ಸೋಮವಾರ, ಜುಲೈ 9, 2012

ಕಥೆ:ಹರೀಶನ ಪ್ರೇಮ ಪ್ರಸಂಗ


ನೀನು ಫೇಕ್…”
ನಾನು ಫೇಕ್ ಅಲ್ಲಾ..!
ಹೌದು... ನೀನು ಫೇಕೇ..!!
ನಾನು ಫೇಕ್ ಅಲ್ಲಾ... ಅಲ್ಲಾ...
"ನೀನು ಫೇಕ್ ಅಲ್ಲಾ ಅನ್ನಲಿಕ್ಕೆ ಸಾಕ್ಷಿ ಏನಿದೆ??”
ನಿನಗೆ ಸಾಕ್ಷಿ.... ಬೇಕಾ? ... ಸಾಕ್ಷಿ??” ಎನ್ನುತ್ತಲೇ ಆಕಾರವು, ಹಲ್ಲುಕಿರಿದು, ಕೋರೆ ದಾಡೆಗಳನ್ನೊಮ್ಮೆ ಝಳಪಿಸಿ, ತನ್ನ ನಾಲಿಗೆಯನ್ನು ಹೊರಚಾಚಿ, ಒರಟು ಒಣದುಟಿಯ ಮೇಲೆ ಚಪ್ಪರಿಸಿ, ಒಮ್ಮಿಂದೊಮ್ಮೆಲೇ ತನ್ನ ಕಡೆಗೆ ಹಾರಿದ್ದು ನೋಡಿ, ಹೌಹಾರಿದ ಹರೀಶ!!
  ಠಕ್ಕಂತ ಎದ್ದು ಕುಳಿತ.
ಒಂದು ಕ್ಷಣದ ಕಾಲ ತಾನು ಎಲ್ಲಿರುವನೆಂದೇ ಅವನಿಗೆ ತಿಳಿಯಲಿಲ್ಲ. ಮೈಯೆಲ್ಲಾ ಬೆವರಿನಿಂದ ತೋಯ್ದಿತ್ತು. ತಾನು ಎಲ್ಲಿಗೋ ಓಡಲು ಪ್ರಯತ್ನಿಸಿರುವುದೂ, ಕೈ-ಕಾಲುಗಳು ತುಸು ನಡುಗುತ್ತಿರುವುದೂ- ಅವನ ಅನುಭವಕ್ಕೆ ಬಾರದೇ ಇರಲಿಲ್ಲ!
ಒಂದೆರಡು ನಿಮಿಷ ತನ್ನ ತಾನು ಸಮಾಧಾನ ಮಾಡಿಕೊಂಡು ವಾಸ್ತವಕ್ಕೆ ಬರಲು ಪ್ರಯತ್ನಿಸಿ,
   ಆಗ ತಾನೇ ಕಂಡ ಆಕಾರ ಈಗೆಲ್ಲಿ ಹೋಯಿತು?’ ಎಂದುಕೊಳ್ಳುತ್ತಲೊಮ್ಮೆ ಸುತ್ತಲೂ ನೋಡಿ, ಎಲ್ಲಿಯೂ ಕಾಣದಿರುವುದನ್ನ ನೋಡಿ, ನಿಟ್ಟುಸಿರೊಂದ ಬಿಟ್ಟು, ಮತ್ತೆ ತನ್ನ ಹಾಸಿಗೆಯ ಮೇಲೆ ಮೈಚಾಚಿ ಮಲಗಿದ.
ಮತ್ತೆ ಕಣ್ಣುಮುಚ್ಚಲು ಪ್ರಯತ್ನಿಸಿದರೆ, ಆ ಆಕಾರವೇ ಧುತ್ತೆಂದು... ಎದುರಿಗೆ ಬಂದದ್ದನ್ನ ನೋಡಿ, ಕಣ್ಣನ್ನ ಹಾಗೆಯೇ ಬಿಟ್ಟು ಅದರ ಬಗ್ಗೆಯೇ ಚಿಂತಿಸತೊಡಗಿದ.
ಈಗ ಕಂಡಿದ್ದು ವಾಸ್ತವವೇ? ಅಥವಾ ವಾಸ್ತವದಂತಿರುವ ಕನಸೇ? ಹೀಗೆ ಕಾಣಲಿಕ್ಕಾದರೂ ಕಾರಣ ಏನಿರಬಹುದು? ಅಂತಹ ಆಕಾರವನ್ನ ನಾನೆಂದೂ ನೋಡಿದ್ದಿಲ್ಲ! ಯೋಚಿಸಿದ್ದಿಲ್ಲ! ಭಯಂಕರ ಛಾಯಾರೂಪದಲ್ಲಿ ತನ್ನೆದುರಿಗೆ ನಿಂತು ವಾದಮಾಡಿ, ಕೊನೆಗೊಮ್ಮೆ ತನ್ನನ್ನೇ ಆಕ್ರಮಿಸ ಹೊರಟ ಅದನ್ನ ನೆನಸಿಕೊಂಡರೆನೇಯೇ ಮೈಮೇಲೆ ಹಾವು ಹರಿವ ಅನುಭವ ಆಗುತ್ತೆ!! ಅದು ಈ ರೀತಿಯಾಗಿ ಕಾಣಲಿಕ್ಕೆ ಕಾರಣವೇನಿರಬಹುದು??” ಎಂದುಕೊಳ್ಳುತ್ತಲೇ ತಾನು ಅಡ್ಮಿನ್ ಆಗಿ ನಿರ್ವಹಿಸುತ್ತಿರುವ ಫೇಸ್ ಬುಕ್ನ ಒಂದು ಗ್ರುಪ್ ನಲ್ಲಿ ಹುಡುಗಿಯರದೇ ಎಂದು ಭಾಸವಾಗುವ- ಫೇಕ್ಪ್ರೊಫೈಲ್ ಗಳ ಹಾವಳಿಯನ್ನ ನಿಯತ್ರಿಸಲು ಹಾಗೇ ಅನುಮಾನ ಬಂದವರನ್ನೆಲ್ಲಾ ವಿಚಾರಿಸುವುದ ನೆನಪಾಗಿ,
"ಬಹುಶಃ ಹೀಗೂ ಆಗಿದ್ದಾಗಿರಬೇಕು- ತಾನು ಕಂಡುಹಿಡಿದ ಫೇಕ್ ಪ್ರೊಫೈಲ್ ಮಂದಿಯೆಲ್ಲಾ ತಮ್ಮ, ತಮ್ಮ ಕಮರಿಹೋದ ಕನಸುಗಳ ಸೇಡು ತೀರಿಸಿಕೊಳ್ಳಲು, ತನ್ನ ಮೇಲೆ ಕತ್ತಿಮಸೆಯ ಇಂತಹ ಆಕಾರವನ್ನ ಸೃಷ್ಟಿಸಿ ಕಳುಹಿಸಿರಬಹುದೇ? ಅಥವಾ ಅಂತಹ ಫೇಕ್ ಅಂತೇ ತೋರುವಲ್ಲಿಯೂ ಸರಿಯಾದದ್ದೂ ಇದ್ದು... ಅವರೆಲ್ಲರ ನಿರಾಸೆಯ ಆತ್ಮ ಬುಸುಗುಟ್ಟಿ, ತನ್ನಮೇಲೇರಿ ಬಂದಿರಬಹುದೇ??”
ಎನ್ನುವ ನೂರಾರು ಚಿಂತೆಗಳು ಅವನ ಮೇಲೆ ಒಂದರ ಮೇಲೊಂದು ಸವಾರಿಯನ್ನ ಮಾಡುತ್ತಿದ್ದಂತೆ ಅಲರಾಮ್ ಕಿರ್ರ್.....ಎಂದು ಕೂಗತೊಡಗಿದ್ದನ್ನ ಮತ್ತೆ ಅವನನ್ನ ಬೆಚ್ಚಿಬೀಳಿಸಿತು!
ಆ ಭಯಂಕರ ಆಕೃತಿ ಅಲರಾಮ್ ನಲ್ಲೆಂದು ಸೇರಿಕೊಂಡಿತಪ್ಪಾ?’ ಎಂದುಕೊಳ್ಳುತ್ತಾ. ಅದನ್ನ ನೋಡಿದಾಗ ಅಲ್ಲಿ ೫.೧೫ ಆಗಿರುವುದನ್ನ ನೋಡಿ, ಈದಿನ ಸ್ನೇಹಿತರೊಂದಿಗೆ ಹೋಗಬೇಕಿದ್ದ ಸೋಮನಾಥಪುರ ಟ್ರಿಪ್ಪಿಗೆ, ಹೋಗಲನುಗುಣವಾಗುವಂತೆ ಬೇಗನೆ ಏಳಲು ಸೆಟ್ ಮಾಡಿಟ್ಟುಕೊಂಡಿದ್ದು ನೆನಪಾಗಿ ಎದ್ದು ಕುಳಿತು, ಲಗುಬಗೆಯಿಂದ ಅದನ್ನ ಆಫ್ ಮಾಡಿ ಬಾತ್ರೂಂ ಕಡೆ ಹೆಜ್ಜೆ ಹಾಕಿದ.
ಷವರ್ ತಿರುಗಿಸಿ ಅದರ ಕೆಳನಿಂತ ತಕ್ಷಣ, ತಂಪಾದ ನೀರು ತಲೆಯ ಮೇಲೆ ಬಿದ್ದು ಕೆಳಹರಿಯುತ್ತಿದ್ದಂತೆ ದೇಹಕ್ಕೂ, ಮನಸ್ಸಿಗೂ ಹಾಯ್ ಎನಿಸಿತ್ತು ಅವನಿಗೆ.
ಎಲ್ಲಾ ಮರೆತು ಆ ಸಮಯವ ಉಲ್ಲಾಸದಿಂದಲೇ ಅನುಭವಿಸಿ- ಗಂಗೆಯಲ್ಲಿ ಮುಳುಗಿ ಸಕಲ ಪಾಪವ ಪರಿಹರಿಸಿಕೊಳ್ಳುವಂತೆ; ಹರೀಶ ಷವರ್ ನ ಕೆಳನಿಂತು ಭಯಂಕರಾಕೃತಿಯ ಭಾರದಿಂದ ಮುಕ್ತನಾಗಿ, ಫ್ರೆಶ್ ಆಗಿ ಹೊರಬಂದು, ಬೇಗ ಬೇಗನೆ ರೆಡಿಯಾಗಿ ಬೈಕ್ ಚಾಲೂ ಮಾಡಿ, ತನ್ನ ಪಿಕ್-ಅಪ್ ಪೈಂಟ್ ಗಿರಿನಗರದ ಕಡೆ ಮುಖಮಾಡಿದ.
                                                     **********
ಗಾಡಿ ಬಂದು ಗಿರಿನಗರದ ರಾಧಾಕೃಷ್ಣ ಹಾಸ್ಪಿಟಲ್ ನ ಎದುರಾಗಿ ಅವನಿಗೆ ಕಾಯುತಿತ್ತು. ಸ್ನೇಹಿತರೊಡಗೂಡಿ ಗಾಡಿ ಏರಿದ್ದೂ ಆಯಿತು.
ಒಬ್ಬರಿಗೊಬ್ಬರ ಉಭಯಕುಶಲೋಪರಿಯಲ್ಲಿ ಹರಿ ಖುಷಿ-ಖುಷಿಯಿಂದಲೇ ಭಾಗವಹಿಸಿದ.
ಗಾಡಿಯ ತುಂಬೆಲ್ಲಾ ಕೆಲವೇ ಸಮಯದಲ್ಲಿ ಖುಷಿಯ ಖೇಕೆಗಳೂ ತುಂಬಿದವು. ಅವನ ನಗುಮೊಗ ಎಲ್ಲರನ್ನೂ ವಿಶೇಷವಾಗಿ ಉತ್ಸಾಹಿಸುವಂತಿತ್ತು.
ಒಬ್ಬರನ್ನೊಬ್ಬರ ಕಾಲೆಳೆದುಕೊಳ್ಳುವುದೂ, ಚುಡಾಯಿಸುವುದೂ, ಜೋಕ್ ಕಟ್ ಮಾಡಿ ನಗುವುದೂ ಗಾಡಿಯನ್ನ ಬೇಗನೇ ಬೆಂಗಳೂರನ್ನು ದಾಟಿಸಿತು.
ರಸ್ತೆಯಂಚಿನ ಹೋಟೆಲ್ ನಲ್ಲಿ ಹಸಿವಿನಿಂದ ಚುರ್ ಗುಟ್ಟುತ್ತಿರುವ ಹೊಟ್ಟೆಗೆ ಉಪಹಾರದ ಸೇವನೇಯೂ ಸಾಂಗವಾಗಿ ನಡೆದು, ಎಲ್ಲರನ್ನೂ ಮತ್ತೂ ಉತ್ಸಾಹಿತರನ್ನಾಗಿ ಮಾಡಿತು.
ಈಗ ಎಲ್ಲರ ಕಣ್ಣೂ, ಕಿವಿಗಳೆಲ್ಲವೂ ಉತ್ಸಾಹದಿಂದ, ಹಿರಿತಲೆ ಪೂರ್ಣಿಮಾಳಲ್ಲಿ ತುಂಬಿಕೊಳ್ಳುವಂತೆ ಮಾಡಿದ್ದು- ಅವಳು ಹೇಳಿದ ತನ್ನ ಪ್ರೇಮ-ಮದುವೆ ಕಥೆಯಿಂದ!!
ಇದು ಹರೀಶನಿಗೆ ತುಂಬಾನೇ ಎಕ್ಸೈಟಿಂಗ್ ವಿಷಯವಾಗಿತ್ತೋ, ಏನೋ? ಬಿಟ್ಟಕಣ್ಣು ಬಿಟ್ಟಹಾಗೇ, ತೆರೆದ ಬಾಯ ಮುಚ್ಚದೇ ಕೇಳಿದ್ದು ಸುಳ್ಳಲ್ಲ!
ಪೂರ್ಣಿಮಾ ಹೇಳುತ್ತಿದ್ದಳು, “ಅವರನ್ನ ನಾ ಯಾವ ಕ್ಷಣದಲ್ಲಿ ನೋಡಿದೆನೋ ಅಂದೇ ಮನಸ್ಸಿನಲ್ಲಿಯೇ ನನ್ನ ಆರಾಧ್ಯ ದೈವರಾಗಿ ಬಿಟ್ಟರು. ಇವರು ನನ್ನವರೇ ಎಂದು ಮನಸ್ಸಿನಲ್ಲಿ ಅನ್ನಿಸಿಬಿಟ್ಟಿತು. ಅವರಿಗೂ ಹಾಗೆಯೇ ಅನ್ನಿಸಿದ್ದು ನನ್ನ ಭಾಗ್ಯಕ್ಕೆ ಎಡೆಯಿಲ್ಲದಂತಾಯಿತು. ಇನ್ನೇನು ತಡ! ತನ್ನ ಮನೆಯವರ ಪುಟ್ಟ ವಿರೋಧದಲ್ಲಿಯೇ ಮದುವೆಯೂ ಆಗಿಹೋಯಿತು. ಈಗ ನನಗೆ ಎರಡು ಮಕ್ಕಳು!!ಎಂದು ನಗುಮೊಗದಲ್ಲೇ ಹೇಳಿದ್ದು ಅವಳು ಎಷ್ಟು ಸಂತೋಷದಿಂದ ಇರುವಳು ಎನ್ನುವುದು ತೋರುತಿತ್ತು.
ಇದು ಹರಿಗೆ ಆಶ್ಚರ್ಯತರುವಂತ ವಿಚಾರವಾಗಿತ್ತು. ಪ್ರೇಮದ ಬಗ್ಗೆ ಓದಿ, ಉಳಿದವರು ಹೇಳಿದ್ದ ಕೇಳಿದ್ದಷ್ಟೇ ತಿಳಿದಿತ್ತು! ಆದರೆ ಅವುಗಳಲ್ಲೆಲ್ಲಾ ಪ್ಯಾಂಟಸಿಗಳೇ ಹೆಚ್ಚಿದ್ದರಿಂದ ಅವನನ್ನ ಅದರ ಬಗ್ಗೆ ಅಷ್ಟೇನೂ ಉತ್ಸಾಹಿಸುವಂತೆ ಮಾಡಿರಲಿಲ್ಲ! ಆದರೆ ಇಷ್ಟು ಹತ್ತಿರದಿಂದ ಕೇಳಿದ ಈ ಕಥೆ, ಅವನ ಮನದಲ್ಲಿ ಗೂಡುಕಟ್ಟ ತೊಡಗಿತು!!
  ನೋಡಿದ ತಕ್ಷಣವೇ ಲವ್ವೇ?? ಇದು ಹೇಗೆ ಸಾಧ್ಯ?
ನನ್ನ ಪರಿಧಿಯಲ್ಲೇ ಕೇಳಿದ ಅತಿಸೊಗಸಾದ ಕಥೆ ಇದು. ಅಲ್ಲದೇ ವಾಸ್ತವವೂ ಹೌದು, ಕಲ್ಪನೆಯಂತೂ ಅಲ್ಲವೇ ಅಲ್ಲಾ! ಮತ್ತಲ್ಲದೇ; ಸಾಕ್ಷಿಗೆ ನಗುಮೊಗದ ಈ ಅಕ್ಕನೇ ಇದ್ದಾಳೆ!!
ಆದರೂ....
ನಾನು ಇಷ್ಟರವರೆಗೆ ಎಷ್ಟು ಹುಡುಗಿಯರನ್ನ ನೋಡಿಲ್ಲ! ಯಾರ ಮೇಲೂ ಅಂತ ಭಾವನೆಯೇ ಹುಟ್ಟಿಲ್ಲವಲ್ಲ!
ಇವಳು ಹೇಳುತ್ತಿರುವುದ ನೋಡುತ್ತಿರೆ, ಪ್ರೇಮದಲ್ಲಿ ಅಂತ ಸೊಗಸಿದೆಯಂತಾಯಿತು! ಅಂತ ಸೊಗಸು ನನಗ್ಯಾಕೆ ಸೋಗು ಹಾಕಿ ಕುಳಿತಿದೆ?
ಅಂತ ನಯ-ನಾಜೂಕು ಅವರಲ್ಲಿ ಕಾಣಲು ಯಾಕೆ ನನ್ನ ಮನ ಮಾಯವಾಗಿದೆ?
ಅವರ ಮಾಟವ ನೋಡುವುದ ಬಿಟ್ಟು! ನನ್ನ ಬುದ್ಧಿಯಾಕೆ ಮಾಟ-ಮಂತ್ರಿಸಿದಂತೆ ಭ್ರಮಾನಿರಸನವಾಗಿದೆ?
ಅವರಲ್ಲಿರುವ ಯಾವ ಸೌಂದರ್ಯದ ಸೊಭಗೂ ನನ್ನ ಚಿತ್ತವನ್ನ ಚಿತ್ತು ಮಾಡುವುದರಲ್ಲಿ ಯಾಕೆ ಸೋತುಹೋಗಿದೆ? ಅಲ್ಲದೇ, ಪ್ರೇಮಿಸುವ ವಯಸ್ಸೂ ನನ್ನದಲ್ಲವೇ!?
ಪ್ರೇಮ ಹುಟ್ಟಲು ವಯಸ್ಸಿನ ಅಗತ್ಯವೇ ಇಲ್ಲವೆಂದು ಎಲ್ಲೋ ಓದಿದ ನೆನಪಿದೆ! ಆದರೂ..ಯಾವ ಕಾರಣಕ್ಕೆ ಸನ್ಯಾಸಿಯ ಪೇಟ ನನ್ನ ತಲೆಮೇಲೆ ಬಂದು ಕುಳಿತಿರಹಬುದು?
ನನ್ನ ಕಣ್ಣಿನ ಕನ್ನಡಕವೇನಾದರೂ ಅಂತಹ ಸೂಕ್ಷ್ಮ ಸಂವೇದನೆಯನ್ನುಂಟು ಮಾಡಿ, ನನ್ನ ಕಣ್ಣಿನವರೆಗೆ ಪ್ರೇಮದ ಭಾವನೆಯನ್ನು ತರಲು ಸೋಲುತ್ತಿದಿಯೇ??” ಎಂದುಕೊಳ್ಳುತ್ತ ಕನ್ನಡಕವನ್ನೊಮ್ಮೆ ತೆಗೆದು, ಒರೆಸಿ-ಧರಿಸಿದ.
ಇಲ್ಲಾ ಇಲ್ಲಾ... ಅದಾಗಿರಲು ಸಾಧ್ಯವಿಲ್ಲ!! ಆ ಆ ವಯಸ್ಸಿಗನುಗುಣವಾಗಿಯೇ ಪದೇ ಪದೇ ಚೆಕ್ ಮಾಡಿಸುತ್ತ, ದರ್ಪಣವ ಬದಲಿಸುತ್ತಲೇ ಇರುವೆ!!
   ಬಹುಶಃ ಈ ಒಂದು ಕಾರಣಕ್ಕಿರಬಹುದು.......
 ಹುಡುಗಿಯರ ಹೆಸರಿನ ಫೇಕ್ ಪ್ರೋಫೈಲ್  ನೋಡಿ-ನೋಡಿ ಹುಡುಗಿಯರೇ ಫೇಕ್.... ಎನ್ನುವ ಭಾವನೆ ನನಗೆ ಪ್ರಬಲವಾಗಿ ಬಿಟ್ಟಿದೆ ಅನಿಸುತ್ತಿದೆ!?”
 ಎಂದು, ಒಂದೊಂದೇ ಯೋಚನೆಯ ಕಡ್ಡಿಯಿಂದ ಪ್ರೇಮಕ್ಕೆ ಗೂಡು ಕಟ್ಟಲು ಪ್ರಯತ್ನಿಸುತ್ತಿದ್ದಂತೆ, ಧುತ್ತನೆ ನೆನಪಾದ ಫೇಕ್.... ಭೂತ ಬೆಳಗ್ಗೆಯಷ್ಟೇ ಕಾಡಿದ್ದು ಮತ್ತೆ ನೆನಪಾಗಿ, ಮನದಲ್ಲೇ ಕಟ್ಟುತ್ತಿರುವ ಪ್ರೇಮದ ಗೂಡನ್ನು ಕಿತ್ತುಹಾಕಲು ಧಾವಿಸುತ್ತಿರುವಂತೆ, ಮೈಯೆಲ್ಲಾ ಇನ್ನೇನು ಬೆವರಲು ಪ್ರಾರಂಭವಾಗುತ್ತದೆ, ಎನ್ನುತ್ತಿರಲಾಗಿ....
ಹುಂಭಾ.... ಹರೇ ಹುಂಭಾ..... ಹರೇ ಹರೇ ಹುಂಭಾಎಂದು ಜೋರಾಗಿ ಸ್ನೇಹಿತರೆಲ್ಲರೂ ತನ್ನನ್ನ ಅಣಕಿಸಿ ಕೂಗುತ್ತಿರುವುದಕ್ಕೆ ತಟ್ಟನೇ ಎಚ್ಚರಾಗಿ, ಗಾಬರಿಯಿಂದ ಹೊರಬಂದು, ಅರ್ಜುನ ಸನ್ಯಾಸಿಯ  ನಸು ನಗುವನ್ನ ನಟಿಸುತ್ತಾ, ಎಲ್ಲರೊಟ್ಟಿಗೇ ತಾನೂ ಕೂಗತೊಡಗಿ,
ಮನಸ್ಸಿನಲ್ಲೇ ಅಬ್ಬಾ....ಎಂದುಕೊಳ್ಳುತ್ತಾ ಅಲ್ಲೇ ನಿಟ್ಟುಸಿರೂ ಬಿಟ್ಟಿದ್ದೂ, ಕೂಗಿ-ಕಬ್ಬರಿಯುತ್ತಿರುವ ಯಾರಿಗೂ ಗೊತ್ತೇ ಆಗಲಿಲ್ಲ!!
ಗುರಿಯಿಲ್ಲದ್ದು ಕಾಲ, ಸೋಮನಾಥ ಪುರಕ್ಕೆ ಹೋಗುತ್ತಿರುವ ಗಾಡಿಗೆ ಹಾಗಾಗುತ್ತದೆಯೇ? ಪುರಕ್ಕೆ ಬಂದು, ಪಾರ್ಕಿಂಗ್ ಸ್ಫಾಟ್ ನೋಡಿ, ಗಾಡಿ ನಿಂತಿದ್ದೂ ಆಯಿತು.
ಎಲ್ಲರೂ ಇಳಿದು ಸೋಮನ ಗುಡಿಯಕಡೆ ತೆರಳತೊಡಗಿದರು.
ಹರಿಯೂ ಕೂಡ, ತನ್ನ ಕ್ಯಾಮರಾವ ಕುತ್ತಿಗೆಗೆ ತೂಗಿಸಿ, ಪ್ರವೇಶಕ್ಕೆ ನಿಗಧಿ ಪಡಿಸಿದ ಟಿಕೆಟ್ ಕೊಂಡು, ದೇವಾಲಯವನ್ನ ಪ್ರವೇಶಿಸಿದ.
ಆಗಲೇ ಅಲ್ಲಿಗೆ ಹಲವು ಕಡೆಯಿಂದ ಬಂದ ಜನ- ಕಲ್ಲಿನಲ್ಲೇ ನಿರ್ಮಿಸಿದ ಕಲಾಕೃತಿಯ
 ಸೊಬಗನ್ನ ತುಂಬು ಕಣ್ಣುಗಳಿಂದ ಆನಂದಿಸುತ್ತಿದ್ದರಲ್ಲದೇ, ಹೊತ್ತ ಕ್ಯಾಮರಾಗಳಲ್ಲೂ ತುಂಬಿಸಿಕೊಳ್ಳುತ್ತಿದ್ದರು. ಭಾವಗಳನ್ನೇ ಶಿಲೆಗಳಲ್ಲಿ ನಿಲ್ಲಿಸಿದಂತಿತ್ತು! ಸೂಕ್ಷ್ಮಾತಿ ಸೂಕ್ಷ್ಮಗಳನ್ನೂ ಅತಿ ಸುಂದರವಾಗಿ ತೋರಿಸಿದ್ದರು ಶಿಲ್ಪಗಳಲ್ಲಿ.
ಹರಿಯು ತಾನೂ ಎಲ್ಲರೊಟ್ಟಿಗೂ ಸೇರಿ ತನ್ನ ಕ್ಯಾಮರಾಕ್ಕೆ ಕೆಲಸ ಕೊಡತೊಡಗಿದ.
ನಾನಾ ವಿಧಗಳ ಕಲಾನೈಪುಣ್ಯಳಿಂದ ಬೆರಗುಗೊಳಿಸುವ ಕೆತ್ತನೆಗಳು, ತಮ್ಮ ಚಿತ್ರ-ವಿಚಿತ್ರ ಭಾವ ಭಂಗಿಗಳಿಂದ ಹೆಚ್ಚು-ಹೆಚ್ಚು ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಜೊತೆಗೆ ಬಂದ ಹರಿಯ ಸ್ನೇಹಿತರೂ ಆ ಶಿಲ್ಪಗಳಜೊತೆ ತಾವೂ ನಿಂತು, ಅವನನ್ನ ತಮ್ಮ ಫೋಟೋತೆಗೆಯಲು ಪೀಡಿಸುತ್ತಿದ್ದರು. ಅವರುಗಳ ಒತ್ತಾಯವನ್ನೂ ಪೀಡನೆಯೆಂದು ತಿಳಿಯದೇ ನಗು-ನಗುತ್ತಲೇ ಎಲ್ಲರೂಗಳನ್ನೂ ವಿವಿಧ ಪೋಸುಗಳಲ್ಲಿ ನಿಲ್ಲಿಸಿ ಫೋಟೋಗಳನ್ನು ತೆಗೆಯತೊಡಗಿದ ವಿಶಾಲಮನಸ್ಸಿನ ಹರೀ. ಹಾಗೇ ಒಂದೇಸವನೇ ಎದುರಿಗೆ ನಿಂತಿರುವವರನ್ನ ಕ್ಲಿಕ್ಕಿಸುವ ಸಮಯದಲ್ಲೇ, ಆನ್ ಮಾಡಿಕೊಂಡಿದ್ದ ಪ್ಲ್ಯಾಶ್, ಪಕ್ಕದಲ್ಲೇ ನಡೆದು ಹೋಗುತ್ತಿರುವ  ಆಕೃತಿಯಮೇಲೆ ಬಿದ್ದು ಪ್ರತಿಫಲಿಸಿ, ತನ್ನ ಹೃದಯವನ್ನೂ ಪ್ಲ್ಯಾಶ್ ಆಗುವಂತೆ ಮಾಡಿದ್ದರ ಬಗ್ಗೆ ಅಶ್ಟುಗಮನ ಕೊಡಲಾಗಲೇ ಇಲ್ಲ ಅವನಿಗೆ!!
ಎಲ್ಲಾ ಸ್ನೇಹಿತರನ್ನೂ ಮುಂದೆ ಕಳುಹಿಸಿ ದೇವಸ್ಥಾನದ ಹೊರವಲಯದ ಪ್ರಾಂಗಣವನ್ನ ಸುತ್ತಿಬಳಸಿ ಬರುತ್ತಿರುವಾಗ್ಗೆ ಹರಿಗೆ ಮತ್ತೆ ಅದೇ ಕಣ್ಣಿಗೆ ಬಿದ್ದಿತು.
ಇಂತದ್ದು ಆಗಲೇ ಬೇಕೆಂದಿದ್ದರೆ, ಅದು ಆಗಿ ತೀರುವುದೇ ಕಾಲದ ನಿಯಮವಲ್ಲವೇ? ಹರಿ-ಹರ-ಬ್ರಹ್ಮನಿಗೆ ಬಿಟ್ಟದ್ದು ಈ ಪ್ರೇಮದ ವಿಷಯದಲ್ಲಿ ಹುಂಭನೆಂದಾಕ್ಷಣ ಹರಿಗೆ ಬಿಟ್ಟಾನೆಯೇ ಕಾಲ!? ಯಾವ ಕಾಲದಲ್ಲಿ ಏನಾಗಬೇಕಿತ್ತೋ? ಅದೂ ಆಗಿಯೇ ಬಿಟ್ಟಿತು ಸೋಮನಗುಡಿಯಲ್ಲಿ!  
ಕರಿಯ ಶಿಲ್ಪಗಳಲ್ಲಿ ತುಂಬಿದ ಸೊಗಸು, ಇಲ್ಲಿ- ಹೇಗೆ, ಈ ಬಿಳಿಗೊಂಬೆಯಲಿ ಆಕರ್ಷಿಸಲ್ಪಟ್ಟವು ಎನ್ನುವುದೇ ಆಶ್ಚರ್ಯಕರವಾಗಿದ್ದು, ಅವನ ಕಣ್ಣುಗಳು ಎರಡಂಗುಲ ಅಗಲವಾದವು! ಮೊದಲು ನೋಡಿದಾಗೊಮ್ಮೆ- ತಾನು ನೋಡುತ್ತಿದ್ದ ಶಿಲ್ಪಗಳೇ ಅಮೃತದ ಶಿಲೆಯಾಗಿ ಜೀವಬಂದು ಓಡಾಡುತ್ತಿದೆ ಅನ್ನಿಸಿದ್ದರೂ, ಅದು ತನ್ನ ಭ್ರಾಂತಿಯಲ್ಲವೆನ್ನುವುದು ಕೆಲವೇ ಕ್ಷಣಗಳಲ್ಲಿ ಅವನಿಗೆ ತಿಳಿದುಹೋಯಿತು!
ಕೆತ್ತನೆಗಳಲ್ಲಿ ಎಲ್ಲಾ ನಾಜೂಕುಗಳನ್ನೂ ಅತಿ ಹತ್ತಿರದಿಂದಲೇ ನೋಡಿದ್ದ ಅವನಿಗೆ, ಈಗ ಅವುಗಳೇ ಆ ದೇಹದಲ್ಲಿ ಬಂದು ಆಶ್ರಯಿಸದ್ದನ್ನ ನೋಡಿ ಚಿತ್ತವನ್ನ ಬೇರೆಯದರೆಡೆ ಹೊರಳಿಸಲಾಗಲೇ ಇಲ್ಲ. 
ಹೃದಯವು ಮತ್ತೆ ಪ್ಲ್ಯಾಶ್ ಆಯಿತು!
ಅಲ್ಲಾಗಿದ್ದು ಅಂತಿಂತ ಪ್ಲ್ಯಾಶ್ ಅಲ್ಲ! ಹೃದಯದಲ್ಲೇ ಕಾಲ-ಕಾಲದಿಂದಲೂ ಹೊರಬರಲು ಕಾಯುತ್ತಿದ್ದ ಕಪ್ಪುರಂಧ್ರದಂತಿರುವ ಪ್ರೇಮದ ಸ್ಫೋಟದ ಪ್ರಖರತೆಯದು! ಆ ಬೆಳಕಲ್ಲಿ ಅವನಿಗೆ ಜಗತ್ತೇ ಮರೆಯಾಯಿತು!
ಆ ಬೆಳಕಿನಿಂದಲೇ ಆಗ ಕಟ್ಟಿದ್ದ ಪ್ರೇಮದ ಗೂಡಲ್ಲಿ ಈಗ ಬೆಳ್ಳಕ್ಕಿಯೊಂದು ಹಾರಿಬಂದು ಕುಳಿತಿತ್ತು!!
                             ***********************************
ಮನದ ಪ್ರೇಮದ ಭೇಗೆಗಳಿಗೆ ಔಷಧಿಯ ಲೇಪದಂತೆ ಅಲ್ಲಿ ಮುಂದೆ ಮುಂದೆ ಸಾಗುತ್ತಿದ್ದಳು ಬಿಳಿಯ ಹುಡುಗಿ. ಅವಳು ಎದುರು ಚಲಿಸುತ್ತಿರುವಾಗ, ಅವಳ ಬಣ್ಣ ಉಳಿದವರಿಗೆ ಅತೀ ಅನ್ನಿಸಿದರೂ ಹರಿಗೆ ಅದು ತಂಪನ್ನಕೊಡುವ ಬೆಳ್ಳಿಬೆಳದಿಂಗಳೇ.
“’ಪ್ರೇಮ ಕುರುಡುಎನ್ನುತ್ತಾರೆ! ಆದರೆ ನನ್ನ ಪ್ರೇಮವು ಹೇಗೆ ಇಷ್ಟು ಬಿಳುಪು!ಎಂದವನಿಗೆ ಅನ್ನಿಸಿದ್ದರೂ ಅನ್ನಿಸಿರಬಹುದು!
 ತನ್ನ ಮೊದಲ ಪ್ರೇಮವನ್ನ ಅನುಭವಿಸುತ್ತಿರುವ ಹರಿ, ತನ್ನ ಮನದ ಭಾವನೆಗಳನ್ನ ಹೇಗೆ ತಿಳಿಸಲಿ ಎಂದು ಯೋಚಿಸುತ್ತಲೇ ಪಕ್ಕದಲ್ಲೇ ತೆರಳುತ್ತಿರುವ ಹೆಂಗಸಿನ ಜಡೆಯಲ್ಲಿದ್ದ ಬಿಳಿಗುಲಾಬಿ ಕಂಡಿದ್ದೇ ಕ್ಷಣ, ಅದನ್ನೇ ಸೆಳೆದು ಅವಳ ಎದುರಿಗೆ ಹಿಡಿದೇ ಬಿಟ್ಟಿದ್ದ!!

ಉಪಸಂಹಾರ:
ಫೇಕ್.... ಫೇಕ್... ಫೇಕ್.... ಎಂದು ಅವನ ಮನದ ಮೂಲೆಯಲ್ಲೆಲ್ಲೋ ಕೂಗುತ್ತಿದ್ದ ಫೇಕ್ ಭೂತವೂ, ಅಲ್ಲೇ ಮೂಲೆಯಲ್ಲಿ ಬಿದ್ದಿರುವ ಭಿನ್ನ ವಿಗ್ರಹದಂತೆ ಪೆಚ್ಚಾಗಿ ಹರಿಯನ್ನೇ ನೋಡುತಿತ್ತು!! ಕಥೆಯೇ ಇಲ್ಲದವನಿಗೆ ಕಥೆ ಬರೆಯ ಹೊರಟ ಕಥೆಗಾರನಿಗೆ ಕೊನೆಯೇ ಸಿಗದೇ ಒದ್ದಾಡುತ್ತಿರುವಹಾಗೆಯೇ, ಹರಿಯ ಪ್ರೇಮ ಪ್ರಸಂಗವೂ ಮುಂಗಾರಿನ ಮಳೆಯಾಯಿತು!!

ಫೋಟೋ- ಗೋಪಾಲಕೃಷ್ಣ ಭಟ್.