ಗುರುವಾರ, ಫೆಬ್ರವರಿ 23, 2012

ಕಥೆ: ಛನ್ನ


       

         ಕಾಲವೆಂಬ ಸಾಗರದಲ್ಲಿ, ವಿಧಿಯೆಂಬ ಅಲೆಯ ಹೊಡೆತಕ್ಕೆ ಸಿಲುಕಿ ನುಚ್ಚು ನೂರಾಗಿದ್ದವು ಕನಸುಗಳು. ಸೋಲಿನಿಂದ ಬೆವೆತ ಕೈ-ಕಾಲುಗಳು ನಡುಗುತಿದ್ದವು. ಕನಸುಗಳ ಕಾಣುವ ಕಣ್ಣುಗಳು; ಮುಚ್ಚಲೇ ಭಯಪಡುತಿದ್ದು, ಹಾಯಿಸಿದಲ್ಲೆಲ್ಲೂ ಹಸಿರಿಲ್ಲ. ಉಸಿರು ಆಗಾಗ್ಗೆ ಬಿಸಿಯುಸಿರನ್ನ ಹೊರಹಾಕುತಿದ್ದರಿಂದ ವಾತಾವರಣ ಬಲು ಬಿಸಿಯಾಗಿರುತಿದ್ದು, ಸುತ್ತಲ ಜನರ ಒಣದೃಷ್ಟಿಯ ಮುಖದ ದರ್ಶನವೇ ಮೊದಲ್ಗೊಳ್ಳುತಿತ್ತು. ನಾಲಿಗೆ ಬೇಲಿದಾಟುತಿತ್ತು. ’ನೀ ಭೂ ಭಾರ’ ವೆಂಬ ಹಗುರ ಮಾತನ್ನ ಮನ ಆಗಾಗ ತೊದಲುತಿತ್ತು. ಬದುಕುವುದು ದುಃಸಾಧ್ಯ ಎನಿಸಿತು.

         

         ದೂರದಲ್ಲಿ ಕುಳಿತ ಬೆಟ್ಟ ಕೈ ಬೀಸಿ ಕರೆಯಿತು. ಯಾರೋ ಎಂದೋ ನುಡಿದಂತಿತ್ತು. "ಆ ಬೆಟ್ಟದಲ್ಲೊಬ್ಬರು ಮಹಾಜ್ಙಾನಿಗಳು ವಾಸಿಸುತ್ತಿರುವರಂತೆ. ಅವರಿಗೆ ಗೊತ್ತಿಲ್ಲದೇ ಇರುವುದೇನೂ ಇಲ್ಲ"ಎಂದು. ಲೆಕ್ಕಾಚಾರ ಹಾಕಿದ. ’ ಜ್ಙಾನಿಗಳು ಸಿಕ್ಕರೆ ಸೋಲಿಗೆ ಪರಿಹಾರ. ಇಲ್ಲದಿದ್ದರೆ, ಅಲ್ಲಿಂದ ಒಂದೇ ಜಿಗಿತ ದೂರದೂರಿಗೆ. ಅಲ್ಲಿ ಕನಸಿಲ್ಲ, ಕಾಡುವ ಜನರಿಲ್ಲ, ನಿಲ್ಲದ ಸಮಯವಿಲ್ಲ’ ಎಂದು.
         ಕಾಲುಗಳು ಸರ-ಸರ ಅತ್ತ ನಡೆಯತೊಡಗಿತು. ಕರಿನೆರಳು ಬಿಡದೇ ಅವನನ್ನ ಹಿಂಬಾಲಿಸಿತು.
ಅವನು ಬುಡತಲುಪಿದ. ’ನನ್ನ ಮೆಟ್ಟಿನಿಂತವರಾರಿಲ್ಲ’ ಎನ್ನುತ್ತಾ, ಜಗಜ್ಜಟ್ಟಿಯಟ್ಟಿಯಂತೆ ಎದೆಯುಬ್ಬಿಸಿ ನಿಂತಿತ್ತು ಆ ಬೃಹದೆತ್ತರದ ಕಲ್ಲುಬಂಡೆ, ಮೇಲೆ ಹತ್ತುವ ಮೆಟ್ಟಿಲುಗಳಿಲ್ಲದೇ!!
        ಸುತ್ತಾ ಸುತ್ತು ಹಾಕಿದ. ಬಳ್ಳಿ, ಬೇರುಗಳ ಎಳೆದು, ಜಗ್ಗಿ ನೋಡಿದ. ’ಪಾಪಿ ಮುಟ್ಟಿದ್ದೆಲ್ಲಾ ಬುಡಸಡಿಲ’ ಎನ್ನುವಂತೆ, ಅವನ ಭಾರಕ್ಕೆ ಎಲ್ಲವೂ ಬುಡಬಿಟ್ಟು, ಮತ್ತೆ-ಮತ್ತೆ ನೆಲಸೇರಿದ. ಮರಗಳೆಲ್ಲಾ ಗಾಳಿಗೆ ಅಲ್ಲಾಡಿದ್ದು ನೋಡಿ, ತನ್ನ ಪರಿಹಾಸ್ಯಮಾಡಿದಂತನಿಸಿ, ತಲೆತಗ್ಗಿಸಿದ.
          ತಗ್ಗಿದ ದೃಷ್ಟಿಗೆ, ಯಾರೋ ಎಂದೋ ಬಿಸುಟಿದ, ತುಕ್ಕು ಹಿಡಿದ ಚಮ್ಮಟಿಗೆ, ಚಾಣಗಳು ಬಿದ್ದವು. ನಡುಗುವ ಕೈಗಳಿಂದಲೇ ಅವುಗಳನ್ನ ಎತ್ತಿ, ಎದ್ದುನಿಂತ. ಬೆಟ್ಟದ ತುದಿಯವರೆಗೆ ಒಮ್ಮೆ ಕಣ್ಣಾಯಿಸಿ, ಒಂದೋಂದೇ ಪೆಟ್ಟು ಕೊಡಲಾರಂಭಿಸಿದ.
            ಅಭ್ಯಾಸವಿಲ್ಲದ ಕೈಗಳು ಮೊದ-ಮೊದಲು ಕೈ-ಮೇಲೇ ಕುಟ್ಟಿಸಿ, ಅಸಾಧ್ಯ ನೋವನ್ನ ಕೊಡುತ್ತಿದ್ದವು. ಹಲ್ಲುಕಚ್ಚಿಕೊಂಡು ಎಲ್ಲವನ್ನೂ ಸಹಿಸುತ್ತಾ ಮುಂದುವರಿದ. ಕಳೆದಂತೆ ಪೆಟ್ಟುಗಳು ಸಲೀಸಾಗತೊಡಗಿದವು. ಒಡೆಯುವ ಸಾಧನವನ್ನ ಆಗಾಗ ಸಾಣೆಹಿಡಿದು ಹರಿತಗೊಳಿಸುತ್ತಾ ಏಕಾಗ್ರಚಿತ್ತದಿಂದ ಏಟಿನ ಮೇಲೆ ಏಟುಕೊಡುತ್ತಾ ಒಂದೊಂದೇ ಮೆಟ್ಟಿಲಮೇಲೆ ನಿಲ್ಲುತ್ತಾ ಬಂದ. ಎಂದೋ ಉಟ್ಟ ಬಟ್ಟೆ ಸಡಿಲವಾದವು. ಗೆಡ್ಡೆ-ಗೆಣಸು, ಕಾಡಣ್ಣುಗಳೇ ಉದರ ಸೇರಿದವು, ಹರಿಯುತ್ತಿರುವ ಬೆವರೇ; ಸ್ನಾನಮಾಡಿಸಿತು, ಕಾರ್ಗಲ್ಲನ್ನು ಮೆತ್ತಗಾಗಿಸುವಂತಿತ್ತು. ದಿನಕಳೆಯಿತು. ವಾರಾಂತ್ಯ, ಅಮವಾಸ್ಯೆ, ಅಯನ, ಯುಗಾದಿಗಳೂ ಕಳೆದು ಹೋದವು.
              ಆ ಒಂದುದಿನ ಚಂದ್ರನುದಯಿಸುವ ಸಮಯದಲ್ಲಿ ತುದಿ ಮುಟ್ಟಿದ. ಆವತ್ತು ಬೇಡಿದ, ಕಾಡಿದ, ಉರಿಸಿದ ನೋವುಗಳೆಲ್ಲವೂ, ಎಂದಿಗೋ; ಕೊಟ್ಟ ಏಟಿಗೆ ಪುಡಿ ಪುಡಿಯಾದ ಕಲ್ಲಿನ ಧೂಳಿನಂತೆ ಗಾಳಿಸೇರಿದ್ದವು. ನೆನಪಿನ ಮುಷ್ಠಿಗೂ ಅವು ಸಿಗುವಂತಿರಲಿಲ್ಲ. ಎದೆಯುಬ್ಬಿಸಿ ನಿಂತ ಬೆಟ್ಟ, ಈಗ ಮಂಡಿಯೂರಿದ ಸೇವಕನಂತೆ, ಅವನ ಪಾದದ ಕೆಳಗೆ ಕುಳಿತಂತಿತ್ತು.
          ಜ್ಙಾನಿಗಳ ನೆನಪಾಗಿ, ಅವರನ್ನು ಕಾಣುವ ಹಂಬಲದಿಂದ ಕಣ್ಣು ಸುತ್ತಲೂ ನೋಡಿತು. ಅಲ್ಲೇ ಹತ್ತಿರದ ಗುಹೆಯಿಂದ, ಹೊರಬರುತ್ತಿರುವ ಪ್ರಕಾಶ, ತನ್ನನ್ನೇ ಕೂಗಿದಂತನಿಸಿ, ಅತ್ತ ಸಾಗಿದ.
      ಗುಹೆಯೊಳಗೆ ಇಣುಕಿನೋಡುತ್ತಾ ಪ್ರವೇಶಿಸಿದಾಗ ಬೆಳಕಿನ ಪುಂಜವನ್ನೇ ಧಾರಿಯಾಗಿಸಿಕೊಂಡು, ನೆಲದಿಂದ ನಾಲ್ಕಡಿ ಮೇಲೆ, ಧ್ಯಾನದಲ್ಲಿ ಮಗ್ನರಾದ ಒಬ್ಬ ಯೋಗಿಯ ಅತ್ಯಾಶ್ಚರ್ಯದಲ್ಲಿ ಕಂಡು, ಕೈ-ಮುಗಿದು ಕುಳಿತ.

    ಮಾತನಾಡಿ ಎಷ್ಟೋದಿನಗಳಾಗಿ ಮಾತೇ ಮರೆತು ಹೋದಂತಿತ್ತು,  ಅವರ ಧ್ಯಾನದಿಂದ ತನ್ನತ್ತ ತಿರಿಗಿಸುವ ಪ್ರಯತ್ನವಾಗಿ ತೊದಲು-ತೊದಲಾಗಿ ಅವರನ್ನ ಕರೆದ.
               ಅವನ ಆಗಮನವನ್ನ ಮೊದಲೇ ನಿರೀಕ್ಷಿಸಿದಂತೆ, ಮುಖದಲ್ಲಿ ಮಂದಹಾಸವನ್ನೀಯುತ್ತಾ ಕಣ್ಣುಬಿಟ್ಟು, ಅವನನ್ನ ನೋಡಿದರು. ಅವನು ಅವರ ದೃಷ್ಟಿತಾಕುತ್ತಾಲೇ ರೋಮಾಂಚಿತನಾದಂತಾಗಿ, ಕಣ್ಣಲ್ಲಿ ನೀರುಸುರಿಸತೊಡಗಿದ.
             ಅವನ ಮನದಾಳದ ಮಾತನ್ನ ಅರಿತಂತಿರುವ ಮಾಹಾತ್ಮರು, ತಮ್ಮ ಕೈ ಪಕ್ಕಕ್ಕೆ ತಿರುಗಿಸಿ, ಗುಹೆಯ ಒಳಬಾಗಿಲನ್ನ ತೋರಿಸಿ, “ಹೀಗೆ ಸಾಗು, ನೀನು ಬಯಸಿದ್ದೆಲ್ಲಾ ಸಿಗುತ್ತದೆ” ಎಂದಷ್ಟೇ ಹೇಳಿ ಅಲ್ಲಿಂದ ಅಂತರ್ಧಾನರಾಗಿಬಿಟ್ಟರು!
       ಮನಸ್ಸು ಅವರ ಆ ಮಾತನ್ನಷ್ಟೇ ಕೇಳಿ, ಅವರು ಕೈಚಾಚಿ ತೋರಿದ ಆ ಕತ್ತಲ ಗುಹೆಯ ಬಾಯಿಯಂತಾಯಿತು!
           ಅವರ ಕೊನೆಯ ಮಾತಿನಂತೆ, ಅದರಲ್ಲೇ ತೆರಳುವ ನಿರ್ಧಾರ ಮಾಡಿ, ಆ ಕತ್ತಲನ್ನೇ ಪ್ರವೇಶಿಸಿದ. ಆ ಹೊತ್ತಿನ ತನಕವೂ ಜೊತೆಬಿಡದ ಅವನ ನೆರಳೂ ಆ ಕತ್ತಲಿಗೆ ಭಯಪಟ್ಟು ಸಂಘವನ್ನ ತೊರೆಯಿತು. ಒಂಟಿಯಾಗಿ ಅಡಿಯಿಡುತ್ತಾ ಮುಂದೆ-ಮುಂದೆ ಸಾಗಿದ. ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬ ಪರಿವೆಯಿಲ್ಲದೇನೆಯೇ ಅಡಿಯಿಡುತ್ತಿದ್ದ.
              ಹಾಗೇ ಸಾಗುತ್ತಿರಲಾಗಿ, ಕಾಲಿಗೆ ಸಿಕ್ಕ ಕಲ್ಲಿಗೆ ಎಡವಿ, ತಳಸೇರಿ, ತಲೆಸುತ್ತಿನಿಂದಲೋ, ಆದ ಆಯಾಸದಿಂದಲೋ ಅಲ್ಲಿಯೇ ಕಣ್ಣು ಮುಚ್ಚಿದ.


            ಇಬ್ಬನಿ ಬೆರೆತ ಗಾಳಿ ಮಂದವಾಗಿ ಬೀಸಿ, ಅವನನ್ನ ತಟ್ಟಿ ಎಚ್ಚರಿಸಿತು. ಆಗತಾನೇ ಕತ್ತಲ ಲೋಕದಿಂದ ಜಾರಿದ ಅವನ ಕಣ್ಣುಗಳಿಗೆ; ನೋಡಲು ನೆರವಾಗುವನಂತಿರುವ ಸೂರ್ಯನೂ ರಂಗಾಗಿ ಅಲ್ಲಿ ಉದಿತನಾಗುತ್ತಿದ್ದ. ಸುವರ್ಣದ ಕಾಂತಿಗೆ ತಿರುಗಿದ ಮೋಡಗಳು ಗುಂಪು-ಗುಂಪಾಗಿ ಒಂದುಕಡೆ ಸೇರಿದ್ದವು ಅಲ್ಲಿ.  ಕಣ್ಣು ಚಾಚಿದಲ್ಲೆಲ್ಲಾ ಹಸಿರು ಹುಲ್ಲು-ತೋಟಗಳು ಅವನ ಸ್ವಾಗತಕ್ಕೆ ಸಜ್ಜಾದಂತೆ ಬೆಳೆದುನಿಂತಿದ್ದವು. ಅವುಗಳಲ್ಲಿ ಅರಳಿದ ಹೂಗಳು ತಮ್ಮ ಕಂಪನ್ನ ಹೊರಹಾಕಿ ಅವನನ್ನ ಮತ್ತನನ್ನಾಗಿಸುತ್ತಿದ್ದವು.   ಅವುಗಳ ನಡು-ನಡುವೆ ಬಿಳಿ, ಹಳದಿ, ಕೆಂಪು, ತಿಳಿಹಸಿರು ಹೀಗೆ ನಾ ನಾ ವರ್ಣಗಳಿಂದ ಕೂಡಿದ ಪಕ್ಷಿಗಳೆಲ್ಲವೂ, ಸಪ್ತಸ್ವರಗಳನ್ನೆಲ್ಲಾ ಹಾಡುತ್ತಾ, ಹಾರುಡುತ್ತಾ, ಅವನ ಕಿವಿಗಳಿಗೆ ಮಂದ್ರಸ್ಥಾಯಿಯಲ್ಲಿ ಸಂಗೀತದ ಆಲಾಪನೆಯನ್ನ ಕೊಡುತ್ತಿದ್ದವು. ಅಲ್ಲಿಯೇ ಸನಿಹದಲ್ಲೇ ಎಲ್ಲೋ ಝುಳು-ಝುಳು ನಾದದಿಂದ ನೀರು ಹರಿಯುತ್ತಿರುವುದು ಅವನ ಕಿವಿಗೆ ತಲುಪಿ, “ತಾನು ಯಾವ ಲೋಕಕ್ಕೆ ಬಂದೆನಪ್ಪಾ! ಸಶರೀರನಾಗಿ ಸ್ವರ್ಗಕ್ಕೇ ಬಂದೆನೇ? ಮಹಾತ್ಮರ ಮಾತು ಎಂದಿಗೂ ಸುಳ್ಳಾಗದು. ನನಗೆ ಇಲ್ಲಿ ಎಲ್ಲವೂ ಸಿಕ್ಕೇ ಸಿಗುತ್ತದೆ” ಎಂದು ಯೋಚಿಸುತ್ತಾ, ಮನದಲ್ಲೇ ಮಹಾತ್ಮರಿಗೆ ಧನ್ಯವಾದಗಳನ್ನರ್ಪಿಸುತ್ತಾ, ಚಕಿತನಾಗಿ ಸುತ್ತಲೂ ನೋಡುತ್ತಾ, ಯಾರೋ ಮಾತನಾಡುತ್ತಿರುವುದು ಕಿವಿಗೆ ಬಿದ್ದಂತಾಗಿ, ಅವರ ಹತ್ತಿರ ಇದು ಯಾವಲೋಕವೆಂದು ಕೇಳಿ, ತಿಳಿದುಕೊಳ್ಳಲೋಸುಗ ಅತ್ತತೆರಳಿದಾಗ,
            “ಓ..ಹೋ.... ಈ ಬೆಟ್ಟಕ್ಕೆ ಯಾರೋ ಮೆಟ್ಟಿಲು ಕೆತ್ತಿಬಿಟ್ಟಿದ್ದಾರೆ!! ಇದನ್ನ ಹತ್ಲೇ ಬೇಕು ಅನ್ನೋ ಕನಸು ಈಗ ನನಸಾಗ್ತಿದೆ ನೋಡು.......!!” ಎನ್ನುವ ಸಂತೋಷದ ಕೂಗಿನೊಂದಿಗೆ, ಎರಡು-ಮೂರು ಜನ, ಅವನು ಕೆತ್ತಿದ ಆ ಮೆಟ್ಟಿಲುಗಳ, ಮೊದಲನೆಯ ಮೆಟ್ಟಿಲಿನ ಮೇಲೆ ಪಾದವಿರಿಸುತ್ತಿರುವುದು ಅವನ ಕಣ್ಣುಗಳಿಗೆ ಬಿತ್ತು.!!!  


ಮುಗಿಯಿತು..






ಚಿತ್ರ ಕೃಪೆ: ದಿನೇಶ ಹೆಗಡೆ

7 ಕಾಮೆಂಟ್‌ಗಳು:

  1. ಕಥೆ ತುಂಬಾ ಇಷ್ಟ ಆಯ್ತು...

    ಯಾವುದಾದ್ರು ಪತ್ರಿಕೆಗೆ ಕಳಿಸಿ... ಸೊಗಸಾದ ಕಥೆ...

    ಪ್ರತ್ಯುತ್ತರಅಳಿಸಿ
  2. ಮಸ್ತಾಗಿ ಬರದ್ದೆ.. ಒಂದೇ ಸಲಕ್ಕೆ ಓದಿಸಿಕ್ಯಂಡು ಹೋತು.. ಇಷ್ಟ ಆತು :)

    ಪ್ರತ್ಯುತ್ತರಅಳಿಸಿ
  3. ಕಥೆಯ ಓಟದಲ್ಲಿ ಸೊಗಸಿದ್ದು...ನಿನ್ನ ಮನಸಿನಾಳದಲ್ಲಿ ಅಡಗಿಸಿಟ್ಟ ಕನಸಿನ ಮೂಟೆಗೆ ಉತ್ತರ ಕೊಟ್ಟಿದ್ದೆ ಅನಿಸ್ತು..ತುಂಬಾ ಚೆನ್ನಾಗಿ ಬರದ್ದೆ...ಹೀಗೆ ಬರಿತಾ ಇರು...

    ಪ್ರತ್ಯುತ್ತರಅಳಿಸಿ
  4. ಛನ್ನ ಕಥೆ ಚೆನ್ನಾಗಿ ಬ್ಯೆ೦ದು... ಇದರಿ೦ದ ಜೀವನದಲ್ಲಿ ಹತಾಶರಾದವರಿಗೆ,ನಮ್ಮಿ೦ದನೂ ೪ ಜನರಿಗೆ ಉಪಯೋಗವಿದೆ ಎ೦ಬ ನೀತಿ ತಿಳಿದುಬರುತ್ತೆ. ಹೀಗೆ ಮು೦ದುವರಿ ಎ೦ದು ಹಾರೈಸುವೆ.

    ಪ್ರತ್ಯುತ್ತರಅಳಿಸಿ