ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು. ಕಾಲದ ನವನಾಟಕದ ಆರಂಭಕ್ಕೆ ವೇದಿಕೆಯೇ ಮೌನ!
******
ಆವರಿಸಿದ ರಾತ್ರಿಯ ಕತ್ತಲಾದರೋ ಗುರು-ಶಿಷ್ಯರಿಬ್ಬರನ್ನು ಮುಂದೋಗದಂತೆ ಕಟ್ಟಿಹಾಕಿತ್ತು. ಭಯಕ್ಕಲ್ಲ, ಅಭಯಕ್ಕೆ. ಸತ್ಕಾರ್ಯಗಳಿಗೆ ಕತ್ತಲಿನ ಹಸ್ತ ಯಾವಾಗಲೂ ಚಾಚಿಯೇ ಇರುತ್ತದೆ. ಸಕಲ ತಿರುವುಗಳಿಗೆಲ್ಲಾ ಕಾರಣ ಕತ್ತಲೆಯೇ! ಅದರೊಟ್ಟಿಗೆ ಕಾಲದ ಜೊತೆಯೂ ಸೇರಿಬಿಟ್ಟರಂತೂ, ಇತಿಹಾಸ ಸುವರ್ಣಪುಟ.
ಶಿಷ್ಯ ಬೇಡಿತಂದ ಭಿಕ್ಷೆಯಿಂದ ರಾತ್ರಿಯ ಊಟ ತಯಾರಿಸಲು ಉರಿಹೊತ್ತಿಸುತ್ತಿದ್ದನು. ಗುರು ದೀರ್ಘಮೌನದಲ್ಲಿ ಆಕಾಶದತ್ತ ಮುಖಮಾಡಿ ಧ್ಯಾನದಲ್ಲೆಂಬಂತೆ ಕುಳಿತಿದ್ದರು. ಪ್ರತಿವರ್ಷದ ಪರಿಪಾಠದಂತೆಯೇ ನಲವತ್ತೆಂಟು ದಿನಗಳಕಾಲ ಮೌನವ್ರತದಲ್ಲಿ ತನಗಿಷ್ಟನಾದ ಶಿಷ್ಯನೊಟ್ಟಿಗೆ ಊರಿಂದೂರಿಗೆ ಸುತ್ತುತ್ತಾ, ಕಟ್ಟಕಡೆಗೆ ಸಹಸ್ರಾರ ನದಿಯ ದಂಡೆಯ ತಲುಪಿದ್ದ ಆ ಗುರು.
ತನ್ನದೇ ನವಛಾಪನ್ನು ಬೀರುತ್ತಾ, ಉಳಿದ ಮಿಣುಕು-ಮಿಣುಕು ತಾರೆಗಳಿಗೆಲ್ಲಾ ತಾನೊಬ್ಬನೇ ಬೆಳಕುನೀಡುತ್ತಾ, ಉತ್ಸಾಹಿಸುತ್ತಿರುವನೋ ಎಂಬಂತಿದ್ದ ಧೃವ ನಕ್ಷತ್ರದ ಮೇಲಿನ ದೃಷ್ಟಿಯನ್ನು ಒಬ್ಬನೇ ವಟಗುಟ್ಟುತ್ತಿರುವ ಶಿಷ್ಯನ ಮೇಲೇ ಬೀರಿ, ಮನದೊಳಗೇ ನಕ್ಕ ಗುರು.
ಮಾತಿಗೆ; ಮೌನವೆಂದು ಹೇಳಲು ಗೊತ್ತೇ ಹೊರತು, ಅದರ ಮರ್ಮ ತಿಳಿದಿಲ್ಲ. ಮೌನವೆಂಬ ಧ್ಯಾನದಾಳದಲ್ಲಿರುವ ಜ್ಞಾನದ ರಾಶಿಯೂ ಸಹ. ಆ ಶಿಷ್ಯನಿಗೂ ಹಾಗೇ. ಮೌನ ಆತನ ಬಳಿ ವಾಸನೆಗೂ ಸುಳಿದದ್ದಿಲ್ಲ! ದಡ್ಡತನವು ಆಡುವ ಮಾತಿನಿಂದ, ಆಚರಿಸುವ ಕಾರ್ಯದಿಂದ ಗುರುತಿಸಲ್ಪಡುವುದು ತಾನೇ? ಅಂತೆಯೇ ಆ ಶಿಷ್ಯನೂ.
ಗುರು ತನ್ನ ಯಾತ್ರೆಗೆ ತನ್ನೊಟ್ಟಿಗೆ ಸಾಗಲು ಈತನನ್ನು ಆರಿಸಿದ್ದು ನೋಡಿ ಬೆಪ್ಪಲ-ಬೆರಗಾಗಿತ್ತು ಶಿಷ್ಯವೃಂದ. ಗುರು ಮಾರ್ಗ ಎಂದಿಗೂ ಛನ್ನ.
ಮೊಳಕೆಯೊಡೆದು, ಜೀವಕ್ಕೆ ಉಸಿರನ್ನ, ಆಯಾಸಕ್ಕೆ ತಂಪನ್ನ, ಹಸಿವಿಗೆ ಫಲವನ್ನ ಕೊಡಲು ಹಾತೊರೆಯುತ್ತಿರುವ ಮೂಲವಂಶದಂತೆ; ಯಾತ್ರೆಯಲ್ಲಿನ ಗುರುವಿನ ಸಾಮೀಪ್ಯ ಶಿಷ್ಯನನ್ನು ಸೂಕ್ಷ್ಮವಾಗಿ ಬದಲಿಸುತಿತ್ತು.
ಉರಿಹೊತ್ತಿಸಿ, ಪಾತ್ರೆಯಲ್ಲಿ ಸ್ವಲ್ಪವೇ ನೀರಿರುವುದನ್ನು ನೋಡಿದ ಶಿಷ್ಯ, ನೀರು ತರಲು ಕತ್ತಲಲ್ಲೇ ಕಾಲಿ ಕೊಡದೊಡನೆ ನದಿಯಕಡೆ ತೆರಳಿದ. ನೆರಳು ಅವನನ್ನು ಹಿಂಬಾಲಿಸಲು ಯತ್ನಿಸಿ, ಸೋತು, "ತಾನೇ ಕತ್ತಲಾಗಿದ್ದೇನೆ, ಇನ್ಯಾಕೆ ಅನುಸರಣೆ!" ಎನ್ನುವಂತೆ, ತನ್ನ ತಾ ಸಮಾಧಾನಿಸಿ, ಯೋಗ್ಯರನ್ನು ಅನುಸರಿಸಲೊಂದು ಯೋಗ್ಯತೆಯೂ ಬೇಕೆಂಬಂತೆ, ಉರಿಯ ಪಕ್ಕದಲ್ಲಿರಿಸಿಕೊಂಡ ಕಲ್ಲನ್ನೇ ಆಶ್ರಯಿಸಿ ತೆಪ್ಪಗಾಯಿತು.
ರಾತ್ರಿಯ ಪ್ರಶಾಂತತೆಯನ್ನು ತಾನೆಲ್ಲಿ ಭಂಗಮಾಡಿಯೇನೋ ಎಂಬ ಭಯದಿಂದಲೇ ಶಾಂತವಾಗಿಯೇ ತನ್ನ ಗಮ್ಯದ ಕಡೆ ಸಾಗುತಿತ್ತು ಸಹಸ್ರಾರ ನದಿ. ನದಿಯತ್ತ ತೆರಳಿದ ಶಿಷ್ಯ, ಬಾಗಿ ಕೊಡವನ್ನು ನೀರಿನಲ್ಲಿ ಮುಳುಗಿಸಿ ನೀರು ತುಂಬಿಸತೊಡಗಿದ. ನೀರು ತುಂಬುತ್ತಿದ್ದಂತೆಯೇ... ಬುಳು ಬುಳುಕ್... ಎಂದು ಸದ್ದು ಮಾಡುತ್ತಾ ಗಾಳಿ ಹೊರಹೋಗಿದ್ದು ಶಿಷ್ಯನಿಗೆ ವಿಚಿತ್ರವೆನಿಸಿ, ಮತ್ತೆ-ಮತ್ತೆ ಕೊಡವನ್ನು ಖಾಲಿಮಾಡಿ ನೀರು ತುಂಬಿಸುತ್ತಾ, ಆ ಸದ್ದನ್ನೇ ಕೇಳುತ್ತ ಏನೋ ಒಂದು ರೀತಿಯ ಆನಂದದಲ್ಲಿ ಮುಳುಗಿದ್ದ.
ಶಿಷ್ಯನು ಕೊಡಕ್ಕೆ ದ್ಯೋತಿಸುವವನಾದರೆ, ಜ್ಞಾನ ನೀರು. ಜ್ಞಾನವಿದ್ದಲ್ಲಿ ಖಾಲಿತನವಿರಲು ಸಾಧ್ಯವೇ ಇಲ್ಲ.
ಆ ಹೊತ್ತಿನಲ್ಲೇ, ಧುಡ್ ಢುಂ... ಎಂದು ದೊಡ್ಡದಾಗಿ ಸದ್ದು ಕೇಳಿಬಂದು, ಸುತ್ತಲೂ ನೀರು ಛಲ್ಲನೆ ಹಾರಿ ಶಿಷ್ಯನನ್ನು ತೋಯಿಸಿತು. ಸದ್ದು ಬಂದಕಡೆ ಕತ್ತೆತ್ತಿ, ಕತ್ತಲಲ್ಲೇ ನೋಟವನ್ನು ನಿರುಕಿಸಲು ಪ್ರಯತ್ನಿಸಿದ. ಕತ್ತಲಲ್ಲಿ ಏನು ತಾನೇ ಕಾಣಲು ಸಾಧ್ಯ? ಆದರೆ ಕಿವಿಗೆ ಮಾತ್ರಾ ಯಾವುದೋ ಆಕ್ರಂದನ ಕೇಳಿಬಂತು. ಅದು ಚಿಕ್ಕಮಗುವಿನದಂತಿತ್ತು. ಅಳುವಿಗೆ ಉಸಿರುಕಟ್ಟುತ್ತಿರುವುದು ಸ್ಪಷ್ಟವಾಗುತಿತ್ತು. ಹೆಚ್ಚು ಯೊಚಿಸದೆ ನೀರಿಗೆ ಇಳಿದ, ಶಬ್ದಬಂದಲ್ಲಿಗೆ ಈಜಿ, ಕೈಗೆ ತೊಡರಿದ ಏನನ್ನೋ ದಡಕ್ಕೆ ಎಳೆದು ತಂದ. ಕತ್ತಲಿಗೆ ಹೊಂದಿಕೊಂಡ ಕಣ್ಣುಗಳಿಂದ ತಂದದ್ದನ್ನು ನೋಡಿ ಆಶ್ಚರ್ಯವಾಯಿತು. ಅದೊಂದು ಹೆಂಗಸಾಗಿತ್ತು! ಆ ಅವಳು ಒಂದು ಮಗುವನ್ನೂ ಸಹ ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದಳು. ಮಗು ನೀರಿನಿಂದ ಬಿಡುಗಡೆಹೊಂದಿ; ಸಿಕ್ಕ ಉಸಿರನ್ನು ಒಮ್ಮೆಲೆ ತೆಗೆದುಕೊಂಡು ಕೆಮ್ಮುತ್ತಿದ್ದರೆ, ತಾಯಿ ಅಳಹತ್ತಿದಳು! ಇಬ್ಬರನ್ನೂ ಗುರುಗಳಿದ್ದಲ್ಲಿಗೆ ಕರೆತಂದು, ನಡೆದದ್ದನ್ನು ವಿವರಿಸಿದ.
ಗುರುವಾದರೋ ಶಾಂತವದನದಲ್ಲೇ ಅವಳತ್ತ ನೋಡಿ, ಯಾಕೆ ಹೀಗೆಂದು ಕಣ್ಣಿನ ಸನ್ನೆಯ ಮೂಲಕವೇ ಕೇಳಿ, ಅವಳು ಹೇಳಿದ ದುಃಖದ ಕಾರಣವ ಅರಿತು, ಸಮಸ್ಯೆಗೆ ಪರಿಹಾರವೆಂಬಂತೆ, ತಮ್ಮ ಕರಕಮಲಗಳಿಂದ ಅವಳ-ಮಗುವಿನ ಶಿರಗಳಮೇಲಿಟ್ಟು, ಸಮಾಧಾನಿಸಿ, ಆಶೀರ್ವದಿಸಿ, ಹಾರೈಕೆಯ ಸನ್ನೆಯನ್ನು ಮಾಡಿ ಕಳುಹಿಸಿದರು. ಅವಳಾದರೋ ತನ್ನ ದುಃಖವನ್ನೂ ಮರೆತಂತೆ, ಪ್ರಸನ್ನ ಮನಸ್ಸುಳ್ಳುವಳಾಗಿ ತೆರಳಿದಳು.
ನಡೆದ ಘಟನೆಗೆ ಸಾಕ್ಷಿಯಾಗುಳಿದ ಶಿಷ್ಯನಿಗೆ ಇದೆಲ್ಲವೂ ವಿಚಿತ್ರವೆನಿಸಿತ್ತು. ಮಗುವನ್ನೂ ಕಟ್ಟಿಕೊಂಡು ಘೋರವಾದ ಆತ್ಮಹತ್ಯೆಯನ್ನೇ ಮಾಡಿಕೊಳ್ಳುಲು ಹೊರಟವಳು, ಗುರುವಿನ ಸ್ಪರ್ಷಮಾತ್ರದಿಂದಲೇ ಸಮಾಧಾನಮಾಡಿಕೊಂಡು ನಗು-ನಗುತ್ತಲೇ ತೆರಳಿದ್ದು ವಿಸ್ಮಯವನ್ನುಂಟುಮಾಡಿತ್ತಲ್ಲದೇ, ಆ ರಾತ್ರಿಯನ್ನೂ ನಿದ್ದೆಯಿಲ್ಲದೇ ಕಳೆಯಿಸಿತ್ತು. ‘ಇದು ಹೇಗೆ ಸಾಧ್ಯ?’ ಎಂದು ಗುರುಗಳ ಬಳಿ, ಮೌನವ್ರತದಲ್ಲಿರುವುದರಿಂದ ಪ್ರಶ್ನಿಸುವ ಹಾಗೂ ಇರಲಿಲ್ಲ.
ನಲವತ್ತೆಂಟು ದಿನಗಳ ಗುರುಗಳೊಟ್ಟಿನ ಪ್ರಭಾವ, ಅವನ ಮನದಲ್ಲಿ ಇಷ್ಟುಮಾತ್ರದ ತರ್ಕವನ್ನು ಜಾಗೃತಗೊಳಿಸುವಲ್ಲಿ ಶಕ್ಯವಾಗಿರುವುದು; ಸುಪ್ತ ಜ್ಞಾನವೆಂಬ ಗಾಳಕ್ಕೆ ಸಿಕ್ಕ ಮೀನಿನಂತಿದ್ದ. ಅದೇ ಪ್ರಶ್ನೆಗಳ ತಾಕಲಾಟದ ವಿಲಿ-ವಿಲಿ ಒದ್ದಾಟದಲ್ಲಿ, ಮಲಗಿದಲ್ಲಿ ಮಲಗಲಾಗದೇ ರಾತ್ರಿಪೂರ ಹೊರಳಾಟ ನಡೆಸಿದ.
ಪ್ರಶ್ನೆಯೇ ಅವಗತಿಯ ಮೊದಲ ಮೆಟ್ಟಿಲಂತೆ!
ಸಂಪೂರ್ಣ ರಾತ್ರೀ, ಧ್ಯಾನದಲ್ಲೇ ತಲ್ಲೀನನಾಗಿದ್ದ ಗುರು, ಜಗಚ್ಚಕ್ಷುವು ಪೂರ್ವದಿಗಂತದಲ್ಲಿ ಕಣ್ಣುತೆರೆಯುತ್ತಿಂದ್ದಂತೆ, ನಾಭಿಯಾದಿಯಿಂದ ’ಓಂ’ ಕಾರದೊಡನೆ; ಜಗವೇ ಮೌನದಾಳದಿಂದ ಎದ್ದುಬಂದು ಮೊದಲು ಹೊರಡಿಸಿದ ಇದೇ ನಾದೋಪಾದಿಯಲ್ಲಿ, ತಮ್ಮ ಮಂಡಲ ಕಾಲದ ಮೌನೋಪಾಸನೆಯಿಂದ ಹೊರಬಂದರು. ನದಿಗೆ ತೆರಳಿ, ನಿತ್ಯಕರ್ಮದ ಪ್ರಾತಃಕಾರ್ಯಗಳನ್ನು ಮುಗಿಸಿ, ಪುನಃ ತಮ್ಮ ಆಸನದಲ್ಲಿ ಕುಳಿತರು. ಶಿಷ್ಯನನ್ನು ಸಮೀಪಕ್ಕೆ ಕರೆದು, ಕುಳ್ಳಿರಿಸಿ ಹಸನ್ಮುಖರಾಗಿ, "ನೀನು ಈ ದಿನದ ಪರ್ಯಂತದವರೆಗೆ ಮಾಡಿದ ಸೇವೆಗೆ ಪ್ರತಿಕೂಲವಾಗಿ, ನಿನಗೇನು ಬೇಕೋ ಕೇಳುವಂತವನಾಗು, ಇದು ಸಹ ಪ್ರತಿವರ್ಷದ ರೂಢಿಯೇ ಆಗಿದೆ." ಎಂದರು.
ಪ್ರಶ್ನೆಯೊಂದನ್ನು ತಲೆತುಂಬಿಕೊಂಡು ರಾತ್ರಿಪೂರಾ ನಿದ್ರೆಗೆಟ್ಟ ಶಿಷ್ಯ ತನಗೇನುಬೇಕೆಂದು ಕೇಳಿಕೊಳ್ಳಲು ತೋಚದೇ, "ಗುರುವೇ, ನಿನ್ನೆಯದಿನ ಬದುಕಿಸಿದ ಹೆಂಗಸಿನ ತಲೆಯ ಮೇಲೆ ಕೈಯಿಟ್ಟ ತಕ್ಷಣ ಅಂತಹ ಬದಲಾವಣೆ ಅವಳಲ್ಲಿ ಹೇಗೆ ಸಾಧ್ಯವಾಯಿತು? ಇದರ ಮರ್ಮವನ್ನು ತಿಳಿಸಿಕೊಡಿ ಸಾಕು." ಎನ್ನುತ್ತಾ ಗುರುಗಳ ಉತ್ತರಕ್ಕೆ ನಿರೀಕ್ಷಿಸುತ್ತಾ ಕುಳಿತನು.
ಗುರುವು ಆ ಪ್ರಶ್ನೆಗೆ ಉತ್ತರವೆಂಬತೆ ಒಮ್ಮೆ ನಕ್ಕು, ನುಡಿದರು, "ಈ ಸಂದರ್ಭಕ್ಕೆ ಅನುಗುಣವಾಗಿ ಒಂದು ಕಥೆಯನ್ನು ಹೇಳುತ್ತೇನೆ ಕೇಳು" ಎನ್ನುತ್ತಾ ಮುಂದುವರಿಸಿದರು,
"ಪರಿಪಕ್ವವಾಗಿ ಬೆಳೆದ ಮಾವಿನಮರವು ಸಕಾಲ ಋತುವಿನಲ್ಲಿ, ಗೊಂಚಲು ಗೊಂಚಲಾಗಿ ಮಾವಿನ ಕಸ್ತ್ರವನ್ನು ಬಿಟ್ಟಿತ್ತು. ಅವುಗಳ ಕಂಪು ಸುತ್ತಣ ಪ್ರದೇಶದಲ್ಲಿ ಹರಡಿ ನೂತನ ಲೋಕವನ್ನೇ ಸೃಷ್ಟಿಸಿತ್ತು. ಪಕ್ಷಿಗಳಿಗೆ, ಅಳಿಲುಗಳಿಗೆ, ಮಂಗಗಳಿಗೆ ಆ ಎಳೆಯ ಕಸ್ತ್ರವನ್ನು ಮುರಿದು ತಿನ್ನುವುದೆಂದರೆ ಬಾರೀ ಸಂತೋಷ. ಅವುಗಳಾದರೋ ಚಿಲಿ-ಪಿಲಿಗುಟ್ಟುತ್ತಾ ರೆಂಭೆಯಿಂದ ರೆಂಭೆಗೆ ಹಾರಾಡುತ್ತಾ ತಮ್ಮ ಆಟಾಟೋಪಗಳಲ್ಲಿ ತಲ್ಲೀನವಾಗಿದ್ದವು. ಅವರ ಆಟಗಳಲ್ಲಿ ಮೈ ಮರೆತ ಮಾವಿನ ಮರವು ತನ್ನ ರೆಂಭೆ-ಕೊಂಭೆಗಳನ್ನು ಸ್ವಲ್ಪ ಹೆಚ್ಚೇ ಅಲ್ಲಾಡಿಸಿ, ತನ್ನ ಸಂತೋಷವನ್ನು ಹಂಚಿಕೊಂಡಿತ್ತು. ಆ ಕ್ಷಣದಲ್ಲಿ ಅನೇಕ ಕಸ್ತ್ರಗಳು ನೆಲಸೇರಿದವು!
ಕಾಲ ಸರಿದಂತೆ ಕಸ್ತ್ರಗಳು ಬೆಳೆದು, ಚಿಕ್ಕ ಚಿಕ್ಕ ಮಿಡಿಗಳಾಗಿ ಮೂಡತೊಡಗಿತು. ಆಗ ಮಾವಿನ ಮರವನ್ನು ಅರಸಿ ಬಂದವರು ಚಿಕ್ಕ ಮಕ್ಕಳು. ತಮ್ಮ ಎಳೆ ಕೈಗಳಿಂದ ಎಳೆ-ಎಳೆಯಾದ ಹಸಿರಾದ ಮಿಡಿಗಳನ್ನು ಕೊಯ್ದು-ಕೊಯ್ದು ತಮ್ಮ ಬುಟ್ಟಿಗಳಿಗೆ ತುಂಬಿಸಿಕೊಂಡರು. ಅವರ ಉತ್ಸಾಹಕ್ಕೆ ಅಂಬು ನೀಡುತ್ತಾ ಮರವು ಬಾಗಿ ಬಾಗಿ ತನ್ನನ್ನು ತಾನು ಅವರಿಗೆ ಸಮರ್ಪಿಸಿಕೊಂಡು ಅವರ ಸಂತೋಷದಲ್ಲಿ ತಾನೂ ಭಾಗಿಯಾಯಿತು.
ನಂತರ, ಅಳಿದುಳಿದ ಮಾವಿನ ಮಿಡಿಗಳು ತಮ್ಮ ಪ್ರಾಯದ ಸ್ಥಿತಿಗೆ ಕಾಲಿಟ್ಟಿದ್ದವು. ಈಗ ದಾಳಿಯಿಟ್ಟಿದ್ದು ಮಾನವನ ದೊಡ್ಡ-ದೊಡ್ಡ ಕೈಗಳು. ಕಾಯಿಯನ್ನೇ ಕೊಯ್ದು ಮನೆಗಳಲ್ಲಿ ಇಟ್ಟು, ಹಣ್ಣು ಮಾಡಿ, ಮಾರುವುದಕ್ಕೋಸ್ಕರ ಕೊಯ್ದುಹೋದರು. ಸಹಜಗುಣದ ಪ್ರಕೃತಿಮಾತೆಯ ಮಡಿಲಲ್ಲಿ ಬೆಳೆದು, ಅದರ ಸ್ವಭಾವವನ್ನೇ ಮೈತಳೆದ ಮರ ಯಾರಿಗೆ ತಾನೇ ಅಡ್ಡಿಯಾದೀತು?
ಇವೆಲ್ಲಾ ಕಾರ್ಬಾರೂ ನಡೆಯುತ್ತಿರುವಾಗಲೇ ಸ್ವಲ್ಪ ಎತ್ತರದ ರೆಂಭೆಯಲ್ಲಿ ಉಳಿದುಹೋಗಿತ್ತು ಮಾವಿನಕಾಯೊಂದು! ಇಡೀ ಮರದಲ್ಲಿ ಈಗ ಅದೊಂದು ಮಾತ್ರಾ.
ಪ್ರಕೃತಿಯ ಆಕ್ರಮಣ ಈಗ ಮರದ ಮೇಲೆ ಮೊದಲಾಯಿತು. ಜೋರು ಮಳೆ-ಗಾಳಿಯಿಂದ ಬೇರುಸಮೇತ ಕಿತ್ತೇ ಹೋಗುವಷ್ಟು ಅಲ್ಲಾಡಿತು. ತಾಯಿಯು ಮಗುವನ್ನು ಎಂತಹ ಕಷ್ಟದ ಸಮಯದಲ್ಲೂ ಬಿಡದೇ, ಸಾಂತ್ವಾನ ನೀಡುವಂತೆ, ಕಾಯಿಯನ್ನು ಮಾತ್ರಾ ಅದು ಬಿಡಲಿಲ್ಲ.
ಪೂರ್ಣ ಮರದ ಪೋಷಣೆ ಆ ಅದಕ್ಕೇ ದಿನದಿಂದ ದಿನಕ್ಕೆ ದೊರಕುತ್ತಾ ಹಣ್ಣಾಗುವ ಕಾಲ ಸನಿಹವಾಯಿತು. ಪುಷ್ಟವಾಗಿ ಬೆಳೆದು ಕಂದುಬಣ್ಣಕ್ಕೆ ಹೊರಮೈ ತಿರುಗುತ್ತಿದ್ದರೆ, ಆಂತರ್ಯದಲ್ಲಿನ ವಾಟೆಯ ವಿಕಾಸಕ್ಕೂ ಕೊರತೆಯಿರಲಿಲ್ಲ. ಕಾಲದ ನಿಯಮವೇ ಹಾಗೇ. ಕ್ಷಣ-ಕ್ಷಣವೂ ಬಾಹ್ಯ-ಆಂತರಿಕವಾಗಿ ಪರಿಪೂರ್ಣತೆಯನ್ನ ತುಂಬುತ್ತಲೇ ಇರುತ್ತದೆ.
ಜ್ಞಾನಿಯಾದವನು ಸಕಲ ಬಂಧಗಳನ್ನೂ ಸಡಿಲಿಸಿಕೊಳ್ಳುವಂತೆ, ಹಣ್ಣು ಸಕಾಲದಲ್ಲಿ ಪರಿಪಕ್ವವಾಗಿ ತೊಟ್ಟು ಕಳಚಿ ನೆಲವ ಸೇರಿತು.
ಹಸಿರ ಹುಲ್ಲಿನ ಮೇಲೆ ಎದ್ದು ಕಂಡ, ಕೆಂಪಾದ ದೊಡ್ಡದಾದ ಹಣ್ಣನ್ನು ಗಿಡುಗವೊಂದು ಮಾಂಸವೆಂದು ಭ್ರಮಿಸಿ ಹೊತ್ತೊಯ್ದು, ಊರಿನ ಸಮೀಪದ ಮತ್ತೊಂದು ಮರದಮೇಲೆ ಕುಳಿತು ಅದನ್ನು ಕುಕ್ಕತೊಡಗಿ, ಅದು ಹಣ್ಣೆಂದು ಅರಿತಮೇಲೆ, ಅಲ್ಲಿಯೇ ಬಿಟ್ಟು ಹಾರಿಹೋಯಿತು.
ಮರದಿಂದ ಪುನಃ ಬೀಳತೊಡಗಿದ ಹಣ್ಣು ಈಗ ಸೇರಿದ್ದು ನೆಲವನ್ನಲ್ಲ. ಎರಡು ದಿನದಿಂದ ಹಸಿದು ಮಲಗಿರುವ ಒಬ್ಬ ಬಡವನ ಮಡಿಲನ್ನ. ಮೇಲಿಂದ ಬಿದ್ದು, ತನ್ನ ಮಡಿಲನ್ನೇ ಸೇರಿದ ಹಣ್ಣನ್ನು ದೇವರ ಪ್ರಸಾದವೆಂದೇ ತಿಳಿದ ಬಡವ, ಅದನ್ನ ತೆಗೆದುಕೊಂಡುಹೋಗಿ ಮನೆಯಲ್ಲಿರುವ ಮಕ್ಕಳಿಗೂ-ಹೆಂಡತಿಗೂ ಕೊಯ್ದು ಹಂಚಿದ. ಸಂಪೂರ್ಣ ಪೋಷಣೆಯಿಂದ ಪರಿಪೂರ್ಣವಾದ ಹಣ್ಣು ಅಷ್ಟೂ ಜನರ ಹಸಿವನ್ನು ಇಂಗಿಸುವಷ್ಟು ಸಮರ್ಥವಾಗಿತ್ತಲ್ಲದೇ, ಹಸಿವಿನಿಂದ ಬಾಡಿದ ಮೊಗಗಳಲ್ಲಿ ಈಗ ಹಣ್ಣಿನ ಕಳೆಯನ್ನೇ ಕಟ್ಟಿಸಿತ್ತು.
ಬಡವ ಅಷ್ಟಕ್ಕೆ ಸುಮ್ಮನಾಗಲಿಲ್ಲ, ಆ ಉಳಿದ ಒರಟೆಯನ್ನು ಅಂಗಳದಲ್ಲಿ ಕುಣಿತೋಡಿ ಹುಗಿದು, ನೀರೆರೆದ.
ಅದೀಗ ದೊಡ್ಡದಾಗಿ ಬೆಳೆದು ನೆರಳನ್ನೂ, ಹಣ್ಣನ್ನೂ ನೀಡುತ್ತಾ ಜೀವನವನ್ನು ಸಾರ್ಥಕ ಗೊಳಿಸುತ್ತಿದೆ. ನಮ್ಮ ಜೀವನವೂ ಆ ಕಸ್ತ್ರ, ಮಿಡಿ, ಕಾಯಿ ಹಾಗೂ ಹಣ್ಣುಗಳಹಾಗೇ. ಆಗ ಬಂದ ಹೆಂಗಸು ಈಗಷ್ಟೇ ಕಸ್ತ್ರಿನ ರೂಪದಲ್ಲಿರುವಳು. ಅಲ್ಪ ಪ್ರಮಾಣದ ದುಃಖಕ್ಕೂ ನಿರಾಸೆಹೊಂದಿ ಆತ್ಮಹತ್ಯೆಮಾಡಿಕೊಳ್ಳುವಷ್ಟು ಘೋರಪಾತದ ವಿಚಾರವನ್ನು ಮಾಡುತ್ತಾಳೆ. ಅಂತವರಿಗೆ ಬೇಕಾಗಿರುವುದು ನಿಜ ಸಾಂತ್ವನವಷ್ಟೇ. ತಮಗೋಸ್ಕರ ಇರುವರು ಎನ್ನುವ ಧೈರ್ಯದ ಬಲವೇ ಮತ್ತೆ ಜೀವನವ ಎದುರಿಸಲು ಸಿದ್ದಗೊಳಿಸುತ್ತದೆ. ನಾನು ಅವಳಿಗೆ ನೀಡಿದ್ದೂ ಅಷ್ಟು ಮಾತ್ರದ ಅನುಗ್ರಹವೇ.
ಆ ಕಥೆಗೆ ಈಗ ನಿನ್ನನ್ನು ಹೋಲಿಸಿ ನೊಡು. ನೀನು ಜ್ಞಾನದಲ್ಲಿ ಕಾಯಿಯಂತಿದ್ದೀಯೆ. ಪ್ರಕೃತಿಯ ಸಂಪೂರ್ಣ ಪೋಷಣೆಯ ಗ್ರಹಿಸಲು ನೀನು ಶಕ್ಯವಾಗುವಂತೆ ಮಾಡುವುದು ಗುರುವಾದ ನನ್ನ ಕಾರ್ಯವಾಗಿತ್ತು. ಆ ಹಣ್ಣಿನ ಗಮ್ಯವೇ ನಿನ್ನದಾಗಲಿ." ಎಂದು; ತುಂಬು ಮುಖದಿಂದ ಶಿಷ್ಯನಿಗೆ ಗುರುವು ಆಶೀರ್ವದಿಸಿದರು.
-ಮುಗಿಯಿತು.
*ಚಿತ್ರ ಕೃಪೆ- ಗೂಗಲ್.
sundara kathe
ಪ್ರತ್ಯುತ್ತರಅಳಿಸಿತು೦ಬಾ ಚೆನ್ನಾಗಿ ಮೂಡಿಬ೦ದಿದೆ ಕಥೆಯ ಸಾರಾ೦ಶ
ಪ್ರತ್ಯುತ್ತರಅಳಿಸಿest chenaagiddu :)
ಪ್ರತ್ಯುತ್ತರಅಳಿಸಿಬಲು ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ