ಮಂಗಳವಾರ, ಆಗಸ್ಟ್ 2, 2011

ಹೊಂಬೆಳಕು......

ಆ ಒಂದು ದಿನ, ಸಾಯಂಕಾಲ, ದಿನವು ಕತ್ತಲೆಯ ಕಡೆಜಾರುತಿತ್ತು. ನನ್ನ ಮನದಂಗಳವೂ ಕೂಡ ಯಾವುದೋ ಅರಿವಿಲ್ಲದ  ಕತ್ತಲಿನಲಿ ಅಲೆದಾಡುವಂತಿತ್ತು.  ಅಂತರಾಳದಲಿ ಯಾವುದೋ ವೇದನೆ. ಎಲ್ಲೋ ಎಡವುತ್ತಿರುವೆನೆಂಬ ಭಾವನೆ! ಆ ಕ್ಷಣ, ಏನು ಮಾಡಬೇಕೆಂದರಿಯದೇ...... ಕಣ್ಣಿಗೆ ಬಿದ್ದ, ಯಂಡಮೂರಿಯ, "ವಿಜಯದ ಸಂಗಾತಿ" ಯ ಯಾವುದೋ ಪುಟವನ್ನ ತೆರೆದು ಕುಳಿತೆ..... 
********************************

                        1989ರಲ್ಲಿ ಆರ್ಮೇನಿಯಾದಲ್ಲಿ ನಡೆದ ಭೂಕಂಪವು ಸುಮಾರು 30,000ದಷ್ಟು ಜನರನ್ನ ಆಹುತಿ ತೆಗೆದು ಕೊಂಡಿತ್ತು. ಆ ಸಂದರ್ಭದಲ್ಲಿ, ತಂದೆ ಮಗನನ್ನು ಹುಡುಕುತ್ತಾ ಶಾಲೆಗೆ ಬರುತ್ತಾನೆ. ಮಗನನ್ನು ಶಾಲೆಗೆ ಬಿಟ್ಟಸಂದರ್ಭದಲ್ಲಿ,ಮಗ ಯಾವ ಕೋಣೆಯತ್ತ ಓಡಿಹೋಗುತ್ತಿದ್ದನೋ ಆ ದಿಕ್ಕಿನ ಕಡೆ ಸಾಗಿ ಭೂಮಿಯ ಮೇಲೆ ಹೂತು ಹೋದ ಎರಡು ಅಂತಸ್ತಿನ ಕಟ್ಟಡದ ಮಣ್ಣಿನ ರಾಶಿಯನ್ನ ಸರಿಸತೊಡಗುತ್ತಾನೆ.ಸಮೀಪದಲ್ಲಿಯೇ ಸ್ಫೋಟಗೊಂಡ ಜ್ವಾಲಾಮುಖಿಯ ದಗೆ,ಉರುಳಿಬಿದ್ದ ಕಟ್ಟಡಗಳ ಮಣ್ಣಿನ,ಕಲ್ಲುಗಳ ರಾಶಿ,ಭೂಕಂಪದ ಹೊಡೆತಕ್ಕೆ ಸಿಲುಕಿರುವವರ ಆಕೃಂದನ, ಮತ್ತೆ ಭೂಕಂಪನ ಸಂಭವಿಸಲಿದೆ ಎಂಬ ವಾರ್ತೆಯಿಂದ ಪುನಃ ಜೀವ ಉಳಿಸು ಕೊಳ್ಳಲು ಓಡುವವರು.. 
                      
                       ಈ ರೀತಿಯಾದ ಗೊಂದಲಮಯ ವಾತಾವರಣದಲ್ಲಿಯೂ ಏಕಾಗ್ರತೆಇಂದ ಉರುಳಿಬಿದ್ದ ಕಟ್ಟಡದ ಕಲ್ಲಿನ ರಾಶಿಯನ್ನು ಸರಿಸುತಿದ್ದನು ಆತ. ದುಃಖ ಉಮ್ಮಳಿಸಿ ಬರುತ್ತಿದೆ.ಮಗನಿಗೆ ಬಾರಿ ಬಾರಿಯೂ ಹೇಳುತ್ತಿರುವ ಈ ಮಾತು ನೆನಪಿಗೆ ಬರುತ್ತಿದೆ 'ಮಗನೇ.. ನಿನಗೆ ಏನೇ ಕಷ್ಟ ಬಂದರೂ ನನ್ನನ್ನು ನೆನೆಸಿಕೋ, ನಿನ್ನ ನೆರವಿಗೆ ನಾ ಬರುತ್ತೇನೆ' ಎಂದು. 


                              ಸ್ವಲ್ಪ ಹೊತ್ತಿನ ನಂತರ ಉಳಿದ ಮಕ್ಕಳ ತಂದೆ-ತಾಯಿಯರೂ ಅಳುತ್ತ,ರೋಧಿಸುತ್ತಾ ಬರುತ್ತಾರೆ. ಕೆಲವರು ಇವನ ಸಹಾಯಕ್ಕೆ ನಿಂತರೆ,ಕೆಲವರು ಹಾಗೆ ಮಾಡಬೇಕು, ಹೀಗೆ ಮಾಡೋಣವೆಂಬ ಸಲಹೆ ನೀಡತೊಡಗುತ್ತಾರೆ.ಕೆಲವರು ಅಗ್ನಿಶಾಮಕಕ್ಕೆ ಕರೆಯನ್ನೂ ಕಳುಹಿಸುತ್ತಾರೆ, ಆದರೆ ಅಲ್ಲಿಗೆ ಬರಲಾಗುವುದಿಲ್ಲ ಎಂಬ ಮಾತು ಅವರಿಂದ ಬರಲ್ಪಡುತ್ತೆ. ಆರ್ಮೇನಿಯಾ ಒಂದು ಬಡ ದೇಶ. ಅಲ್ಲಿ ಇರುವುದೇ ನಾಲ್ಕು ಅಗ್ನಿಶಾಮಕ ಗಾಡಿಗಳು, ಅವರಾದರೂ ಎಲ್ಲಿಯೆಂದು ಬರುವುದು? ಇಡೀ ನಗರವೂ ಹಾನಿಗೊಳಗಾಗಿದೆ. ಎರಡು ದಿನದಲ್ಲಿ ಮಕ್ಕಳ ದೇಹವು ಕೊಳೆತು ನಾರತೊಡಗುತ್ತದೆ,ಅಷ್ಟರೊಳಗೆ ದೇಹವನ್ನು ಹುಡುಕಿ, ಗುರುತಿಸಿ ತೆಗೆದುಕೊಂಡು ಹೋಗಬೇಕೆಂಬ ತವಕ ಉಳಿದವರಲ್ಲಿ. ಸಂಜೆಯಾಗುತ್ತದೆ, ಎಲ್ಲರು ಹಿಂತಿರುಗುತ್ತಾರೆ. ಆದರೆ ಅವನು ಮಾತ್ರ ತನ್ನ ಪ್ರಯತ್ನವನ್ನು ಮಾಡುತ್ತಲೇ ಇದ್ದ.ಮರುದಿನ ಮತ್ತೆ, ಕೆಲವರು ಬರುತ್ತಾರೆ,ನಾಳೆ ಛೀಫ್ ಇನ್ನೂ ಹೆಚ್ಛು ಜನರನ್ನ ಕಳಿಸುತ್ತಾರಂತೆ ಎಂಬ ಮಾತನಾಡತೊಡಗುತ್ತಾರೆ. ಅವನು ಹೇಳುತ್ತಾನೆ 'ನೀವು ನನಗೆ ಸಹಾಯ ಮಾಡಿ, ಇಲ್ಲಾ ಅಂದರೆ ನನ್ನ ಸಮಯವನ್ನ ವ್ಯರ್ಥ ಹಾಳುಮಾಡಬೇಡಿ' ಅದಕ್ಕೆ ಕೆಲವರು ಹ್ನ್ಯೂ ಗುಟ್ಟು ಸಹಾಯಕ್ಕೆ ನಿಂತರೆ, "ಇವನಿಗೆಲ್ಲೋ ಹುಚ್ಚುಹಿಡಿದಿದೆ" ಅಂದುಕೊಳ್ಳುತ್ತಾ ಹೋಗುತ್ತಾರೆ ಮತ್ತೆ ಹಲವರು.


                   ಇವನು ತನ್ನ ಪ್ರಯತ್ನಮುಂದುವರಿಸುತ್ತಾ 36 ಗಂಟೆಗಳು ಕಳೆದು ಹೋಗುತ್ತದೆ. ಒಂದು ದೊಡ್ಡ ಕಲ್ಲಿನ ಛಪಡಿಯನ್ನ ಸರಿಸಿದಾಗ ಒಳಗಿನಿಂದ 'ಅಪ್ಪಾ....!', ಎಂಬ ಕೂಗು ಕೇಳಿ ಬರುತ್ತೆ. ತಂದೆ 'ಅರ್ಮಾಂಡ್....' ಎಂದು ಹೆಸರನ್ನು ಕೂಗುತ್ತಾ ಇನ್ನೊಂದು ಕಲ್ಲನ್ನು ಸರಿಸುತ್ತಾನೆ. ಆಗ ಒಳಗೆ ಬೆಳಕು ಬಿದ್ದು ಮಗನ ಮುಖವನ್ನ ನೋಡುತ್ತಾನೆ. 'ಅಪ್ಪಾ.. ನೀ ಬಂದೇ ಬರುತ್ತಿ ಅಂತ ನನಗೆ ಗೊತ್ತಿತ್ತಾಪ್ಪಾ. ನನ್ನವರಿಗೂ ನಾ ಈ ಮಾತನ್ನೇ ಹೇಳುತ್ತಿದ್ದೆ' ಅನ್ನುವ ಮಾತು ಕೇಳಿಬರುತ್ತೆ ಮಗನಿಂದ. 'ಒಳಗೆ ಇನ್ನೂ ಎಷ್ಟುಜನರಿದ್ದಾರೆ?' ಎಂಬ ತಂದೆಯ ಪ್ರಶ್ನೆಗೆ, ಮಗ 'ಮೊದಲು 34 ಜನರಿದ್ದರು, ಈಗ 16 ಜನರಿದ್ದಾರೆ'ಎಂಬ ಮಾತನ್ನು ಹೇಳುತ್ತಾನೆ.'ನಿನ್ನ ಕೈ ಕೊಡು, ಮೇಲಕ್ಕೆ ಎಳೆದು ಕೊಳ್ಳುತ್ತೇನೆ' ಎನ್ನುತ್ತಾನೆ ತಂದೆ. ಮಗ ಹೇಳುತ್ತಾನೆ,'ಅಪ್ಪಾ, ನನಗೋಸ್ಕರ ನೀ ಇದ್ದೀಯಲ್ಲಾ, ಮೊದಲು ಇವರನ್ನು ಮೇಲಕ್ಕೆ ಎಳೆದುಕೊಳ್ಳಪ್ಪಾ..."
                                          
                                           *************************     
   
                 ಕಣ್ಣಿನ ಅಂಚಿಂದ ನೀರು ಜಾರತೊಡಗಿದಂತೆ...... ಮನಸ್ಸಿನಲ್ಲಿನ ಕತ್ತಲೆಯೂ, ಮಂದ ಬೆಳದಿಂಗಳ ನಡುವೆ ಎಲ್ಲಿಯೋ ಓಡಿಹೋದಂತಾಯಿತು.... ಪ್ರೀತಿ.... ನಂಬಿಕೆ....  ನನ್ನಂಗಳದಲ್ಲಿ  ಅಂಕುರಿಸಿದಂತಾಗಿ...  ಅಲ್ಲೇನಿದ್ದೆಗೆ ಜಾರಿಹೋದೆ....                                 ಆ ದಿನ ನನಗೊಂದು ಕನಸಾಯಿತು...... ವಿಶಾಲ ಮರದಕೆಳಗೆ..... ಮಂದಸ್ಮಿತನಾಗಿ, ನಾನು ಕುಳಿತಿದ್ದರೆ... ನನ್ನ ಕುಟುಂಬದ ಕಲರವ, ಪಕ್ಷಿಗಳ ರೂಪದಲ್ಲಿ.... ನನ್ನ ಕಿವಿಗೆ ತಾಕುತಿತ್ತು........