ಗುರುವಾರ, ಜುಲೈ 20, 2017

ನಿರಾಕರಣ


ಪಡುವಣದಲ್ಲಿ ಸೂರ್ಯನು ಬಿಟ್ಟುಹೋದ ಕೆಂಪು ಕಿರಣಗಳನ್ನು ಗಾಳಿಯ ಸಹಾಯದಿಂದ ಹೊತ್ತೊಯ್ಯುತ್ತಿರುವ ಮೋಡಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವಾಗಲೇ ಕತ್ತಲೆಯು ಇದು ತನಗೆ ಸಿಕ್ಕ ವರದಾನವೆಂಬಂತೆ ಆವರಿಸುತ್ತಿರುವ ಹೊತ್ತಿಗೇ,  ಜಗಲಿಯ ಬಾಂಕಿನ ಮೇಲೆ ಕುಳಿತು, ಕವಳದ ಸಂಚಿಯೊಳಗೆ ಕೈ ಆಡಿಸಿ ಅಡಕೆಯೊಂದನ್ನು ತೆಗೆದು, ಅಡಕತ್ರಿಯೊಳಗೆ ಇಟ್ಟು ಚೂರು ಮಾಡಲು ಹವಣಿಸುತ್ತಿರುವಾಗ ನಡುಗುತ್ತಿರುವ ಕೈ ಗಳಿಂದಲೋ ಏನೋ;  ಅದು ಜಾರಿ, ಪುಟಿದು ಉರುಳಿ ಹೋಗಲು ಗಜಾನಣ್ಣನ ಮನಸ್ಸಿನಲ್ಲಿ ಎದ್ದಿರುವ ಧಾವಂತದಂತಿತ್ತು. ಬಾಂಕಿನ ಅಡಿಗೇ ಎಲ್ಲೋ ಉರುಳಿದ ಅಡಕೆಯನ್ನು ಆ ಕಿರುಕತ್ತಲೆಯಲ್ಲಿಯೇ ಹುಡುಕಿ, ಮತ್ತೆ ಅದನ್ನು ಬಿಡದೇ ಚೂರಾಗಿಸಿ ಸುಣ್ಣ ಹಚ್ಚಿದ ಎಲೆಯೊಳಗೆ ಮಡಚಿ ಬಾಯೊಳಗೆ ಹಾಕಿಕೊಂಡಿರುವುದು ಯಾವುದೋ ಹಠಕ್ಕೆ ಬಿದ್ದಿರುವಂತಿತ್ತು.
“ಯಂತದೇ, ಇವತ್ತು ಬಾಗ್ಲಿಗೆ ದೀಪ ಹಚ್ಚದೆಂತು ಇಲ್ಯನೇ? ನಾ ಹನಿ ಸುಬ್ರಾಯ ಭಟ್ರ ಮನೆವರ್ಗೆ ಹೋಗ್ಬತ್ನೆ,” ಎಂದೇಳುತ್ತಾ, ದೇವ್ರೊಳದ ಕಂಭಕ್ಕೆ ಆನಿಸಿ ಕುಳಿತಿರುವ ಹೆಂಡತಿಗೆ ಹೆಬ್ಬಾಗಿಲ ಎರಿಸಿಕೊಳ್ಳುವುದನ್ನು ಎಚ್ಚರಿಸಿ, ಮದ್ಯಾಹ್ನವಿಡೀ ಹುಡುಕಿದ ಏನೋ ಕಾಗದವನ್ನು ಸಂಚಿಯೊಂದಕ್ಕೆ ತುರುಕಿ, ಸಂಚಿಯನ್ನು ಬಗಲಿಗೆ ತುರುಕಿಸಿಕೊಂಡು, ಜಗಲಿಯಲಿಯ ಸ್ವಿಚ್ಚಿಗೆ ಚಾರ್ಜಿಗೆ ತೂಗುಹಾಕಿದ ಬ್ಯಾಟ್ರಿಯನ್ನೊಮ್ಮೆ ಪರೀಕ್ಷಿಸುತ್ತಾ  ಚಪ್ಪಲಿಯ ಧರಿಸಿ, ಧಾಪುಗಾಲಿಡುತ್ತಾ ಹೊರನಡೆದರು ಹೆಗಡೆಯವರು.
ಗಾಢಾಲೋಚನೆಗೆ ಮುಳುಗಿದ್ದ ಅನುಸೂಯಕ್ಕ ಗಂಡನ ಎಚ್ಚರಿಸಿದ ಮಾತಿಗೆ ದೀಪವನ್ನು ಪ್ರಧಾನ ಬಾಗಲಿಗೆ ಹಚ್ಚಿ, ನಮಸ್ಕರಿಸಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಜಗಲಿಯ ಬಾಗಿಲನ್ನು ಸ್ವಲ್ಪ ಮರೆಮಾಡಿ ಸೀದಾ ಅಡುಗೆ ಮನೆಗೆ ಸಾಗಿ, ಆಳು ಆಗತಾನೆ ಕರೆದಿಟ್ಟು ಹೋದ ಹಾಲನ್ನು ಕಾಯಿಸಲು ಅಣಿಮಾಡತೊಡಗಿದಳು. ದಿನದ ರೂಢಿಯಂತೆ ಈ ಸಮಯದಲ್ಲಿ ಹಾಡಿಕೊಳ್ಳುವ ದೇವರ ಭಜನೆ ಮೌನವಾಗಿದ್ದು, ಮನಸ್ಸು ಯಾವುದೋ ಯೋಚನೆಗೆ ಸಿಲುಕಿ ಮಣಭಾರವಾಗಿರುವುದು ಸುಲಭವಾಗಿ ಗುರುತಿಸುವಂತಿತ್ತು.
ಅಷ್ಟೇ ಹೊತ್ತಿಗೇ ಎರಿಸಿಬಂದ ಹೆಬ್ಬಾಗಿಲನ್ನು ಸರಿಸಿ, ಒಳ ನಡೆದು ಬರುತ್ತಿರುವ ಹೆಜ್ಜೆಯ ಧ್ವನಿ ಕಿವಿಗೆ ಬಂದು ತಾಕಿದಂತೆ ಅದಕೇನೆ ಕಾಯುತ್ತಿರುವಂತಿದ್ದಳು ಅನುಸೂಯಕ್ಕ.
“ಪದ್ಮಕ್ಕ, ನೀ ಬಪ್ದಕ್ಕೇ ಬರವು ನೋಡ್ತಿದ್ನೇ” ಎಂದು ಬರುತ್ತಿರುವವರ ಸ್ವಾಗತವೂ ನಡೆಯಿತು.
ಗಜಾನನ ಹೆಗಡೆಯ ಮನೆಯನ್ನು ದಾಟಿ ಸೀದಾ ಸಾಗುವ, ಇಳುಕಿನ ರಸ್ತೆಯ ಕೊನೆಯಲ್ಲಿ ಬರುವುದೇ ಶಿವರಾಮ ಜೋಶಿಯ ಮನೆ. ಆರಂಭದಲ್ಲಿಯೇ ಏಳೆಂಟು ಮನೆಗಳಿರುವ ಊರು, ಹಾಗೆಯೇ ಸ್ವಲ್ಪ ಜಾಗೇ ಬಿಟ್ಟು ಮುಂದೆ ನಾಲ್ಕು ಮನೆಗಳಿಗಷ್ಟೇ ಸೀಮಿತ ಗೊಳಿಸಿದೆ. ಆ ಎಂಟು ಮನೆಗಳು ಸುಬ್ರಾಯ ಭಟ್ಟರ ಮನೆಯನ್ನೂ ಒಡಗೂಡಿ; ಒಟ್ಟಾಗಿ ಒಂದೇ ಸಾಲಿನಲ್ಲಿದ್ದರೆ, ಈ ಉಳಿದ ನಾಲ್ಕು ಮನೆಗಳೂ ಪ್ರತ್ಯೇಕವಾಗಿವೆ. ಹೀಗೆ ಮೇಲಿನ ಕೇರಿ-ಕೆಳಗಿನ ಕೇರಿಯೆಂದು ಊರು ಇಬ್ಬಾಗವಾಗಿದೆ. ಆ ಕೆಳಗಿನ ಕೇರಿಯ ಕೊನೆಯಲ್ಲಿ ಬರುವುದೇ ಇವರಿಬ್ಬರ ಮನೆಗಳು. ಇಬ್ಬರ ಮನೆಯೂ ತುಂಬಾ ದೂರವೂ, ಹತ್ತಿರವೂ ಅಲ್ಲದ ಒಂದು ಕೂಗಳತೆಯ ದೂರದಲ್ಲಿರುವುದಷ್ಟೇ.
ಪದ್ಮ ಮತ್ತು ಅನಸೂಯ ಇಬ್ಬರೂ ಒಂದೇ ಓರಗೆಯವರು ಅನ್ನುವುದಕ್ಕಿಂತ ಒಂದೇ ಸಮಯದಲ್ಲಿ ಆ ಎರಡು ಮನೆಗಳನ್ನು ಬೆಳಗಲು ಬಂದ ಸೊಸೆಯಂದಿರು. ಬಹಳ ಅಂತರದಲ್ಲೇನೂ ನಡೆದಿಲ್ಲ ಶಿವರಾಮ ಹಾಗೂ ಗಜಾನನರ ಮದುವೆಗಳು. ಶಿವರಾಮನ ಮದುವೆಗೆ ಬಂದ ಅಡುಗೆಯವರೇ ಅಲ್ಲಿಯ ಕೆಂಡ ಆರಿ ಬೂದಿಯಾಗುವ ಮೊದಲೇ ಗಜಾನನನ ಮದುವೆಯ ಅಡುಗೆಯನ್ನೂ ಮಾಡಿ, ಬಡಿಸಿ ಹೋಗಿದ್ದರು. ಹಾಗೇ ಆ ಮನೆಗಳಿಗೆ ಹೊಸಬರಾದ ಅವರಿಬ್ಬರೂ ಹೊಂದಿಕೊಳ್ಳಲು ಒಬ್ಬರನ್ನೊಬ್ಬರಿಗೆ ಆಸರೆಯಾಗಿ ದಿನ ಕಳೆದು ಈಗ ಊರಿಗೇ ಅಕ್ಕಂದಿರಾಗಿದ್ದಾರೆ. ಪದ್ಮಕ್ಕ ಅನುಸೂಯಕ್ಕನಿಗಿಂತ ಮೂರು ವರ್ಷವಶ್ಟೇ ಹಿರಿಯಳು. ಅಲ್ಲದೇ ಸೌಮ್ಯ ಗುಬ್ಬಚ್ಚಿಯ ಸ್ವಭಾವದ, ಸ್ವಲ್ಪವೇ ನರಗುತನದ ಅನುಸೂಯಕ್ಕಳಿಗೆ ಆವಳ ಆಸರೆಯು ಒಂದಷ್ಟು ಹೆಚ್ಚೇ ಅವಶ್ಯಕವಾಗಿ ಪರಿಣಮಿಸಿತ್ತು. ಮೊದ ಮೊದಲಿನ ದಿನಗಳಲ್ಲಿ ಸಾಯಂಕಾಲದ ವಾಯು ವಿಹಾರಕ್ಕಾಗಿ ತೆರಳುತ್ತಿದ್ದ ಅವರು, ಈಗ ಕೆಲಸದ ಒತ್ತಡದಿಂದ ಅದನ್ನು ನಿಲ್ಲಿಸಿದ್ದಾರೆ. ಆದರೆ ಈಗ ಶಿವರಾಮ ಜೋಶಿಯ ಮನೆಯ ಆಕಳು ಗಬ್ಬವಿರುವುದರ ಕಾರಣ, ಹಾಲಿಗಾಗಿ ಪದ್ಮಕ್ಕ ಅನುಸೂಯಕ್ಕನ ಮನೆಗೆ ಸಂಜೆ ಬರುವುದನ್ನು ಇಬ್ಬರ ಕುಶಲೋಪರಿಯ ಮಾತುಕತೆಯ ಭೇಟಿಗೆ ಕಾರಣವಾಗಿರಿಸಿಕೊಂಡಿದ್ದರು.
“ಇವತ್ತು ಸ್ವಲ್ಪ ತಡ ಆತಕ್ಕೇ. ನಾಳೆ ನೆಂಟ್ರು ಬಪ್ಪವಿದ್ವ ಇಲ್ಯ, ಅದ್ಕೆಯಾ ಹಲಸಿನ ಹುಳಿ ಮಾಡನ ಹೇಳಿ, ನಮ್ಮನೆವ್ರತ್ರ ಇವತ್ ಬೆಳಗ್ಗೆ ತೋಟ್ದ ಅಂಚಿಗಿಪ್ಪ ಮರದ್ದ ಹಲಸಿನ ಕಾಯ, ಸ್ವಲ್ಪ ಎಳೆದೇ ನೋಡಿ ಕೊಯ್ಕಂಡ್ ಬನ್ನಿ ಅಂದಿ. ಎಳೆ ಕಾಯಿ ಹನಿ ಮೇಲೆ ಇತ್ತಡ. ಮೇಲತ್ತಿ ಅದ್ರ ಕೊಯ್ಯ ಬರ್ದಲ್ಲಿ ಕಾಲುಳುಸ್ಕ್ಯ ಬಂಜ್ರು. ನೋವು ನೋವು ಹೇಳಿ ಒದ್ದಾಡದ್ನ ನೋಡಲಾಗ್ದೇ ಅದ್ಕನಿ ಬಿಸಿ ಎಣ್ಣೆ ಹಚ್ಚಿಕ್ಕೆ, ತಿಕ್ಕಿಕ್ಕೆ ಬಂದಿ,” ಎಂದು ಬರು ಬರುತ್ತಲೇ ಮಾತಿಗೆ ಶುರುಹಚ್ಚಿಕೊಂಡಳು ಪದ್ಮಕ್ಕ.
“ಅಯ್ಯೋ, ಮಳ್ಳೇಯಲೆ! ಅಲ್ದೇ, ಅಂವ್ಯಾರೋ ಉಳುಕು ತೆಂಗ್ಯವ್ನೇ ಬಾಬು ಹೇಳಿ, ಮೇಲಿನ ಕೇರಿಗೆ ಕೆಲ್ಸಕ್ಕೆ ಬತ್ನಡಲೆ, ಅವಂಗಾರು ಹೇಳಿ ಕಳ್ಸದಲ್ದ? ಚಲೋ ಉಳ್ಕು ತೆಗಿತ್ನಡಲೇ ಅಂವ. ಅದೇ ಸುಬ್ರಾಯ ಭಟ್ರ ಇದ್ರಲೆ ಅವ್ರ ಕೊನೆ ತಮ್ಮ ಗಪ್ಪತಿ; ಬಿಸ್ಲಕೊಪ್ಪಕ್ಕೆ ಕಾರ್ಯ ಸಾಗ್ಸಲೆ ಹೋದಾಗ, ಉಂಡು ಮನಕ್ಯ ಇಪ್ಪಕಿದ್ರೆ, ಕಾರ್ಯಕ್ಕೆ ಬಂದ ಶಣ್ ಹುಡ್ರು ಅಂವ ಮಲಗಿದ್ದ ದಿಂಬಿಗೋ ಒಂದೇ ಸಲಕ್ಕೆ ಎಳದು, ಕುತ್ಗೆ ಕಳಕ್ ಗುಟ್ಟೋಗಿತ್ತಡ. ಉಳುಕಿದ್ ಹೊಡ್ತಕ್ಕೆ ಕುತ್ಗೆ ವಾರೇ ಆಗೋಗಿ ಇಷ್ಟ್ ಉಬ್ರಕೆ ಬಾತಿ, ತಲೆ ಎತ್ತಲಾಗ್ದೇ ನೋವಿಗೆ ಲಬೋ ಲಬೋ ಹೊಯ್ಕ್ಯತಿದ್ನಡ. ಅವಗ ಈ ಬಾಬುನೇ ‘ಭಟ್ರೆ, ಅದೇ ಆ ಮರದ ತುದಿಗೆ ಹುಲಿ ಕುಂತದ ನೋಡ್ರ!’ ಹೇಳಕ್ಯೋತ ಉಳಕಿದ್ ಕುತ್ಗೆನ ಜಾರಸಿ ಸರಿ ಮಾಡಿ, ಹನಿಯ ಅದೆಂತೋ ಎಣ್ಣೇತಂದು ಬಾತಿದ್ ಜಾಗಕ್ಕೆ ಸವರಿದ್ನಡ. ಎರಡೇ ದಿನಕ್ಕೇ ನಮ್ಮನೆ ಶ್ರಾದ್ಧಕ್ಕೆ ಅವನೇ ಸಾಗ್ಸಲೆ ಬಂದಿದ್ನಲೆ!” ಎನ್ನುತ್ತಾ ಕೈ ಸನ್ನೆಯನ್ನೆಲ್ಲಾ ಮಾಡಿ, ದೊಡ್ಡಕಣ್ಣು ಮಾಡಿ ಆಶ್ಚರ್ಯ ಸೂಚಿಸಿ, ದೀರ್ಘವಾಗಿ ಮಾತನಾಡಿದ್ದರಿಂದ ಒಮ್ಮೆಲೆ ಬಿಟ್ಟ ಉಸಿರನ್ನು ಮತ್ತೆ ಎಳೆದುಕೊಂಡು “ನಮ್ಮನೆವ್ರು ಸುಬ್ರಾಯ ಭಟ್ರ ಮನಿಗೆ ಹೋಜ್ರು, ಬೇಕಿದ್ರೆ ಅವ್ರ ಮೊಬೈಲ್ಗೊಂದು ಪೋನ್ ಮಾಡಿ ಹೇಳದ್ರೆ, ಅಲ್ಲೇ ಅವಂಗೆ ಸುದ್ದಿ ತಿಳಸಿ, ಕರ್ಕಂಡೂ ಬಪ್ಪಲೆ ಹೇಳಲಾಗ್ತನ?” ಎಂದು ಪ್ರಶ್ನಾರ್ಥಕವಾಗಿ ಪದ್ಮಕ್ಕನನ್ನು ನೋಡಿದಳು ಅನುಸೂಯಕ್ಕ.
“ಇಲ್ಯೆ, ಬ್ಯಾಡ. ಅಶ್ಟೆಲ್ಲಾ ಸೀರಿಯಸ್ ಎಂತು ಆಜಿಲ್ಯೆ, ನಾಳೆ ಇಷ್ಟತಿಗೆ ಕಡಮೆ ಅಗಿರ್ತೆ ಅವ್ರಿಗೆ, ನಮ್ಮನೆವ್ಕೇನು ಹೊಸ್ತಲ್ಲ ಇದು ಬಿಡು. ರಾಶಿ ವಾಗಾತಿ ಮಾಡತ ಹೇಳಾದ್ರೆ ಆರಾಮ ಮಲಗ್ಬಿಡ್ತ ಮತೆ ಇವು! ಸಾಕು ಮಾರಾಯ್ತಿ ಸುಮ್ನಿರು” ಎನ್ನುತ್ತ ನಕ್ಕಳು. “ಅದಿರ್ಲೆ ಅನಸೂಯ, ನಿನ್ನೆ ಸಂಜೆ ನಮ್ಮನೆವ್ರ ಸಂತಿಗೆ ಪ್ಯಾಟಿಂದ ಬಸ್ಸಿಗೆ ಗಜಾನಣ್ಣನೂ ಬನ್ಯಡ. ಮಾತಾಡ್ಸಿದ್ರೂ ಸರಿ ಮಾತಾಡಿದ್ನಿಲ್ಯಡ. ಎಂತೋ ರಾಶಿ ಚಿಂತೆಲ್ಲಿ ಇದ್ದಂಗೆ ಕಾಣತಿದ್ನಡ. ನನ್ ನಿನ್ ದೋಸ್ತಿ ಗೊತ್ತಿಪ್ಪ ಅವು ನಿನ್ನೆ ರಾತ್ರಿ ಊಟಕ್ಕುಂತಾಗ ನನ್ನತ್ರ ಕೇಳದ್ರು. ನಾಕ್ ದಿನದಿಂದ ನೀನು ಮತೆ ಸೋತೋದವ್ರಂಗೆ ಮಕ ಹಾಕ್ಯಂಡು ಇದ್ದೆ. ಎಂತದು ಹಂಗಿದ್ರೆ ನಿಂಗಳ ಕಥೆ?” ಎಂದು ಸಣ್ಣ ಧನಿಯಲ್ಲಿ ಪದ್ಮಕ್ಕನೇ ಕೇಳಿದಳು.
ಅನಸೂಯಕ್ಕ ಒಂದುಸಲ ಈಗ ಗೊಂದಲಕ್ಕೀಡಾಗಿದ್ದೆಂತು ಹೌದು. ಕಾಡುತ್ತಿರುವ ಸಮಸ್ಯೆಯನ್ನು, ಸ್ನೇಹಿತೆಯ ಜೊತೆ ಅದು ಇದು ಕಥೆಹೇಳಿ ಸ್ವಲ್ಪ ಹೊತ್ತಾದರೂ ಮರೆವಿನತ್ತ ಕಳುಹಿಸಿ ಸಮಾಧಾನ ತೆಗೆದುಕೊಳ್ಳುವ ಹೊತ್ತಿಗೇ ಪದ್ಮಕ್ಕನಿಂದ ಬಂದ ಈ ಪ್ರಶ್ನೆ ಅವಳನ್ನು ಮೌನವಾಗಿಸಿತಾದರೂ, ಇವಳೆಷ್ಟಂದರೂ ನನ್ನ ಸ್ನೇಹಿತೆ, ಕುಟುಂಬದ ವಿಷಯ ಮನೆಯ ನಾಲ್ಕು ಗೋಡೆಗಳನ್ನು ಮೀರಿ ಸಾಗಬಾರದೆಂದಿದ್ದರೂ, ಮನಸ್ಸಿನಲ್ಲೇ ಇದ್ದುಕೊಂಡು ನೋಯಿಸುವ ವಿಷಯವನ್ನು ಇವಳೆದುರು ಹೇಳಿಕೊಂಡರೆ ಕಳೆದುಕೊಳ್ಳುವುದೇನಿಲ್ಲವೆಂದು ತನ್ನಲ್ಲಿಯೇ ಯೋಚಿಸಿ, ನಿಟ್ಟುಸಿರನ್ನೊಮ್ಮೆ ಹೊರಚೆಲ್ಲಿ, ಹೇಳತೊಡಗಿದಳು.
“ಪದ್ಮಕ್ಕ, ಈ ವಿಷ್ಯ ಎಂತಾ ಹೇಳವು, ಹೆಂಗೆ ಹೇಳವು ತೆಳಿತಿಲ್ಯೆ. ಈ ಮಕ್ಕ ಹುಟ್ಟದು ಹುಡ್ತ. ಮತ್ತೆಂತಕ್ಕಾದ್ರೂ ದೊಡ್ಡವಾಗ್ತ್ವನ. ನಮ್ ಪ್ರಾಣ ತಿಂಬ್ಲೆಯನ ಹೇಳಿ! ನಮ್ಮನೆ ಕೂಸಿದ್ದಲೆ ಅದ್ಯಾರೋ ಮಾಣೀನ ಲವ್ ಮಾಡಿದ್ದಡ. ಅವ್ನೇ ಮದ್ವೆ ಆಗ್ತಿ ಹೇಳ್ಕ್ಯೋತ ಕುಂತಿದ್ದು ಹೇಳಿ. ನಮ್ಮನೆವ್ರ ಹಠನೂ ನಿಂಗೆ ಗೊತ್ತಿದ್ದಲೆ, ಬ್ಯಾಡಲೇ ಬ್ಯಾಡ ಹೇಳಿ ಇವ್ರದ್ದು. ಇದೇ ಜಗ್ಳಾಟನೇ ಮಾರಾಯ್ತಿ. ಒಂದ್ವಾರ ಕಳದೋತೆ. ನಮ್ಮನೆವ್ರಂತು ಈಗ ಎರಡ್ದಿನ ಆತೆ, ಸರಿ ಊಟನು ಮಾಡ್ತ ಇಲ್ಲೆ. ಮನೆ ಜನನೇ ಹಿಂಗೆ ಕಿತ್ತಾಟ ಮಾಡತಿದ್ರೆ ನಂಗಾದ್ರೂ ಹೆಂಗೆ ಮನ್ಸ್ ತಡಿತೆ? ಇದ್ನೆಲ್ಲ ನಾ ಇಷ್ಟೆಲ್ಲಾ ದಿನ ತಡಕಂಡಿದ್ದೇ ಹೆಚ್ಚಾತು,” ಎಂದು ಗದ್ಗದ ಕಂಠದಲ್ಲೇ ಎನ್ನುತ್ತ ಕಣ್ಣು ಚಿಕ್ಕದಾಗಿ ಅಸರಿದ ನೀರನ್ನು ಸೀರೆಯ ಸೆರಗಿಂದ ಒರೆಸಿಕೊಂಡಳು ಅನಸೂಯಕ್ಕ.
“ಇಷ್ಯೋ, ಮಕ್ಕ ಇದ್ಮೇಲೆ ಅವ್ರ ಗೋಳು ಇಪ್ದೇ ಅಲ್ದನೇ ಅನ್ಸೂಯ? ಗೋಳು ಕೊಡದೇ ಇಪ್ಪ ಮಕ್ಕ ಆದ್ರೂ ಯಾರಿದ್ವೆ ಈಗ? ಅಲ್ದೇ ಆ ಮಾಣಿನೇ ಮಾಡಕ್ಯಂಡ್ರಾತಪ. ಈಗಿನ ಕಾಲ್ದಲ್ಲಿ ಇದೆಲ್ಲಾ ನಡಿತಲೆ.” ಎಂದು ಸ್ವಲ್ಪ ಸಮಾಧಾನ ಮಾಡಲು ಯತ್ನಿಸಿದಳು ಪದ್ಮಕ್ಕ.
“ಪದ್ಮಕ್ಕ ನೀನೂ ಹಂಗೇ ಅಂಬ್ಯನೆ? ಇಷ್ಟು ವರ್ಷ ಅವ್ರನ್ನ ಸಾಕಿ, ಬೆಳೆಸಿದ್ದಕ್ಕೆ, ಅವು ಹೇಳ್-ಹೇಳಿದ್ದನ್ನೆಲ್ಲಾ ಮಾಡಾಕಿದ್ದಕ್ಕೆ ಮಕ್ಕ ನಮ್ಮೇಲೆ ಇಷ್ಟೂ ಗೌರವ ಕೊಡದೇ ಹೋದ್ರೆ ಹೆಂಗೆ? ಅವ್ರನ್ನ ಭೂಮಿಮೇಲೆ ತಂದಿದ್ದಕ್ಕಾದ್ರೂ ನಂಗ ಹೇಳಿದ್ ಕೇಳಿ ಋಣ ತೀರ್ಸದ್ ಬ್ಯಾಡದ? ನಂಗವೆಲ್ಲಾ ನಂಗಳ ಅಪ್ಪ ಅಮ್ಮಂಗೆ ಒಂದಾದ್ರೂ ತಿರುಗು ಹೇಳತಿದ್ವ? ಅವು ತೋರ್ಸಿದ್ ಗಂಡಿಗೆ ಕುತ್ಗೆ ಕೊಟ್ಟು, ಕಷ್ಟವೋ ನಷ್ಟವೋ ಹೊಂದಕ್ಯಂಡು ಬಾಳ್ವೆ ನಡಸ್ತ್ವಿಲ್ಯ? ನಂಗಳಂಗೇ ಇವ್ಕು ಅಪ್ಪನ್ ಮಾತು ಕೇಳದ್ರೆ ಎಂತಾ ಆಗ್ತು ನೋಡನ? ಹೇಳಿ ಕೂಸನತ್ರೂ ಹೇಳದ್ರೆ, ಆಯಿ ನಿಂಗೆಂತೂ ತೆಳಿತಿಲ್ಲೆ ಸುಮ್ನಿರು ಹೇಳಿ ನನ್ನೇ ಸುಮ್ನಾಗಿಸ್ತಲೆ! ಹಿಂಗಲ್ಲ ಹೇಳದ್ರೆ ಬೇಜಾರಾಗ್ತಿಲ್ಯ ಎಂತವ?” ಎಂದು ಮತ್ತೆ ಗೋಳಾಡಿಕೊಂಡಳು ಅನಸೂಯಕ್ಕ.
ಈಗ ಪದ್ಮಕ್ಕ ಸೂಕ್ಷ್ಮ ಮನಸ್ಸಿನ ಇವಳಲ್ಲಿ ತಾನು ಏನ ಹೇಳ ಹೊರಟರೂ ತಪ್ಪಾಗಬಹುದೆಂದು, ‘ಹೂಂ’ ಅಷ್ಟೇ ಗುಟ್ಟಿದಳು.
ಅನಸೂಯಕ್ಕನೇ ಮತ್ತೆ, “ನಂಗಕಿಗೆಂತೂ ಚೂರು ಚಲೋ ಇಲ್ಲೆ ನೋಡು, ಈ ಲವ್ವು ಪವ್ವಿನ ಮ್ಯಾಲೆಲ್ಲವ. ತೆಂಗಿನ ಮನೆ ಬಾವಯ್ಯನ ಕಥೆ ನಿಂಗೆಂತಾ ಗೊತ್ತಿಲ್ದೇ ಇಪ್ಪದನೇ? ಲವ್ವು ಲವ್ವು ಹೇಳಿ ಕುಣದ್ದ ಅವ್ರಮನೆ ಕೂಸು, ಅವ್ನೇ ಆಗ್ತಿ ಹೇಳಿ ಹಠಮಾಡಿ ಮದ್ವೆನೂ ಆಕ್ಯಂಡ್ತು. ಕಡಿಗೆ ನಾಕೇ ನಾಕ್ ದಿನಕ್ಕೆ ಬಾಳ್ವೆ ಮಾಡಲೆ ಸಾಧ್ಯವೇ ಇಲ್ಲೆ ಹೇಳಿ ಅಪ್ಪನ ಮನಿಗೆ ಬಂದು ಕುತ್ಗಂಡ್ತು. ಪಾಪ, ಆ ಬಾವಯ್ಯನ ಮರ್ಯಾದೆ ಮೂರು ಕಾಸಿಗೆ ಹರಾಜ ಆದಂಗೆ ಆಜಿಲ್ಯ?  ಆ ಕೂಸ್ನ ಆದ್ರು ನೋಡು ಈಗ, ಹೆಂಗೆ ಮೈ ತುಂಬಕ್ಯಂಡು ಇದ್ದಿದ್ದು ಓಣಕಲ ಓತಿಕ್ಯಾಟ ಆಗೋಜು ಹೇಳಿ. ಇದನ್ನೇಲ್ಲಾ ಕಣ್ಣಾರೇ ಕಂಡ, ಅನುಭವಿಸಿದ್ನ ಕೇಳಿ ಗೊತ್ತಿಪ್ಪವು ಯಾರಿಗಾದ್ರೂ ಮನ್ಸ್ ಬತ್ತ ಎಂತವ?” ತನ್ನ ಗೋಳಿಗೆ ತಾನೇ ಸಮಾಧಾನ ಮಾಡಿಕೊಂಡು, “ಅವು ಕೂಸಿನ ಜಾತ್ಗ ಭಟ್ರಿಗನಿ ತೋರಸ್ಕ್ಯಂಡು ಬಪ್ಲೆ ತಗಂಡೋಜ್ರು ಕಾಣುತು. ಮದ್ಯಾನಿಡೀ ಮೆತ್ತಿಮೇಲೆ ಕಾಗ್ದಪತ್ರರಾಶಿಲೀ ಎಂತೋ ಹುಡುಕ್ಯೋತ ಇದ್ದಿದ್ರಪ. ಎಂತದ್ರೀ ಕೇಳದ್ರೆ ಹೂಂ ಹಾಂ ಗುಟ್ಟಿದ್ರಿಲ್ಲೆ. ಕಡಿಗೆ ಶಿಕ್ಕಿದ್ದು ಕಾಣತು. ನೋಡವು ಎಂತಾ ಮಾಡ್ತ್ರು ಮುಂದೆ ಹೇಳಿ. ಎಲ್ಲಾ ಹಣೆಬರಹದಲ್ಲಿ ಇದ್ದಂಗೆ ಆಗ್ತು ತಗ!” ಎನ್ನುತ್ತಾ ತನ್ನ ಮಾತಿಗೆ ಪೂರ್ಣವಿರಾಮವನ್ನಿತ್ತು, ಹೋಗಿ ಪದ್ಮಕ್ಕನಿಗೆ ಕೊಡುವ ಹಾಲನ್ನು ಎರಸಿ, ತಂದಿಟ್ಟಳು.
“ಅನಸೂಯಾ, ಅವ್ರ ಇವ್ರ ಮನೆ ಸುದ್ದಿನ ಚಿಂತೆಮಾಡ್ತಾ ತಮ್ಮನೆ ಮೇಲೆ ಯಾರಾದ್ರೂ ಚಪ್ಪಡಿಕಲ್ಲು ಎಳ್ಕಂಡ್ರೆ ಅವ್ಕೆ ಮಳ್ಳು ಹೇಳದ್ದೇ ಇನ್ನೆಂತಾ ಹೇಳಲಾಗ್ತೇ? ಗಜಾನಣ್ಣಂಗೆಂತು ಹಠಮಾರಿತನ ಹೇಳಾತು. ಇನ್ನು ನಿನ್ ಬುದ್ದಿ ಎಲ್ಲಿದ್ದೆ? ನಾಳೆ ನಿಮ್ಮನೇ ಕೂಸೇ ನಿಂಗ ಬ್ಯಾಡ ಹೇಳಿದ್ದಿ ಹೇಳಿ ಎಂತಾರು ಹೆಚ್ಚುಕಮ್ಮಿ ಮಾಡ್ಕ್ಯಂಡ್ರೆ ಅಥವಾ ನಿಂಗಕೆ ವಿರುದ್ಧವಾಗಿ ನಡ್ಕಂಡ್ರೆ ಮತ್ತೆ ಮರ್ಯಾದಿ ಹೋಪದು ಯಾರದ್ದಡ? ಮನೆಲಿಪ್ದು ಒಂದೇ ಮಗಳಪ ಇಷ್ಟವೋ ಕಷ್ಟವೋ ಎಂತು ಹೇಳಿ ಮಾಡಿ ಮುಗಸದು ಚಲೋ ಅಲ್ದಾ? ಅಲ್ದೇ, ಮಾಣಿ ನೋಡಿದ್ಯ ನೀನು? ಇಲ್ಲೆ ಅಲ್ದ? ಹಂಗೆ ನಿಂಗಕೆ ನಿಂಗನೇ ನಿರ್ಧಾರ ತಗಂಬದು ಎಷ್ಟು ಸರಿ ಹಂಗಿದ್ರೆ? ಯಾವ್ದಕ್ಕೂ ವಿಚಾರ ಮಾಡ್ಸು.”  
ಎಂದು ಪದ್ಮಕ್ಕ ಸಮಾಧಾನ ಮಾಡುತ್ತಿರುವ ಹೊತ್ತಿಗೇ ಜಗುಲಿಯ ಹೆಬ್ಬಾಗಿಲನ್ನು ಸರಿಸಿದ ಧ್ವನಿ ಕೇಳಿಬಂದಿತು,
“ಗಜಾನಣ್ಣನೂ ಬಂದಂಗೆ ಕಾಣ್ತೆ. ಎಲ್ಲಾ ಒಳ್ಳೇದಾಗ್ತು ತಗ. ನಿಂಗವೇನು ಯಾರಿಗೂ ಕೇಡ್ನ ಬಯ್ಸದವಲ್ಲ. ನಾಳೆ ನಾ ಹಾಲ್ನ ತಗಂಡೋಪ್ಲೆ ಬಪ್ದು ಡೌಟೇಯಕ್ಕೆ. ಅದೇ ಹೇಳಿದ್ನಲೆ ನೆಂಟ್ರು ಬತ್ತ ಹೇಳಿ. ಎಂತಾಗ್ತನ. ಅದ್ಕೆಯಾ ನಾ ಬಪ್ಲಾಗ್ತಿಲ್ಯನ. ನೀ ಗೋಳಾಡ್ಕ್ಯೋತ ಇರಡ. ಸುಧಾರಷ್ಕ್ಯ. ಆತಾ?” ಎಂದೇಳಿ ಲಗುಬಗೆಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಹೊರನಡೆದಳು ಪದ್ಮಕ್ಕ.
ಅವಳು ಹೊರನಡೆಯಲಾಗಿ; ಅವಳು ಮಾತನಾಡಿಸಿದ, ತಿರುಗಿ ಬಂದ ತನ್ನ ಗಂಡನ ಧ್ವನಿ ಕಿವಿಗೆ ಬಿದ್ದಾಗ, ಗಂಡ ಬಂದಿದ್ದನ್ನು ಖಾತ್ರಿ ಮಾಡಿಕೊಂಡವಳಾಗಿ ಐದು ನಿಮಿಷ ಬಿಟ್ಟು ಇವಳೂ ಹೊರ ಜಗುಲಿಗೆ ಬಂದಳು ಅನುಸೂಯಕ್ಕ.
ಇವಳು ಹೊರ ಬರುವ ಹೊತ್ತಿಗೇ, ಗಜಾನಣ್ಣ ಯಾರ ಹತ್ತಿರವೋ; ಫೋನಿನಲ್ಲಿ ನಾಳೆ ನಾವು ಬರುತ್ತಿರುವುದಾಗಿಯೂ, ಮತ್ತೆ ಯಾರಿಗೋ ಫೋನ್ ಮಾಡಿ, “ನಾಳೆ ಹನಿ ಅವ್ರ ಮನೆವರಿಗೆ ಹೋಗ್ಬಪ್ಪನ!” ಎಂದು ಹೇಳುತ್ತಿದ್ದ.
“ಅನ್ಸೂಯ, ನಾಳೆ ಹನಿ ಲಗುನೆ ಎದಕಂಡು ತಯಾರಗೇ. ಮಾಣಿ ಮನೆವರಿಗೆ ಹೋಗ್ಬಪ್ಪನೆ. ಊರ್ತೋಟದ್ದ ರಾಮಚಂದ್ರಂಗೆ ಕಾರ್ ತಪ್ಲೆ ಹೇಳಿದ್ದಿ. ಬತ್ನಡ ಅವ್ನುವ. ಈಗ ಊಟಕ್ಕಾಜ ಎಂತು?À” ಎಂದಷ್ಟೇ ಹೇಳಿ, ಬಚ್ಚಲಮನೆಯ ಕಡೆ ನಡೆದು, ಬಾಯಿಯಲ್ಲಿ ಅಳಿದುಳಿದ ಅಡಕೆ ಚೂರನ್ನು ಉಗುಳಿ, ಕೈ-ಕಾಲು ತೊಳೆದು ದೇವರ ಒಳಕ್ಕೆ ನಡೆದು, ಭಸ್ಮ ಹಚ್ಚಿ, ಮಣೆ ಹಾಕಿ ಕುಳಿತು ಕೊಂಡನು.
ಅವರ ಮಾತನ್ನು ಕೇಳಿ ತಬ್ಬಿಬ್ಬಾದಳೊಮ್ಮೆ ಅನಸೂಯಕ್ಕ. ‘ಅಲ್ಲ, ಯಾವ್ ಮಾಣಿ ಮನಿಗೆ ಹೋಪ ಸುದ್ದಿ ಹೇಳದ್ರು ಅವು. ಎಂತದನ, ಎಲ್ಲಾ ಅರ್ದಂಬರ್ದನೆಯಾ. ಒಂದು ಸರಿ ಹೇಳತ್ರಿಲ್ಲೆ.’ ಅಂದುಕೊಳ್ಳುತ್ತ, ಸೆರಗೊಮ್ಮೆ ಕುಡುಗಿ ಮತ್ತೆ ಒಳ ನಡೆದು ಊಟಕ್ಕೆ ಅಣಿಮಾಡತೊಡಗಿದಳು.
“ಹೋಯ್ ಕೇಳಚಾ, ಊಟಕ್ ಬನ್ನಿ ಹೇಳಿ” ಎನ್ನುವ ಅನುಸೂಯಕ್ಕನ ಕೂಗಿಗೆ ಗಜಾನಣ್ಣ ಎದ್ದು, ಮತ್ತೆ ದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಒಳ ಹೋಗಿ ಊಟಕ್ಕೆ ಕುಳಿತ.
ಊಟ ಪ್ರಾರಂಭಿಸಿದಂತೆ ಹೆಂಡತಿ ಗಂಡನ ಬಳಿ ಕೇಳಿದಳು, “ಅಲ್ರೀ, ಇದ್ದಂಗೇ ಮಾಣಿ ಮನಿಗೆ ಹೋಪನ ಅಂದ್ರೆ ಎಂತು? ಯಾವ್ ಮಾಣಿ ಮನಿಗೆ? ಭಟ್ರಿಗೆ ಜಾತ್ಗ ತೋರ್ಸಲೆ ತಗಂಡ್ ಹೋಗಿದ್ರಕ್ಕು! ಎಂತಾ ಅಂದ್ರನ ಅವ್ರು?”
“ಯೆಂತೆ ನಿಂದು? ಎಲ್ಲಾ ಗೊತ್ತಾಗ್ತು ತಗ ನಿಂಗೆ ನಾಳೆಯ. ಭಟ್ರು ಗೋಡೆ ಮೇಲೆ ದೀಪ ಇಟ್ಟಂಗೆ ಮಾತಾಡದು ನಿಂಗೊತ್ತಿಲ್ಯಾ? ಆದ್ರೂ ಒಂದು ಸಮಾಧಾನಕ್ಕೆ ಜಾತಕ ತೋರ್ಸದಪ. ನಾಳೆ ಮಾತ್ರ ಹೋಪಲ್ಲಿ ನೀ ಹುಷಾರಿಂದ ಇರು ಸಾಕು. ಅವು ಹೇಳಿದ್ದಕ್ಕೆ, ಕೇಳಿದ್ದಕ್ಕೆ ಗೋಣಾಡ್ಸಡ ಮತೆ. ಮಾತು ಕಥೆ ನಂಗ ಆಡ್ಕತ್ಯ. ಕಡೆಗಂಗೇಯ ಕೂಸಿಗೆ ನಾಡಿದ್ದು ಆಪೀಸಿಗೆ ರಜೆ ಹಾಕಿಕ್ಕೆ ಮನಿಗೆ ಬಪ್ಲೆ ಹೇಳತಿ. ಅವ್ಳಿಗೂ ಖಡಕ್ಕಾಗಿ ಇನ್ಮೇಲೆ ಇದೆಲ್ಲಾ ಸಾಕು ಹೇಳದೇ ಮತೆ. ಹೂಂ. ಅನ್ನ ಸಾಕು. ಮಜ್ಗೆ ಬಡ್ಸು.” ಎಂದೇಳಿ ಲಗುಬೆಗೆನೆ ಊಟ ಮುಗಿಸಿ, ಹೊರ ನಡೆದು ಮತ್ತೆ ಕವಳ ಹಾಕಿ ಅಲ್ಲಿಯೇ ಇದ್ದ ಇಂದಿನ ಪೇಪರ್ ಹಿಡಿದು ಕುಳಿತ ಗಜಾನಣ್ಣ.
ಅನಸೂಯಕ್ಕ ಇರುವ ಗೊಂದಲದಲ್ಲಿಯೇ ತಾನೂ ಊಟಮಾಡಿ, ನಂತರದ ಕೆಲಸವನ್ನೆಲ್ಲಾ ಮುಗಿಸಿ, ಹಾಸಿಗೆ ಹಾಸಿ ಮಲಗಿಕೊಂಡು, ‘ಪದ್ಮಕ್ಕ ಹೇಳಿದ್ರಲ್ಲೂ ಖರೇ ಇದ್ದು ಅನಸ್ತಿದ್ದಪ. ನನ್ ಮಗ್ಳನ್ನೂ ನಂಬಲೆ ಸಾಧ್ಯ ಇಲ್ಲೆ. ಅಪ್ಪಂಗೆ ತಕ್ಕ ಮಗಳೇಯ. ನಾಳೆ ಎಂತಾರು ಹೆಚ್ಚು ಕಮ್ಮಿ ಮಾಡ್ಕ್ಯಂಡ್ರೆ ಕೇಳವ್ಯಾರಡ? ಅನುಭವ್ಸವೂ ನಂಗನೇ ಅಲ್ದಾ?’ ಎಂದು ಯೋಚಿಸುತ್ತಿರುವಾಗಲೆ ಕಣ್ಣು ನಿದ್ದೆಯ ಮಂಪರಿಗೆ ಸಿಕ್ಕಿ, ಮುಚ್ಚಿಕೊಂಡಿತು.
*********
“ಬಾವಯ್ಯ, ಅತ್ಗೆ, ಹೋಯ್ ಮಾತಾಡ್ಸಿದೆ”
ಬಿಸಿಲು ಏರುವ ಹೊತ್ತಿಗೇನೆಯೇ ಮನೆಗೆ ಬಂದವರನ್ನು ಮಾತನಾಡಿಸಿದ ಯಜಮಾನರು, ಜಗುಲಿಯಲ್ಲಿ ಹಾಸಿದ ಕಂಬಳಿಯಮೇಲೆ ಕುಳಿತುಕೊಳ್ಳುವಂತೆ ಸ್ವಾಗತಿಸಿದರು.
“ಮಾತಾಡ್ಸಿದ್ದೆ” ಎಂದೇಳುತ್ತಾ ಕಾಲುತೊಳೆದುಕೊಳ್ಳಲು ನೀರಿಟ್ಟ ಮನೆಯೊಡತಿ, ನಮಸ್ಕರಿಸಿ ಒಳನಡೆದಳು. ಅವಳೊಟ್ಟಿಗೆ ಅನಸೂಯಕ್ಕನೂ ಒಳಸೇರಿದಳು.
ಜಗುಲಿಯನ್ನೆಲ್ಲಾ ಕೂಲಂಕುಷವಾಗಿ ಗಮನಿಸುತ್ತಿರುವ ಗಜಾನಣ್ಣನಲ್ಲಿ ಕಾಲುತೊಳೆದುಕೊಳ್ಳುವಂತೆಯೂ ಹೇಳಿ, ಕುಡಿಯಲು ಏನು ಬೇಕು, ಎಂದೆಲ್ಲಾ ಉಪಚರಿಸುತ್ತಾ ಅದು, ಇದು ಮಾತನಾಡಿಸತೊಡಗಿದರು ಯಜಮಾನರು.
ಎಲ್ಲದಕ್ಕೂ ಚುಟುಕಾಗಿ ನ್ಹಾಂ, ನ್ಹೂಂ ಎಂದೆಲ್ಲಾ ಉತ್ತರಿಸುತ್ತಿರುವ ಗಜಾನಣ್ಣನ ಮುಖದಲ್ಲಿ ಏನೋ ತಿರಸ್ಕಾರದÀ ಭಾವ ಎದ್ದು ಕಾಣುತ್ತಿದ್ದರೂ ಸಹ, ಯಜಮಾನರು ಅದನ್ನು ಗಮನಿಸಿದರೂ ಗಮನಿಸದಂತೆ ಉಪಚರಿಸುತ್ತಿದ್ದರು.  
ಇದನ್ನೆಲ್ಲ ಸುಮ್ಮನೇ ಕುಳಿತು ನೋಡುತಿದ್ದ ರಾಮಚಂದ್ರನಿಗೆ ಮನಸಿನಲ್ಲಿ ಏನೋ ಒಂದುರೀತಿಯ ಕಸಿವಿಸಿ ಉಂಟಾಗುತಿತ್ತು. ಇಲ್ಲಿಗೆ ಬರುವ ಮೊದಲೇ, ಎಲ್ಲಾ ನಿರ್ಧರಿಸಿಕೊಂಡು ಬಂದಂತಿದ್ದ ಗಜಾನಣ್ಣನಿಗೆ ಈ ನಾಟಕ ಆಡುವ ಪ್ರಮೇಯವೇನಿತ್ತೋ ಅರ್ಥವಾಗುತ್ತಿಲ್ಲ. ನಿನ್ನೆಯ ದಿನ ಫೋನ್ ಮಾಡಿ ಎಲ್ಲಿಗೋ ಹೋಗುವುದಿದೆ ಹೊರಟು ಬಾ ಇಷ್ಟೇ ಹೇಳಿ ಗಡಬಡೆಯಿಂದ ಕಾಲ್ ಮಾಡಿದ್ದ ಗಜಾನಣ್ಣ. ಏನೂ ಎತ್ತ ಎಂದು ತಿಳಿಯದೇ ಬೆಳಗ್ಗೆನೇ ತನ್ನ ಕಾರು ತೆಗೆದುಕೊಂಡು ಹೊರಟು ಬಂದಿದ್ದ. ರಾಮಚಂದ್ರನದು ಬಾಡಿಗೆ ಕಾರು ಹೊಡೆಯುವ ಕಾಯಕ. ಹಳ್ಳಿಯಕಡೆ ಇದ್ದವರಿಗೆ, ಅಷ್ಟೇನೂ ವಾಹನ ಸೌಕರ್ಯವಿಲ್ಲದ್ದರಿಂದಲೂ ಹಾಗೂ ಸ್ವಂತ ವಾಹನವಿಟ್ಟುಕೊಳ್ಳುವಷ್ಟು ಅನುಕೂಲವಿಲ್ಲದ್ದವರಿಗೂ ಈತನ ಕಾರಿನಲ್ಲೇ ಎಲ್ಲಾ ಕಾರೋಬಾರು. ಕೆಲವೊಬ್ಬರಿಗಂತೂ ಆರಂಭದ ಗಂಡು, ಹೆಣ್ಣು ಮಾತುಕಥೆಯಿಂದ ಹಿಡಿದು ಮದುವೆ ಮುಗಿಯುವವರೆಗಿನ ಎಲ್ಲಾ ಕಾರ್ಯಗಳಿಗೂ ಈತನ ಕಾರೇ ಬಳಕೆಗೆ ಬರುತಿತ್ತು. ಹೀಗಿದ್ದು ಮದುವೆ ಮಾತುಕಥೆಗಳಿಗೂ ಈತನದು ಎತ್ತಿದ ಕೈ. ಹೆಣ್ಣುಗಳ ಕಡೆಯಿಂದ ಗಂಡಿನವರ ಓಲೈಕೆಗೂ, ಗಂಡಿನ ಕಡೆಯವರಿಂದ ಹೆಣ್ಣಿನ ಓಲೈಕೆಗೂ ಪ್ರಸಿದ್ಧನಾದ್ದರಿಂದ ಇವನ ಕಾರಿನೊಂದಿಗೇ ಈತನೂ ಬಹುಬೇಡಿಕೆಯ ವ್ಯಕ್ತಿಯಾಗಿದ್ದ.
ಗಜಾನಣ್ಣನ ಮುಖಭಾವ ಸ್ವಲ್ಪ ಗಂಭೀರವಾಗೇ ಇದ್ದದ್ದ್ದರಿಂದ ಹೆಚ್ಚು ಮಾತನಾಡದೇ ಗಾಡಿ ಓಡಿಸಿದ್ದ. ಮಾತುಕಥೆಯಲ್ಲಿ ಏನಾದರೊಂದು ಇತ್ಯರ್ಥ ಮಾಡಲೇ ಹವಣಿಸುತಿದ್ದವರನ್ನು ನೋಡುತ್ತಿದ್ದವನಿಗೆ ಇಲ್ಲಿಯ ವಿಚಾರ ಅಯೋಮಯದಂತಿದೆ. ಹುಡುಗನ ಮನೆಯವರನ್ನು ನೋಡಿದರೆ ಒಳ್ಳೆಯ ಅನುಕೂಲಸ್ಥರಂತೆ ಕಾಣಬರುತಿದ್ದಾರೆ. ಅಲ್ಲದೇ ಬೇಕಾದಷ್ಟು ಗದ್ದೆ ತೋಟಗಳಿದ್ದು, ಉತ್ತಮ ಆದಾಯವೂ ಇದೆಯೆನಿಸುತಿದೆ. ಯಜಮಾನನ ನಡವಳಿಕೆಯೂ ಸಹ ಸುಸಂಸ್ಕøತವಾಗಿದೆ. ಉಪಚಾರವಂತೂ ಯಾವುದಕ್ಕೂ ಕಮ್ಮಿಯಿಲ್ಲದಂತೆ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಮೊಸರಿನಲ್ಲಿ ಕಲ್ಲು ಹುಡುಕುವ ಕಾಯಕ ಗಜಾನಣ್ಣನಿಗೆ ಏಕೆಂದು ತೋಚದೇ, ತನ್ನ ಮಾತಿನ ಅವಶ್ಯಕತೆ ಇಲ್ಲಿ ಎಲ್ಲಿದೆ ಎಂದು ಚಿಂತಿಸುತ್ತ ಸುಮ್ಮನೇ ಕುಳಿತಿದ್ದ.
“ನಮ್ಮನೆ ಮಾಣಿಗೆ ನಿಂಗ ಬಪ್ಪದೂ ಗೊತ್ತಿದ್ದೂ, ಅರ್ಜಂಟ್ ತ್ವಾಟಕ್ಕೆ ಹೋಗ್ಬತ್ತಿ ಹೇಳಿಕ್ಕೆ ಹೋಜ, ಇನ್ನೇನು ಬಪ್ಪ ಹೊತ್ತಾತಕ್ಕು. ಒಬ್ಬವ್ನೆ ಮಾಣಿನಲಿ, ಅದಕೆ ಎಲ್ಲಾ ಜವಾಬ್ದಾರಿ ಅವನ ಮೇಲೆ ಬಿಟ್ಟಿಗಿದಿ ಈಗ್ಲೇಯಾ” ಮನೆಯ ಯಜಮಾನ ತನ್ನ ಮಗನ ಕುರಿತು ಹೇಳತೊಡಗಿದ್ದು ಗಜಾನಣ್ಣನಿಗೆ ವಿಷಯಕ್ಕೆ ಬರಲು ಅನುಕೂಲ ಮಾಡಿಕೊಟ್ಟಂತಾಯಿತು.
ಗಜಾನಣ್ಣ, “ಹಂಗಿದ್ರೆ ಮಾಣಿ ಎಂತಾ ಓದಿದ್ದ?”
ಯಜಮಾನ, “ಡಿಗ್ರೀ ಮುಗ್ಸಿ ಬೆಂಗಳೂರಲ್ಲಿ ಎಂ.ಬಿ.ಏ. ಮಾಡಿದ್ದ. ಅವಾಗ್ಲೇ ನಿಮ್ಮನೆ ಮಗಳ ಪರಿಚಯ ಆಗಿದ್ದು ಹೇಳಿ ಹೇಳ್ತಿದ್ನಪ”
ಗಜಾನಣ್ಣ, “ಅಲ್ಲಾ, ಅಷ್ಟೆಲ್ಲಾ ಓದಿದ್ರೂ ಮನೆಲೇ ಇದ್ದಿದ್ದು ಸಾಕು. ಅದಲ್ದೇ ಮನೆಲಿಪ್ಪ ಮಾಣಿಗೆ ಕೂಸ್ಗ ಸಿಗದೇ ಇಪ್ಪ ಈ ಕಾಲದಲ್ಲಿ. ಅಲ್ದನಾ ರಾಮಚಂದ್ರ?”
“ಹೌದೌದು. ನನ್ ಜಾಯಮಾನದಲ್ಲಿ ಇನ್ನೂ ಒಂದೇ ಒಂದು ಮನೆಲಿಪ್ಪ ಮಾಣಿ ಮದುವಿಗೆ ದಿಬ್ಬಾಣ ಹೊಡದ್ನಿಲ್ಲೆ. ಮಾತು-ಕಥೆಗಷ್ಟೇ ಮುಗ್ದೋಗಿತ್ತು. ಅಲ್ಲಾ ನೀವು ಬೇಜಾರಾಗಡಿ, ಈಗೆಲ್ಲಾ ನಡಿತಾ ಇರ ವಿಷಯ ಮಾತಾಡದಿ ಅಷ್ಟೇ.” ಸಿಕ್ಕಿರೋ ಅವಕಾಶವನ್ನು ರಾಮಚಂದ್ರ ಬಳಸಿಕೊಂಡಿರುವುದನ್ನು ಕಂಡು ಗಜಾನಣ್ಣಂಗೆ ಮನಸಿನಲ್ಲೇ ಖುಷಿಯಾಗಿ, ಮೀಸೆಯಂಚಿನಲ್ಲೇ ನಕ್ಕಿದ್ದು ಅವನಿಗೂ ತಾನು ಗುರಿಯಿಟ್ಟಬಾಣ ತಲುಪಿದ್ದಕ್ಕೆ ಖುಷಿಯಾಯಿತು.
“ಅಲ್ದಾ, ಅವ್ರೆಂತಾ ಬೇಜಾರಾಗ್ತ್ರ ಮರಯಾ, ಇದ್ ವಿಷ್ಯ ಹೇಳದ್ಯಪ ನೀನು” ಎಂದ ಗಜಾನಣ್ಣ.
ಈಗ ಪ್ರಾರಂಭವಾದ ಸಂಭಾಷಣೆಯಿಂದ ಯಜಮಾನರಿಗೆ ಕಸಿವಿಸಿಯಾಯಿತಾದರೂ, ಹೊರತೋರಿಸದೇ, “ಒಬ್ನೇ ಮಾಣಿನಲಿ, ಅಲ್ದೇ ಇಲ್ಲೇ ನನ್ ಅಜ್ಜನ ಕಾಲದಿಂದನೇ ಬೇಕಷ್ಟು ಆಸ್ತಿ ಇರಕಿರೆ ಮನೆಬಿಟ್ಟು ಹೋಗಿ ದುಡ್ಯದಾದ್ರೂ ಎಂತಕ್ಕೆ ಹೇಳಿ ಮನೆಗೆ ಬಪ್ಲೇ ಹೇಳ್ಬಿಟಿ, ಮಗನೂ ಅದಕೆ ಇಲ್ಲೇ ಹೇಳಿದ್ನಿಲ್ಲೆ. ದುಡ್ಯದು ಅಂದ್ರೆ ಎಲ್ಲಿದ್ರೂ ದುಡ್ಯದೇಯಲಿ, ಹೇಳಿ ಇಲ್ಲೇ ಬಂದು ಇದ್ಬಿಟ.” ಎಂದೇಳಿ ಸುಮ್ಮನಾದರು.
“ನಮ್ಮನೆ ಕೂಸಿಗೆ ಬೆಂಗಳೂರಲ್ಲೆ ಇಪ್ಪ ಮಾಣಿ ನೋಡತಾ ಇದ್ದಿದ್ಯ. ಈಗಿನ ಕಾಲಕ್ಕೆ ತಕ್ಕಂಗೆ ಬದ್ಕಕಾತಲಿ, ಅಲ್ದಾ?” ಎಂದು ಏಳುತ್ತಾ, “ಸರಿ ಹಂಗಿದ್ರೆ ನಂಗ ಇನ್ನು ಹೊರಡ್ತ್ಯ, ಕಾರ್ ತಿರಗ್ಸಲೆ ಜಾಗಿದ್ದು ಅಲ್ದನಾ ರಾಮಚಂದ್ರ? ಹೊರಡನ ಹಂಗಿದ್ರೆ, ಹೋಯ್, ಎಲ್ಲಿದ್ಯೆ” ಎಂದು ಹೊರಡಲು ಅಣಿಯಾಗಿದ್ದರಿಂದ ಯಜಮಾನರು ಧಾವಂತದಲ್ಲಿ ಎದ್ದು, “ಮಾಣಿ ಇನ್ನೇನು ಬಪ್ಪ ಹೊತ್ತಾತಲಿ, ಮಾಣಿ ಒಂದ್ಸುತ್ತು ಮಾತಾಡ್ಸಕಂಡೆ...”
“ಇಲ್ಲೆ, ಇಲ್ಲೇ. ನಂಗೆ ಬೇರೆ ಕೆಲಸನೂ ಇದ್ದು. ಅದಕೆ ಈಗ್ಲೇ ತಡ ಆಗೋತು. ಹೊರಡದೇಯಾ, ಮಗಳಮಾತಿಗೆ ಕಟ್ಟುಬಿದ್ದು ಇವತ್ತೇ ಬರಕಾತು. ಎನಗಂತೂ ಇವತ್ತು ಬಪ್ಪಲೇ ಮನಸಿತ್ತಿಲ್ಲೆ” ಎಂದು ಹೇಳುತ್ತಾ ಯಜಮಾನರ ಮಾತನ್ನು ತುಂಡರಿಸಿ, ಸುಮ್ಮನಾಗಿಸಿಬಿಟ್ಟರು.
ಮನೆ ನೋಡಲು ಮಹಡಿ ಏರಿದ್ದ ಅನಸೂಯಕ್ಕ ಅಲ್ಲಿಂದ ಇಳಿದು ಬರುತ್ತಲೇ, “ಹೋಯ್, ಎಂತಾ ಗಡಿಬಿಡಿ ಮಾಡ್ತಿದ್ರಿ? ಶಿವರಾಮಬಾವನ ಮನಿಗೆ ಇವತ್ತು ನೆಂಟ್ರು ಬತ್ವಡ, ಅಲ್ದೇ ಅವನ ಕಾಲೂ ಉಳುಕಿ, ಹಾಸ್ಗೆ ಹಿಡದ್ನಡ. ಅಂವ ಇವತ್ತು ನಿಮ್ಸಂತಿಗೆ ಎಲ್ಲಿಗೂ ಬಪ್ಪಂವಲ್ದಡ. ನಿಂಗವಿಬ್ರೂ ಮಾರುತಿವ್ಯಾನು ನೋಡಲೆ ಹೋಪವಾಗಿತ್ತಲ್ದಾ? ಪದ್ಮಕ್ಕ ನಿನ್ನೆನೇ ಹೇಳಿತ್ತು, ನಂಗೆ ನಿಮಗೆ ಹೇಳಲೆ ಮರ್ತೇಹೋಗಿತ್ತು ನೋಡಿ, ಇಲ್ಲಿವರ್ಗೇ ಬಂದಾಜು, ಮಾಣಿನೂ ಒಂದ್ಸಲ ನೋಡ್ಕಂಡೇ ಹೋಪನ. ಕಡಿಗೆ ನಾಳಂಗೆ ಕೂಸು ಮಾಣಿ ಹೆಂಗಿದ್ದ ಕೇಳದ್ರೆ ನೀವು ಎಂತಾ ಹೇಳತ್ರಿ?” ಎಂದು ನುಡಿದು ನಗಲು ಪ್ರಂiÀiತ್ನಿಸುತ್ತಾ, ಗಂಡನ ಮುಖವನ್ನು ನೇರವಾಗಿ ನೋಡದೇ ರಾಮಚಂದ್ರನನ್ನು ನೋಡಿದಳು.
“ಹೌದಾ ಗಜಾನಣ್ಣ, ಹಂಗೇ ಮಾಡನ, ಅಕ್ಕಯ್ಯ ಎನಗೆ ಇನ್ನೊಂದು ಲೋಟ ಪಾನಕ ಬೇಕೆ” ಹೆಚ್ಚು ಹೆಂಗಸರ ಮಾತಿಗೇ ಹೂಂ ಗುಟ್ಟು ಅಭ್ಯಾಸವಿರುವ ರಾಮಚಂದ್ರ, ಈ ಮಾತನ್ನು ಹೇಳುತ್ತಾ ಕುಳಿತಲ್ಲೇ ಆಚೀಚೆ ಅಲುಗಾಡುತ್ತಾ ಮತ್ತೆ ತನ್ನ ಆಸನವನ್ನು ಭದ್ರಪಡಿಸಿಕೊಳ್ಳಲು ಹವಣಿಸಿದನು.
ಒಬ್ಬರಾದ ನಂತರ ಒಬ್ಬರು ಆಡಿದ ತನಗೆ ವಿರುದ್ಧ ಮಾತುಗಳನ್ನು ಕೇಳಿ, ಒಂಟಿಯಾಗಿದ್ದೇನೆನಿಸಿ ಕಕ್ಕಾಬಿಕ್ಕಿಯಾದದ್ದು ಮಾತ್ರಾ ಗಜಾನಣ್ಣ. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ, “ಅದಲ್ದಾ ರಾಮಚಂದ್ರ, ಎನಗೆ ಪಂಚಾಯ್ತಿಲ್ಲೊಂದು ಅರ್ಜಿಕೊಡವು, ಅದು ಇವತ್ತೇ ಕೊನೆದಿನನಡ. ನಮ್ಮನೆವ್ಳಿಗೆ ಗೊತ್ತಿಲ್ದೇ ಹಲಬ್ತಪ. ನಡಿ ತಗ. ನಿಂಗೆ ಪಾನಕ ಎಂತು, ನಮ್ಮಲ್ಲಿ ಊಟ ಮಾಡ್ಸೇ ಕಳಸ್ತಿ ಆತ?” ನುಡಿದ ಮಾತಿಗೆ ರಾಮಚಂದ್ರ ಕುಂತಲ್ಲಿಂದ ತಣ್ಣಗೆ ಎದ್ದು, “ಬಾವ ಮತ್ತೆ ಸಿಗನ” ಎಂದೇಳಿ ಗಾಡಿಯ ಹತ್ತಿರ ದೌಡಾಯಿಸಿದನು.
ಅನಸೂಯಕ್ಕ ಮಾತ್ರಾ, ಗಂಡನ ಗಡಿಬಿಡಿಗೆ ತೇಪೆ ಹಾಕಲು ಪ್ರಯತ್ನಿಸುತ್ತಾ, “ಅಕ್ಕಯ್ಯ, ಮತ್ತೆ ಬತ್ನೆ ಹಂಗಿದ್ರೆ. ನಮ್ಮನೆವ್ರಿಗೆ ಹಂಗೇಯ. ಎಲ್ಲಾ ಕೆಲ್ಸನೂ ಒಟ್ಟಿಗೇ ಮುಗ್ದೋಗವಪ. ನಮ್ಮನೆ ಕೂಸತ್ರ ಕೇಳ್ಕ್ಯಂಡು ನಾ ಮಾಣಿನ ಫೋಟೋದಲ್ಲಾದ್ರೂ ನೋಡ್ತ್ನೆ” ಎಂದೇಳಿ ಅವರ ಮನೆಯನ್ನೆಲ್ಲಾ ನೋಡಿದ, ಮನೆಯಲ್ಲಿರುವ ಇಬ್ಬರೇ ಗಂಡ ಹೆಂಡತಿಯ ಸತ್ಕಾರವನ್ನೂ, ಸಿಕ್ಕ ಸ್ವಲ್ಪವೇ ಸಮಯವಾದರೂ ಸಿಹಿ ಸಿಹಿಯಾಗಿ ಮಾತನಾಡಿದ ಹುಡುಗನ ತಾಯಿಯ ಗುಣವನ್ನೂ ನೆನೆದು, ಇವಳೂ ನನ್ನಂತೆಯೇ ಎಂದು ಸಂತೋಷಿಸುತ್ತಾ ಗಾಡಿಯ ಹತ್ತಿರ ನಡೆದಳು.
ನೆಪ ಮಾತ್ರಕ್ಕೆ ನಗುತ್ತಾ, “ಬಾವ ಬತ್ನ ಹಂಗಿದ್ರೆ, ಮತ್ತೆ ಒಂದಿನ ಮಾತಾಡನ ತಗ,” ಎಂದಷ್ಟೇ ಹೇಳಿದ ಗಜಾನಣ್ಣನೂ, ಎಲ್ಲವೂ ತಾನು ಎಣಿಸಿದಂತೆ ಸಾಗಿ, ಕೊನೆಯ ಘಳಿಗೆಯಲ್ಲಿ ಹೆಂಡತಿಯೂ, ರಾಮಚಂದ್ರನೂ ತನ್ನ ವಿರುದ್ಧವಾಗಿ ಮಾತನಾಡಿ, ತನ್ನನ್ನು ಒಂಟಿಯಾಗಿಸಿ, ತನ್ನ ಯೋಜನೆಯನ್ನೆಲ್ಲಾ ಹಾಳುಮಾಡಲು ಪ್ರಯತ್ನಿಸಿದ್ದನ್ನು ಯೋಚಿಸುತ್ತಾ ಗಾಡಿಯತ್ತ ಸಾಗಿದನು.
ಗಾಡಿ ವೇಗವಾಗಿ ಚಲಿಸಿದಾಗಿನ ಧೂಳಿನ ನಡುವೆಯೇ ಪ್ರಾಯದ ಹುಡುಗನೊಬ್ಬ ಹೆಜ್ಜೆ ಹಾಕುತ್ತಿರುವುದು ಅಸ್ಪಷ್ಟವಾಗಿ ಎಲ್ಲರಿಗೂ ಕಾಣುತಿದ್ದರೂ, ಅದನ್ನು ಗಮನಿಸುವ ಗೋಜಿಗೆ ಯಾರೂ ಹೋದಂತಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಮುಂದೆ ನಡೆಯುವ ಕಾರ್ಯದ ಬಗ್ಗೆ ತಮ್ಮ ತಮ್ಮ ಮಾತುಗಳನ್ನು ಹೇಗೆಲ್ಲಾ ನಡೆಸಿಕೊಳ್ಳಬಹುದು ಎಂದೂ, ತಮ್ಮ ಮಾತಿನ ಪಟ್ಟುಗಳಲ್ಲಿ ಯಾರನ್ನು ಹೇಗೆಲ್ಲಾ ಸಿಲುಕಿಸಿ ತಮ್ಮ ಮಾತುಗಳೇ ನಡೆಯುವಂತೆ ಮಾಡಬಹುದೆಂದು ಚಿಂತಿಸುತ್ತಾ   ಮೌನವಾಗೇ ಕುಳಿತಿದ್ದರು.
ಆ ಹುಡುಗ ಮಾತ್ರಾ ಕೈಲಿರುವ ಮೊಬೈಲ್ ಆ ಕ್ಷಣಕ್ಕೆ ಮೆಸೇಜ್ ಬಂದಿದ್ದರ ಸದ್ದಾಗಿ, ತೆಗೆದು ಓದಿದ, “ಅಪ್ಪ, ಅಮ್ಮ ಬಂಜ್ವ? ಮಾತುಕಥೆ ನಡಿತಿದ್ದ? ಎಂತಾ ಅಂದ?”
‘ಯಾರು ಎಂತಾ ಹೇಳ್ಕಂಡು ನಿರಾಕರಿಸಿದ್ರೂ, ನೀ ಮಾತ್ರಾ ನನ್ನ ಹೆಂಡ್ತಿ ಕೂಸೆಯಲೆ’ ಎಂದು ಮೀಸೆಯಂಚಲ್ಲೇ ನಕ್ಕು, ಮೊಬೈಲ ಮೇಲೆ ಕೈಯಾಡಿಸುತ್ತಾ ಹುಡುಗ ಮನೆಯ ಕಡೆ ಧಾಪುಗಾಲು ಹಾಕಿದ.
_ಮುಗಿಯಿತು.

1 ಕಾಮೆಂಟ್‌: