ಕಾರ್ಮುಗಿಲನ್ನೆಲ್ಲಾ ಮರೆಯಾಗಿಸಿ ಕರಿಮೋಡವು, ವಾರಿಧಿಯ ಜಲವನ್ನೇಲ್ಲಾ ಜಗಚ್ಛಕ್ಷುವಿನಾ ಬಿಸಿನೊಟದಿಂದ ಹೀರಿ, ದ್ರುಮಿಲಕುಮಾರನ ಮಂಗಾಟದಿಂದಾ ಬೆದರಿ ಓಡುತ್ತಿರುವ ರಸ-ಋಷಿಗಳ ಎದುರುಸುರಿಗೆ ಹಾರಿ, ಜಗದುಸುರಿನ ಹಸಿರು ತೋರಣದಾ, ಮುಗಿಲೆತ್ತರಕೆ ಮೊಗವಹೂಡಿ ನಿಂತ ಹಿಮಶಿಖರದಾ ತಂಪು-ತಪ್ಪಲಿಗೆ ನಡುಗಿ, ತರ-ತರ ಗುಡುಗಿ, ಏನು ಮಾಡಬೇಕೆಂದರಿಯದೇ ಮುಗ್ಧಮಗುವಿನಾ ಕಣ್ಣೀರಧಾರೆಯಂತೆ ಒಂದೇಸವನೆ ಕರಗಿ ನೀರಾಗಿ ಆರ್ಯಾವರ್ತವನ್ನ ತೋಯಿಸುತಿತ್ತು. ಬಿದ್ದ ಜಲ, ಭೂ-ತಾಯಿ, ಪತಿಯ ಆಣತಿಗೆ ಹೆದರಿ ಒಡಲಿಗೆ ಸಾಗಿಸಿ,ರಕ್ಕಸರ ಕೂಟದ ಅಟ್ಟಹಾಸದ ಬಾಯಾರಿದ ಕೆಂಪುನಾಲಿಗೆಗೆ ಆಹಾರವಾಗಿ ಎಲ್ಲಿ ನೀಡುವುದೋ ಎಂದು ಬೆದರಿ, ಕಪ್ಪು ಪಾತಾಳದಾ ನರಕ ಭಯದಿಂದ ಒಂದೇಸವನೇ ಸಿಕ್ಕ-ಸಿಕ್ಕ ಕೊರಕಲ್ಲೆಲ್ಲಾ ಹರಿದಾಡಿ ಯಮುನೆಯ ಒಡಲಸೇರಲು ಧಾವಿಸುತಿದ್ದವು. ನೊರೆಬೆಳ್ಳಗೆ ಹರಿಯುತ್ತಿರುವ ಹಿಮಪುತ್ರಿಯಾದರೋ ಹಸುಗೂಸಿನ ಎಳೆರಕುತದಾ ಬಣ್ಣಕ್ಕೆ ತಿರುಗುವ ಭೀತಿಗೆ ಭೆದರಿ, ಬೆಂಡಾಗಿಯಾದರೂ ತಪ್ಪಿಸಿಕೊಂಡರೂ... ತನ್ನನ್ನೇ ಆಶ್ರಯಿಸಿ ನಿಂತ ಮಥುರಾ ಪಟ್ಟಣದತ್ತ ತಿರುಗಿಯೂ ನೋಡದೇ ತನ್ನಾಂತಿಮ ಗುರಿಯತ್ತ ತಣ್ಣಗೆ ಸಾಗುತಿತ್ತು. ಪುಟ್ಟ-ಪುಟ್ಟ ದೇಗುಲದಂತಿರುವ ಮನೆಯಿದ್ದರೂ, ಸೆರೆಮನೆಯಂತಿರುವ, ಎಳೆಮಗುವಿನ ಬೇಲಿದಾಟಿದಾ ನಗುವಿನ ಸದ್ದನ್ನ ಮರೆತೇ ಹೋದಾ ಆ ನಗರವು, ಕಂಸನ ಭಯದಿಂದ ನಡುಗುತ್ತಾ, ಕಂದಮ್ಮಗಳ ರಾತ್ರಿಯ ಅಳುವನ್ನ ಅವನ ಕಿವಿಗೆ ತಾಕದಂತೆ ಎಚ್ಚರವಹಿಸುತ್ತಾ, ನಿದ್ದೆಗೆಟ್ಟೋ ಅಥವಾ ರಾಜನ ಮೇಲಿನ ಉಗ್ರಕ್ಕೋ ಕಡು ಕೆಂಪಾದ ಕಣ್ಣುಗಳಿಂದ ಕೂಡಿದ ಪುರಜನರಿಂದ ಕಡುರಾತ್ರಿಯಲ್ಲಿ ತನ್ನಿರುವಿಕೆಯನ್ನ ನೆನಪಿಸುತಿತ್ತು. ಸುಖದ ಸುಪ್ಪತ್ತಿಗೆಯ ಮೇಲೆ ಹಾಯಾಗಿ ಮಲಗಿದ ಕಣ್ಣು, ಮುಚ್ಚಿ ಮಲಗಿದ್ದರೂ, ಸಾವಿನಾಂಜಿಕೆಯ ಮನವು, ಒಡಹುಟ್ಟಿದ ದೇವಕಿಯ ಗರ್ಭದ ಪ್ರಸವದ ನೋವಿನ ನರಳುವಿಕೆಗೆ ಕಾತರಿಸುತ್ತಾ ಕಿವಿಯನ್ನಾ ಎಚ್ಚರವಾಗಿಸಿಯೇ ಇತ್ತು. ರಾಜನಾಗಿ ಮೆರೆಯಬೇಕಿದ್ದ ತನ್ನ ಪತಿರಾಯನಾದ ವಸುದೇವನ ದೆಶೆಯನ್ನ ಹಳಿಯುತ್ತಾ, ಹುಟ್ಟಿ ಕ್ಷಣವಾಗದೇ ತನ್ನಾರೂ ಮಕ್ಕಳನ್ನ ಕಳೆದುಕೊಂಡು, ತನ್ನ ಗರ್ಭವ ಆಶ್ರಯಿಸಿ ನಿಂತ ಏಳನೆಯ ಮಗುವಿನ ಭವಿಷ್ಯತ್ತಿನಲ್ಲಿ ಸಂಭವಿಸುವ ಕರ್ಮವ ನೆನೆಯುತ್ತಾ. ಕಣ್ಣೀರುಹಾಕುತ್ತಾ, ನೊಂದ ಕಣ್ಣುಗಳಿಂದ ಪತಿಯನ್ನೇ ನೋಡುತ್ತಿದ್ದಳು.
********************
ಭಿರ-ಭಿರನೆ ವೇಗದಿಂದ ಬೀಳುತ್ತಿರುವ ಹೆಜ್ಜೆಗೆ ನಡುಗಿದ ಧೂಳುಗಳು ಪವಿತ್ರ ಪಾದಗಳಿಗೆ ದಾರಿಮಾಡಿಕೊಡುತ್ತಿದ್ದವು. ತಮ್ಮ ಆಪ್ತ ಗುಪ್ತಚರರಿಂದ ಕಿವಿಗೆ ತಾಕಿದ ವಿಷಯದಿಂದ, ಮನದಾಳದಲ್ಲೇ ಏಳುತ್ತಿರುವ ಆಲೋಚನೆಗೆ ಲಗಾಮು ಹಾಕುತ್ತಿರುವ ಮನಸ್ಸಿನ ಪ್ರಯತ್ನ ಒಂದು ಕಡೆ ಸಾಗುತ್ತಿದ್ದರೆ, ಕಣ್ಣು ಮುನ್ನೋಟದತ್ತ ತನ್ನ ಪ್ರಕಾಶವನ್ನ ಬೀರಲು ಪ್ರಯತ್ನಿಸುತ್ತಿತ್ತು. ನೆರೆತು ಬಿಳಿಯಾದ ಗಡ್ದ ಮೀಸೆ ಅವರ ಅನುಭವವನ್ನ ಸಾರಿ-ಸಾರಿನುಡಿಯುವಂತಿತ್ತು. ತನ್ನ ಪುರವನ್ನ ಕಾಪಾಡುವ ಮಾರ್ಗದತ್ತ ಸಾಗಿ ಹೋಗುವಂತಿತ್ತು ಅವರ ದೇಹ. ಅದು ತನ್ನ ಕಾರ್ಯವೂ ಹೌದೆಂದೂ ಗೊತ್ತಿತ್ತು. ಹಾಗೇ ಬರುತ್ತಿರುವ ಯಾದವರ ಕುಲಗುರುವಾದ ಗರ್ಗಾಚಾರ್ಯರನ್ನು ನೋಡಿದ ಕಾವಲುಗಾರರು ಗೌರವದಿಂದ ದಾರಿ ಬಿಟ್ಟು ನಿಲ್ಲುತ್ತಿದ್ದರು. ಗುರುಗಳು ಸೀದಾ ಪ್ರವೇಶಿಸಿದ್ದರು ವಸುದೇವ-ದೇವಕಿಯನ್ನಿರಿಸಿದ ಸೆರೆಯೊಳಗೆ.
ಆಗತಾನೇ ವಸುದೇವನು, ಗರ್ಭಪಾತ ಆಗಲ್ಪಟ್ಟು ಉದರದ ಭಾರವನ್ನೆಲ್ಲಾ ಕಣ್ಣಿನಿಂದಲೇ ಕರಗಿಸಿಕೊಳ್ಳುತ್ತಿರುವ ತನ್ನ ಪತ್ನಿಯ ಕಣ್ಣೀರನ್ನ ಒರೆಸಿ, ಒದ್ದೆಯಾದ ಕೈಯನ್ನ-ಮನದಲ್ಲಿ ಏಳುತ್ತಿರುವ ಹೇಡಿತನದ ಬೆಂಕಿಯನ್ನ ಆರಿಸಲು ಪ್ರಯತ್ನಿಸುತ್ತಾ ಕುಳಿತಿದ್ದ. ತರಾ-ತುರಿಯಲ್ಲಿ ಪ್ರವೇಶಿಸಿದ ಕುಲಗುರುವನ್ನ ನೋಡಿ ಎದ್ದು ನಿಂತು ನಮಸ್ಕರಿಸಿದ. ಪ್ರತಿವಂದನೆ-ಆಶೀರ್ವದಿಸಿದ ಗುರುಗಳು, ತನ್ನ ಕಿವಿಗೆ ಬಿದ್ದ ದೇವಕಿಯ ಗರ್ಭಪಾತದ ವಿಷಯವನ್ನ ಖಾತ್ರಿಮಾಡಿಕೊಂಡು,ತಿಳಿಯಲ್ಪಟ್ಟ ರೋಹಿಣಿಯ ಗರ್ಭಧರಿಸಿದ ಸೂಕ್ಷ್ಮತೆಯನ್ನ ಐದನೆಯ ಕಿವಿಗೆ ಬೀಳದಂತೆ ತಿಳಿಸಿದರು. ಇದನ್ನ ಕೇಳಿದ ವಸುದೇವನ ಕಣ್ಣುಗಳು ಅರಳಿನಿಂತವು. ಒಂದು ಕಡೆ, ತನ್ನ ಕಣ್ಣೆದುರಿಗೇ ಮಕ್ಕಳನ್ನೆಲ್ಲಾ ಕಳೆದುಕೊಂಡು ಇಹ-ಪರದ ನರಕ ಭೀತಿಯಲ್ಲಿರುವಾಗ, ಗುರುಗಳಿಂದ ತಿಳಿಸಲ್ಪಟ್ಟ ವಿಷಯವು, ತನ್ನಾರೂ ನೋಡದೇ, ಒಂಟಿಯಾಗಿ ಕುಳಿತಿರುವಾಗ, ದೂರದಿ ದುಂಭಿಯ ಝೇಂಕಾರದ ಸದ್ದಿನ ಭ್ರಮೆ-ಭ್ರಮಿಸಿದಾಗ, ತಾನರಳಿದ ಸಾರ್ಥಕತೆಗೆ ನಲಿಯುವಂತಿರುವ ಹೂವಿನಂತ ಮನಸ್ಸಿಗೆ ಮಧುವನ್ನ ಚೆಲ್ಲಿದಂತಾಯಿತು. ಆ ಸಂತೋಷ ಹೆಚ್ಚುಹೊತ್ತುನಿಲ್ಲದೇ, ಮುಖದಲ್ಲಿ ಭೀತಿಯು ಆವರಿಸಿ ನಿಂತಿತು.
ಅದನ್ನ ಗ್ರಹಿಸಿದ ಆಚಾರ್ಯರು, "ಹೌದು ವಸುದೇವ, ನಿನ್ನ ಆಲೋಚನೆಯ ಮಾರ್ಗ ಸರಿಯಾಗಿಯೇ ಇದೆ, ದೇವಕಿಯ ಗರ್ಭಪಾತವಾಗಿರುವಿಕೆ ಕಂಸನ ಕಿವಿಗೆ ತಲುಪಿ, ಅಭ್ಯಾಸವಾಗಿ ಹೋದ ಹತ್ಯೆಯ ಪ್ರವೃತ್ತಿಯ ದೃಷ್ಟಿ ರೋಹಿಣಿಯ ಮೇಲೆ ತಿರುಗುವ ಸಂಭವ ಇದ್ದೇ ಇದೆ" ಎನ್ನುವ ಮೂಲಕ, ಅವನು ಅರಿತದ್ದನ್ನ ಹೌದೆಂದು ತಲೆಯಾಡಿಸಿ ಅವನ ಮನದಲ್ಲಿ ಮೂಡಿದ ಆಲೋಚನೆಗೆ ಪುಷ್ಟಿಯನ್ನ ನೀಡಿದರು. ಇದರಿಂದ ಮತ್ತೂ ಭೀತಿಗೆ ಒಳಗಾಗಿ ವಸುದೇವನು ಇದಕ್ಕೆ ಪರಿಹಾರ ಏನೆಂಬಂತೇ ಅವರನ್ನೇ ದೃಷ್ಟಿಸುತ್ತಾ ನಿಂತ.
"ಹೆದರ ಬೇಡ. ರೋಹಿಣಿಯ ಗರ್ಭದ ವಿಷಯ ಇನ್ನೂ ಅವನಲ್ಲಿ ಹೋಗಿ ತಲುಪಿಲ್ಲ. ಇದಿನ್ನೂ ನಮ್ಮೊಳಗೆ ಮಾತ್ರಾ ಇದೆ. ಅಷ್ಟರೊಳಗೆ ಇದಕ್ಕೆ ಪರಿಹಾರವನ್ನ ಊಹಿಸಬೇಕಷ್ಟೇ! ನಿನ್ನ ಸ್ನೇಹಿತನಾದ ಗೋಕುಲದ, ನಂದನ ನೆನಪಿರಬೇಕಲ್ಲವೇ ನಿನಗೆ?" ಗರ್ಗರ ಪ್ರಶ್ನೆಗೆ, ಹೌದೆನ್ನುವಂತೆ ತಲೆಯಾಡಿಸಿದ ವಸುದೇವ. " ಹೌದು. ಅವರ ಮನೆಗೆ ಅವಳನ್ನ ಒಯ್ದು, ಬಿಡಲು ಆಲೋಚಿಸಿದ್ದೇನೆ" ಎನ್ನುತ್ತಾ, ಪುನಃ ಅವನತ್ತಲೇ ನೋಡಿದರು.
ಈ ಮಾತನ್ನ ಕೇಳಿ ಸ್ವಲ್ಪ ಸಮಾಧಾನ ಪಡೆದ ವಸುದೇವ ಕಂಸನಿಗೆ ಅನುಮಾನ ಬಾರದಂತೆ ಕರೆದೊಯ್ಯಲು ತಿಳಿಸಿ, ಚಿತ್ತ ಸಂತೋಷದಿಂದ ಆಚಾರ್ಯರನ್ನ ಬೀಳ್ಕೊಟ್ಟು, ಅತ್ತು-ಅತ್ತು ದಣಿದು, ನಿದ್ದೆಯಲ್ಲೇ ಕನವರಿಸುತ್ತಿರುವ ದೇವಕಿಯ ತಲೆಯನ್ನ ನಿಧಾನವಾಗಿ ಎತ್ತಿ, ತನ್ನ ತೊಡೆಯಮೇಲಿರಿಸಿಕೊಂಡು ಕಣ್ಣುಮುಚ್ಚಿ ಆಲೋಚಿಸುತ್ತಾ ಕುಳಿತ.
ಮುಂದುವರೆಯುತ್ತದೆ........