೆಂಚಿನ ಮನೆಗಳು.... ಕಲಾವಿದನ ಕುಂಚದಿಂದ ಜಾರಿದ ನೀರು, ಬಣ್ಣದ ಹನಿಗಳಂತೆ ಕಂಡುಬರುತಿತ್ತು. ಈ ರೀತಿಯಾಗಿ ನನ್ನ ಕಣ್ಣಿಗೆ ಕಂಡದ್ದನ್ನ ಕಲ್ಪಿಸುತಿತ್ತದ್ದಂತೆ, ನಿದ್ದೆಯೂ ತನ್ನ ನೆರಳನ್ನ ಹರಡಲು ಶುರುಮಾಡಿತು. ಪುನ: ತಲೆಯನ್ನು ಕುಡುಗಿ, ಸೀಟಿನ ಮೆದು ದಿಂಬಿಗೆ ತಲೆ ಇಟ್ಟು, ಹಸಿರು ಬೆಟ್ಟವನ್ನೇ ನೋಡತೊಡಗಿದೆ. ಆ ಸಂದರ್ಭದಲ್ಲಿಯೇ ನನ್ನನ್ನ ಅನಾಲೋಚಿತವಾಗಿ ಆ ಬೆಟ್ಟದ ತುದಿ ಆಕರ್ಷಿಸಿತಲ್ಲದೇ, ಆಶ್ಚರ್ಯಚಕಿತನನ್ನಾಗಿಸಿತೂ ಕೂಡ..!!
                                  ಸುತ್ತಲೂ ಕರಿ ಮೋಡ ತುಂಬಿ ಕೊಂಡಿದ್ದರೆ, ಅಲ್ಲೊಂದು ಬೆಳ್ಳಗಿನ ಮೋಡವೊಂದು ಬೆಟ್ಟದ ತುದಿಯಲಿ ತಾಗಿ ನಿಂತಿತ್ತು. ಅದರಿಂದ ಹೊರಸೂಸುತ್ತಿರುವ ಪ್ರಕಾಶವೂ ಸುತ್ತಲೂ ಹರಡಿ, ಏನೋ ಒಂದು ರೀತಿಯ ಆಹ್ಲಾದತೆಯನ್ನ ಉಂಟು ಮಾಡುವಂತೆ ಕಾಣುತಿತ್ತು. ಆ ಮೋಡದ ಮೈ ಶಿಲ್ಪಿಯಿಂದ ನಾಜೂಕಾಗಿ ಕೆತ್ತಲ್ಪಟ್ಟ ಅಮೃತ ಶಿಲೆಯಂತೆ ತೋರುತಿತ್ತು. ನನ್ನ ದೃಷ್ಟಿ ತದೇಕವಾಗಿ ಆ ಮೋಡದಲ್ಲೇ ಏಕೀಕರಣಗೊಂಡಾಗ ಅಲ್ಲೊಂದು ಸುಂದರ ವದನ ಕಂಡು ಹೌ-ಹಾರಿಹೋದೆ!!   ಮತ್ತೂ ಸ್ಪಷ್ಟವಾಗಿ ನೋಡಿದಾಗ ಅಸ್ಪಷ್ಟವಾದ ಮಾನವರ ಆಕಾರ ಕಾಣತೊಡಗಿತು. "ಹೌದು, ಅಲ್ಲಿ ಇರುವುದು ಮೋಡವಲ್ಲ!! ನಿಜವಾಗಲೂ ಅಲ್ಲಿ ಇರುವುದು ಮೋಡವಲ್ಲ.... ಯಾವುದೋ ದೇವಕನ್ಯೆಯಂತೆ ತೋರುವ ಒಂದು ಸ್ತ್ರೀ ಆಕಾರ.... ಅಲ್ಲ.. ಅಲ್ಲ.. ಅದು ದೇವಕನ್ಯೆಯೇ ಇರಬೇಕು.... ಇಲ್ಲದೇ ಹೋದರೆ ಅಷ್ಟು ದೂರದ ಬೆಟ್ಟದ ತುದಿಯಲಿ ಅವಳು ಹೇಗೆ ನನ್ನ ಕಣ್ಣಿಗೆ ಸ್ಪಷ್ಟವಾಗಿ ತೋರಬೇಕು ಹೇಳಿ?? ಹೌದು, ಅವಳು ದೇವಕನ್ಯೆಯೇ!"  ಆಶ್ಚರ್ಯದಿಂದ ಮತ್ತೊಮ್ಮೆ, ಮಗದೊಮ್ಮೆ ಅವಳಲ್ಲಿಯೇ ನೋಡುತ್ತಿದ್ದು ಬಿಟ್ಟೆ... ಇವಾಗ ಅವಳು ಮತ್ತೂ ಸ್ಪಷ್ಟವಾದಳು. ನನ್ನ ಆನಂದ ಹೇಳ ತೀರದು! "ದೇವಕನ್ಯೆಯೇ ನನ್ನ ಕಣ್ಣಿಗೆ ಕಾಣುತಿದ್ದಾಳೆ.... ! ಯಾವ ಲೋಕದವಳಾಗಿರಬಹುದು? ಹೇಗೆ ಬಂದಿಹಳಿಲ್ಲಿ? ಇಲ್ಲೇನು ಮಾಡುತ್ತಿರಬಹುದಿವಳು? ಯಾರಿಗಾದರೂ ಕಾದಿಹಳೇ?....." ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯೇ ನನ್ನೀ ಮನದಂಗಳದಲ್ಲಿ ಅಂಕುರಿಸತೊಡಗಿದವು.....
                   ಅವಳಿಂದ ನನ್ನೀ ಕಣ್ಣನ್ನ ಬೇರೆ ಮಾಡಲು ಸಾಧ್ಯವಾಗುತ್ತಲೇ ಇಲ್ಲ ನನಗೀಗ.. ನಾನೆಲ್ಲಿ ಕುಳಿತಿರುವೆನೆಂಬುದೇ ನನಗೆ ನೆನಪಾಗುತ್ತಿಲ್ಲ... ಮನದ ತುಂಬಾ ಆ ರೂಪವೇ.... ಅವಳಿಂದ ಸೂಸುತ್ತಿರುವ ಸುಗಂಧ ನನ್ನನ್ನ ಮತ್ತೂ ಅವಳೆಡೆಗೇ ಎಳೆದೊಯ್ದಿತು... ಅವಳ ರೂಪವನ್ನೇ ನೋಡಿ ನಾನಿಷ್ಟರವರೆಗೆ ಓದಿದ, ಕೇಳಿದ ಪದಗಳ ಸಾಲುಗಳಲಿ ಯಾವ ಪದಗಳೂ ಕೂಡ ಸರಿಸಾಟಿಯಾಗದಾದವು.... ಬ್ರಹ್ಮ ಇವಳನ್ನ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿದ್ದಲ್ಲ!!! ಬಹುಶಃ ಇವಳನ್ನ ಸೃಷ್ಟಿಸಲು ಇಷ್ಟುಕಾಲವೇ ಹಿಡಿದಿರಬೇಕೆನಿಸತೊಡಗಿತು.. ಅವಳನ್ನ ಈ ಕಣ್ಣುಗಳಲಿ ಆನಂದಿಸಲು ಎಲ್ಲಿಂದ ಪ್ರಾರಂಭಿಸಲಿ ಎನ್ನುವುದೇ  ತೋಚದಾಯಿತು... ಬೆಳ್ಳಗಿನ ಪಾದ... ಆ ಪಾದವನ್ನ ಬೀಸುತ್ತಿರುವ ಗಾಳಿಯಿಂದ ಆಗಾಗ ಮುಚ್ಚಲ್ಪಡುತ್ತಿರುವ ಅವಳುಟ್ಟ ಸೀರೆಯ ಅಂಚು, ಅವಳ ಶ್ವೇತವರ್ಣದ ಶರೀರಕ್ಕೇ ಪೈಪೋಟಿ ನೀಡುತ್ತಿರುವಂತಿರುವ ಅವಳುಟ್ಟ ತೆಳು ನೀಲಿ-ಬಿಳಿಬಣ್ಣದ ಸೀರೆ... ಆ ಸೀರೆಯ ಅಂಚಿಂದ ಬೀರುತ್ತಿರುವಂತಿರುವ ಹೊಂಬಣ್ಣ.... ಆ ಸೀರೆಗಳಲಿ ನಕ್ಷತ್ರಗಳೇ ಬಂದು ಕುಳಿತುಕೊಂಡಿದ್ದವೇನೋ.... ಅಂತಹ ಶೋಭೆಯನ್ನೇ ನೀಡುತ್ತಿರುವಂತಹ ಚಿತ್ತಾರಗಳು.. ತುಸು ಬಾಗಿ ನಿಂತ ಅವಳ ಎಡಗೈಯ ಮಣಿಗಂಟಿನತ್ತ ಜಾರಿದ ಬಳೆಗಳು.. ಆ ಕೈ ಲಿ ಹಿಡಿದಿರುವ ಹೂ ಗೊಂಚಲು... ಯಾವ ಲೋಕದಲ್ಲಿ ಕಿತ್ತುತಂದಿದ್ದೋ ಏನೋ?? ಯಾರಿಗೆ ಸಮರ್ಪಿಸಲೋ ಏನೋ?? ಅವಳು ನಿಂತ ಭಂಗಿಯಿಂದಲೇ, ಮತ್ತೂ ಆಕರ್ಶಿಸಲ್ಪಡುತ್ತಿರುವ ಅವಳ ಅಂಗ-ಸೌಷ್ಟವಗಳೂ... ಗಾಳಿಯ ವೇಗಕ್ಕೆ ಹಿಂದೆ ಹಾರಾಡುತ್ತಿರುವ ಸೀರೆಯ ಸೆರಗಿಗೆ.... ಪೈಪೋಟಿ ನೀಡುತ್ತಿರುವಂತಹ ಬೆನ್ನಿನ ಮೇಲೆ ಹರಡಿನಿಂತು ಹಾರಾಡುತ್ತಿರುವ ಆ ಕೊಂಚ, ಕೆಂಪು ಮಿಶ್ರಿತ ಕಪ್ಪು ಕೂದಲುಗಳು....  ಹಿಮದ ಬಿಂದುಗಳಿಂದ ನಿರ್ಮಿಸಲ್ಪಟ್ಟಂತಿರುವ ಧರಿಸಿದ ಮುತ್ತಿನ ಮಾಲೆಯಿಂದ ಶೋಭಿಸುತ್ತಿರುವ ಆ ಕತ್ತಿನ ಪ್ರದೇಶವೂ...ಇನ್ನು ಆ ತುಟಿಯ ನಡುವೆ ಮಿನುಗುತ್ತಿರುವ ಮಂದಹಾಸ.. ಆ ಮೂಗು.. ಆ ಕೆನ್ನೆ.... ಇಲ್ಲ ನನ್ನಿಂದ ಹೇಳಲಾಗುತ್ತಿಲ್ಲ.... "ಓ ದೇವ... ಯಾಕೆ ನೀನು ಅವಳನ್ನು ಬಿಂಬಿಸಲು ಶಬ್ದಗಳನ್ನೇ ಸೃಷ್ಟಿಸಲಿಲ್ಲ!!??? "  ಮತ್ತೆ... ವಿಶಾಲವಾದ ಹಣೆ, ಆ ಹಣೆಯ ಕೆಳಗೆ ಕಾಮನ ಬಿಲ್ಲಿನಂತೆ ಬಾಗಿದ ಹುಬ್ಬುಗಳು..... ಆ ಹುಬ್ಬುಗಳ ಕೆಳಗೆ.... ಆ ಕಣ್ಣುಗಳು.... ಆ ಕಣ್ಣುಗಳು!!! ನನ್ನೇ ನೋಡುತ್ತಿವೆ... ಹೌದು.. ಹೌದು.. ಅವು ನನ್ನೇ ನೋಡುತ್ತಿವೆ.... ಹೂ-ಗೊಂಚಲು ಹಿಡಿದಿರುವ ಕೈ ಮೇಲೇತ್ತಿ ನನ್ನ ಕಡೆಗೇ ಬರುತ್ತಿದೆ..... ನನ್ನಿಂದ ನಂಬಲಾಗುತ್ತಿಲ್ಲ!! ಆ ಹೂಗಳು ನನಗೆಂದೇ... !! ನನ್ನ ಕೈ ಕೂಡ ಅನಾಯಾಸವಾಗಿ ಮೇಲೆದ್ದಿತು.. ಗಾಳಿಯಲ್ಲೇ ತೇಲಾಡುತ್ತಿರುವಂತಹ ಅನುಭವ..ಇಲ್ಲ ಇಲ್ಲ... ನನಗಾಗುತ್ತಿರುವ ಆನಂದವನ್ನ ತಡೆಯಾಲಾಗುತ್ತಿಲ್ಲ.... ಇದು ಕನಸಲ್ಲ...ತಾ....!! "ಅಮ್ಮಾ.....!!!" ಬಾಯಿಯಿಂದ  ಅನೌಚಿತವಾಗಿ ಹೊರಬಂದ ಶಬ್ದದಿಂದ ಕಣ್ಣುತೆರೆದು ಕುಳಿತೆ!! ಒಮ್ಮೆಗೇ.... ಏನಾಯಿತು ಅನ್ನುವುದೇ ಬುದ್ಧಿಯ ಪಟಲದಲ್ಲಿ ತೋಚದಂತಾಯಿತು!! "ಅಮ್ಮಾ.." ಅಂದಿದ್ದು ಯಾಕೆಂದು ಉಬ್ಬಿನಿಂತ ಹಣೆಯ  ಬಲಪಕ್ಕದಲ್ಲಿ  ಉಂಟಾಗುತ್ತಿರುವ ನೋವು ತಿಳಿಸುತಿತ್ತು! ಆ ನೋವು ಯಾಕಾಯಿತೆಂದು, ಕಿಟಕಿಯಿಂದ ತಲೆ ಹೊರಹಾಕಿ, ಕೆಳನಿಂತ ಯಾರೊಂದಿಗೋ  ಕೂಗಾಡುತ್ತಿರುವ ಡ್ರೈವರ್ ನಿಂದ ತಿಳಿಯಲ್ಪಟ್ಟಿತು! ತಕ್ಷಣ ನಾ ವಾಸ್ತವಕ್ಕೆ ಬಂದು, ಎದ್ದುನಿಂತು ಕಂಡಕ್ಟರ್ ನಲ್ಲಿ ಕೇಳಿದೆ, " ಸಾರ್... ನಾ ಇಳ್ಯೋ ಸ್ಟಾಪ್..........??? " ಆ ಸ್ಟಾಪ್ ಆ..... ಅದಾಗ್ಲೆ ಕಳ್ದು ತಾಸ್ ಆಯ್ತಲ್ರೀ.... ಏನ್ ಮಾಡ್ತಿದ್ರಿ ಇಷ್ಟೊತ್ತು??? ಇಳ್ಳಿರ್ರೀ.. ಇಳ್ಳಿರ್ರೀ....ಬರ್ತಾರ್ರೆ... ನಮ್ ಪ್ರಾಣ ತಿನ್ನೋಕೆ.... ಯಾವ್ದಾದ್ರೂ ಹಿಂದೆ ಹೋಗುವ ಗಾಡಿ ಬಂದ್ರೆ ಹತ್ತು ....... " ಕಂಡಕ್ಟರ್ ಸಾಹೇಬ್ರ ಬಾಯಿಂದ ಮಾತುಗಳು ಬರುತ್ತಿದ್ದವು, ಅದನ್ನ ಕೇಳುವ ವ್ಯವಧಾನ ನನಗಿರಲಿಲ್ಲ.... ಬ್ಯಾಗನ್ನ ತಗೊಂಡು ಬಸ್ಸಿನಿಂದ ಇಳಿದು ನಿಂತೆ....!!!
                                         ಗೊರ್ರರ್... ಎಂದು ಧ್ವನಿ ಮಾಡುತ್ತ.... ನನ್ನೆದುರಿಂದ ಬಸ್ಸು ಮುಂದೆ ತೆರಳಿತು.... "ಏನಪ್ಪ ಗ್ರಾಚಾರ... ನಂದು, ಇನ್ಹೇಗೆ ನನ್ನ ಗಮ್ಯಸೇರುವುದಪ್ಪಾ???" ಎಂದು ಮನಸ್ಸಿನಲ್ಲೇ ಹಳಿಯುತ್ತಾ... ಬೆಟ್ಟವಿದ್ದಕಡೆ ದೃಷ್ಟಿಹಾಯ್ಸಿದರೆ.......ಅಲ್ಲಿ ದೇವಕನ್ಯೆಯೂ ಇರಲಿಲ್ಲ, ಬೆಟ್ಟವೂ ಇರಲಿಲ್ಲ..... ಬದಲಿಗೆ ಕರ್ರಗಿನ ಶರೀರಹೊತ್ತ... ರಕ್ಕಸನಂತಿರುವ.. ಕಾರ್ಮೋಡವೊಂದು, ನುಂಗುವಂತೆ.... ಕೆಕ್ಕರಿಸಿಕೊಂಡು ಒಂಟಿಯಾಗಿ ರಸ್ತೆಯ ಅಂಚಿಗೆ ನಿಂತ ನನ್ನನ್ನೇ ನೋಡುತಿತ್ತು.....!!!!

6 ಕಾಮೆಂಟ್‌ಗಳು:

 1. ರಂಜಿತಾ ಹೆಗಡೆ, ಈಶ್ವರ್ ಭಟ್ರಿಗೆ... ಹೃತ್ಪೂರ್ವಕ ಧನ್ಯವಾದ.. :)

  ಪ್ರತ್ಯುತ್ತರಅಳಿಸಿ
 2. ದೇವಕನ್ಯೆ ಅದ್ಬುತ ಕಲ್ಪನೆ..! ನಿದ್ದೆಯ ಮೋಡಿ ದೇವಕನ್ಯೆಯನ್ನೇ ಸ್ರುಷ್ಟಿ ಮಾಡ್ತು ಅಂತಾದ್ರೇ ನೀನು ಯಾವಾಗ್ಲೂ ಬಸ್ಸನಲ್ಲಿ ನಿದ್ದೆ ಮಾಡೋದು ಒಳ್ಳೇದು..ನಮಗೂ ಒಂದು ಆಗಾಗ ದೇವಕನ್ಯೆಯರನ್ನ ತೋರಿಸ್ತಾ ಇರ್ಲಕ್ಕು.ನಿಜಕ್ಕೂ ಒಳ್ಳೆಯ ಬರವಣಿಗೆ ಹೀಗೇ ಮುಂದುವರಿಯಲಿ.

  ಪ್ರತ್ಯುತ್ತರಅಳಿಸಿ
 3. ಹ ಹ ಹ....!! ಚೆನ್ನಾಗಿದೆ!!!
  ನನಗೂ ಬಸ್ಸಿನಲ್ಲಿ ಮಲಗೋ ಹುಚ್ಚು ಇದೆ.
  ಆದ್ರೆ ಇಲ್ಲಿ ಒರೆಗೆ ಈ ರೀತಿ ಅನುಭವ ಆಗ್ಲೇ ಇಲ್ವಲ್ರೀ..

  ಪ್ರತ್ಯುತ್ತರಅಳಿಸಿ