ಮಂಗಳವಾರ, ಏಪ್ರಿಲ್ 3, 2012

ನನಗೊಂದು ಹೆಣ್ಣು ಕೊಡಿ



     ’ಮಹಾಸ್ವಾಮಿ.. ನನ್ ಜಾತ್ಗ, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.
ತುಸು ಬ್ಯುಜಿಯಂತೇ ತೋರುತಿದ್ದ ಅವರೋ, ಕೈಸನ್ನೆಯಲ್ಲಿಯೇ ಕುಳಿತುಕೊಳ್ಳಲು ಸೂಚಿಸಿದ್ದನ್ನ ನೋಡಿಯೇ, ಕುಳಿತೆ.
     
       ಜೋರು ತಿರುಗುತ್ತಿರುವ ಫೇನ್ ದೇ ಭಯವಿತ್ತು ನನಗೆ. ಮೂಲೇಲಿ ತಣ್ಣಗೆ ಕುಳಿತ .ಸಿ. ಯನ್ನಾದರೂ ಆನ್ ಮಾಡಿದ್ದರೆ, ಜೋರು ಗಾಳಿಯ ಭರಾಟೆಗೆ ಎರಡುದಿಕ್ಕುಗಳಿಗೂ ಹಾರಿ, ಯಾವಕಡೆ ಹೋಗಿ, ಯಾವ ಚೂರನ್ನು ಎತ್ತಿತರಲಿ? ಎನ್ನುವ ಸಂದಿಗ್ಧತೆಯಾದರೂ ದೂರವಾಗಿಸುತ್ತಿತ್ತೇನೋ ಎನ್ನುವ ದೂರದ ಆಸೆಯಿಂದ, ಮಾಹಾಸ್ವಾಮಿಗಳು ಎಷ್ಟುಬೇಗ ಜಾತಕವನ್ನ  ಕೈಲಿಡಿದು, ನನ್ನ ಸ್ಥಿರಾಸ್ಥಿಯನ್ನ ಕಾಪಾಡುತ್ತಾರೋ ಎಂದುಕೊಳ್ಳುತ್ತಾ ಅವರನ್ನೇ ನೋಡತೊಡಗಿದೆ.
   
    ತೀಡಿ-ತಿದ್ದಿದ ತ್ರಿಪುಂಡ್ರ ಭಸ್ಮ, ಅದರ ಕೆಳಗೆ ಕೆಂಪು ಬೊಟ್ಟು, ಆಕಡೆ-ಈಕಡೆ ನಿದ್ದೆಯಿಲ್ಲದೇ ಕೆಂಪಾದಂತಿರುವ ಕಣ್ಣು, ಕಪ್ಪು ಮೀಸೆ-ದಾಡಿಯ ನಡುವೆ ನಗು-ನಗುತ್ತಾ ಅಲ್ಲಾಡುತ್ತಿರುವ ತುಟಿ, ಕಿವಿಗಾನಿಸಿದ ಮೋಬೈಲ್ ಫೋನು, ಅದನ್ನ ಹಿಡಿದ ಹೆಚ್ಚು-ಕಮ್ಮಿ ಹತ್ತೂ ಬೆರಳಿಗೂ ಧರಿಸಿದ ಉಂಗುರಗಳಿರುವ ಕೈ, ಅದರ ಮಧ್ಯೆ ಕಿವಿಯಲ್ಲಿ ಜೋಲುತ್ತಿರುವ ಓಲೆ, ಎದ್ದು ಕಾಣಿಸುತಿತ್ತು. ಕೊರಳೆಂತೂ, ಅಷ್ಟು ಭಾರವನ್ನೂ ಹೊತ್ತು, ಬಗ್ಗಿಸದೇ ನಿಲ್ಲಬಹುದೆನ್ನುವುದನ್ನ ಸಾರಿ-ಸಾರಿ ಹೇಳುವಂತೆ, ಎಲ್ಲಾ ಶೈಲಿಯ ರುದ್ರಾಕ್ಷಿ, ಹರಳುಗಳ ರಾಶಿಯನ್ನ ಅಚ್ಚು ಬಂಗಾರಗಳ ಕವಚಗಳಿಂದ ಧರಿಸಿ ನೆಟ್ಟ ನಿಂತಿತ್ತು
     
       ಹೆಂಗಸರುಗಳು; ಯಾಕೆ ಬೆಳಗ್ಗೆ ಎದ್ದತಕ್ಷಣ ಟಿ.ವಿ. ಓನ್ ಮಾಡಿ ಭವಿಷ್ಯ ಓದುವ ಮಹಾಸ್ವಾಮಿಗಳನ್ನ  
ಕಣ್ಣು ಮಿಟುಕಿಸದೇ ನೋಡುತ್ತಾ ಕುಳಿತಿರುತ್ತಾರೆನ್ನುವುದು ಈಗ ಅಂದಾಜಾಯಿತು!
   
     “ಏನಯ್ಯಾ ನಿಂದು?
   
ತಟ್ಟನೆ ಎದುರುಬಂದ ಪ್ರಶ್ನೆಗೆ ಅವರ ಎದುರಿಗಿರಿಸಿದ ಜಾತಕದತ್ತ ಪುನಃ ಮುಗ್ಢ ದೃಷ್ಟಿದೋರಿದೆ.
   
ಬಲಗೈಲಿಡಿದು, ಎಡಗೈಯಿಂದ ಕನ್ನಡಕವ ಧರಿಸಿ ಅದರ ಮೇಲೆ ಕಣ್ಣಾಯಿಸ ತೊಡಗಿದರು ಮಾಹಾಸ್ವಾಮಿಗಳು.
    “
ನಿಂದೇನಯ್ಯಾ ಕುಂಡಲಿ?
   “ನ್ಹೂಂ....ಮಹಾಸ್ವಾಮಿ
   “ಹೆಸರು ................... ಹಂ! ಆರ್ದ್ರಾ ನಕ್ಷತ್ರ, ಮಿಥುನ ರಾಶಿ
   “ನ್ಹೂಂ ಸ್ವಾಮಿ
   “ಏನಯ್ಯಾ ಇದು, ಎಲ್ಲಾ ವಕ್ರ ವಕ್ರ ಇದೆತುಟಿಯಂಚಿನಲ್ಲಿ ನಕ್ಕು ನನ್ನ ಮೇಲೆ ದೃಷ್ಟಿತೋರಿ ನುಡಿದರು!
  
ನನಗೇನು ಹೇಳಬೇಕೆಂದು ತೋಚದೇ, ಕೈ-ಗಾಲುಗಳನ್ನ ಒಮ್ಮೆ ನೋಡಿ, ಸುಮ್ಮನೇ ಕುಳಿತೆ!!.
   “
ಗುರು ನೀಚ! ರಾಹು ವ್ಯಯ! ಅಷ್ಟಮ ಶನಿ! ಶತ್ರುಸ್ಥಾನೆ ರವಿ! ಯಾರನ್ನ ಉದ್ಧಾರ ಮಾಡೋಕೆ ಹುಟ್ಟೀರೋದಯ್ಯಾ ನೀನು??
   
ಧನಿ ಜೋರಾಗಿ, ಮನಸ್ಸನ್ನ ತಣ್ಣಗೆ ನಡುಕ ಉಂಟುಮಾಡಿತು!
   “
ಹಿಡಿದ ಕೆಲ್ಸ ಒಂದೂ ನೆಟ್ಟಗೆ ಮಾಡಲ್ಲ! ಚಂಚಲ ಬುದ್ಧಿ, ಅಂದುಕೊಳ್ಳೋದೊಂದು ಮಾಡೋದು ಇನ್ನೊಂದು, ಎಲ್ಲಾ ಕೆಲ್ಸ ಅರ್ಧಂಬರ್ಧ! ತಂದೆಗೇ ಕಂಟಕ, ನೀ ಹುಟ್ಟೀದ ಮನೆಲಿ ಮತ್ತೊಂದು ಹುಲ್ಕಡ್ಡೀನೂ ಹುಟ್ಟೋದಿಲ್ಲ!............
ವಾಚನ ಮುಂದುವರಿಯುತ್ತಿದ್ದಂತೆ ನಾ ಯೋಚನಾ ಮಗ್ನನಾದೆ,
  

     “ಬಹುಶಃ ನನ್ನೀ ಸ್ಥಿರಾಸ್ತಿಯನ್ನ ಮೊದಲೆಲ್ಲರೂ ನೋಡಿ ಒದರಿದ್ದು ಇದೇ! ಇದರಲ್ಲಿ ಅಂತ ವಿಶೇಷ ಇದ್ದಂತೇನೂ ಕಂಡುಬರಲಿಲ್ಲ! ಹಾಗಿದ್ದರೂ ಮತ್ಯಾಕೆ ಅವರ ಎದುರಿನಲ್ಲಿ ತಂದಿಟ್ಟದ್ದು??

  “ಜಾತಕ ಜೋಯ್ಸ್ರಿಗೆ ಕೊಟ್ಬರ್ಬೇಕು, ಪಕ್ಕದೂರಲ್ಲಿ ಯಾವ್ದೋ ಹುಡುಗಿ ಇದಾಳೆ ಅಂತೇಳ್ತಿದ್ರು,ಅಮ್ಮನ ಮಾತು ಕೇಳುತ್ತಾ,
   
     ಈ ದಿನ ಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಒಂದು ಕುತೂಹಲದ ಯೋಚನೆ ಬಂದು ನಕ್ಕಿದ್ದು ಸುಳ್ಳಲ್ಲ.
ತಿಳುವಳಿಕೆ ಬಂದಾರಭ್ಯ ನನ್ನ ನಾ ನೋಡುತ್ತಲೇ ಬದುಕಿರುವೆ,

     ಎತ್ತರದಲ್ಲಿ ಚೋಟುದ್ದ ಇದ್ದಂವ, ಆರಡಿ ಮನೆಬಾಗಿಲಿಗೆ ಸ್ವಲ್ಪ ಕಮ್ಮಿಯಾಗಿರುವೆ. ಅಗಲ ಅಷ್ಟೇನಿಲ್ಲದಿದ್ದರೂ ಆರೋಗ್ಯಕ್ಕೇನೂ ಕೊರತೆಯಿಲ್ಲ. ಸುರಸುಂದರ ಅಲ್ಲದಿದ್ದರೂ ಮನಸ್ಸಿನ, ಮುಖದ ಬಣ್ಣವನ್ನ ಮಾಸಿಕೊಂಡಿಲ್ಲ. ತಿಂಗಳ ಖರ್ಚೆಲ್ಲಾ ಬಿಟ್ಟೂ, ಮೀಗುವ ಸಂಬಳತರುವ ಕೆಲಸ. ಚೊಕ್ಕಟ ಮನೆಮಾಡಿಕೊಂಡು, ನನಗೆಂದು ಇರುವ ಅಮ್ಮಳೊಬ್ಬಳೊಟ್ಟಿಗೆ, ಧರೆಯನ್ನೇ ಸ್ವರ್ಗವಾಗಿಸಿಕೊಂಡು, ಸರಳ ಜೀವನ ನಡೆಸುತ್ತಿರುವುದು ಸುಳ್ಳಲ್ಲ. 
    ’ಬಹುಶಃ, ಪ್ರಪಂಚದ ಸುಖಪುರುಷರಲ್ಲಿ ನಾನೂ ಒಬ್ಬಎಂದು ಅಂದುಕೊಂಡಿದ್ದು ಹಲವುಬಾರಿ!!
     ಆದರೂ.....
      ಏನೆಲ್ಲಾ ಬದಲಾವಣೆಯಾಯಿತು! ಒಂದನ್ನ ಬಿಟ್ಟು... ನನ್ನ ಜಾತಕ!!
ಮೊದಲೆಲ್ಲಾ ಅಮ್ಮ ಎಷ್ಟುಬಾರಿ, ಯಾರ್ಯಾರ ಹತ್ತಿರ ಅದನ್ನ ತೋರಿಸಿದ್ದಳೋ, ನಾಕಾಣೆ!  
ತೋರಿಸಿದ ಪ್ರತಿಸಲವೂ ತಲೆ ಕೈಹೊತ್ತು,ಮುಂದೇನು ಗತಿಯಪ್ಪ!?ಅನ್ನುತ್ತಾ, ಕುಳಿತುಕೊಳ್ಳುತ್ತಿದ್ದಂತೂ ನಿಜ!
ಸಂದರ್ಭದಲ್ಲೆಲ್ಲಾ ನಾ ನಾದರೋ ಅಮ್ಮನನ್ನೇ ನೋಡುತ್ತಾ ಸುಮ್ಮನೇ ಕುಳಿತಿರುತ್ತಿದ್ದೆ. ಕೆಲವೊಮ್ಮೆ ಜಾತಕವ ಬಿಡಿಸಿ, ಅಂತದ್ದು ಅದರಲ್ಲಿ ಏನಿದೆ ಎನ್ನುವ ಕುತೂಹಲದಿಂದ ನೋಡುತ್ತಿರುತ್ತಿದ್ದೆ.
     
      ಏನೇನೋ ಸಂಖ್ಯೆಗಳು! ಏನೇನೋ ಅಕ್ಷರಗಳು! ವಿಜ್ಞಾನ ಪುಸ್ತಕಲ್ಲಿ ಓದಿ, ಆಕಾಶದಲ್ಲಿ ಸೂರ್ಯನ ಸುತ್ತಾ ತಿರುಗುವ ಗ್ರಹಗಳು ಹಾಳೆಯಲ್ಲೂ ಬರೆಯಲ್ಪಟ್ಟಿರುವುದನ್ನ ನೋಡಿ ಆಶ್ಚರ್ಯಪಟ್ಟಿದ್ದೆ! ರಾತ್ರೀಕಾಲದ ಆಕಾಶದಲಿ ಮಿನುಗುವ ಗ್ರಹ-ನಕ್ಷತ್ರಗಳೆಲ್ಲಾ ನನ್ನೀ ಜಾತಕದ ಮನೆಯಲ್ಲೇ, ಹಗಲೆಲ್ಲಾ ಮಲಗಿ, ವಿಶ್ರಾಂತಿತೆಗೆದುಕೊಳ್ಳುತ್ತವೆಂದು ಬಗೆದಿದ್ದೆ! ಹಾಗೆ ಬಂದವರು ಮನರಂಜನೆಗೆ ನನ್ನೇ ಆಟಿಕೆಯಾಗಿ ಆಡಿಸುತ್ತಾರೆಂದೂ ಅಂದುಕೊಳ್ಳುತ್ತಿದ್ದೆ. ಮಹಾ ಮಹಾ ಒಗಟುಗಳನ್ನೆಲ್ಲಾ ಬಿಡಿಸಿ ಒಗೆಯುತ್ತಿದ್ದ ನನಗೆ ಒಂದು ಹಾಳೆ ಮಾತ್ರಾ ಬಹುದೊಡ್ಡ ಒಗಟಾಗಿ ಕಾಡಿದ್ದು ಸುಳ್ಳಲ್ಲ!!
       
      ಆ ಒಗಟನ್ನ ಬಿಡಿಸಲು ಫಣತೊಟ್ಟಿದ್ದೂ.... ಫಣಕ್ಕೆ ಸರಿಯಾಗಿ ಇವತ್ತಿಗೆ ನಾ ಇರುವ ಪರಿಣಾಮ ಪಲರೂಪವಾಗಿ ದೊರಕಿದ್ದೂ ವಾಸ್ತವ!
     
     ಇಷ್ಟೆಲ್ಲಾ ಆಗಿಯೂ, ಹಾಳೆಯು ಮೊದಲು ಹೇಳಿದ್ದನ್ನೇ ಹೇಳುತ್ತದಯೇ?? ಅಥವಾ ನನ್ನೀ ಬದುಕಂತೆ ಅದರಲ್ಲೂ ಏನಾದರೂ ಬದಲಾವಣೆ ಆಗಿರಬಹುದೇ?? ಎನ್ನುತ್ತಾ ಟೀ.ವಿಯಲ್ಲಿ ಮಿಂಚುವ ಈ ಮಹಾಸ್ವಾಮಿಗಳ ನಂಬರ್ ಡಯಲ್ ಮಾಡಿ, ಅಪಾಯ್ಟ್ ಮೆಂಟ್ ಇವತ್ತಿನ ಸಂಜೆಯೇ ಸಿಕ್ಕು, ಬ್ರಹ್ಮಾಂಡ(ಜಾತಕ), ಮಹಾಸ್ವಾಮಿಯ ಕೈ-ಏರಿ ಕುಳಿತಿರುವುದಕ್ಕೆ ಕಾರಣವಾಗಿತ್ತು!
      
       ಈ ಎಲ್ಲಾ ಯೋಚನೆ ಮತ್ತೆ ನನ್ನ ಮೊಗದಲ್ಲಿ ಬೆಳಗ್ಗಿನ ಮಂದಹಾಸವನ್ನ ನೆನಪು ಮಾಡಿಸಿ, ಮನವನ್ನ ಹಗುರ ಮಾಡಿಸಿತ್ತಲ್ಲದೇ, ಜಾತಕದ  ದೊಡ್ಡಒಗಟನ್ನೇ ಬಿಡಿಸಿದ ಸಂತೋಷವೂ ಮಹಾ ಪ್ರಭೆಯನ್ನೇ ಉಂಟು ಮಾಡಿ, ತುಸು ನಗು- ಮುಖದಲ್ಲಿ ಮಿಂಚಿತು.
     
       ನನ್ನ ಮುಖದ ನಗುವನ್ನ ಗಮನಿಸಿಯೋ ಏನೋ, ಮಹಾಸ್ವಾಮಿಗಳ ಮಾತಿನ ದಾಟಿ ಬದಲಾವಣೆಯಾಗಿ, ಸ್ವಲ್ಪ ಹೊತ್ತಿಗೇ ಸುಮ್ಮನೆಯೂ ಆಗಿ, ಎಲ್ಲಾ ದೋಷಗಳಿಗೂ ಪರಿಹಾರವನ್ನ ಯೋಚಿಸುತ್ತಲೇ, ಜಾತಕವನ್ನ ನನ್ನೆದುರಿಗೇ ಇಟ್ಟು, ನನ್ನೇ ನೋಡುತ್ತಾ ಕುಳಿತರು.
     
       ನಾನಾದರೋ ಅದನ್ನ ಮಡಚಿ ಜೇಬಿಗಿರಿಸಿಕೊಳ್ಳುತ್ತಾ, ಅವರ ದಕ್ಷಿಣೆಯನ್ನ ಇರಿಸಿ, ಹೊರಡುತ್ತೇನೆಂದಷ್ಟೇ ಹೇಳಿ, ನಮಸ್ಕರಿಸಿ, ಹೊರ ಹೊರಟುಬಿಟ್ಟೆ.
      
      ಮಹಾಸ್ವಾಮಿಗಳಾದರೋ ನನ್ನೀ ಅನಿರೀಕ್ಷಿತ ಆಚರಣೆಗೆ ಚಕಿತರಾಗಿ, ನನ್ನೇ ನೋಡುತ್ತಿದ್ದುಬಿಟ್ಟರು!
ಬಾಗಿಲ ಪಕ್ಕದಲ್ಲಿಯೇ ಇದ್ದ ಡಸ್ಟ್ಬಿನ್ ನೋಡಿ, ತುಸು ನಿಂತೆ.
     
     ಮನಸ್ಸಿನ ಭಾರ ಹಗುರಾದದ್ದಾಯಿತು, ಇನ್ನು ಜೇಬನ್ನೂ ಸ್ವಲ್ಪ ಹಗುರ ಮಾಡಿಕೊಳ್ಳೋಣ ಎನಿಸಿದ್ದು ಸುಳ್ಳಲ್ಲ!
    
      ಮನೆಯಲ್ಲಿ ಮಗನ ಬರುವನ್ನೇ ಕಾದು, ಜಾತಕವ ಜೋಯಿಸರ ಕೈಗೆ ಕೊಡುವ ತರಾತುರಿಯಲ್ಲಿರುವ ಅಮ್ಮ ನೆನಪಾಗಿ, ಇದಿಲ್ಲದೇ ತೆರಳಿದರೆ ಅವಳ ಮುಖದಲ್ಲಾಗುವ ಆತಂಕದ ಗೆರೆಗಳನ್ನ ನೆನೆದು, ಮನ ಬದಲಾಯಿಸಿ ಹಾಗೇ ಮನೆಯ  ದಾರಿಯ ತುಳಿಯತೊಡಗಿದೆ.
      
     ನನ್ನ ಪುಣ್ಯಕ್ಕೆ ಪಾದಗಳಿಗೆ ಮನೆಯ ಅಡ್ರೆಸ್ ಗೊತ್ತಿದ್ದರಿಂದ ಸರಿಹೋಯಿತು! ಅವುಗಳ ಪಾಡಿಗೆ  ಅವು ಸಾಗಿ, ಮೊದಲೇ ಯೋಚನಾಲಹರಿಯಲ್ಲಿ ತಲ್ಲೀನನಾಗಿಬಿಡುವ ನನಗೆ ಮನೆತಲುಪಿದ್ದೆ ಗೊತ್ತಾಗಲಿಲ್ಲ!!
  
      ಅಮ್ಮನ ಜೊತೆಜೋರು ಜೋರು ಮಾತನಾಡುತ್ತಿರುವ, ಕಂಡು ಬಹಳೇದಿನವಾಗಿರುವ ಗೆಳೆಯ ಮುಕುಂದನ ಧನಿ ಹೊರಬಾಗಿಲವರೆಗೆ ಕೇಳಿ, ತುಸು ಉತ್ಸುಕನಾಗಿಯೇ ಮನೆಯೊಳ ಅಡಿಯಿಡುತ್ತಲೇ ಹೇಳಿದೆ....

      “ಏನಯ್ಯಾ ದೊರೆ, ಇವತ್ತೇನು ನಿನ್ನ ಬ್ಯುಸಿ ಮೈಂಡ್ ನಮ್ಮನ್ನ ನೆನಪಿಸ್ಕೊಂಡಿದೆ! ನೀನು ಬಂದಿದ್ದಿ ಅಂತಾದ್ರೆ ಏನೋ ವಿಶೇಷ ಇರ್ಲೇಬೇಕಲ್ವೇ? ಬೇಗ ಹೇಳು ಮರಾಯಾ ನೀ ಬಂದಿರೋ ಖುಷಿಲೇ ಅದ್ನೂ ಅನುಭವ್ಸಿ ಬಿಡ್ತೀನಿ

      “ಹಾ..ಹಾ..ಹಾ.. ಬಾ ಬಾ. ಸ್ನೇಹಿತ ಅಂದ್ರೆ ನೀ ನೋಡು! ನನ್ನೆಸ್ಟು ಕರೆಕ್ಟ್ ಆಗಿ ಜಡ್ಜ್ ಮಾಡ್ದೆಎನ್ನುತ್ತಾ ಎದ್ದುನಿಂತು ನನ್ನ ಮನೆಗೆ ನನ್ನೇ, ನಗುತ್ತಾ ಸ್ವಾಗತಿಸಿದ ಮುಕುಂದ.

      ಉಭಯಕುಶಲೋಪರಿಯನ್ನ ಕೇಳಿ, ಮಾತನಾಡಿಕೊಳ್ಳುತ್ತ, ಕೈ-ಕಾಲು ತೊಳೆದು ಬಂದ ನಮಗೆ ಅಮ್ಮ ತಂದಿಟ್ಟ, ಟೀ-ಉಪಹಾರ ಸೇವನೆಯೂ ಆಯಿತು.

     “ಇವತ್ತು ನಿಮ್ಮನೇಲೆ ರಾತ್ರಿಯ ಊಟನೂ ಮಾಡೇ ಹೋಗ್ತೀನಿಎನ್ನುವ ಅವನ ನಿಸ್ಸಂಕೋಚ ಮಾತನ್ನ ಕೇಳಿದ ಅಮ್ಮ ಖುಷಿಯಿಂದಲೇ ಅಡಿಗೆ ತಯಾರಿಗೆ ಒಳನಡೆದರೆ, ನಮ್ಮಿಬ್ಬರ ಎಷ್ಟೋದಿನಗಳಿಂದುಳಿದ ಮಾತು-ಕಥೆಗೆ ವೇದಿಕೆ ಸಜ್ಜಾಯಿತು.

      “ಎಲ್ಲಿವರೆಗೆ ಬಂತಪ್ಪಾ ನಿನ್ನ ಮದುವೆಯೂಟ ನೀಡುವ ತಯಾರಿ?” ಅವನ ಮನೆಯಲ್ಲಿ ಹೆಣ್ಣುನೋಡುತ್ತಿರುವ ವಿಚಾರ ತಿಳಿದೇ ಇದ್ದ ನಾನು ಅವನಲ್ಲಿ ಪ್ರಶ್ನಿಸಿದೆ.
 
       “ಅಯ್ಯೋ! ಅದನ್ನ ಕೇಳ್ಬೇಡಪ್ಪ. ಸಾಕೋ-ಬೇಕೋ ಆಗ್ತಿದೆ!” ಬೇಸರದ ಧನಿಮಾಡಂದ ಮುಕುಂದ.

      “ಯಾಕೋ.....?” ಕಳಕಳಿಯ ಪ್ರಶ್ನೆ ನನ್ನದು.

      “ಅಮ್ಮನಿಗೆ ಒಂದು ಹೆಣ್ಣೂ ಆಗಿಬರುತ್ತಿಲ್ಲ! ಬಂದ ಹೆಣ್ಣುಗಳಲ್ಲೆಲ್ಲಾ- ಒಂದಷ್ಟಕ್ಕೆ ಜಾತಕ ಕೂಡಿಬರುತ್ತಿಲ್ಲ, ಕೆಲವೊಂದಕ್ಕೆ ಬಣ್ಣ ಇಲ್ಲ! ಗುಣವಿರದೇ ಇರುವುದು ಒಂದಷ್ಟಾದರೆ, ಮತ್ತೊಂದಿಷ್ಟು ಹೆಣ್ಣುಗಳೇ ಜೋರು, ಇನ್ನೊಂದಷ್ಟರ ಮನೆಗೇ ಸಂಸ್ಕಾರವೇ ಇರುವುದಿಲ್ಲ! ಒಟ್ಟಿನಲ್ಲಿ ಹೆಣ್ಣುಗಳ ಮನೆಗೆ ಪೆರೇಡ್ ಮಾಡಿ-ಮಾಡಿಯೇ ನನ್ನಾಯಸ್ಸು ಮುಗಿಯುವುದೋ ಅನಿಸುತ್ತಿತ್ತು
      
       ಮುಗ್ಧಮಾತಿನಂದದ್ದು ಕೇಳಿ, ’ಪಾಪ..’ ಅನಿಸಿದ್ದರೂ, ಸುಮ್ಮನೇ ಕೆಣಕುವ ಮನಸ್ಸಾಗಿ,
 
    “ಹ ಹ ಹ.... ಮದುವೆ ನಿನಗೋ? ನಿಮ್ಮಮ್ಮನಿಗೋ? ಹುಡುಗಿ ಸಿಗುವುದೇ ಕಷ್ಟವೆನ್ನುವ ಈ ಕಾಲದಲ್ಲಿ ಅಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ, ಯಾರಾದ್ರೂ ಶಕುಂತಲೆನ ಕಟ್ಕೋಳ್ಬಾರ್ದಾ?” ನಗುತ್ತಾ ಕೇಳಿದೆ.
ನೀ ನಗ್ಬೇಡ ಮರಾಯಾ! ಮೊನ್ನೆ ಆದದ್ದೂ ಅದೇ ಕಥೆ.......” ಅನ್ನುತ್ತಾ, ಆಸಕ್ತಿಕರ ವಿಷಯವಾದ್ದರಿಂದ ತುಸು ನನ್ನಕಡೆ ಸರಿದು ಮುಂದುವರಿದ,
   
      “ಜಾತಕವೆಲ್ಲಾ ಕೂಡಿಬಂದು, ಹುಡುಗಿ ಫೋಟೋದಲ್ಲಿ ಲಕ್ಷಣವಾಗಿರುವುದನ್ನ ನೋಡಿ ಅವರಮನೆಗೆ ಹೋದದ್ದಾಯಿತು. ಅಲ್ಲಿಯ ಸಂಭ್ರಮ ಏನಂತೀಯಾ? ಹೆಣ್ಣು ನೋಡುವ ಶಾಸ್ತ್ರವೇ ಹೀಗಾದರೆ, ಮದುವೆ ಇನ್ನೇಗಪ್ಪಾ? ಅನ್ನುವಸ್ಟು ಸಂಭ್ರಮ ಅಲ್ಲಿತ್ತು. ಪ್ರಾರಂಭದ ಉಪಚಾರ ಎಲ್ಲಾ ಮುಗಿದು, ಹುಡುಗಿಯನ್ನ ಕರೆದರು.
 
     ಏನು ಚಂದ ಇದ್ಲು ಅಂತಿ! ಫೋಟೋದಲ್ಲಿದ್ದಕ್ಕಿಂತ ಎದುರಿನಲ್ಲೇ ಅದ್ಭುತ ಅನ್ಸಿದ್ದು ಸುಳ್ಳಲ್ಲ ಮಾರಾಯಾ! ಅವಳ ನಡೆ, ವಯ್ಯಾರ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಮಾತೂ ಮತ್ತೆ ಮತ್ತೆ ಕೇಳ್ಬೇಕು ಅನಸ್ತಿತ್ತು, ಅಷ್ಟು ಸುಂದರ. ಸುಶೀಲೆ. ಬುದ್ಧಿವಂತೆ ಕೂಡ, ಡಬಲ್ ಡಿಗ್ರಿ ಗ್ರಾಜುಯೇಟ್! ನನಗವಳನ್ನು ವಲ್ಲೇ... ಎನ್ನಲು ಕಾರಣವೇ ಇಲ್ಲ! ಅಂತದ್ರಲ್ಲಿ ನನ್ನಮ್ಮ ಏನೋ ನೆವ ಹೂಡಿ ಒಳಹೋದವಳು, ತಟ್ಟನೇ ಹಿಂತಿರುಗಿ, ಒಂದೇ ಸವನೆ ಹೊರಡಲು ಒತ್ತಾಯ ಮಾಡಿದ್ದೇ ಮಾಡಿದ್ದು! ನನಗೂ-ಅಪ್ಪನಿಗೂ ಯಾಕಿವಳು ಇಷ್ಟು ಒತ್ತಾಯ್ಸುತ್ತಿದ್ದಾಳಪ್ಪ ಅನೋದೇ ಬಗೆಹರಿದೇ ಹೊರಟುನಿಂತ್ವಿ! ಹಾಗೇ, ದಾರೀಲಿ ಅವಳನ್ನು ಕೇಳಿಯಾಯ್ತು,
      
     ’ಯಾಕಮ್ಮಾ ಅಷ್ಟು ಅವಸರಿಸಿದೆ?’

     ಅವ್ಳು ಹೇಳಿರೋ ಕಾರಣಕ್ಕೆ ನನಗೆ ಅಳಬೇಕೋ? ನಮ್ಮಮ್ಮನಿಗೆ ಬುದ್ದಿಯಿಲ್ಲವೆಂದು ವ್ಯಥೆ ಪಡಬೇಕೋ... ಅಂದುಕೊಳ್ಳುತ್ತಾ ಹಣೆ-ಹಣೆ ಚಚ್ಚಿಕೊಂಡೆ!!”
 
     “ಅಂತದ್ದು ಏನಿತ್ತೋ?”

      “ಒಳಗೋದ ಅಮ್ಮಾ ಅವಳ ಕಾಲ ಬೆರಳ ನೋಡಿದ್ಲಂತೆ! ಅವು ಸ್ವಲ್ಪ ಆಕಾರಕ್ಕೆ ತಕ್ಕದಿಲ್ದೇ ಸ್ವಲ್ಪ ಉದ್ದವಾಗಿತ್ತಂತೆ!! ಇಸ್ಟೇ!! ಬೇಡವೇ ಬೇಡ... ಉದ್ದ ಬೆರಳಿರೋ ಹೆಣ್ಣು ಮಗನಿಗ್ಯಾಕೆ? ತಾನೇ ನಿರ್ಧರಿಸಿ.... ಹಾಗೇ ನಮ್ಮನ್ನ ಹೊರಡಿಸಿ.............”

       ಅವನ ಮಾತು ಮುಗಿಯುವ ಮೊದಲೇ ನಗು ತಡೆಯಲಾಗಲಿಲ್ಲ ನನಗೆ! ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇ ನಕ್ಕಿದ್ದು!
ನನಗೆ ನಗು ನಿಲ್ಲುವವರೆಗೆ ಸುಮ್ಮನಿದ್ದು ಮತ್ತೆ ಮುಂದುವರಿಸಿದ.

       “’ಅಪ್ಪಾ! ನನಗೆ ಇದೆಲ್ಲಾ ಸಾಕೋ ಸಾಕು. ಮದುವೆ ಆದ್ರೆ ಇವ್ಳನ್ನೇ. ನನಗೆ ಮತ್ಯಾರನ್ನೂ ತೋರಿಸ್ಲೂ ಬೇಡಿ, ಇಷ್ಟ ಆಗೋದು ಇಲ್ಲ, ಅಮ್ಮನನ್ನ ನೀನು ಹೇಗೆ ಒಪ್ಪಿಸುತ್ತಿಯೋ, ನಾ ವಲ್ಲೆ!’ ಅನ್ನೋ ಮಾತನ್ನ  ಖಡಾಕಂಡಿತ ಹೇಳಿ ನಾ ಸುಮ್ಮನಿದ್ದು ಬಿಟ್ಟೆ. ಅಮ್ಮನನ್ನ ಒಪ್ಪಿಸುವ ಹೊಣೆ ಹೊತ್ತ ಅಪ್ಪ ನನ್ನ ಮಾತಿಗೆ ಸಮ್ಮತಿ ನೀಡಿ, ಮದುವೆಗೆ ಒಪ್ಪಿಗೆ ಸೂಚಿಸಿದ್ದೂ ಆಯಿತು.”
       
      ನಾನು ನಗುತ್ತಲೇ, “ಬಪ್ಪರೇ! ಅಂತೂ ಮುಕುಂದನ ಕನ್ಯಾ ವೀಕ್ಷಣಾ ಪ್ರಹಸನದ ನಾಟಕಕ್ಕೆ ಇಲ್ಲಿಗೆ ತೆರೆಯೆಳೆದಂತಾಯಿತು ಅನ್ನು. ಅಂತೂ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಅನ್ನುವುದು ಮತ್ತೊಮ್ಮೆ ಸಾಭೀತಾಯಿತು, ನಿನ್ನ ಸಂಜಯ್ ನ ಕಥೆ ಕೇಳು ಮಾರಾಯಾ, ಹೆಣ್ಣು ನೋಡಲಿಕ್ಕೆ ಹೋಗಿ, ಆ ಹೆಣ್ಣು ನಿನ್ನ ಜೊತೆ ಆರು ತಿಂಗಳು ಇರುತ್ತೇನೆ, ಆಮೇಲೆ ನೀನು ಇಷ್ಟವಾದರೆ ಮದುವೆ ಎಂದಳಂತೆ! ಇವನು ಒಮ್ಮೆಲೇ ತಬ್ಬಿಬ್ಬಾಗಿ, ಅಲ್ಲಿಂದ ಒಂದೇ ಓಟವಂತೆ.... ಹ್ಹಾ.. ಹ್ಹಾ.. ಹ್ಹಾ....!!”
      
      ಇಬ್ಬರದೂ ನಗು ಜೋರಾಗಿದ್ದು, ಅಮ್ಮ ಊಟಕ್ಕೆ ಕರೆದದ್ದೇ ಕೇಳಿರಲಿಲ್ಲ.
    
      “ಅವ್ನ ಕಥೆ ಬಿಡು, ಮೊನ್ನೆ ಪೇಪರ್ ನೋಡದ್ಯಾ? ಮದುವೆ ಆಗಿ ಮಾರನೇ ದಿನವೇ ಹುಡುಗಿ ಪರಾರಿ!!”
ಆ ಪ್ರಹಸನವೂ ನೆನಪಾಗಿ ಇಬ್ಬರ ನಗೂ ಅಬ್ಬರಕ್ಕೇರಿರುವಾಗಲೇ ಅಮ್ಮನ ಕೂಗು ಮತ್ತೆಕೇಳಿ, ತಟ್ಟೆಗೆ ಹೋಗಿ ಕುಳಿತುಕೊಳ್ಳುವಂತೆ ಮಾಡಿತು.
      
      “ಏನಪ್ಪಾ, ನೀವಿಬ್ರು ಜೊತೆ ಗೂಡ್ಬಿಟ್ರೆ ಜಗತ್ತು ಕತ್ತಲೆ ಆದದ್ದನ್ನೇ ಮರ್ತುಬಿಡ್ತೀರಲ್ಲಾ, ಎಷ್ಟು ಬಾರಿ ಕುಗೋದು ನಿಮ್ಮನ್ನ?” ಎನ್ನುತ್ತಿದ್ದ ಅಮ್ಮನ ಮಾತಿಗೆ,
       
       “ಅಮ್ಮಾ, ನೀನು ಒಂದು ಸೊಸೆ ಹುಡುಕ್ಕೋ, ನಮ್ಮನ್ನ ನಮ್ಮ ಪಾಡಿಗೆ ಬಿಟ್ಬಿಡುಎನ್ನುತ್ತಲೇ ನನ್ನಕಡೆ ನೋಡಿ ಕಣ್ಣು ಮಿಟುಕಿಸಿದ ಮುಕುಂದ!
   
       “ನೋಡುವುದೇ......” ಇಂತಿಷ್ಟೇ ಹೇಳಿ ಅಮ್ಮ ಬಡಿಸತೊಡಗಿದ್ದಳು.
ನಾನಾದರೋ ಅಮ್ಮನ ಎದುರಿಗೆ ಆ ಮಾತೆತ್ತದೇ ಸುಮ್ಮನಿರುವಂತೆ ಸನ್ನೆಯಲ್ಲೇ ಸೂಚಿಸಿ, ನಿಧಾನ ಊಟಮಾಡುವಂತೆ ಹೇಳಿ ಅಮ್ಮ ಬಡಿಸಿದ ಅನ್ನ, ಹುಳಿಯನ್ನ ಉಣ್ಣತೊಡಗಿದೆ.
ಉಂಡು ಡರ್ರ್.... ಅಂತ ತೇಗಿದ ಮುಕುಂದ, “ಅಮ್ಮನ ಕೈರುಚಿ ಅಂದ್ರೆ ರುಚಿನೇ, ದೇಹ ಮುಪ್ಪಾದ್ರೂ-ರುಚಿಗೆ ಮುಪ್ಪಿಲ್ಲ ನೋಡುಎನ್ನುತ್ತಾ ನಗೆಯಾಡಿದ.
     
       ಅಮ್ಮನಾದರೋ ತುಸು ನಗುತ್ತಲೇ, ”ಹೌದಪ್ಪಾ! ಇನ್ನೆಷ್ಟು ದಿನ? ಬರುತ್ತಾಳಲ್ಲ ನಿಮ್ಮನೆಗೇ ನಿನ್ನ ವಯ್ಯಾರಿ..... ಬಡಿಸಿ ಉಣಿಸುತ್ತಾಳೆ, ಆಗೆಷ್ಟು ದಿನ ನನ್ನ ನೆನಪು ಮಾಡಿಕೊಳ್ಳುತ್ತಿ, ನೋಡುವಾ!” ಎನ್ನುವ ಮಾತನ್ನ ಕೇಳಿ, ತಾನು ಮಾತಾಡಿದ್ದು ಅಮ್ಮನ ಕಿವಿಗೂ ಬಿದ್ದಿದೆ ಅನ್ನುವುದನ್ನ ಅರಿತು! ನಾಚುತ್ತಲೇ ಹೋಗಿಬರುವೆನೆಂದು, ಅಮ್ಮನಿಗೆ ನಮಸ್ಕರಿಸಿ,
ಹೇಳುತ್ತೇನೆ, ಒಂದು ವಾರ ಮೊದಲೇ ಬರಬೇಕುಅನ್ನುತ್ತಾ ನನಗೂ ವಿದಾಯವನ್ನು ಹೇಳಿದ ಮುಕುಂದ.
ಅಮ್ಮ ಊಟಮುಗಿಸಿ, ನನ್ನ ಬಳಿಬಂದು, “ನಿನ್ನ ವಾರಗೆಯರಿಗೆಲ್ಲಾ ಮದುವೆ ನಿಕ್ಕಿಯಾಯ್ತು, ಇನ್ನು ನಿನಗ್ಯಾವಾಗ್ಳೋ... ಇವತ್ತು ಜೋಯಿಸರಿಗೆ ಜಾತಕ ಮುಟ್ಟಿಸಲೇ ಆಗಲಿಲ್ಲ.” ಅನ್ನುತ್ತಾ, ಬೆಳಗ್ಗೆ ಕೊಟ್ಟ ಜಾತಕವ ಕೇಳಿ, ಒಯ್ದಳು.
ಜಾತಕವನ್ನ ಯಾವಾಗ ಎತ್ತಿಅವಳ ಕೈಗೆ ಕೊಟ್ಟೆನೋ, ಆ ಕ್ಷಣದಿಂದಲೇ ಗ್ರಹ-ತಾರೆಗಳೆಲ್ಲಾ ನನ್ನ ಕಣ್ಣಮುಂದೆ ನರ್ತಿಸುತ್ತಾ, ಹೊಸದೊಂದು ಯೋಚನೆಗೆ ನೂಕಲು ಸಿದ್ಧಗೊಳ್ಳುವಂತಾಯಿತು!!
       
      ಅವುಗಳನ್ನ ಓಡಿಸಲು ಪ್ರಯತ್ನಿಸುತ್ತಾ, ದಿನ ನಿತ್ಯದ ಕರ್ಮದಂತೆ ಓದಲು ಕುಳಿತುಕೊಳ್ಳಲು ಪ್ರಯತ್ನಿಸಿದೆ.
ಯಾಕೋ ಏನೋ ಓದಲೂ ಮನಸಾಗದೇ ಪುಸ್ತಕವ ಮುಚ್ಚಿ, ರೂಮಿನ ಕಿಟಕಿ ಬಳಿ ನಿಂತು ಆಕಾಶವ ನೋಡುತ್ತಾ ನಿಂತದ್ದೇ ತಡ, ನಾ ಖಾಲಿಯಾಗಲೇ ಕಾಯುತ್ತಿದ್ದ ಯೋಚನೆಗಳು ಒಮ್ಮೆಲೇ ದಾಳಿಗಿಟ್ಟವು



      “ಅಮ್ಮ ನಾಳೆ ಜಾತಕವ ಜೋಯಿಸರ ಕೈ-ಸೇರಿಸುತ್ತಾಳೆ! ಮುಂದೇನು ಕತೆ? ಮೊದಲು ನೋಡುವುದೇ ಜಾತಕವನ್ನಂತೆ!! ಆಮೇಲೇನಿದ್ದರೂ ನಾ ನೋಡಲು ಬರುವುದನ್ನ ಒಪ್ಪುವುದು! ನನ್ನ ಅವರು ನೋಡುವುದು!!
 ಮೊದಲೇ ನನ್ನೀ ಜಾತಕವನ್ನ ನೋಡಿದವರಾದರೋ ನನಗೆ ಹೆಣ್ಣು ಕೊಡಲು ಒಪ್ಪಿಯಾರೇ?? ಇರುವ ದೋಷಗಳೆನ್ನೆಲ್ಲಾ ಮರೆತು ಧಾರೆಯೆರುವರೇ ನನಗೆ? ಜಾತಕವೆಂಬ ಅರ್ಥವಾಗದ ಜೀವನದ ಕಾಗುಣಿತದ ಲೆಕ್ಕದಲ್ಲೇ ತೊಡಗಿದ ಸಂಕುಚಿತ ಭಾವನೆಯ ಜನರಲ್ಲಿ, ಎಲ್ಲವನ್ನೂ ಮೆಟ್ಟಿನಿಂತ ವ್ಯಕ್ತಿಯ ಗುರುತಿಸುವವರು ಯಾರಿಹರು ಇಲ್ಲಿ??

      ಎಂದು ಪ್ರಶ್ನಿಸಿದ್ದೇ ತಡ!! ನನ್ನ ಮನವೇ ಚಂದ್ರಮನ ರೂಪಧರಿಸಿದಂತಾಗಿ ನಕ್ಕು ನುಡಿಯಿತು, “ಎಲೈ ಮುಗ್ಧ, ಯಾಕಿಷ್ಟು ಒದ್ದಾಟ! ಇಷ್ಟುದಿನವೂ ನೀನು ಖಾಲಿಯಾಗಿ ಬದುಕಿಲ್ಲವೇ? ನಿನಗ್ಯಾಕೆ ಯಾರ ಹಂಗು? ನಿನಗೆ ನಾನಿಲ್ಲವೇ, ನಿನ್ನ ಮನದಂಗಳದಿ ತುಂಬಿರುವ ಗ್ರಹ-ತಾರೆಗಳಿಲ್ಲವೇ? ಅದೇ ಜಗತ್ತು! ಅದೆಲ್ಲವೂ ನಿನ್ನದಲ್ಲವೇ? ನಿನ್ನವುಗಳೇ ಅಲ್ಲವೇ? ಜಗತ್ತೇ ನಿನ್ನದಾಗಿಸಿಕೊಂಡು ಏನೂ ಇಲ್ಲದಂತೇ ಯಾಕಿರುವೆ? ನಿನ್ನ ಹೆಂಗಸು ಮನಕ್ಕೆ ಧಿಕ್ಕಾರವಿರಲಿ!!”
 
       ಎನ್ನುವುದನ್ನ ಕೇಳುತ್ತಲೇ ಹಾಸಿಗೆಯ ಮೇಲುರುಳಿದ್ದೆ. ಆ ರಾತ್ರಿಯೇ ನನಗೊಂದು ಕನಸಾಯಿತು............” ಕುಳಿತಿದ್ದೆ ಸುಮ್ಮನೇ!! ಹೆಂಗರೆಳೆಯರೆಲ್ಲಾ ಬಂದು ಸಾಗಿದ್ದರು. ನನ್ನದೇನೂ ಇಲ್ಲಾ..... ಮಾತಿಲ್ಲ.... ಕಥೆಯಿಲ್ಲಾ.... ಒಂದು ನಗುವೂ ಇಲ್ಲ..... ಎಲ್ಲರೂ  ಮದುವೆಯ ಊಟಕ್ಕೇ ಕುಳಿತಿದ್ದರು..... ನಾನೂ ಕುಳಿತಿದ್ದೆ... ಕುಳಿತಲ್ಲಿಯೇ!! ಹಸಿವೆಯಿಲ್ಲದೆಯೇ.... ಬಾಯಾರಿಕೆ ಇಲ್ಲದೆಯೆ..... ನಿರ್ಲಿಪ್ತ!?
  
         ಅಲ್ಲಾ.....!! ಬೆಳಕು ಆರಿತ್ತು, ಊಟಕ್ಕೆ ಕುಳಿತಸಮಯದಲ್ಲೇ!! ನಾನಾಗ ಎದ್ದಿದ್ದೆ..... ಕುಳಿತಲ್ಲಿಂದ.......... ಬೆಳಕ ಹೊತ್ತಿಸಲು..... ಎಲ್ಲರ ಊಟ ತಡೆಯಿಲ್ಲದೇ ಸಾಗಲು...... ಆಗಲೇ ಮಿಂಚಿತ್ತು, ನನ್ನ ಮುಖದಲ್ಲೊಂದು ನಗುವು......

.............................................
ಮುಗಿಯಿತು....