ನಾನು ಕೇಳಿದ ಕಥೆ:

   ಮಹಾರಾಷ್ಟ್ರದ ಯಾವುದೋ ಮೂಲೆಯ ಒಂದು ಹಳ್ಳಿ. ದನಕಾಯುವವನ ಮುದ್ದಿನ ಮಗಳಾಗಿ, ಚಿಂದಿ ಎಂದು ನಾಮಕರಣದಿಂದ ಬೆಳೆಯುತ್ತಿದ್ದಳೊಬ್ಬಳು. ತಾಯಿಯ ವಿರೋಧದ ನಡುವೆ, ತಂದೆಯ ದನಕಾಯಲು ಕಳಿಸುವ ನೆವದ ನಡುವೆ ಸಾಗುತ್ತಿತ್ತು ಅವಳ ಓದು. ಆ ಶಾಲೆಯಲ್ಲಿ ಕಲಿತದ್ದೇ ನಾಲ್ಕಕ್ಷರ!! ಹೇಳಿ-ಕೇಳಿ ಹೆಣ್ಣು, 10ನೇ ವಯಸ್ಸಿನಲ್ಲಿಯೇ 30ವರ್ಷದ ಗಂಡಿಗೆ ಕೊಟ್ಟು, ತನ್ನ ಕನ್ಯಾಸೆರೆಯನ್ನು ಬಿಡಿಸಿಕೊಂಡಿತು ಕುಟುಂಬ. ದಿನಗಳು ಕಳೆಯುತ್ತಿದ್ದಂತೆ ಮೂರು ಮಕ್ಕಳ ತಾಯಿಯಾಗಿ, ನಾಲ್ಕನೆಯ ಮಗುವಿನ ಜನನವೂ ಸಮೀಪಿಸುತಿತ್ತೂ ಕೂಡ!! ಈ ನಡುವೆ ಜಮೀನುದಾರರ ವಿರುದ್ಧ ದನಿಯೆತ್ತಿ, ಅವರ ಕೆಂಗಣ್ಣಿಗೆ ಗುರಿಯಾಗಿ, ಹೊಟ್ಟೆಯಲ್ಲಿರುವ ಮಗು ತನ್ನದು ಎನ್ನುವ ಅವರ ಸುಳ್ಳು ಅಪವಾದಕ್ಕೆ ಗುರಿಯಾದಳು ಚಿಂದಿ. ಈ ಅಪವಾದದಿಂದ ಅವಮಾನಗೊಂಡ ಗಂಡ ತುಂಬು ಗರ್ಭಿಣಿಯಾದ ಚಿಂದಿಯನ್ನ ಮನೆಯಿಂದಲೇ ಹೊರಹಾಕಿದ. ಕೊಟ್ಟಿಗೆಯಲ್ಲಿಯೇ ಇದ್ದಳು ಚಿಂದಿ. ನಾಲ್ಕುದಿನಕ್ಕೆ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು, ಕೊಟ್ಟಿಗೆಯಲ್ಲಿ ಸಿಕ್ಕ ಕಲ್ಲಿನಿಂದಲೇ ಮಗುವಿನ ಹೊಕ್ಕಳಬಳ್ಳಿಯನ್ನ ಕತ್ತರಿಸಿ ತನ್ನ ಪ್ರಸೂತಿ ಕೆಲಸವನ್ನ ತಾನೇ ನೆರವೇರಿಸಿಕೊಂಡಳು. ಇನ್ನು ತಾಯಿಯ ಮನೆಯೇಗತಿ ಎಂದು ಅತ್ತ ನಡೆದರೆ ಅಲ್ಲಿಯೂ ಕೂಡ ತಾಯಿಯಿಂದಲೇ ಮನೆಯಿಂದ ಹೊರದೂಡಲ್ಪಟ್ಟಳು. ಎಲ್ಲರಲ್ಲಂದಲೂ ತಿರಸ್ಕರಿಸಲ್ಪಟ್ಟ ಚಿಂದಿ, ತನ್ನೊಂದಿಗಿರುವ ಮಗುವ ಜೊತೆ, ದುಃಖದ ಭಾರದಿಂದ ಹೆಜ್ಜೆಯಿಡುತ್ತ ನಡೆದಳು ರೈಲ್ವೆಯ ಹಳಿಗಳಕಡೆಗೆ. ತನಗೂ, ತನ್ನ ಮಗುವಿಗೂ ಇನ್ಯಾರು ದಿಕ್ಕು?? ಎಂದು ಯೋಚಿಸಿ ರೈಲಿನ ಹಳಿಯ ಮೇಲೆ ತನ್ನ, ಮಗುವಿನ ತಲೆಯಿಟ್ಟು ಮಲಗಿ, ಬರುವ ರೈಲಿಗಾಗಿ ಕಾಯಹತ್ತಿದಳು....


"ತಾನೇಕೆ ಸಾಯಬೇಕು?? ಸತ್ತು ಸಾಧಿಸುವುದಾದರೂ ಏನು??"ಎನ್ನುವ ಆಂತರ್ಯದ ಪ್ರಶ್ನೆಗೆ ಅವಳ ಒಳಗಣ್ಣು ತೆರೆಯಲ್ಪಟ್ಟಿತು.ತಕ್ಷಣ ಮಗುವಿನೊಡನೆ ಅಲ್ಲಿಂದ ಎದ್ದಳು, ತನ್ನ ಗತಬದುಕನ್ನ ಅಲ್ಲಿಯೇ ಹರಿದು ಹಾಕಿ, ಮುಂದಿನ ತನ್ನ ಜೀವನಕ್ಕೆ ದಿಟ್ಟ ಹೆಜ್ಜೆಯನ್ನಿಡಲು ಶಪತ ಕೈ-ಕೊಂಡಳೂ ಕೂಡ!ಚಿಂದಿ ಎನ್ನುವ ತನ್ನ ಹೆಸರನ್ನ 'ಸಿಂಧು' ಎಂದು ಕರೆದು ಕೊಂಡಳು. ತಂದೆ ಕಲಿಸಿ ಕೊಟ್ಟ, ನಾಲ್ಕು ಪದ ಹಾಡನ್ನೇ ಹಾಡುತ್ತ, ಭಿಕ್ಷೆಯಾಟನೆಗೆ ಪ್ರಾರಂಭಿಸಿದಳು. ಬಂದ ಭಿಕ್ಷೆಯಿಂದ ತನ್ನ ಮಗುವಿಗಲ್ಲದೇ, ಅನಾಥ ಮಕ್ಕಳಿಗೂ ಹಂಚ ತೊಡಗಿದಳು. 
ಹುಲಿಪೀಡಿತ ಪ್ರದೇಶವೆಂದು, ಸುಮಾರು ಎರಡು ಸಾವಿರ ಜನ ಆದಿವಾಸಿಗಳನ್ನ ಸ್ಥಳಾಂತರ ನಡೆಸಲು ಆದೇಶ ನೀಡಿತು ಸರಕಾರ. ಆದರೆ ಅವರಿಗೆ ಬದಲೀ ವಸತಿಯನ್ನ ನೀಡಲು ನಿರ್ಲಕ್ಷಿಸಿತು ಸರಕಾರ. ಅಲ್ಲಿಗೆ ನಡೆದ ಸಿಂಧು, ಆದಿವಾಸಿಗಳ ನೋವಿಗೆ ಧನಿಯಾಗಿ ನಿಂತು, ತಾನೇ ಮುಂದೆ ನಿಂತು ಸರಾಕಾರಕ್ಕೆ ಆದಿವಾಸಿಗಳ ಮನವಿಯನ್ನ ತಲುಪಿಸಿ, ಅವರಿಗೆ ಮರುವಸತಿಯನ್ನ ನೀಡುವಂತೆ ಮಾಡಿದಳು. "ಹುಲಿಯಿಂದ ಸಾವಿಗೆ ಒಳಗಾದ ಹಸುವಿಗೆ ಸಿಗುತ್ತಿದ್ದ ಪರಿಹಾರಧನ, ಒಬ್ಬ ಮನುಷ್ಯ ಸತ್ತರೆ ಯಾಕಿಲ್ಲ??" ಎಂದು ಇಂದಿರಾಗಾಂಧಿಗೇ ಪ್ರಶ್ನಿಸಿ,ಇಂದಿರಾ ಗಾಂಧಿಯಿಂದ ಅವರಿಗೂ ಪರಿಹಾರಧನ ಸಿಗುವಂತೆ ಆದೇಶ ಹೊರಡಿಸುವಂತೆ ಮಾಡಿಸಿದಳು ಸಿಂಧು. ಇದರಿಂದ ಆದಿವಾಸಿಗಳಿಗೆ 'ಮಹಾತಾಯಿ'ಯಾದಳು. ಅವಳು ಕಟ್ಟಿಸಬೇಕಿಂದಿರುವ ಅನಾಥಶ್ರಮಕ್ಕೆ ಸಹಾಯದ ಮಹಾಪೂರವೇ ಹರಿದು ಬರತೊಡಗಿತು. ಹೀಗೆ ಅನೇಕ ಕಡೆ ಅವಳಿಂದ ಸ್ಥಾಪಿಸಲ್ಪಟ್ಟ ಅನಾಥಾಶ್ರಮಗಳು, ಅನೇಕ ಕಂದಮ್ಮಗಳಿಗೆ ಬಾಳ ಜ್ಯೋತಿಯಾಗಿದೆ.
ಅವಳೀಗ 'ಸಿಂಧುತಾಯಿ ಸಪ್ಕಾಲ್' ಎಂದೇ ಮಹಾರಾಷ್ಟ್ರದಲ್ಲೇ ಪ್ರಸಿದ್ಧಳು. ಅವಳು ಮಾಡಿಕೊಂಡಿರುವುದು ಪುಢಾರಿ, ಕಳ್ಳಸನ್ಯಾಸಿಗಳಂತೆ ಬೇನಾಮಿ ಆಸ್ತಿಯನ್ನಲ್ಲ. ಕೇವಲ ಅನಾಥ ಮಕ್ಕಳಿಗೆ, ನೊಂದವರಿಗೆ 'ತಾಯಿ'ಯಾದದ್ದು ಮಾತ್ರ!! ಅವಳು ವಿದೇಶದಲ್ಲಿಯೂ ಪ್ರಸಿದ್ಧಳು, ಅವಳ ಕತೆಯನ್ನೇ ಆಧರಿಸಿ ಮರಾಠಿಯಲ್ಲಿ 'ಮೀ ಸಿಂಧುತಾಯೀ ಸಪಕಾಲ್" ಎನ್ನುವ ಚಿತ್ರವೂ ಬಿಡುಗಡೆಯಾಗಿ ಹೆಸರು ಮಾಡಿದೆ. ದೂಡ್ಡ-ದೊಡ್ದ ಜನರ ಜೊತೆ ನಿಂತು ಫೋಟೊ ಕ್ಲಿಕ್ಕಿಸಿ ಕೊಳ್ಳುತ್ತಾ, ನಕ್ಕು ನುಡಿಯುತ್ತಾಳೆ "ಕಷ್ಟದಲ್ಲಿದ್ದಾಗ ಯಾರೂ ಸಹಾಯಕ್ಕೆ ಇರಲ್ಲ, ಆದರೆ ಇವಾಗ!!??"..... "ಓ.. ದೇವರೆ ನಗುವುದನ್ನ ಕಲಿಸು, ಆದರೆ, ಆ ನಗುವಿನ ಹಿಂದೆ ಅನುಭವಿಸಿರುವ ನೋವನ್ನ ಎಂದೂ ಮರೆಯುವಂತೆ ಮಾಡಬೇಡ" ಎನ್ನುತ್ತಾಳೆ 'ಸಿಂಧುತಾಯೀ'.