ಮಂಗಳವಾರ, ಡಿಸೆಂಬರ್ 13, 2011

ಬೃಂದಾವನ-2.


                     ತಂಪು ಕೊಡುವ ಮರವು ಬರಿದಾಗುವಿಕೆಯನ್ನೇ ಕಾಯುತ್ತಿರುವಂತಿದ್ದ ಚಿಂತೆಯೆಂಬ ದೆವ್ವವು, ಚಿತೆಗೆ ಬೆಂಕಿಗಾಹುತಿ ನೀಡಲು ಅಣಿಮಾಡತೊಡಗಿತು ವಸುದೇವನ ದೇಹವನ್ನು. "’ನಿನ್ನ ಪಾದತಳದ ಧೂಳಿನ ಸ್ಥಳದಲ್ಲಿ ನನ್ನ ಕಂದಮ್ಮಗಳನ್ನಿರಿಸುವೆ, ದಯವಿರಲಿ ನಮ್ಮಲ್ಲಿ. ಬದುಕಿಸು ನಮ್ಮನ್ನು’ ಎನ್ನುತ್ತಾ ಪರಿ-ಪರಿಯಾಗಿ ಬಾವನ ಪದತಲದಲ್ಲಿ ಬೇಡಿ ಬದುಕಿಕೊಂಡೆವು. ಯಾವ ಪುರುಷಾರ್ಥದ ಸಾಧನೆಗೆ? ಹುಟ್ಟಿ, ಬೆಳೆದು, ಜಗದ ಸೌದಂರ್ಯವನ್ನೆಲ್ಲಾ ಕಣ್ಣೊಳಗಿನ ಗೋಲದಲ್ಲಿ ತುಂಬಿ, ವಿದ್ಯೆಯೆಂಬ ಶಾರದೆಯನ್ನ ನಾಲಿಗೆಯ ಮೇಲೆ ನಲಿಸಿ, ಅರಿಯ ರಕುತದಲ್ಲಿ ಶೌರ್ಯದಿಂದ ಬಸಿದ ಬೆವರು ತೊಳೆಸಿ,  ನೀರೆಯ ಸೀರೆಯ ನೆರಗು; ಅಂಚು ಕಾಣದಂತೆ ಮಾಡಿ, ಸೂರ್ಯಸದೃಶಕ್ಕೆ ಯದುಕುಲದ ಪತಾಕೆಯ ಹಾರಿಸಿ, ಕೊನೆಯ ಕಾಲದ ನಾರುಬಟ್ಟೆಯ ಶಾಂತ್ಯುದರಕ್ಕೆ ಆಹಾರವಾಗಬೇಕಿದ್ದ ಕಂದಮ್ಮಗಳೆಲ್ಲಾ, ಪೃಥಿವಿಯನ್ನ ಆಘ್ರಾಣಿಸುವುದರೊಳಗೇ, ಗೋಡೆಗೆ ಶಿರವ ಬಡಿಸಿ, ನೆತ್ತರನ್ನೆಲ್ಲಾ ಸೆರೆಯ ಕಂಭಿಕಳಿಗೆ ಅಭಿಶೇಕಿಸಿ, ಕೇಳಲಾಗದೇ ಇದ್ದರೂ, ಕಿವಿಗೆ ಬಂದು ಬಡಿಯುವ ಆ ಆಕ್ರಂದನ, ನಿದ್ರಾದೇವಿಗೆ ಬರದಂತೆ ನೀಡಿದ ಕಟ್ಟಪ್ಪಣೆಯಂತಿದ್ದು, ಘಳಿಗೆಯ ಸಮಾಧಾನತೆಯನ್ನೂ ದೂರ ಮಾಡಿಬಿಟ್ಟಿದೆ. ಯಾಕೆ ಬೇಕಿತ್ತು ಈ ಜನುಮದ ನರಕ? ಕಂಸನ ಓರೆಯನ್ನು ಬಿಟ್ಟ ಕತ್ತಿ, ಪತ್ನಿಯ ಕತ್ತಿನ ರುಚಿಯನ್ನ ನೋಡುವ ದೆಸೆಯಿಂದ ಮೇಲೇರಿದಾಗ ನನ್ನೆದೆಯಾದರೋ ಸಡ್ಡುಹೊಡೆದು ನಿಂತಿದ್ದರೆ, ವೀರಸ್ವರ್ಗವನ್ನಾದರೂ ಏರಬಹುದಿತ್ತೇನೋ!? ಎಂದಿನವರೆಗೆ ಬೆಳಕಿಗೆ ಹೆದರಿ ಓಡುವ ಹೇಡಿ ಕತ್ತಲಲ್ಲಿ ಮರೆಯಾಗಿನಿಲ್ಲುವುದು?" ಎನ್ನುವ ಪರಿತಾಪದಿಂದ ದಹಿಸುತ್ತಿರುವ ಮನವು ಒಂದೇಸವನೆ ಚಡಪಡಿಸುತ್ತಿದ್ದರೆ, ತೊಡೆಯನ್ನು ಆಶ್ರಯಿಸಿದ ದೇವಕಿಯ ನಿದ್ದೆಗೆ ಎಲ್ಲಿ ಭಂಗತರುವುದೋ ಎನ್ನುವ ಕಾರಣಕ್ಕೆ ದೇಹವು ಅಲುಗಾಡದೇ ಕುಳಿತಿತ್ತು.

                     ಕಾಲವು ತಾನು ಯಾರಪ್ಪಣೆಗೂ ಕಾಯದೇ ಆ ರಾತ್ರಿಯ ಮುಸುಕನ್ನ ತೊರೆದು, ಬೆಳ್ಳನೆಯ ಬೆಳಕಿನ ಹಾಸಿಗೆಗೆ ಹೊರಳಲು ಅಣಿಯಾಗುತಿತ್ತು. ರಾತ್ರಿಯೇ ವಸುದೇವನಲ್ಲಿ ಚರ್ಚಿಸಿ, ಕೈ-ಗೊಂಡ ನಿರ್ಧಾರದತ್ತ ಕಾರ್ಯೋನ್ಮತ್ತರಾಗಿದ್ದರು ಗರ್ಗರು. ಸೀದಾ ರೋಹಿಣಿಯಿರುವಲ್ಲಿ ತೆರಳಿ, ವಸುದೇವನ ಮನದಿಂಗಿತವನ್ನ ಅವಳಲ್ಲಿ ತಿಳಿಸಿ, ಗೊಲ್ಲತಿಯರ ವೇಷವನ್ನ ಧರಿಸುವಂತೆ ತಿಳಿಸಿ, ಬೆಳ್ಳಂ ಬೆಳಗ್ಗೆನೇ ಗೋಕುಲದಿಂದ ಹಾಲು, ಮೊಸರು, ಬೆಣ್ಣೆ ಮಾರಲು ಬರುವ ಗೊಲ್ಲ ಸ್ತ್ರೀಯರಲ್ಲಿ, ಅವಳನ್ನೂ ಯಾರಿಗೂ ಅನುಮಾನಬಾರದಂತೆ ಮಥುರಾ ನಗರವನ್ನ ಬಿಡಲು ಸಕಲ ಏರ್ಪಾಡುಗಳನ್ನೂ ಮಾಡಿಸಿದರು. ಹಾಗೇ ನಗರವನ್ನ ಬಿಟ್ಟ ಗೊಲ್ಲತಿಯರ ಸಮೂಹ ಯಮುನಾ ನದಿಯನ್ನ ದಾಟಿತು.


                  ಹಿಮೇಶ್ವರನು ನದಿಯಾಗಿ ಹರಿದು, ಎಲ್ಲರ ತನು, ಮನವನ್ನ ತಣ್ಣಗೆ ಇರಿಸುತ್ತಿರಲಾಗಿ, ತಾನು ಇನ್ನೊಂದು ರೂಪವನ್ನ ಧರಿಸಿ, ಮುಕ್ಕೋಟಿದೇವತೆಗಳು ಆಶ್ರಯಿಸಲ್ಪಟ್ಟು ಪೂಜಿಸಲ್ಪಡುವ ಗೋ-ಮಾತೆಯ ಕೆಚ್ಚಲಿನಲ್ಲಿ ಹರಿದು, ಹಸು-ಗೂಸುಗಳಿಗೆ, ಚಪಲಚಿತ್ತ ನಾಲಿಗೆಗೆ ನಾ ನಾ ವಿಧಗಳಲ್ಲಿ ರುಚಿಯನ್ನ ಉಣುಬಡಿಸುತಿದ್ದನು ಆ ಊರಿನಲ್ಲಿ.
ಗೋವರ್ಧನ ಗಿರಿಯ ತಪ್ಪಲಿನಲ್ಲಿ ಬೆಳೆದು ನಿಂತ ಹಸಿ-ಹಸಿ ಹಸಿರು; ತಾನು ಏನೂ ನಿನಗೆ ಕಮ್ಮಿ ಇಲ್ಲ ಎನ್ನುವಂತೆ ದಷ್ಟಪುಷ್ಟತೆಯನ್ನ ಹಸುವಿಗೂ ನೀಡಿ, ಹಿಂಡಲ್ಪಟ್ಟು, ಕಸುವಿನಿಂದ ಕೂಡಿದ ರಟ್ಟೆಯಲ್ಲಿ ಹೋಗಿ ಆಶ್ರಯಿಸುತ್ತಿದ್ದವು ಆ ಊರಿನ ಜನರಲ್ಲಿ. ಮಾಂದಾರ,ಮಲ್ಲಿಗೆ, ಕ್ಯಾದಿಗೆ, ಪಾರಿಜಾತಾದಿ ಪುಷ್ಪಗಳು ತಮ್ಮ ಸೌಗಂಧಬರಿತ ಉಸಿರಾಟ ಸಗಣಿಯ ವಾಸನೆ ಹತ್ತಿರ ಸುಳಿಯದಂತೆ ಮಾಡುತ್ತಿದ್ದವು. ಕಿನ್ನರ-ಕಿಂಪುರುಷರ ಸುಮಧುರ ಧನಿಗಳು ಹಾಡಿ, ನಲಿಯುತ್ತಿರುವ ಗೊಲ್ಲರ ವೇಷದಲ್ಲಿ ಸುತ್ತುತ್ತಿದ್ದರೆ, ಪಕ್ಷಿಗಳೆಲ್ಲಾ ಹಿಮ್ಮೇಳನಕ್ಕೆ ತಮ್ಮ ಧನಿಗಳನ್ನ ಸೇರಿಸಿ ಕಳೆಕಟ್ಟುತಿದ್ದವು. ಕೆಂಪಾದ ಕೆಮ್ಮಣ್ಣು ಅಲ್ಲಿನ ಗೋಡೆಗಳಲ್ಲಿ ಬಳಿಯಲ್ಪಟ್ಟು, ಅದರ ಮೇಲೆ ಚಿತ್ತಾರವಾಗಿನಿಂತ ಶೇಡಿ ಪ್ರತಿಯೊಂದು ಮನೆಯನ್ನೂ ಕಲ್ಯಾಣ ಮಂಟಪೋಪಾದಿಯಲ್ಲಿ ಸಿಂಗರಿಸಿದ್ದವು. ಅವುಗಳಲ್ಲಿ ನೋಡಿದರೆ, ಜಗವನ್ನೇ ಮರೆಸುವ, ಅಲಂಕಾರವೇ ವಿಹರಿಸುವ ನೆವವೊಡ್ಡಿ, ಕಿಲ-ಕಿಲ ನಗುವಿನೊಡನೆ, ಸ್ವರ್ಗವನ್ನೇ ಧರೆಗಿಳಿಸಿ, ಅಪ್ಸರೆಯರ ಸಮೂಹವೇ ನೆರೆದಂತೆ, ನೆರೆತ ಮಂದಾಕಿನಿಯರು ನಲಿದಾಡುತ್ತಿದ್ದರಲ್ಲಿ.  ಆಡುತ್ತಾ, ಛೇಡಿಸುತ್ತಾ ದನ-ಕರುಗಳೊಡನೆ, ಸಂಜೆಗೆ ಮನೆ ಹಿಂತಿರುಗುತ್ತಿರುವ ಗೊಲ್ಲಹುಡುಗರ ಕುಚೇಷ್ಟೆಯನ್ನ ಕೇಳಿ, ಸೂರ್ಯನೂ ಕೂಡ ತನ್ನ ರಂಗನ್ನ ಮುಖದತುಂಬಾ ತುಂಬಿಕೊಂಡು, ರಸಿಕರ ನೋಟಕ್ಕೆ ನೀರಾದ ನೀರೆಯ ಮೊಗದಂತೆ ಮುಖಮಾಡಿಕೊಂಡು ಪಶ್ಚಿಮದಲ್ಲಿ ಕರಗುತ್ತಿರಲಾಗಿ,    ನಂದಗೋಕುಲವನ್ನ ಪ್ರವೇಶಿಸಿದರು ಗೊಲ್ಲತಿಯರು.

                        ಮೊದಲೇ ಆಗಮಿಸಿದ ಗರ್ಗರು, ಆ ಸಮೂಹದಲ್ಲಿದ್ದ ರೋಹಿಣಿಯನ್ನ ನಂದ-ಯಶೋಧರಿಗೆ ಪರಿಚಯಿಸಿ, ಅವಳ ಹಾಗು ಅವಳ ಉದರವನ್ನಾಶ್ರಯಿಸಿದ ಮಗುವಿನ ಯೋಗಕ್ಷೇಮವನ್ನ ಅವರ ಕೈಗಳಿಗೆ ಹಸ್ತಾಂತರಿಸಿ, " ನೀವೇನು ಭಯಪಡುವ ಅವಶ್ಯಕತೆ ಇಲ್ಲಾ ಆಚಾರ್ಯರೇ, ನನ್ನ ಸ್ನೇಹಿತನ ಪತ್ನಿಗೆ ಏನೂ ಕುಂದು-ಕೊರತೆಗಳು ಬಾರದಂತೆ ಸಲಹುತ್ತೇವೆ" ಎನ್ನುವ ವಾಗ್ದಾನವನ್ನ ಪಡೆದು, ಒಂದು ಜೀವ ಉಳಿಸಿದ ನೆಮ್ಮದಿಯ ಉಸಿರನ್ನ ರೋಹಿಣಿಯಲ್ಲಿ ಆಶೀರ್ವಾದ ರೂಪದಲ್ಲಿ ಬಿಟ್ಟು ಹಿಂತಿರುಗಿದರು. ಶಾಂತ ಚಿತ್ತದ ರೋಹಿಣಿಯು ತನ್ನ ಪ್ರಸವದ ದಿನಗಳನ್ನ ಎದುರು ನೋಡುತ್ತಾ ಹಾಯಾದ ಘಳಿಗೆಗಳನ್ನ ಆ ಊರಿನಲ್ಲಿ ಕಳೆದು, ನವ ಮಾಸಗಳನ್ನೂ ದಾಟಿಬಿಟ್ಟಳು. ಆದರೆ, ಅನುದಿನವೂ ರಾತ್ರಿಯ ನಿದ್ದೆಯ ಸಮಯದಲ್ಲಿ, ತನ್ನ ಯೋಗಕ್ಷೇಮವನ್ನ ನೋಡಿಕೊಳ್ಳಲು  ಸಹಸ್ರ-ಸಹಸ್ರ ಮುಖಗಳ ಹೆಡೆಗಳನ್ನ ಚಾಚಿ, ಬಸುರಿಯ ಮೊದ್ದು ಮುಖವನ್ನೇ ನೊಡುತ್ತಾ ಕುಳಿತಿರುವ ಸರ್ಪವು  ಗಮನಿಸುತ್ತಿರುವಂತೆ ಆಗುವ ಅನುಭವವನ್ನ ಅವಳು ಯಾರಲ್ಲಿಯೂ ತಿಳಿಸಲೇ  ಇಲ್ಲಾ!

                   ಈಕಡೆ ಮಾತ್ರಾ ಮಥುರಾ ನಗರಾಧಿಪತಿಯನ್ನ, ಅರೆನಿದ್ದೆಯ ಕನಸಿನಲ್ಲಿ ತಾನು ಮಾಡಿದ ಪಾಪವೆಲ್ಲಾ   ಹಾವಿನ ರೂಪವ ತಾಳಿ, ಅದರ ಬಾಲವೆಂಬ ಉರುಳಿಗೆ ಸಿಕ್ಕಿಬಿದ್ದು, ಉಸಿರುಗಟ್ಟಿದ ಅನುಭವವನ್ನ ಪಡೆಯುತ್ತಾ, ಬೆಚ್ಚಿಬೀಳಿಸುತ್ತಾ ಎಬ್ಬಿಸಿಬಿಡುವಂತೆ ಮಾಡುತಿತ್ತು ಆ ಹಾವು!!  ಹಾಗೇ ಆ ದಿನವೂ, ಕೆಮ್ಮುತ್ತಾ , ದಡ್ಡನೆ ಎದ್ದು ಕುಳಿತ ಕಂಸ. ರಾಜವೈದ್ಯರಿಂದ ತಿಳಿಸಲ್ಪಟ್ಟಂತೆ, ಈ ದಿನ ದೇವಕಿಯ ಸಪ್ತಮ ಗರ್ಭ ಇಳಿಯುವ ದಿನ, ಎನ್ನುವುದನ್ನ ನೆನಪಿಗೆ ತಂದುಕೊಳ್ಳುತ್ತಾ, ಗರ್ಭಸ್ರಾವ ಆಗಿರುವ ವಿಚಾರ ತಿಳಿಯದೇ ಇರುವ ಅವನು, ಸೇವಕರು ತರುವ ವಾರ್ತೆಗಾಗಿ ಕಾಯುತ್ತಾ ಕುಳಿತಾದವನಾದ!


ಮುಂದುವರೆಯುತ್ತದೆ......