ಮಂಗಳವಾರ, ಏಪ್ರಿಲ್ 3, 2012

ನನಗೊಂದು ಹೆಣ್ಣು ಕೊಡಿ



     ’ಮಹಾಸ್ವಾಮಿ.. ನನ್ ಜಾತ್ಗ, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.
ತುಸು ಬ್ಯುಜಿಯಂತೇ ತೋರುತಿದ್ದ ಅವರೋ, ಕೈಸನ್ನೆಯಲ್ಲಿಯೇ ಕುಳಿತುಕೊಳ್ಳಲು ಸೂಚಿಸಿದ್ದನ್ನ ನೋಡಿಯೇ, ಕುಳಿತೆ.
     
       ಜೋರು ತಿರುಗುತ್ತಿರುವ ಫೇನ್ ದೇ ಭಯವಿತ್ತು ನನಗೆ. ಮೂಲೇಲಿ ತಣ್ಣಗೆ ಕುಳಿತ .ಸಿ. ಯನ್ನಾದರೂ ಆನ್ ಮಾಡಿದ್ದರೆ, ಜೋರು ಗಾಳಿಯ ಭರಾಟೆಗೆ ಎರಡುದಿಕ್ಕುಗಳಿಗೂ ಹಾರಿ, ಯಾವಕಡೆ ಹೋಗಿ, ಯಾವ ಚೂರನ್ನು ಎತ್ತಿತರಲಿ? ಎನ್ನುವ ಸಂದಿಗ್ಧತೆಯಾದರೂ ದೂರವಾಗಿಸುತ್ತಿತ್ತೇನೋ ಎನ್ನುವ ದೂರದ ಆಸೆಯಿಂದ, ಮಾಹಾಸ್ವಾಮಿಗಳು ಎಷ್ಟುಬೇಗ ಜಾತಕವನ್ನ  ಕೈಲಿಡಿದು, ನನ್ನ ಸ್ಥಿರಾಸ್ಥಿಯನ್ನ ಕಾಪಾಡುತ್ತಾರೋ ಎಂದುಕೊಳ್ಳುತ್ತಾ ಅವರನ್ನೇ ನೋಡತೊಡಗಿದೆ.
   
    ತೀಡಿ-ತಿದ್ದಿದ ತ್ರಿಪುಂಡ್ರ ಭಸ್ಮ, ಅದರ ಕೆಳಗೆ ಕೆಂಪು ಬೊಟ್ಟು, ಆಕಡೆ-ಈಕಡೆ ನಿದ್ದೆಯಿಲ್ಲದೇ ಕೆಂಪಾದಂತಿರುವ ಕಣ್ಣು, ಕಪ್ಪು ಮೀಸೆ-ದಾಡಿಯ ನಡುವೆ ನಗು-ನಗುತ್ತಾ ಅಲ್ಲಾಡುತ್ತಿರುವ ತುಟಿ, ಕಿವಿಗಾನಿಸಿದ ಮೋಬೈಲ್ ಫೋನು, ಅದನ್ನ ಹಿಡಿದ ಹೆಚ್ಚು-ಕಮ್ಮಿ ಹತ್ತೂ ಬೆರಳಿಗೂ ಧರಿಸಿದ ಉಂಗುರಗಳಿರುವ ಕೈ, ಅದರ ಮಧ್ಯೆ ಕಿವಿಯಲ್ಲಿ ಜೋಲುತ್ತಿರುವ ಓಲೆ, ಎದ್ದು ಕಾಣಿಸುತಿತ್ತು. ಕೊರಳೆಂತೂ, ಅಷ್ಟು ಭಾರವನ್ನೂ ಹೊತ್ತು, ಬಗ್ಗಿಸದೇ ನಿಲ್ಲಬಹುದೆನ್ನುವುದನ್ನ ಸಾರಿ-ಸಾರಿ ಹೇಳುವಂತೆ, ಎಲ್ಲಾ ಶೈಲಿಯ ರುದ್ರಾಕ್ಷಿ, ಹರಳುಗಳ ರಾಶಿಯನ್ನ ಅಚ್ಚು ಬಂಗಾರಗಳ ಕವಚಗಳಿಂದ ಧರಿಸಿ ನೆಟ್ಟ ನಿಂತಿತ್ತು
     
       ಹೆಂಗಸರುಗಳು; ಯಾಕೆ ಬೆಳಗ್ಗೆ ಎದ್ದತಕ್ಷಣ ಟಿ.ವಿ. ಓನ್ ಮಾಡಿ ಭವಿಷ್ಯ ಓದುವ ಮಹಾಸ್ವಾಮಿಗಳನ್ನ  
ಕಣ್ಣು ಮಿಟುಕಿಸದೇ ನೋಡುತ್ತಾ ಕುಳಿತಿರುತ್ತಾರೆನ್ನುವುದು ಈಗ ಅಂದಾಜಾಯಿತು!
   
     “ಏನಯ್ಯಾ ನಿಂದು?
   
ತಟ್ಟನೆ ಎದುರುಬಂದ ಪ್ರಶ್ನೆಗೆ ಅವರ ಎದುರಿಗಿರಿಸಿದ ಜಾತಕದತ್ತ ಪುನಃ ಮುಗ್ಢ ದೃಷ್ಟಿದೋರಿದೆ.
   
ಬಲಗೈಲಿಡಿದು, ಎಡಗೈಯಿಂದ ಕನ್ನಡಕವ ಧರಿಸಿ ಅದರ ಮೇಲೆ ಕಣ್ಣಾಯಿಸ ತೊಡಗಿದರು ಮಾಹಾಸ್ವಾಮಿಗಳು.
    “
ನಿಂದೇನಯ್ಯಾ ಕುಂಡಲಿ?
   “ನ್ಹೂಂ....ಮಹಾಸ್ವಾಮಿ
   “ಹೆಸರು ................... ಹಂ! ಆರ್ದ್ರಾ ನಕ್ಷತ್ರ, ಮಿಥುನ ರಾಶಿ
   “ನ್ಹೂಂ ಸ್ವಾಮಿ
   “ಏನಯ್ಯಾ ಇದು, ಎಲ್ಲಾ ವಕ್ರ ವಕ್ರ ಇದೆತುಟಿಯಂಚಿನಲ್ಲಿ ನಕ್ಕು ನನ್ನ ಮೇಲೆ ದೃಷ್ಟಿತೋರಿ ನುಡಿದರು!
  
ನನಗೇನು ಹೇಳಬೇಕೆಂದು ತೋಚದೇ, ಕೈ-ಗಾಲುಗಳನ್ನ ಒಮ್ಮೆ ನೋಡಿ, ಸುಮ್ಮನೇ ಕುಳಿತೆ!!.
   “
ಗುರು ನೀಚ! ರಾಹು ವ್ಯಯ! ಅಷ್ಟಮ ಶನಿ! ಶತ್ರುಸ್ಥಾನೆ ರವಿ! ಯಾರನ್ನ ಉದ್ಧಾರ ಮಾಡೋಕೆ ಹುಟ್ಟೀರೋದಯ್ಯಾ ನೀನು??
   
ಧನಿ ಜೋರಾಗಿ, ಮನಸ್ಸನ್ನ ತಣ್ಣಗೆ ನಡುಕ ಉಂಟುಮಾಡಿತು!
   “
ಹಿಡಿದ ಕೆಲ್ಸ ಒಂದೂ ನೆಟ್ಟಗೆ ಮಾಡಲ್ಲ! ಚಂಚಲ ಬುದ್ಧಿ, ಅಂದುಕೊಳ್ಳೋದೊಂದು ಮಾಡೋದು ಇನ್ನೊಂದು, ಎಲ್ಲಾ ಕೆಲ್ಸ ಅರ್ಧಂಬರ್ಧ! ತಂದೆಗೇ ಕಂಟಕ, ನೀ ಹುಟ್ಟೀದ ಮನೆಲಿ ಮತ್ತೊಂದು ಹುಲ್ಕಡ್ಡೀನೂ ಹುಟ್ಟೋದಿಲ್ಲ!............
ವಾಚನ ಮುಂದುವರಿಯುತ್ತಿದ್ದಂತೆ ನಾ ಯೋಚನಾ ಮಗ್ನನಾದೆ,
  

     “ಬಹುಶಃ ನನ್ನೀ ಸ್ಥಿರಾಸ್ತಿಯನ್ನ ಮೊದಲೆಲ್ಲರೂ ನೋಡಿ ಒದರಿದ್ದು ಇದೇ! ಇದರಲ್ಲಿ ಅಂತ ವಿಶೇಷ ಇದ್ದಂತೇನೂ ಕಂಡುಬರಲಿಲ್ಲ! ಹಾಗಿದ್ದರೂ ಮತ್ಯಾಕೆ ಅವರ ಎದುರಿನಲ್ಲಿ ತಂದಿಟ್ಟದ್ದು??

  “ಜಾತಕ ಜೋಯ್ಸ್ರಿಗೆ ಕೊಟ್ಬರ್ಬೇಕು, ಪಕ್ಕದೂರಲ್ಲಿ ಯಾವ್ದೋ ಹುಡುಗಿ ಇದಾಳೆ ಅಂತೇಳ್ತಿದ್ರು,ಅಮ್ಮನ ಮಾತು ಕೇಳುತ್ತಾ,
   
     ಈ ದಿನ ಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಒಂದು ಕುತೂಹಲದ ಯೋಚನೆ ಬಂದು ನಕ್ಕಿದ್ದು ಸುಳ್ಳಲ್ಲ.
ತಿಳುವಳಿಕೆ ಬಂದಾರಭ್ಯ ನನ್ನ ನಾ ನೋಡುತ್ತಲೇ ಬದುಕಿರುವೆ,

     ಎತ್ತರದಲ್ಲಿ ಚೋಟುದ್ದ ಇದ್ದಂವ, ಆರಡಿ ಮನೆಬಾಗಿಲಿಗೆ ಸ್ವಲ್ಪ ಕಮ್ಮಿಯಾಗಿರುವೆ. ಅಗಲ ಅಷ್ಟೇನಿಲ್ಲದಿದ್ದರೂ ಆರೋಗ್ಯಕ್ಕೇನೂ ಕೊರತೆಯಿಲ್ಲ. ಸುರಸುಂದರ ಅಲ್ಲದಿದ್ದರೂ ಮನಸ್ಸಿನ, ಮುಖದ ಬಣ್ಣವನ್ನ ಮಾಸಿಕೊಂಡಿಲ್ಲ. ತಿಂಗಳ ಖರ್ಚೆಲ್ಲಾ ಬಿಟ್ಟೂ, ಮೀಗುವ ಸಂಬಳತರುವ ಕೆಲಸ. ಚೊಕ್ಕಟ ಮನೆಮಾಡಿಕೊಂಡು, ನನಗೆಂದು ಇರುವ ಅಮ್ಮಳೊಬ್ಬಳೊಟ್ಟಿಗೆ, ಧರೆಯನ್ನೇ ಸ್ವರ್ಗವಾಗಿಸಿಕೊಂಡು, ಸರಳ ಜೀವನ ನಡೆಸುತ್ತಿರುವುದು ಸುಳ್ಳಲ್ಲ. 
    ’ಬಹುಶಃ, ಪ್ರಪಂಚದ ಸುಖಪುರುಷರಲ್ಲಿ ನಾನೂ ಒಬ್ಬಎಂದು ಅಂದುಕೊಂಡಿದ್ದು ಹಲವುಬಾರಿ!!
     ಆದರೂ.....
      ಏನೆಲ್ಲಾ ಬದಲಾವಣೆಯಾಯಿತು! ಒಂದನ್ನ ಬಿಟ್ಟು... ನನ್ನ ಜಾತಕ!!
ಮೊದಲೆಲ್ಲಾ ಅಮ್ಮ ಎಷ್ಟುಬಾರಿ, ಯಾರ್ಯಾರ ಹತ್ತಿರ ಅದನ್ನ ತೋರಿಸಿದ್ದಳೋ, ನಾಕಾಣೆ!  
ತೋರಿಸಿದ ಪ್ರತಿಸಲವೂ ತಲೆ ಕೈಹೊತ್ತು,ಮುಂದೇನು ಗತಿಯಪ್ಪ!?ಅನ್ನುತ್ತಾ, ಕುಳಿತುಕೊಳ್ಳುತ್ತಿದ್ದಂತೂ ನಿಜ!
ಸಂದರ್ಭದಲ್ಲೆಲ್ಲಾ ನಾ ನಾದರೋ ಅಮ್ಮನನ್ನೇ ನೋಡುತ್ತಾ ಸುಮ್ಮನೇ ಕುಳಿತಿರುತ್ತಿದ್ದೆ. ಕೆಲವೊಮ್ಮೆ ಜಾತಕವ ಬಿಡಿಸಿ, ಅಂತದ್ದು ಅದರಲ್ಲಿ ಏನಿದೆ ಎನ್ನುವ ಕುತೂಹಲದಿಂದ ನೋಡುತ್ತಿರುತ್ತಿದ್ದೆ.
     
      ಏನೇನೋ ಸಂಖ್ಯೆಗಳು! ಏನೇನೋ ಅಕ್ಷರಗಳು! ವಿಜ್ಞಾನ ಪುಸ್ತಕಲ್ಲಿ ಓದಿ, ಆಕಾಶದಲ್ಲಿ ಸೂರ್ಯನ ಸುತ್ತಾ ತಿರುಗುವ ಗ್ರಹಗಳು ಹಾಳೆಯಲ್ಲೂ ಬರೆಯಲ್ಪಟ್ಟಿರುವುದನ್ನ ನೋಡಿ ಆಶ್ಚರ್ಯಪಟ್ಟಿದ್ದೆ! ರಾತ್ರೀಕಾಲದ ಆಕಾಶದಲಿ ಮಿನುಗುವ ಗ್ರಹ-ನಕ್ಷತ್ರಗಳೆಲ್ಲಾ ನನ್ನೀ ಜಾತಕದ ಮನೆಯಲ್ಲೇ, ಹಗಲೆಲ್ಲಾ ಮಲಗಿ, ವಿಶ್ರಾಂತಿತೆಗೆದುಕೊಳ್ಳುತ್ತವೆಂದು ಬಗೆದಿದ್ದೆ! ಹಾಗೆ ಬಂದವರು ಮನರಂಜನೆಗೆ ನನ್ನೇ ಆಟಿಕೆಯಾಗಿ ಆಡಿಸುತ್ತಾರೆಂದೂ ಅಂದುಕೊಳ್ಳುತ್ತಿದ್ದೆ. ಮಹಾ ಮಹಾ ಒಗಟುಗಳನ್ನೆಲ್ಲಾ ಬಿಡಿಸಿ ಒಗೆಯುತ್ತಿದ್ದ ನನಗೆ ಒಂದು ಹಾಳೆ ಮಾತ್ರಾ ಬಹುದೊಡ್ಡ ಒಗಟಾಗಿ ಕಾಡಿದ್ದು ಸುಳ್ಳಲ್ಲ!!
       
      ಆ ಒಗಟನ್ನ ಬಿಡಿಸಲು ಫಣತೊಟ್ಟಿದ್ದೂ.... ಫಣಕ್ಕೆ ಸರಿಯಾಗಿ ಇವತ್ತಿಗೆ ನಾ ಇರುವ ಪರಿಣಾಮ ಪಲರೂಪವಾಗಿ ದೊರಕಿದ್ದೂ ವಾಸ್ತವ!
     
     ಇಷ್ಟೆಲ್ಲಾ ಆಗಿಯೂ, ಹಾಳೆಯು ಮೊದಲು ಹೇಳಿದ್ದನ್ನೇ ಹೇಳುತ್ತದಯೇ?? ಅಥವಾ ನನ್ನೀ ಬದುಕಂತೆ ಅದರಲ್ಲೂ ಏನಾದರೂ ಬದಲಾವಣೆ ಆಗಿರಬಹುದೇ?? ಎನ್ನುತ್ತಾ ಟೀ.ವಿಯಲ್ಲಿ ಮಿಂಚುವ ಈ ಮಹಾಸ್ವಾಮಿಗಳ ನಂಬರ್ ಡಯಲ್ ಮಾಡಿ, ಅಪಾಯ್ಟ್ ಮೆಂಟ್ ಇವತ್ತಿನ ಸಂಜೆಯೇ ಸಿಕ್ಕು, ಬ್ರಹ್ಮಾಂಡ(ಜಾತಕ), ಮಹಾಸ್ವಾಮಿಯ ಕೈ-ಏರಿ ಕುಳಿತಿರುವುದಕ್ಕೆ ಕಾರಣವಾಗಿತ್ತು!
      
       ಈ ಎಲ್ಲಾ ಯೋಚನೆ ಮತ್ತೆ ನನ್ನ ಮೊಗದಲ್ಲಿ ಬೆಳಗ್ಗಿನ ಮಂದಹಾಸವನ್ನ ನೆನಪು ಮಾಡಿಸಿ, ಮನವನ್ನ ಹಗುರ ಮಾಡಿಸಿತ್ತಲ್ಲದೇ, ಜಾತಕದ  ದೊಡ್ಡಒಗಟನ್ನೇ ಬಿಡಿಸಿದ ಸಂತೋಷವೂ ಮಹಾ ಪ್ರಭೆಯನ್ನೇ ಉಂಟು ಮಾಡಿ, ತುಸು ನಗು- ಮುಖದಲ್ಲಿ ಮಿಂಚಿತು.
     
       ನನ್ನ ಮುಖದ ನಗುವನ್ನ ಗಮನಿಸಿಯೋ ಏನೋ, ಮಹಾಸ್ವಾಮಿಗಳ ಮಾತಿನ ದಾಟಿ ಬದಲಾವಣೆಯಾಗಿ, ಸ್ವಲ್ಪ ಹೊತ್ತಿಗೇ ಸುಮ್ಮನೆಯೂ ಆಗಿ, ಎಲ್ಲಾ ದೋಷಗಳಿಗೂ ಪರಿಹಾರವನ್ನ ಯೋಚಿಸುತ್ತಲೇ, ಜಾತಕವನ್ನ ನನ್ನೆದುರಿಗೇ ಇಟ್ಟು, ನನ್ನೇ ನೋಡುತ್ತಾ ಕುಳಿತರು.
     
       ನಾನಾದರೋ ಅದನ್ನ ಮಡಚಿ ಜೇಬಿಗಿರಿಸಿಕೊಳ್ಳುತ್ತಾ, ಅವರ ದಕ್ಷಿಣೆಯನ್ನ ಇರಿಸಿ, ಹೊರಡುತ್ತೇನೆಂದಷ್ಟೇ ಹೇಳಿ, ನಮಸ್ಕರಿಸಿ, ಹೊರ ಹೊರಟುಬಿಟ್ಟೆ.
      
      ಮಹಾಸ್ವಾಮಿಗಳಾದರೋ ನನ್ನೀ ಅನಿರೀಕ್ಷಿತ ಆಚರಣೆಗೆ ಚಕಿತರಾಗಿ, ನನ್ನೇ ನೋಡುತ್ತಿದ್ದುಬಿಟ್ಟರು!
ಬಾಗಿಲ ಪಕ್ಕದಲ್ಲಿಯೇ ಇದ್ದ ಡಸ್ಟ್ಬಿನ್ ನೋಡಿ, ತುಸು ನಿಂತೆ.
     
     ಮನಸ್ಸಿನ ಭಾರ ಹಗುರಾದದ್ದಾಯಿತು, ಇನ್ನು ಜೇಬನ್ನೂ ಸ್ವಲ್ಪ ಹಗುರ ಮಾಡಿಕೊಳ್ಳೋಣ ಎನಿಸಿದ್ದು ಸುಳ್ಳಲ್ಲ!
    
      ಮನೆಯಲ್ಲಿ ಮಗನ ಬರುವನ್ನೇ ಕಾದು, ಜಾತಕವ ಜೋಯಿಸರ ಕೈಗೆ ಕೊಡುವ ತರಾತುರಿಯಲ್ಲಿರುವ ಅಮ್ಮ ನೆನಪಾಗಿ, ಇದಿಲ್ಲದೇ ತೆರಳಿದರೆ ಅವಳ ಮುಖದಲ್ಲಾಗುವ ಆತಂಕದ ಗೆರೆಗಳನ್ನ ನೆನೆದು, ಮನ ಬದಲಾಯಿಸಿ ಹಾಗೇ ಮನೆಯ  ದಾರಿಯ ತುಳಿಯತೊಡಗಿದೆ.
      
     ನನ್ನ ಪುಣ್ಯಕ್ಕೆ ಪಾದಗಳಿಗೆ ಮನೆಯ ಅಡ್ರೆಸ್ ಗೊತ್ತಿದ್ದರಿಂದ ಸರಿಹೋಯಿತು! ಅವುಗಳ ಪಾಡಿಗೆ  ಅವು ಸಾಗಿ, ಮೊದಲೇ ಯೋಚನಾಲಹರಿಯಲ್ಲಿ ತಲ್ಲೀನನಾಗಿಬಿಡುವ ನನಗೆ ಮನೆತಲುಪಿದ್ದೆ ಗೊತ್ತಾಗಲಿಲ್ಲ!!
  
      ಅಮ್ಮನ ಜೊತೆಜೋರು ಜೋರು ಮಾತನಾಡುತ್ತಿರುವ, ಕಂಡು ಬಹಳೇದಿನವಾಗಿರುವ ಗೆಳೆಯ ಮುಕುಂದನ ಧನಿ ಹೊರಬಾಗಿಲವರೆಗೆ ಕೇಳಿ, ತುಸು ಉತ್ಸುಕನಾಗಿಯೇ ಮನೆಯೊಳ ಅಡಿಯಿಡುತ್ತಲೇ ಹೇಳಿದೆ....

      “ಏನಯ್ಯಾ ದೊರೆ, ಇವತ್ತೇನು ನಿನ್ನ ಬ್ಯುಸಿ ಮೈಂಡ್ ನಮ್ಮನ್ನ ನೆನಪಿಸ್ಕೊಂಡಿದೆ! ನೀನು ಬಂದಿದ್ದಿ ಅಂತಾದ್ರೆ ಏನೋ ವಿಶೇಷ ಇರ್ಲೇಬೇಕಲ್ವೇ? ಬೇಗ ಹೇಳು ಮರಾಯಾ ನೀ ಬಂದಿರೋ ಖುಷಿಲೇ ಅದ್ನೂ ಅನುಭವ್ಸಿ ಬಿಡ್ತೀನಿ

      “ಹಾ..ಹಾ..ಹಾ.. ಬಾ ಬಾ. ಸ್ನೇಹಿತ ಅಂದ್ರೆ ನೀ ನೋಡು! ನನ್ನೆಸ್ಟು ಕರೆಕ್ಟ್ ಆಗಿ ಜಡ್ಜ್ ಮಾಡ್ದೆಎನ್ನುತ್ತಾ ಎದ್ದುನಿಂತು ನನ್ನ ಮನೆಗೆ ನನ್ನೇ, ನಗುತ್ತಾ ಸ್ವಾಗತಿಸಿದ ಮುಕುಂದ.

      ಉಭಯಕುಶಲೋಪರಿಯನ್ನ ಕೇಳಿ, ಮಾತನಾಡಿಕೊಳ್ಳುತ್ತ, ಕೈ-ಕಾಲು ತೊಳೆದು ಬಂದ ನಮಗೆ ಅಮ್ಮ ತಂದಿಟ್ಟ, ಟೀ-ಉಪಹಾರ ಸೇವನೆಯೂ ಆಯಿತು.

     “ಇವತ್ತು ನಿಮ್ಮನೇಲೆ ರಾತ್ರಿಯ ಊಟನೂ ಮಾಡೇ ಹೋಗ್ತೀನಿಎನ್ನುವ ಅವನ ನಿಸ್ಸಂಕೋಚ ಮಾತನ್ನ ಕೇಳಿದ ಅಮ್ಮ ಖುಷಿಯಿಂದಲೇ ಅಡಿಗೆ ತಯಾರಿಗೆ ಒಳನಡೆದರೆ, ನಮ್ಮಿಬ್ಬರ ಎಷ್ಟೋದಿನಗಳಿಂದುಳಿದ ಮಾತು-ಕಥೆಗೆ ವೇದಿಕೆ ಸಜ್ಜಾಯಿತು.

      “ಎಲ್ಲಿವರೆಗೆ ಬಂತಪ್ಪಾ ನಿನ್ನ ಮದುವೆಯೂಟ ನೀಡುವ ತಯಾರಿ?” ಅವನ ಮನೆಯಲ್ಲಿ ಹೆಣ್ಣುನೋಡುತ್ತಿರುವ ವಿಚಾರ ತಿಳಿದೇ ಇದ್ದ ನಾನು ಅವನಲ್ಲಿ ಪ್ರಶ್ನಿಸಿದೆ.
 
       “ಅಯ್ಯೋ! ಅದನ್ನ ಕೇಳ್ಬೇಡಪ್ಪ. ಸಾಕೋ-ಬೇಕೋ ಆಗ್ತಿದೆ!” ಬೇಸರದ ಧನಿಮಾಡಂದ ಮುಕುಂದ.

      “ಯಾಕೋ.....?” ಕಳಕಳಿಯ ಪ್ರಶ್ನೆ ನನ್ನದು.

      “ಅಮ್ಮನಿಗೆ ಒಂದು ಹೆಣ್ಣೂ ಆಗಿಬರುತ್ತಿಲ್ಲ! ಬಂದ ಹೆಣ್ಣುಗಳಲ್ಲೆಲ್ಲಾ- ಒಂದಷ್ಟಕ್ಕೆ ಜಾತಕ ಕೂಡಿಬರುತ್ತಿಲ್ಲ, ಕೆಲವೊಂದಕ್ಕೆ ಬಣ್ಣ ಇಲ್ಲ! ಗುಣವಿರದೇ ಇರುವುದು ಒಂದಷ್ಟಾದರೆ, ಮತ್ತೊಂದಿಷ್ಟು ಹೆಣ್ಣುಗಳೇ ಜೋರು, ಇನ್ನೊಂದಷ್ಟರ ಮನೆಗೇ ಸಂಸ್ಕಾರವೇ ಇರುವುದಿಲ್ಲ! ಒಟ್ಟಿನಲ್ಲಿ ಹೆಣ್ಣುಗಳ ಮನೆಗೆ ಪೆರೇಡ್ ಮಾಡಿ-ಮಾಡಿಯೇ ನನ್ನಾಯಸ್ಸು ಮುಗಿಯುವುದೋ ಅನಿಸುತ್ತಿತ್ತು
      
       ಮುಗ್ಧಮಾತಿನಂದದ್ದು ಕೇಳಿ, ’ಪಾಪ..’ ಅನಿಸಿದ್ದರೂ, ಸುಮ್ಮನೇ ಕೆಣಕುವ ಮನಸ್ಸಾಗಿ,
 
    “ಹ ಹ ಹ.... ಮದುವೆ ನಿನಗೋ? ನಿಮ್ಮಮ್ಮನಿಗೋ? ಹುಡುಗಿ ಸಿಗುವುದೇ ಕಷ್ಟವೆನ್ನುವ ಈ ಕಾಲದಲ್ಲಿ ಅಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ, ಯಾರಾದ್ರೂ ಶಕುಂತಲೆನ ಕಟ್ಕೋಳ್ಬಾರ್ದಾ?” ನಗುತ್ತಾ ಕೇಳಿದೆ.
ನೀ ನಗ್ಬೇಡ ಮರಾಯಾ! ಮೊನ್ನೆ ಆದದ್ದೂ ಅದೇ ಕಥೆ.......” ಅನ್ನುತ್ತಾ, ಆಸಕ್ತಿಕರ ವಿಷಯವಾದ್ದರಿಂದ ತುಸು ನನ್ನಕಡೆ ಸರಿದು ಮುಂದುವರಿದ,
   
      “ಜಾತಕವೆಲ್ಲಾ ಕೂಡಿಬಂದು, ಹುಡುಗಿ ಫೋಟೋದಲ್ಲಿ ಲಕ್ಷಣವಾಗಿರುವುದನ್ನ ನೋಡಿ ಅವರಮನೆಗೆ ಹೋದದ್ದಾಯಿತು. ಅಲ್ಲಿಯ ಸಂಭ್ರಮ ಏನಂತೀಯಾ? ಹೆಣ್ಣು ನೋಡುವ ಶಾಸ್ತ್ರವೇ ಹೀಗಾದರೆ, ಮದುವೆ ಇನ್ನೇಗಪ್ಪಾ? ಅನ್ನುವಸ್ಟು ಸಂಭ್ರಮ ಅಲ್ಲಿತ್ತು. ಪ್ರಾರಂಭದ ಉಪಚಾರ ಎಲ್ಲಾ ಮುಗಿದು, ಹುಡುಗಿಯನ್ನ ಕರೆದರು.
 
     ಏನು ಚಂದ ಇದ್ಲು ಅಂತಿ! ಫೋಟೋದಲ್ಲಿದ್ದಕ್ಕಿಂತ ಎದುರಿನಲ್ಲೇ ಅದ್ಭುತ ಅನ್ಸಿದ್ದು ಸುಳ್ಳಲ್ಲ ಮಾರಾಯಾ! ಅವಳ ನಡೆ, ವಯ್ಯಾರ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಮಾತೂ ಮತ್ತೆ ಮತ್ತೆ ಕೇಳ್ಬೇಕು ಅನಸ್ತಿತ್ತು, ಅಷ್ಟು ಸುಂದರ. ಸುಶೀಲೆ. ಬುದ್ಧಿವಂತೆ ಕೂಡ, ಡಬಲ್ ಡಿಗ್ರಿ ಗ್ರಾಜುಯೇಟ್! ನನಗವಳನ್ನು ವಲ್ಲೇ... ಎನ್ನಲು ಕಾರಣವೇ ಇಲ್ಲ! ಅಂತದ್ರಲ್ಲಿ ನನ್ನಮ್ಮ ಏನೋ ನೆವ ಹೂಡಿ ಒಳಹೋದವಳು, ತಟ್ಟನೇ ಹಿಂತಿರುಗಿ, ಒಂದೇ ಸವನೆ ಹೊರಡಲು ಒತ್ತಾಯ ಮಾಡಿದ್ದೇ ಮಾಡಿದ್ದು! ನನಗೂ-ಅಪ್ಪನಿಗೂ ಯಾಕಿವಳು ಇಷ್ಟು ಒತ್ತಾಯ್ಸುತ್ತಿದ್ದಾಳಪ್ಪ ಅನೋದೇ ಬಗೆಹರಿದೇ ಹೊರಟುನಿಂತ್ವಿ! ಹಾಗೇ, ದಾರೀಲಿ ಅವಳನ್ನು ಕೇಳಿಯಾಯ್ತು,
      
     ’ಯಾಕಮ್ಮಾ ಅಷ್ಟು ಅವಸರಿಸಿದೆ?’

     ಅವ್ಳು ಹೇಳಿರೋ ಕಾರಣಕ್ಕೆ ನನಗೆ ಅಳಬೇಕೋ? ನಮ್ಮಮ್ಮನಿಗೆ ಬುದ್ದಿಯಿಲ್ಲವೆಂದು ವ್ಯಥೆ ಪಡಬೇಕೋ... ಅಂದುಕೊಳ್ಳುತ್ತಾ ಹಣೆ-ಹಣೆ ಚಚ್ಚಿಕೊಂಡೆ!!”
 
     “ಅಂತದ್ದು ಏನಿತ್ತೋ?”

      “ಒಳಗೋದ ಅಮ್ಮಾ ಅವಳ ಕಾಲ ಬೆರಳ ನೋಡಿದ್ಲಂತೆ! ಅವು ಸ್ವಲ್ಪ ಆಕಾರಕ್ಕೆ ತಕ್ಕದಿಲ್ದೇ ಸ್ವಲ್ಪ ಉದ್ದವಾಗಿತ್ತಂತೆ!! ಇಸ್ಟೇ!! ಬೇಡವೇ ಬೇಡ... ಉದ್ದ ಬೆರಳಿರೋ ಹೆಣ್ಣು ಮಗನಿಗ್ಯಾಕೆ? ತಾನೇ ನಿರ್ಧರಿಸಿ.... ಹಾಗೇ ನಮ್ಮನ್ನ ಹೊರಡಿಸಿ.............”

       ಅವನ ಮಾತು ಮುಗಿಯುವ ಮೊದಲೇ ನಗು ತಡೆಯಲಾಗಲಿಲ್ಲ ನನಗೆ! ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇ ನಕ್ಕಿದ್ದು!
ನನಗೆ ನಗು ನಿಲ್ಲುವವರೆಗೆ ಸುಮ್ಮನಿದ್ದು ಮತ್ತೆ ಮುಂದುವರಿಸಿದ.

       “’ಅಪ್ಪಾ! ನನಗೆ ಇದೆಲ್ಲಾ ಸಾಕೋ ಸಾಕು. ಮದುವೆ ಆದ್ರೆ ಇವ್ಳನ್ನೇ. ನನಗೆ ಮತ್ಯಾರನ್ನೂ ತೋರಿಸ್ಲೂ ಬೇಡಿ, ಇಷ್ಟ ಆಗೋದು ಇಲ್ಲ, ಅಮ್ಮನನ್ನ ನೀನು ಹೇಗೆ ಒಪ್ಪಿಸುತ್ತಿಯೋ, ನಾ ವಲ್ಲೆ!’ ಅನ್ನೋ ಮಾತನ್ನ  ಖಡಾಕಂಡಿತ ಹೇಳಿ ನಾ ಸುಮ್ಮನಿದ್ದು ಬಿಟ್ಟೆ. ಅಮ್ಮನನ್ನ ಒಪ್ಪಿಸುವ ಹೊಣೆ ಹೊತ್ತ ಅಪ್ಪ ನನ್ನ ಮಾತಿಗೆ ಸಮ್ಮತಿ ನೀಡಿ, ಮದುವೆಗೆ ಒಪ್ಪಿಗೆ ಸೂಚಿಸಿದ್ದೂ ಆಯಿತು.”
       
      ನಾನು ನಗುತ್ತಲೇ, “ಬಪ್ಪರೇ! ಅಂತೂ ಮುಕುಂದನ ಕನ್ಯಾ ವೀಕ್ಷಣಾ ಪ್ರಹಸನದ ನಾಟಕಕ್ಕೆ ಇಲ್ಲಿಗೆ ತೆರೆಯೆಳೆದಂತಾಯಿತು ಅನ್ನು. ಅಂತೂ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಅನ್ನುವುದು ಮತ್ತೊಮ್ಮೆ ಸಾಭೀತಾಯಿತು, ನಿನ್ನ ಸಂಜಯ್ ನ ಕಥೆ ಕೇಳು ಮಾರಾಯಾ, ಹೆಣ್ಣು ನೋಡಲಿಕ್ಕೆ ಹೋಗಿ, ಆ ಹೆಣ್ಣು ನಿನ್ನ ಜೊತೆ ಆರು ತಿಂಗಳು ಇರುತ್ತೇನೆ, ಆಮೇಲೆ ನೀನು ಇಷ್ಟವಾದರೆ ಮದುವೆ ಎಂದಳಂತೆ! ಇವನು ಒಮ್ಮೆಲೇ ತಬ್ಬಿಬ್ಬಾಗಿ, ಅಲ್ಲಿಂದ ಒಂದೇ ಓಟವಂತೆ.... ಹ್ಹಾ.. ಹ್ಹಾ.. ಹ್ಹಾ....!!”
      
      ಇಬ್ಬರದೂ ನಗು ಜೋರಾಗಿದ್ದು, ಅಮ್ಮ ಊಟಕ್ಕೆ ಕರೆದದ್ದೇ ಕೇಳಿರಲಿಲ್ಲ.
    
      “ಅವ್ನ ಕಥೆ ಬಿಡು, ಮೊನ್ನೆ ಪೇಪರ್ ನೋಡದ್ಯಾ? ಮದುವೆ ಆಗಿ ಮಾರನೇ ದಿನವೇ ಹುಡುಗಿ ಪರಾರಿ!!”
ಆ ಪ್ರಹಸನವೂ ನೆನಪಾಗಿ ಇಬ್ಬರ ನಗೂ ಅಬ್ಬರಕ್ಕೇರಿರುವಾಗಲೇ ಅಮ್ಮನ ಕೂಗು ಮತ್ತೆಕೇಳಿ, ತಟ್ಟೆಗೆ ಹೋಗಿ ಕುಳಿತುಕೊಳ್ಳುವಂತೆ ಮಾಡಿತು.
      
      “ಏನಪ್ಪಾ, ನೀವಿಬ್ರು ಜೊತೆ ಗೂಡ್ಬಿಟ್ರೆ ಜಗತ್ತು ಕತ್ತಲೆ ಆದದ್ದನ್ನೇ ಮರ್ತುಬಿಡ್ತೀರಲ್ಲಾ, ಎಷ್ಟು ಬಾರಿ ಕುಗೋದು ನಿಮ್ಮನ್ನ?” ಎನ್ನುತ್ತಿದ್ದ ಅಮ್ಮನ ಮಾತಿಗೆ,
       
       “ಅಮ್ಮಾ, ನೀನು ಒಂದು ಸೊಸೆ ಹುಡುಕ್ಕೋ, ನಮ್ಮನ್ನ ನಮ್ಮ ಪಾಡಿಗೆ ಬಿಟ್ಬಿಡುಎನ್ನುತ್ತಲೇ ನನ್ನಕಡೆ ನೋಡಿ ಕಣ್ಣು ಮಿಟುಕಿಸಿದ ಮುಕುಂದ!
   
       “ನೋಡುವುದೇ......” ಇಂತಿಷ್ಟೇ ಹೇಳಿ ಅಮ್ಮ ಬಡಿಸತೊಡಗಿದ್ದಳು.
ನಾನಾದರೋ ಅಮ್ಮನ ಎದುರಿಗೆ ಆ ಮಾತೆತ್ತದೇ ಸುಮ್ಮನಿರುವಂತೆ ಸನ್ನೆಯಲ್ಲೇ ಸೂಚಿಸಿ, ನಿಧಾನ ಊಟಮಾಡುವಂತೆ ಹೇಳಿ ಅಮ್ಮ ಬಡಿಸಿದ ಅನ್ನ, ಹುಳಿಯನ್ನ ಉಣ್ಣತೊಡಗಿದೆ.
ಉಂಡು ಡರ್ರ್.... ಅಂತ ತೇಗಿದ ಮುಕುಂದ, “ಅಮ್ಮನ ಕೈರುಚಿ ಅಂದ್ರೆ ರುಚಿನೇ, ದೇಹ ಮುಪ್ಪಾದ್ರೂ-ರುಚಿಗೆ ಮುಪ್ಪಿಲ್ಲ ನೋಡುಎನ್ನುತ್ತಾ ನಗೆಯಾಡಿದ.
     
       ಅಮ್ಮನಾದರೋ ತುಸು ನಗುತ್ತಲೇ, ”ಹೌದಪ್ಪಾ! ಇನ್ನೆಷ್ಟು ದಿನ? ಬರುತ್ತಾಳಲ್ಲ ನಿಮ್ಮನೆಗೇ ನಿನ್ನ ವಯ್ಯಾರಿ..... ಬಡಿಸಿ ಉಣಿಸುತ್ತಾಳೆ, ಆಗೆಷ್ಟು ದಿನ ನನ್ನ ನೆನಪು ಮಾಡಿಕೊಳ್ಳುತ್ತಿ, ನೋಡುವಾ!” ಎನ್ನುವ ಮಾತನ್ನ ಕೇಳಿ, ತಾನು ಮಾತಾಡಿದ್ದು ಅಮ್ಮನ ಕಿವಿಗೂ ಬಿದ್ದಿದೆ ಅನ್ನುವುದನ್ನ ಅರಿತು! ನಾಚುತ್ತಲೇ ಹೋಗಿಬರುವೆನೆಂದು, ಅಮ್ಮನಿಗೆ ನಮಸ್ಕರಿಸಿ,
ಹೇಳುತ್ತೇನೆ, ಒಂದು ವಾರ ಮೊದಲೇ ಬರಬೇಕುಅನ್ನುತ್ತಾ ನನಗೂ ವಿದಾಯವನ್ನು ಹೇಳಿದ ಮುಕುಂದ.
ಅಮ್ಮ ಊಟಮುಗಿಸಿ, ನನ್ನ ಬಳಿಬಂದು, “ನಿನ್ನ ವಾರಗೆಯರಿಗೆಲ್ಲಾ ಮದುವೆ ನಿಕ್ಕಿಯಾಯ್ತು, ಇನ್ನು ನಿನಗ್ಯಾವಾಗ್ಳೋ... ಇವತ್ತು ಜೋಯಿಸರಿಗೆ ಜಾತಕ ಮುಟ್ಟಿಸಲೇ ಆಗಲಿಲ್ಲ.” ಅನ್ನುತ್ತಾ, ಬೆಳಗ್ಗೆ ಕೊಟ್ಟ ಜಾತಕವ ಕೇಳಿ, ಒಯ್ದಳು.
ಜಾತಕವನ್ನ ಯಾವಾಗ ಎತ್ತಿಅವಳ ಕೈಗೆ ಕೊಟ್ಟೆನೋ, ಆ ಕ್ಷಣದಿಂದಲೇ ಗ್ರಹ-ತಾರೆಗಳೆಲ್ಲಾ ನನ್ನ ಕಣ್ಣಮುಂದೆ ನರ್ತಿಸುತ್ತಾ, ಹೊಸದೊಂದು ಯೋಚನೆಗೆ ನೂಕಲು ಸಿದ್ಧಗೊಳ್ಳುವಂತಾಯಿತು!!
       
      ಅವುಗಳನ್ನ ಓಡಿಸಲು ಪ್ರಯತ್ನಿಸುತ್ತಾ, ದಿನ ನಿತ್ಯದ ಕರ್ಮದಂತೆ ಓದಲು ಕುಳಿತುಕೊಳ್ಳಲು ಪ್ರಯತ್ನಿಸಿದೆ.
ಯಾಕೋ ಏನೋ ಓದಲೂ ಮನಸಾಗದೇ ಪುಸ್ತಕವ ಮುಚ್ಚಿ, ರೂಮಿನ ಕಿಟಕಿ ಬಳಿ ನಿಂತು ಆಕಾಶವ ನೋಡುತ್ತಾ ನಿಂತದ್ದೇ ತಡ, ನಾ ಖಾಲಿಯಾಗಲೇ ಕಾಯುತ್ತಿದ್ದ ಯೋಚನೆಗಳು ಒಮ್ಮೆಲೇ ದಾಳಿಗಿಟ್ಟವು



      “ಅಮ್ಮ ನಾಳೆ ಜಾತಕವ ಜೋಯಿಸರ ಕೈ-ಸೇರಿಸುತ್ತಾಳೆ! ಮುಂದೇನು ಕತೆ? ಮೊದಲು ನೋಡುವುದೇ ಜಾತಕವನ್ನಂತೆ!! ಆಮೇಲೇನಿದ್ದರೂ ನಾ ನೋಡಲು ಬರುವುದನ್ನ ಒಪ್ಪುವುದು! ನನ್ನ ಅವರು ನೋಡುವುದು!!
 ಮೊದಲೇ ನನ್ನೀ ಜಾತಕವನ್ನ ನೋಡಿದವರಾದರೋ ನನಗೆ ಹೆಣ್ಣು ಕೊಡಲು ಒಪ್ಪಿಯಾರೇ?? ಇರುವ ದೋಷಗಳೆನ್ನೆಲ್ಲಾ ಮರೆತು ಧಾರೆಯೆರುವರೇ ನನಗೆ? ಜಾತಕವೆಂಬ ಅರ್ಥವಾಗದ ಜೀವನದ ಕಾಗುಣಿತದ ಲೆಕ್ಕದಲ್ಲೇ ತೊಡಗಿದ ಸಂಕುಚಿತ ಭಾವನೆಯ ಜನರಲ್ಲಿ, ಎಲ್ಲವನ್ನೂ ಮೆಟ್ಟಿನಿಂತ ವ್ಯಕ್ತಿಯ ಗುರುತಿಸುವವರು ಯಾರಿಹರು ಇಲ್ಲಿ??

      ಎಂದು ಪ್ರಶ್ನಿಸಿದ್ದೇ ತಡ!! ನನ್ನ ಮನವೇ ಚಂದ್ರಮನ ರೂಪಧರಿಸಿದಂತಾಗಿ ನಕ್ಕು ನುಡಿಯಿತು, “ಎಲೈ ಮುಗ್ಧ, ಯಾಕಿಷ್ಟು ಒದ್ದಾಟ! ಇಷ್ಟುದಿನವೂ ನೀನು ಖಾಲಿಯಾಗಿ ಬದುಕಿಲ್ಲವೇ? ನಿನಗ್ಯಾಕೆ ಯಾರ ಹಂಗು? ನಿನಗೆ ನಾನಿಲ್ಲವೇ, ನಿನ್ನ ಮನದಂಗಳದಿ ತುಂಬಿರುವ ಗ್ರಹ-ತಾರೆಗಳಿಲ್ಲವೇ? ಅದೇ ಜಗತ್ತು! ಅದೆಲ್ಲವೂ ನಿನ್ನದಲ್ಲವೇ? ನಿನ್ನವುಗಳೇ ಅಲ್ಲವೇ? ಜಗತ್ತೇ ನಿನ್ನದಾಗಿಸಿಕೊಂಡು ಏನೂ ಇಲ್ಲದಂತೇ ಯಾಕಿರುವೆ? ನಿನ್ನ ಹೆಂಗಸು ಮನಕ್ಕೆ ಧಿಕ್ಕಾರವಿರಲಿ!!”
 
       ಎನ್ನುವುದನ್ನ ಕೇಳುತ್ತಲೇ ಹಾಸಿಗೆಯ ಮೇಲುರುಳಿದ್ದೆ. ಆ ರಾತ್ರಿಯೇ ನನಗೊಂದು ಕನಸಾಯಿತು............” ಕುಳಿತಿದ್ದೆ ಸುಮ್ಮನೇ!! ಹೆಂಗರೆಳೆಯರೆಲ್ಲಾ ಬಂದು ಸಾಗಿದ್ದರು. ನನ್ನದೇನೂ ಇಲ್ಲಾ..... ಮಾತಿಲ್ಲ.... ಕಥೆಯಿಲ್ಲಾ.... ಒಂದು ನಗುವೂ ಇಲ್ಲ..... ಎಲ್ಲರೂ  ಮದುವೆಯ ಊಟಕ್ಕೇ ಕುಳಿತಿದ್ದರು..... ನಾನೂ ಕುಳಿತಿದ್ದೆ... ಕುಳಿತಲ್ಲಿಯೇ!! ಹಸಿವೆಯಿಲ್ಲದೆಯೇ.... ಬಾಯಾರಿಕೆ ಇಲ್ಲದೆಯೆ..... ನಿರ್ಲಿಪ್ತ!?
  
         ಅಲ್ಲಾ.....!! ಬೆಳಕು ಆರಿತ್ತು, ಊಟಕ್ಕೆ ಕುಳಿತಸಮಯದಲ್ಲೇ!! ನಾನಾಗ ಎದ್ದಿದ್ದೆ..... ಕುಳಿತಲ್ಲಿಂದ.......... ಬೆಳಕ ಹೊತ್ತಿಸಲು..... ಎಲ್ಲರ ಊಟ ತಡೆಯಿಲ್ಲದೇ ಸಾಗಲು...... ಆಗಲೇ ಮಿಂಚಿತ್ತು, ನನ್ನ ಮುಖದಲ್ಲೊಂದು ನಗುವು......

.............................................
ಮುಗಿಯಿತು....


ಶನಿವಾರ, ಮಾರ್ಚ್ 31, 2012

ಮನುಜ




     ದಾರಿ ಹತ್ತುತ್ತಿದ್ದಂತೆ ಬಲುಕಠಿಣವಾಗುತ್ತಿದ್ದವು.
     ನೇರ ನಿಂತ ಕಲ್ಲುಬಂಡೆಗಳು ಪಾತಾಳಕ್ಕೆ ನೂಕಿಬಿಡುವ ಭಯವನ್ನ ಹುಟ್ಟುಹಾಕಿಸುವಂತಿತ್ತು.
ಅತಿ ಪ್ರಾಯಾಸಕರ  ಮಾರ್ಗದಲ್ಲಿ ಅವನು ಮೇಲಕ್ಕೆ ಸಾಗುತಿದ್ದ. ಬೆವರು ಒಂದೇಸವನೆ ಸುರಿಯುತಿತ್ತು. ಶ್ರಮದ ಉಸಿರು ನಿಧಾನವಾಗಿ ಹೊರಚಿಮ್ಮುತಿತ್ತು. ಕೆಲವೊಮ್ಮೆ ಹಲ್ಲು ತಾನೂ ಕಚ್ಚಿಕೊಂಡು ಕೈ-ಕಾಲುಗಳು ಹಿಡಿತ ತಪ್ಪದಂತೆ ನೋಡಿಕೊಳ್ಳುತಿತ್ತು. ಬಿಗಿದ ಮಾಂಸಖಂಡಗಳು ಗಮ್ಯಸೇರಲು ತಾವೂ ಎಷ್ಟು ಉತ್ಸಾಹಪೂರ್ಣವಾಗಿದ್ದೇವೆ ಎನ್ನುವುದನ್ನ ಸಾರಿ-ಸಾರಿ ತಿಳಿಸುವಂತಿತ್ತು.
     ಕಣ್ಣುಗಳೆರಡು ಜಾಗ್ರತವಾಗಿದ್ದವು. ತಾನಿರಿಸುವ ಹೆಜ್ಜೆಗಳನ್ನ ತೂಗಿ-ತೂಗಿ ಇರಿಸುವಂತೆ ಮಾಡುತ್ತಿದ್ದವು. ಸಹಚರರ ಯೋಗಕ್ಷೇಮಗಳನ್ನ ನೋಡಿಕೊಳ್ಳುತ್ತಾಗುರಿ ಇನ್ನು ಹೆಚ್ಚುದೂರವಿಲ್ಲವೆನ್ನುತ್ತಾ, ಸೇರಿದರೆ ಸಿಗುವ ಗೆಲುವಿನ ಸಿಹಿಯನ್ನ ತನ್ನಲ್ಲೇ ತುಂಬಿಸಿಕೊಳ್ಳುತ್ತಾಮನ ಸೋಲದಂತೆ ಹುರಿದುಂಭಿಸುವ ಕಾರ್ಯಗಳನ್ನೂ ಚಾಚೂತಪ್ಪದೇ ನಿರ್ವಹಿಸುತಿತ್ತು.
      ಇರುವದೊಂದು ಹಗ್ಗವೂ, ತನ್ನ ತಾ ನಿರ್ವಂಚನೆಯಿಂದ ಸಮರ್ಪಿಸಿಕೊಂಡಿತ್ತು.  
     ಗಾಳಿಯೂ ತಾನೂ ನಿನ್ನಜೊತೆಗಿರುವೆನೆನ್ನುತ್ತಾ, ಜೋರಾಗಿ ಬೀಸದೇ ಮಂದತೆಯಿಂದ ಅವನ ಆಯಾಸವನ್ನ ಆಗಾಗ ದೂರ ಮಾಡುತಿತ್ತು.
        ಅಂಗುಲದಷ್ಟು ಪ್ರಮಾಣದ ಜಾಗದಲ್ಲಿ ಹೇಗೋ ನಿವಾಳಿಸಿಕೊಳ್ಳುತ್ತಾ ನಿಂತ ಅವನು.   
        ತಟ್ಟನೆ ಕೆಳಗಡೆ ಏನೋ ಸದ್ದಾಗಿ ಮುಖವನ್ನ ತಿರುಗಿಸಿ ಕೆಳ ನೋಡಿದ
      ನೋಡಿದರೆ, ಮುಗ್ಧತೆಯೇ ತಾನೊಂದು ಆಕಾರವಾಗಿ ಹತ್ತುತ್ತಿರುವ ಅವನನ್ನೇ ತದೇಕ ಚಿತ್ತದಿಂದ ನೋಡುತ್ತಿರುವಂತೆ ಒಬ್ಬ ವ್ಯಕ್ತಿ ನಿಂತಿದ್ದ. ಅವನ ಕಣ್ಣುಗಳು ಅರಿಯದ ಏನೋ ಒಂದು ಭಾವವನ್ನ ಸೂಸುತ್ತಿರುವಂತಿತ್ತು!
          ಹತ್ತುತ್ತಿರುವ ಅವನಿಗೆ ಏನನ್ನಿಸಿತೋ, ತನ್ನ ಹಗ್ಗವನ್ನ, ಮೇಲಿನಿಂದೆಳೆದು, ತನಗೆ ಬಿಗಿದು, ಅವನಿಗೂ ಹತ್ತಿಬರಲನುಗುಣವಾಗುವಂತೆ ಕೆಳಗೆಸೆದ.
       ಕೆಳಗಿರುವ ವ್ಯಕ್ತಿಯ ಕೈ ಸೇರಿತೊಂದು ತುದಿ. ತಾನು ಅಲ್ಲಿರುವ ಕಲ್ಲನ್ನೇ ಬಾಚಿ- ತಬ್ಬಿಕೊಂಡು ಅವನ ಭಾರವನ್ನ ಎಳೆಯುವ ದೆಸೆಯಿಂದನಿಂತ.
ಹಾಗೇ ನಿಂತಿದ್ದ....
 ನಿಂತುಕೊಂಡೇ ಇದ್ದ.
     ಸದ್ದಿಲ್ಲ.
     ಭಾರವಿಲ್ಲ!
     ತಿರುಗಿ; ಕೆಳನೋಡಿದ.
    ಕೆಳನಿಂತವನ ವಾಸನೆಯೇ ಇಲ್ಲಾ!  
    ಮರವೊಂದೇ ನಿಂತಿತ್ತು- ಬಿಗಿಯಲ್ಪಟ್ಟ ಹಗ್ಗದತುದಿಯನ್ನ ಹೊಂದಲ್ಪಟ್ಟು; ಮನುಜನ ಅಸೂಯೆಗೆ ಸಾಕ್ಷಿಯಾಗಿ!!  


ಗುರುವಾರ, ಫೆಬ್ರವರಿ 23, 2012

ಕಥೆ: ಛನ್ನ


       

         ಕಾಲವೆಂಬ ಸಾಗರದಲ್ಲಿ, ವಿಧಿಯೆಂಬ ಅಲೆಯ ಹೊಡೆತಕ್ಕೆ ಸಿಲುಕಿ ನುಚ್ಚು ನೂರಾಗಿದ್ದವು ಕನಸುಗಳು. ಸೋಲಿನಿಂದ ಬೆವೆತ ಕೈ-ಕಾಲುಗಳು ನಡುಗುತಿದ್ದವು. ಕನಸುಗಳ ಕಾಣುವ ಕಣ್ಣುಗಳು; ಮುಚ್ಚಲೇ ಭಯಪಡುತಿದ್ದು, ಹಾಯಿಸಿದಲ್ಲೆಲ್ಲೂ ಹಸಿರಿಲ್ಲ. ಉಸಿರು ಆಗಾಗ್ಗೆ ಬಿಸಿಯುಸಿರನ್ನ ಹೊರಹಾಕುತಿದ್ದರಿಂದ ವಾತಾವರಣ ಬಲು ಬಿಸಿಯಾಗಿರುತಿದ್ದು, ಸುತ್ತಲ ಜನರ ಒಣದೃಷ್ಟಿಯ ಮುಖದ ದರ್ಶನವೇ ಮೊದಲ್ಗೊಳ್ಳುತಿತ್ತು. ನಾಲಿಗೆ ಬೇಲಿದಾಟುತಿತ್ತು. ’ನೀ ಭೂ ಭಾರ’ ವೆಂಬ ಹಗುರ ಮಾತನ್ನ ಮನ ಆಗಾಗ ತೊದಲುತಿತ್ತು. ಬದುಕುವುದು ದುಃಸಾಧ್ಯ ಎನಿಸಿತು.

         

         ದೂರದಲ್ಲಿ ಕುಳಿತ ಬೆಟ್ಟ ಕೈ ಬೀಸಿ ಕರೆಯಿತು. ಯಾರೋ ಎಂದೋ ನುಡಿದಂತಿತ್ತು. "ಆ ಬೆಟ್ಟದಲ್ಲೊಬ್ಬರು ಮಹಾಜ್ಙಾನಿಗಳು ವಾಸಿಸುತ್ತಿರುವರಂತೆ. ಅವರಿಗೆ ಗೊತ್ತಿಲ್ಲದೇ ಇರುವುದೇನೂ ಇಲ್ಲ"ಎಂದು. ಲೆಕ್ಕಾಚಾರ ಹಾಕಿದ. ’ ಜ್ಙಾನಿಗಳು ಸಿಕ್ಕರೆ ಸೋಲಿಗೆ ಪರಿಹಾರ. ಇಲ್ಲದಿದ್ದರೆ, ಅಲ್ಲಿಂದ ಒಂದೇ ಜಿಗಿತ ದೂರದೂರಿಗೆ. ಅಲ್ಲಿ ಕನಸಿಲ್ಲ, ಕಾಡುವ ಜನರಿಲ್ಲ, ನಿಲ್ಲದ ಸಮಯವಿಲ್ಲ’ ಎಂದು.
         ಕಾಲುಗಳು ಸರ-ಸರ ಅತ್ತ ನಡೆಯತೊಡಗಿತು. ಕರಿನೆರಳು ಬಿಡದೇ ಅವನನ್ನ ಹಿಂಬಾಲಿಸಿತು.
ಅವನು ಬುಡತಲುಪಿದ. ’ನನ್ನ ಮೆಟ್ಟಿನಿಂತವರಾರಿಲ್ಲ’ ಎನ್ನುತ್ತಾ, ಜಗಜ್ಜಟ್ಟಿಯಟ್ಟಿಯಂತೆ ಎದೆಯುಬ್ಬಿಸಿ ನಿಂತಿತ್ತು ಆ ಬೃಹದೆತ್ತರದ ಕಲ್ಲುಬಂಡೆ, ಮೇಲೆ ಹತ್ತುವ ಮೆಟ್ಟಿಲುಗಳಿಲ್ಲದೇ!!
        ಸುತ್ತಾ ಸುತ್ತು ಹಾಕಿದ. ಬಳ್ಳಿ, ಬೇರುಗಳ ಎಳೆದು, ಜಗ್ಗಿ ನೋಡಿದ. ’ಪಾಪಿ ಮುಟ್ಟಿದ್ದೆಲ್ಲಾ ಬುಡಸಡಿಲ’ ಎನ್ನುವಂತೆ, ಅವನ ಭಾರಕ್ಕೆ ಎಲ್ಲವೂ ಬುಡಬಿಟ್ಟು, ಮತ್ತೆ-ಮತ್ತೆ ನೆಲಸೇರಿದ. ಮರಗಳೆಲ್ಲಾ ಗಾಳಿಗೆ ಅಲ್ಲಾಡಿದ್ದು ನೋಡಿ, ತನ್ನ ಪರಿಹಾಸ್ಯಮಾಡಿದಂತನಿಸಿ, ತಲೆತಗ್ಗಿಸಿದ.
          ತಗ್ಗಿದ ದೃಷ್ಟಿಗೆ, ಯಾರೋ ಎಂದೋ ಬಿಸುಟಿದ, ತುಕ್ಕು ಹಿಡಿದ ಚಮ್ಮಟಿಗೆ, ಚಾಣಗಳು ಬಿದ್ದವು. ನಡುಗುವ ಕೈಗಳಿಂದಲೇ ಅವುಗಳನ್ನ ಎತ್ತಿ, ಎದ್ದುನಿಂತ. ಬೆಟ್ಟದ ತುದಿಯವರೆಗೆ ಒಮ್ಮೆ ಕಣ್ಣಾಯಿಸಿ, ಒಂದೋಂದೇ ಪೆಟ್ಟು ಕೊಡಲಾರಂಭಿಸಿದ.
            ಅಭ್ಯಾಸವಿಲ್ಲದ ಕೈಗಳು ಮೊದ-ಮೊದಲು ಕೈ-ಮೇಲೇ ಕುಟ್ಟಿಸಿ, ಅಸಾಧ್ಯ ನೋವನ್ನ ಕೊಡುತ್ತಿದ್ದವು. ಹಲ್ಲುಕಚ್ಚಿಕೊಂಡು ಎಲ್ಲವನ್ನೂ ಸಹಿಸುತ್ತಾ ಮುಂದುವರಿದ. ಕಳೆದಂತೆ ಪೆಟ್ಟುಗಳು ಸಲೀಸಾಗತೊಡಗಿದವು. ಒಡೆಯುವ ಸಾಧನವನ್ನ ಆಗಾಗ ಸಾಣೆಹಿಡಿದು ಹರಿತಗೊಳಿಸುತ್ತಾ ಏಕಾಗ್ರಚಿತ್ತದಿಂದ ಏಟಿನ ಮೇಲೆ ಏಟುಕೊಡುತ್ತಾ ಒಂದೊಂದೇ ಮೆಟ್ಟಿಲಮೇಲೆ ನಿಲ್ಲುತ್ತಾ ಬಂದ. ಎಂದೋ ಉಟ್ಟ ಬಟ್ಟೆ ಸಡಿಲವಾದವು. ಗೆಡ್ಡೆ-ಗೆಣಸು, ಕಾಡಣ್ಣುಗಳೇ ಉದರ ಸೇರಿದವು, ಹರಿಯುತ್ತಿರುವ ಬೆವರೇ; ಸ್ನಾನಮಾಡಿಸಿತು, ಕಾರ್ಗಲ್ಲನ್ನು ಮೆತ್ತಗಾಗಿಸುವಂತಿತ್ತು. ದಿನಕಳೆಯಿತು. ವಾರಾಂತ್ಯ, ಅಮವಾಸ್ಯೆ, ಅಯನ, ಯುಗಾದಿಗಳೂ ಕಳೆದು ಹೋದವು.
              ಆ ಒಂದುದಿನ ಚಂದ್ರನುದಯಿಸುವ ಸಮಯದಲ್ಲಿ ತುದಿ ಮುಟ್ಟಿದ. ಆವತ್ತು ಬೇಡಿದ, ಕಾಡಿದ, ಉರಿಸಿದ ನೋವುಗಳೆಲ್ಲವೂ, ಎಂದಿಗೋ; ಕೊಟ್ಟ ಏಟಿಗೆ ಪುಡಿ ಪುಡಿಯಾದ ಕಲ್ಲಿನ ಧೂಳಿನಂತೆ ಗಾಳಿಸೇರಿದ್ದವು. ನೆನಪಿನ ಮುಷ್ಠಿಗೂ ಅವು ಸಿಗುವಂತಿರಲಿಲ್ಲ. ಎದೆಯುಬ್ಬಿಸಿ ನಿಂತ ಬೆಟ್ಟ, ಈಗ ಮಂಡಿಯೂರಿದ ಸೇವಕನಂತೆ, ಅವನ ಪಾದದ ಕೆಳಗೆ ಕುಳಿತಂತಿತ್ತು.
          ಜ್ಙಾನಿಗಳ ನೆನಪಾಗಿ, ಅವರನ್ನು ಕಾಣುವ ಹಂಬಲದಿಂದ ಕಣ್ಣು ಸುತ್ತಲೂ ನೋಡಿತು. ಅಲ್ಲೇ ಹತ್ತಿರದ ಗುಹೆಯಿಂದ, ಹೊರಬರುತ್ತಿರುವ ಪ್ರಕಾಶ, ತನ್ನನ್ನೇ ಕೂಗಿದಂತನಿಸಿ, ಅತ್ತ ಸಾಗಿದ.
      ಗುಹೆಯೊಳಗೆ ಇಣುಕಿನೋಡುತ್ತಾ ಪ್ರವೇಶಿಸಿದಾಗ ಬೆಳಕಿನ ಪುಂಜವನ್ನೇ ಧಾರಿಯಾಗಿಸಿಕೊಂಡು, ನೆಲದಿಂದ ನಾಲ್ಕಡಿ ಮೇಲೆ, ಧ್ಯಾನದಲ್ಲಿ ಮಗ್ನರಾದ ಒಬ್ಬ ಯೋಗಿಯ ಅತ್ಯಾಶ್ಚರ್ಯದಲ್ಲಿ ಕಂಡು, ಕೈ-ಮುಗಿದು ಕುಳಿತ.

    ಮಾತನಾಡಿ ಎಷ್ಟೋದಿನಗಳಾಗಿ ಮಾತೇ ಮರೆತು ಹೋದಂತಿತ್ತು,  ಅವರ ಧ್ಯಾನದಿಂದ ತನ್ನತ್ತ ತಿರಿಗಿಸುವ ಪ್ರಯತ್ನವಾಗಿ ತೊದಲು-ತೊದಲಾಗಿ ಅವರನ್ನ ಕರೆದ.
               ಅವನ ಆಗಮನವನ್ನ ಮೊದಲೇ ನಿರೀಕ್ಷಿಸಿದಂತೆ, ಮುಖದಲ್ಲಿ ಮಂದಹಾಸವನ್ನೀಯುತ್ತಾ ಕಣ್ಣುಬಿಟ್ಟು, ಅವನನ್ನ ನೋಡಿದರು. ಅವನು ಅವರ ದೃಷ್ಟಿತಾಕುತ್ತಾಲೇ ರೋಮಾಂಚಿತನಾದಂತಾಗಿ, ಕಣ್ಣಲ್ಲಿ ನೀರುಸುರಿಸತೊಡಗಿದ.
             ಅವನ ಮನದಾಳದ ಮಾತನ್ನ ಅರಿತಂತಿರುವ ಮಾಹಾತ್ಮರು, ತಮ್ಮ ಕೈ ಪಕ್ಕಕ್ಕೆ ತಿರುಗಿಸಿ, ಗುಹೆಯ ಒಳಬಾಗಿಲನ್ನ ತೋರಿಸಿ, “ಹೀಗೆ ಸಾಗು, ನೀನು ಬಯಸಿದ್ದೆಲ್ಲಾ ಸಿಗುತ್ತದೆ” ಎಂದಷ್ಟೇ ಹೇಳಿ ಅಲ್ಲಿಂದ ಅಂತರ್ಧಾನರಾಗಿಬಿಟ್ಟರು!
       ಮನಸ್ಸು ಅವರ ಆ ಮಾತನ್ನಷ್ಟೇ ಕೇಳಿ, ಅವರು ಕೈಚಾಚಿ ತೋರಿದ ಆ ಕತ್ತಲ ಗುಹೆಯ ಬಾಯಿಯಂತಾಯಿತು!
           ಅವರ ಕೊನೆಯ ಮಾತಿನಂತೆ, ಅದರಲ್ಲೇ ತೆರಳುವ ನಿರ್ಧಾರ ಮಾಡಿ, ಆ ಕತ್ತಲನ್ನೇ ಪ್ರವೇಶಿಸಿದ. ಆ ಹೊತ್ತಿನ ತನಕವೂ ಜೊತೆಬಿಡದ ಅವನ ನೆರಳೂ ಆ ಕತ್ತಲಿಗೆ ಭಯಪಟ್ಟು ಸಂಘವನ್ನ ತೊರೆಯಿತು. ಒಂಟಿಯಾಗಿ ಅಡಿಯಿಡುತ್ತಾ ಮುಂದೆ-ಮುಂದೆ ಸಾಗಿದ. ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬ ಪರಿವೆಯಿಲ್ಲದೇನೆಯೇ ಅಡಿಯಿಡುತ್ತಿದ್ದ.
              ಹಾಗೇ ಸಾಗುತ್ತಿರಲಾಗಿ, ಕಾಲಿಗೆ ಸಿಕ್ಕ ಕಲ್ಲಿಗೆ ಎಡವಿ, ತಳಸೇರಿ, ತಲೆಸುತ್ತಿನಿಂದಲೋ, ಆದ ಆಯಾಸದಿಂದಲೋ ಅಲ್ಲಿಯೇ ಕಣ್ಣು ಮುಚ್ಚಿದ.


            ಇಬ್ಬನಿ ಬೆರೆತ ಗಾಳಿ ಮಂದವಾಗಿ ಬೀಸಿ, ಅವನನ್ನ ತಟ್ಟಿ ಎಚ್ಚರಿಸಿತು. ಆಗತಾನೇ ಕತ್ತಲ ಲೋಕದಿಂದ ಜಾರಿದ ಅವನ ಕಣ್ಣುಗಳಿಗೆ; ನೋಡಲು ನೆರವಾಗುವನಂತಿರುವ ಸೂರ್ಯನೂ ರಂಗಾಗಿ ಅಲ್ಲಿ ಉದಿತನಾಗುತ್ತಿದ್ದ. ಸುವರ್ಣದ ಕಾಂತಿಗೆ ತಿರುಗಿದ ಮೋಡಗಳು ಗುಂಪು-ಗುಂಪಾಗಿ ಒಂದುಕಡೆ ಸೇರಿದ್ದವು ಅಲ್ಲಿ.  ಕಣ್ಣು ಚಾಚಿದಲ್ಲೆಲ್ಲಾ ಹಸಿರು ಹುಲ್ಲು-ತೋಟಗಳು ಅವನ ಸ್ವಾಗತಕ್ಕೆ ಸಜ್ಜಾದಂತೆ ಬೆಳೆದುನಿಂತಿದ್ದವು. ಅವುಗಳಲ್ಲಿ ಅರಳಿದ ಹೂಗಳು ತಮ್ಮ ಕಂಪನ್ನ ಹೊರಹಾಕಿ ಅವನನ್ನ ಮತ್ತನನ್ನಾಗಿಸುತ್ತಿದ್ದವು.   ಅವುಗಳ ನಡು-ನಡುವೆ ಬಿಳಿ, ಹಳದಿ, ಕೆಂಪು, ತಿಳಿಹಸಿರು ಹೀಗೆ ನಾ ನಾ ವರ್ಣಗಳಿಂದ ಕೂಡಿದ ಪಕ್ಷಿಗಳೆಲ್ಲವೂ, ಸಪ್ತಸ್ವರಗಳನ್ನೆಲ್ಲಾ ಹಾಡುತ್ತಾ, ಹಾರುಡುತ್ತಾ, ಅವನ ಕಿವಿಗಳಿಗೆ ಮಂದ್ರಸ್ಥಾಯಿಯಲ್ಲಿ ಸಂಗೀತದ ಆಲಾಪನೆಯನ್ನ ಕೊಡುತ್ತಿದ್ದವು. ಅಲ್ಲಿಯೇ ಸನಿಹದಲ್ಲೇ ಎಲ್ಲೋ ಝುಳು-ಝುಳು ನಾದದಿಂದ ನೀರು ಹರಿಯುತ್ತಿರುವುದು ಅವನ ಕಿವಿಗೆ ತಲುಪಿ, “ತಾನು ಯಾವ ಲೋಕಕ್ಕೆ ಬಂದೆನಪ್ಪಾ! ಸಶರೀರನಾಗಿ ಸ್ವರ್ಗಕ್ಕೇ ಬಂದೆನೇ? ಮಹಾತ್ಮರ ಮಾತು ಎಂದಿಗೂ ಸುಳ್ಳಾಗದು. ನನಗೆ ಇಲ್ಲಿ ಎಲ್ಲವೂ ಸಿಕ್ಕೇ ಸಿಗುತ್ತದೆ” ಎಂದು ಯೋಚಿಸುತ್ತಾ, ಮನದಲ್ಲೇ ಮಹಾತ್ಮರಿಗೆ ಧನ್ಯವಾದಗಳನ್ನರ್ಪಿಸುತ್ತಾ, ಚಕಿತನಾಗಿ ಸುತ್ತಲೂ ನೋಡುತ್ತಾ, ಯಾರೋ ಮಾತನಾಡುತ್ತಿರುವುದು ಕಿವಿಗೆ ಬಿದ್ದಂತಾಗಿ, ಅವರ ಹತ್ತಿರ ಇದು ಯಾವಲೋಕವೆಂದು ಕೇಳಿ, ತಿಳಿದುಕೊಳ್ಳಲೋಸುಗ ಅತ್ತತೆರಳಿದಾಗ,
            “ಓ..ಹೋ.... ಈ ಬೆಟ್ಟಕ್ಕೆ ಯಾರೋ ಮೆಟ್ಟಿಲು ಕೆತ್ತಿಬಿಟ್ಟಿದ್ದಾರೆ!! ಇದನ್ನ ಹತ್ಲೇ ಬೇಕು ಅನ್ನೋ ಕನಸು ಈಗ ನನಸಾಗ್ತಿದೆ ನೋಡು.......!!” ಎನ್ನುವ ಸಂತೋಷದ ಕೂಗಿನೊಂದಿಗೆ, ಎರಡು-ಮೂರು ಜನ, ಅವನು ಕೆತ್ತಿದ ಆ ಮೆಟ್ಟಿಲುಗಳ, ಮೊದಲನೆಯ ಮೆಟ್ಟಿಲಿನ ಮೇಲೆ ಪಾದವಿರಿಸುತ್ತಿರುವುದು ಅವನ ಕಣ್ಣುಗಳಿಗೆ ಬಿತ್ತು.!!!  


ಮುಗಿಯಿತು..






ಚಿತ್ರ ಕೃಪೆ: ದಿನೇಶ ಹೆಗಡೆ

ಶನಿವಾರ, ಜನವರಿ 14, 2012

ಕಥೆ: "ಚೈತನ್ಯ"



      ಪ್ರತಿಯೊಂದ್ರ ಪ್ರಾರಂಭ ಗೆಲ್ಸೇ ಬಿಡ್ತು ಅಂತೇನಿಲ್ಲೆ. ಗೆಲ್ಸಿ, ಹುಚ್ಚೆಬ್ಸಿದ ಪ್ರಾರಂಭ ಕೊನೆವರ್ಗೂ ಅದ್ನೇ ಮುಂದ್ವರಸ್ಕಂಡು ಬರ್ತು ಹೇಳ್ವಂಗೇನೂಇಲ್ಲೆ. ಗೆದ್ದಂವ ಯಾವತ್ತೂ ಗೆಲ್ತನೇ ಇರ್ತ ಅನ್ನದಪವಾದ. ಸೋಲ್ತಾ ಇಪ್ಪಂವ ಸೋಲ್ತನೇ ಇರ್ತ, ಇದು ಸತ್ಯಕ್ದೂರ. ಸೋತಂವ ಎಲ್ಲಿವರ್ಗೆ ತನ್ನ ಪ್ರಯತ್ನಬಿಡದೇ ಸಾಗ್ತಿರ್ತ್ನ, ಅವಂಗೆ ಗೆಲುವು ಒಲಿಯದ್ದೇನಿರ್ತಿಲ್ಲೆ! ಹಂಗೆಸಿಕ್ಕ ಗೆಲುವು ಸುಖವನ್ನೇ, ಕೊಡ್ತೇಹೊರ್ತು, ಸೋಲಿನ ನೋವನ್ನೆಂತೂ ಅಲ್ಲ. ಒಂದ್ವೇಳೆ ಸೋತ್ರೂ, ಅದು ಮತ್ತೆಮಾಡ ಪ್ರಯತ್ನದ ದಾರಿಯನ್ನೇ ಸೂಚಿಸ್ತು. ಸುಖದ ದಾರೀಲ್ಲೆ ಸಾಗೋ ಹಂಗೆ ಮಾಡ್ತು. ಕೇವಲ ಖುಷಿಕಡೆಗೆ......
           **************************************************************
    
     ರವಿ ತನ್ನ ಕಿರಣದ ರೇಕುಗಳಂಗೇ ಇದ್ದ ಕೈಗಳನ್ನ ಉದ್ದುದ್ದ ಚಾಚ್ತಾ, ಭೂತಾಯಿಯ ಮಕ್ಳಾದ ಹಕ್ಕಿಗಳ್ನೆಲ್ಲಾ ಎಬ್ಬಿಸ್ತಾ ಅವಗಷ್ಟೇ  ಮೇಲೇರ್ತಾ ಇದ್ದಿದ್ದ. ಎದ್ದಹಕ್ಕಿಗಳ ಮೃದು ಕಂಠದಿಂದ ಬರ್ತಾಇರ ಸ್ವರಗಳು, ಹಿತ್ಲಿನ ಮರವನ್ನ ಆಸ್ರೆಯಾಗಿಟ್ಕಂಡು ಬೆಳ್ಕಂಡಿರ ಹಸಿರುರಾಶಿಯ ಬಳ್ಳಿಯ ಬಾಗಿದತುದಿಗೆ ಗೊಂಚ-ಗೊಂಚಲಾಗಿ ಬೆಳೆದ ಮಲ್ಲಿಗೆಗಳನ್ನೇ ತಲೆ-ದೂಗುವಂಗೆ ಮಾಡ್ತಿತ್ತು. ಇದ್ರಿಂದ, ಬಿರಿದ ಮಲ್ಲಿಗೆಹೂವಿನ ಪರಿಮಳ ಇನ್ನೂ ಹೊರಸೂಸಿ, ಬೀಸ್ತಾಇರ ಮಂದಗಾಳಿಗೆ ಮುದನೀಡಿ, ಮಧುನ ಹೀರ ಕೆಲಸ್ದಲ್ಲಿ ತೊಡಗಿರ ದುಂಭಿಗಳ ಹತ್ರಿಕ್ಕೆ ಹೊತ್ತುಯ್ವಂಗೆ ಮಾಡ್ತಿತ್ತು. ದುಂಭಿಗಳಾದರೋ ದೇವ-ದೇವಿಯರ ಪೂಜೆಗೆ, ಆರಂಭದಲ್ಲಿ ಊದುವ ಶಂಖನಾದಕ್ಕೆ ಸಮನಾಗಿ, ಝೇಂಕರಿಸ್ತಾ ಹಾರಿ ಬರ್ತಾಇದ್ದಿದ್ವು. ದೇವಾನು-ದೇವತೇಗಳೇ ಅಲ್ಲಿಗೆಬಂದು, ಕೊಡತಕ್ಕ ಪೂಜೆನ ಸ್ವೀಕರಿಸಲೆ ಸಾಲಾಗಿ ನಿಂತಂತ ವಾತಾವರಣ ಮಲೆನಾಡಿನ  ಮದ್ಯೆ ಇದ್ದ, ಪುಟ್ಟ ಊರ, ನನ್ನ ಮನೆಯ ಹಿತ್ಲಲ್ಲಿತ್ತು.
      
     ನಾನು ಆ ಸೌಂದರ್ಯ ರಾಶಿಯ ನಡುವೆ ಹೂವನ್ನೆಲ್ಲಾ ಕಿತ್ತು, ಹಚ್ಕೆಯೊಳ್ಗೆ ತುಂಬಿಸ್ತಿದ್ದೆ. ತುಟಿಯಂಚಿನಲ್ಲಿ ಮಂದಹಾಸವಿತ್ತು. ಮನಸ್ಸು ಆಹ್ಲಾದದಿಂದಿತ್ತು. ದೇವರ ಪಾದ-ಶಿರಗಳಿಗೆ ಸೇರುವ ಮುಂದಾಲೋಚನೆಯಿಂದಿರುವ ಹೂಗಳು, ಸಂತೋಷದಿಂದಲೇ ಕುಕ್ಕೆಯನ್ನ ತುಂಬ್ಕೊಳ್ತಿತ್ತು. ತುಂಬಿದ ಚೊಬ್ಬೆಯೂ, ತನ್ನ ಆಯಾಸವನ್ನ ನನ್ಕೈಗೆ ನೀಡ್ತಾಇಲ್ಯಾಗಿತ್ತು.
     
     ಹೂ-ಕೊಯ್ಯಲು ಬಾಗಿ, ನನ್ನ ಕೈತಾಗಿ ಅಲ್ಲಾಡಿದ, ದಾಸವಾಳ ಗಿಡದ ಎಲೆಮೇಲಿಂದ  ಹಾರಿ, ಇನ್ನೊಂದು ಗಿಡಸೇರಿದ, ಹಸಿರು ಎಲೆಶೆಟ್ಟಿಯು, ನನ್ನ ಗಮನನ ಆ ಕಡೆ ಸೆಳಿವಂಗೆಮಾಡ್ತು. ಸೂಕ್ಷ್ಮ ಗಮನಿಸ್ದಿ. ಎಲೆನಡುವೆ ತಾನು  ಇದ್ದಿದ್ದನ್ನ ಅಷ್ಟುಸಲೀಸಾಗಿ ಬಿಟ್ಟುಕೊಡ್ದ ಹಂಗೆ, ಅದ್ರ ಮೈ-ಬಣ್ಣ ಹಚ್ಚ-ಹಸಿರಾಗಿತ್ತು. ಗುಂಡ-ಗುಂಡಗೇ ಆಡಿಸದೇ ಇದ್ದ ಅದರ ಕಣ್ಣುಗಳು ನನ್ನೇಕೆಕ್ಕರಿಸಿ ನೋಡ್ತಿದ್ದಾಂಗೆ ಭಾಸಇತ್ತು. ಮೀಸೆರಡೂ ಅಪಾಯ ಯಾವದಿಕ್ನಿಂದ ಅಪ್ಪಳ್ಸಿ ಬರ್ಲಕ್ಕು ಅನ್ನದನ್ನ ತಿಳಿಸ ಅಂಟೇಣಾದಂಗೆ ಆಕಡೆ-ಈಕಡೆ ಅಲ್ಲಾಡ್ತಾ, ಮುಂದೆ ಚಾಚ್ಕ್ಯಂಡಿರ ಕಾಲೆರಡೂ, ಬಪ್ಪ ಅಪಾಯಕ್ಕೆ ಮುನ್ಸೂಚನೆಯಾಗಿ, ಅಲ್ಲಿಂದ ನೆಗ್ಯಲೆ ಸನ್ನದ್ಧಾಂಗಿರ್ವಂಗಿತ್ತು. ಆವಾಗ್ತಾನೇ ಸಾವ್ಕಾಶ ಮುಚ್ತಾಇರ ಅದ್ರ ರೆಕ್ಕೆ ನಡುವೆ, ಹೊಟ್ಟೆ ಪ್ರದೇಶ್ದಲ್ಲಿ ಆತುಕೊಂಡಿದ್ದ ಪುಟ್ಟಮರಿಯೂ ಕಂಡ್ತು. ತನ್ನ ಪಾಲಕನ ಹೊಟ್ಟೆಯನ್ನ ಗಟ್ಟಿ ಹಿಡ್ಕಂಡು ಕುತ್ಗಂಡಿತ್ತು ಅದು. ಪಾಲಕನ ಕೈಯಂತಿರುವ ಕಾಲುಗಳೆರಡೂ ಅವಗವಾಗ ಅದ್ರ ಯೋಗಕ್ಷೇಮವನ್ನ ವಿಚಾರಿಸ್ತಿದ್ದಂಗೆ, ಸವರಿ ಹೋಗ್ತಿತ್ತು. ತನ್ನಕಂದಮ್ಮನಿಗೆ ಯಾವರೀತಿಯೂ ಅಪಾಯ ಬಪ್ಲಾಗಹೇಳ ಎಚ್ಚರಿಕೆ  ಹುಳಕ್ಕಿತ್ತು ಅನಸ್ತು. ಇದನ್ನ ನೊಡ್ದಾಗ, ನನ್ನ ಬಾಳಿನಲ್ಲಿ ಹತ್ತುವರ್ಷದ ಹಿಂದೆ ನಡೆದ ಘಟನೆನ ಮತ್ತೆ  ನೆನೆಯ್ವಂಗೆಮಾಡ್ತು.
 
     "ವಿದ್ಯೆ ಹೇಳದು; ಚಿಂತನೆಗೆ ಹಚ್ಚಿಸುವಂಗೇ ಇರವೇಹೊರ್ತು, ಚಿಂತೆಗೆ ನೂಕಲಾಗ. ನೀನು ಏಂತಾಕಲ್ತಿದ್ದೆ ಹೇಳದು ಮುಖ್ಯಅಲ್ಲ, ಕಲ್ತಿದ್ದನ್ನ ಹೆಂಗೆ ಬಳಸ್ಕತ್ತೆ, ಬಳಸ್ಕತ್ತಾ ಇದ್ದೆ ಎನ್ನದು. ನಾಳೆ ಸಾಯಂಕಾಲ್ದ ಬಸ್ಸಿಗೆ ನಿನ್ನ ಮುಂಬೈಗೆ ಕಳಸ್ಕೊಡ್ತಾ ಇದ್ದಿ. ಎಲ್ಲಾ ತಯಾರ್ಮಾಡ್ಕ್ಯ."
 
     ಆವಾಗಷ್ಟೇ ಬಿ.. ಸೆಕೆಂಡ್ಕ್ಲಾಸ್ ರಿಸಲ್ಟ್ ಸಿಕ್ಕಿ, ತಲೆ ಮೇಲೆ ಕೈ-ಹೊತ್ಗಂಡು ಕುತ್ಗಂಡಿದ್ದ ನಂಗೆ, ಅಪ್ಪಯ್ಯನ ಈ ಮಾತ್ನಿಂದ ದಿಗಿಲಾತು. ಅವ್ನ ಕಣ್ಣನ್ನೇ ನೋಡ್ದಿ. ಅಲ್ಲಿ ಸಿಟ್ಟಿನ ಛಾಯೆಯೇನೂ ಇದ್ದಂಗೆ ಕಂಡುಬಂಜಿಲ್ಲೆ , ನೋವಾಗ್ಲಿ ಕಂಡುಬಂಜಿಲ್ಲೆ. "ಅಪ್ಪಾ, ನಾ ಸೆಕೆಂಡ್ ಕ್ಲಾಸ್ ಪಾ.....!" ನನ್ನ ಮಾತ್ನರ್ಧಕ್ಕೆ ನಿಲ್ಸಿ, "ನಂಗೆ ಗೊತ್ತಿದ್ದು" ಅಂತಷ್ಟೇ ಹೇಳಿ, ಮುಂದೆಂತೂ ಹೇಳಅಗತ್ಯ ಇಲ್ಲೆ, ಹೇಳ ಅರ್ಥ ಕೊಟ್ಟು, ಅಲ್ಲಿಂದ ಹೊರಹೋಗ್ಬಿಟ. ಅಪ್ಪಯ್ಯ ಯಾವಾಗ್ಲೂ ಹಂಗೇಯಾ. ಹೆಚ್ಚುಮಾತು ನನ್ನ ಹತ್ರ ಆಡ್ದಂವಲ್ಲ. ನನ್ನ ಹತ್ರನೇ ಅಂತೇನು ಅಲ್ಲಾ! ಯಾರತ್ರಾನೂ ಅವಶ್ಯಕತೆಗೆ ಮೀರಿ ಮಾತಾಡ್ದಂವಲ್ಲ. ಊರಮಂದಿ ಅಪ್ಪಯ್ಯಂಗೆ ವಿಶೇಷ ಮರ್ಯಾದೆ ಕೊಡ್ತ. ’ಬುದ್ಧಿವಂತಪಟ್ಟನೂ ನನ್ನಪ್ಪಂಗಿದ್ದು. ಊರ್ನಲ್ಲಿ ಏನೇ ತಂಟೆ-ತಕ್ರಾರಾದ್ರೂ, ಅದ್ಕೆ ಅಪ್ಪಂದು ಏನ್  ನ್ಯಾಯವೋ ಅದೇ ನ್ಯಾಯ. ಅದನ್ನ ಮೀರವೂ ಯಾರೂ ಇಲ್ಲೆ
      
     ನಾನು ಮಾತ್ರಾ ಇಪ್ಪತ್ತೊಂದು ದಾಟ್ತಿದ್ರೂ, ಸಣ್ಣವಂಗೇ ಇದ್ದೆ. ಅಪ್ಪಂಗೆ ತಕ್ಕ ಮಗನಲ್ಲ. ’ಹೆಸ್ರು ಚೈತನ್ಯ, ಆದ್ರೂ ಬುದ್ಢಿ ಮಾತ್ರಾ ಮಂದ!’ ಅಂತೇಳಿ ಹಂಗ್ಸ ಮಾತುಗಳು ನನ್ಕಿವಿಗೆ ಬಂದು ಬೀಳ್ತಿತ್ತು. ನಾ-ಸಣ್ಣಕಿದ್ದಾಗ, ಆಯಿ ತನ್ನ ಮಡ್ಳಲ್ಲಿ ತಲೆಯಿಟ್ಟು ಮಲಗ್ಸ್ಕೊಂಡು ಹೇಳ, ನಾನು ಹುಟ್ದಾಗಿನ ಕಥೆ; ’ನೀ ಹುಟ್ದಾಗ, ನಿನ್ ತಲೆ ನೇವರ್ಸಿ, ಅಪ್ಪನೇ ಈ ಹೆಸ್ರು ಇಟ್ಟಿದ್ದು, ಕೇಳಿ ತುಂಬಾ ಖುಷಿಯಾಗ್ತು" ಅಂತೇಳಮಾತ್ನ ಕೇಳಿ ಏನೋ ಒಂತರಾ ರೋಮಾಂಚನ ಆಗ್ತಿತ್ತು. ’ಹೋಗಿ ದೇವ್ರತ್ರ ಕೇಳ್ಕ್ಯ!, ನಂಗೂ ಗನಾಬುದ್ಢಿ ಕೊಡುಅಂತೇಳಿ, ಹೇಳ್ತಿಪ್ಪ ಮಾತು ಎಂತುಹೇಳೇ  ಅರ್ಥಅಗ್ತಿತ್ತಿರ್ಲಿಲ್ಲೆ. ಆದ್ರೂ ಅದ್ನಮಾತ್ರಾ ತಪ್ದೇ ಕೇಳ್ಕ್ಯತ್ತಾ ಇದ್ದಿದ್ದಿ, ”ನಂಗೂ ಬುದ್ಧಿಬರ್ವಂಗೇ ಮಾಡುಕೇಳ್ವಂತ ಮಾತು! ಈವತ್ತಿಗೂ ನಂಗದೇ ದೊಡ್ಸಮಸ್ಯೆ. ಎಲ್ರೂ ಹಂಗೇ ಹೇಳ್ತ. ’ನಾನು ಬುದ್ಧಿವಂತ ಆಗಿರಕಾಗಿತ್ತುಹೇಳಿ, ಆದ್ರೆ ಯಾರೂ ಹೇಳಿಕೊಟ್ಟಿದ್ವಿಲ್ಲೆ, ಬುದ್ಧಿವಂತ ಹೆಂಗೆ ಆಪ್ದು ಹೇಳಿ! ಯಾರತ್ರಾನೂ ಹೋಗಿ ಕೇಳ ಧೈರ್ಯನೂ ನಂಗಿಲ್ಲೆ. ದೇವ್ರಹತ್ರ ಬೇಡದನ್ನ ಮಾತ್ರಾ, ಆಯಿ ಹೇಳ್ಕೊಟ್ಟಿದ್ದು, ಅಷ್ಟೇ!
   
    
       ’ನೀನು ಕಾಮರ್ಸ್ಲಿ ಪಾಸ್ ಆಜಿಲ್ಯಡ, ಉಳ್ದ ಪರೀಕ್ಷೇನ ಹೆಂಗೋ ತಕ್ಕಮಟ್ಟಿಗೆ ಮಾಡಿದ್ರಿಂದ ಅದ್ನೂಪಾಸ್ ಮಾಡಿದ್ವಡ!’ ಅಂತೇಳ ಸಹಪಾಠಿ ಮಾತು, ನನ್ನ ಪದೇ-ಪದೇ ಚುಚ್ಚುವಂಗೆ ಮಾಡ್ತಿತ್ತು. ’ಇನ್ನು ನಾ-ಮುಂಬೈಗೆ ಹೋಗಿ ಎಂತಾತಾನೇ ಮಾಡ್ಬಲ್ಲೆ?’  ಅಂತೇಳದೇ ನಂಗೀಗ ದೊಡ್ದ ಸಮಸ್ಯೆಯಾಗಿ, ಭೂತದಂಗೆಯಾ ಕಾಡ್ತಾಇತ್ತು.
ರಾತ್ರಿ ಊಟಕ್ಕೆ ಕುತ್ಗಂಡಾಗ, ಆಯಿ ಅಪ್ಪಯ್ಯನತ್ರೆ, "ಅವಂಗೆ ಇಲ್ಲೇಎಲ್ಲಾದ್ರೂ ಕೆಲ್ಸ ನೋಡ್ಳಾಗಿತ್ತಿಲ್ಯಾ?, ಅವ್ನ್ವಿಷ್ಯ ನಿಮ್ಗೇ ಗೊತ್ತಿಲ್ಯಾ? ಸಣ್ಣಿದ್ದಾಂಗಿಂದ ನಮ್ಮನ್ನ ಬಿಟ್ಟಿದ್ದಿಲ್ಲೆ. ಈಗ ಆತುದಿಗೆ ಕಳ್ಸವಶ್ಯಕತೆ ಆದ್ರೂ ಎಂತಾ ಇದ್ದು? ನಮಗಾದ್ರೂ ಎಂತಾಕಮ್ಮಿ ಇದ್ದು? ಇರಂವ ಒಬ್ಬವ್ನೇ ಮಗಾಅಲ್ದಾ?" ಅಂತೇಳ್ತಾ,”ತನ್ನಲಿರ ಕರುಳಿನ ಬಳ್ಳಿನ ದೂರಕ್ಕೆ ಕಳ್ಸವಲಿ,’ ಅಂತೇಳ ನೋವ್ನೇ ನುಂಕೊಳ್ತಾ ಹೇಳ್ಚು. ಅಪ್ಪಯ್ಯಾ ಆ ಮಾತಿಗೂ ಎಂತೊಂದೂ ಮಾತ್ನೂಆಡ್ದೇ. ಸುಮ್ನೇ ಊಟಮುಗ್ಸಿ, ಎದ್ದೋಗ್ಬಿಟ. ನಾನ್ಮಾತ್ರಾ ಹಸಿವೆಹೊಟ್ಟೆಗೆ ಅನ್ನನ್ನೂ ಹಾಕ್ದೇ ಇಪ್ಪಸ್ಥಿತಿಯಿಂದ ಎದ್ಬಿಟಿ.
   
     ಆ ರಾತ್ರಿನೂ ನಿದ್ದೆಮಾಡ ಸ್ಥಿತಿನೂ ನಂಗಿಲ್ಯಾಗಿತ್ತು. ಅಪ್ಪಯ್ಯಾ ಹೇಳಿದ್ದಿಷ್ಟೇ," ’ನನ್ನ ಮುಂಬೈಗೆ ಕಳಸ್ತಾ ಇದ್ದಿಅಂತೇಳಿ, ಅಲ್ಲಿಹೋಗಿ ಏನು ಮಾಡವು ಅಂತನೂ ಹೇಳಿದ್ನಿಲ್ಲೆ! ಗೊತ್ತಿಲ್ದೇ ಇರ ಊರು, ಜನ, ಭಾಷೆ. ಎಂತಾ ಮಾಡದು?" ಅನ್ನುವ ನೂರಾರು ಯೋಚ್ನೆ ನನ್ನ ಮನಸ್ನ ಕಿತ್ತುತಿನ್ತಿತ್ತು. ಸುಮ್ಮನೇ ಹೊರಳ್ತಾ ಬೆಳಗು ಮಾಡಿದಿ.
ಆ ದಿನ ಪೂರ್ತಿ, ಹೋಪ್ಲೆ ಏರ್ಪಾಡು ಮಾಡಲೇ ಕಳೆದೋತು. ಸಂಜೆಯಾಗೇ ಬಿಡ್ತು. ಅಪ್ಪಯ್ಯಾ ನನ್ನ ಬಸ್ ಹತ್ಸಲೆ ಬರಂವ ಇದ್ದಿದ್ದ. ನಾ ದೇವ್ರಿಗೆ ನಮಸ್ಕಾರ ಮಾಡಿ, ಆಯಿಗೂ ನಮಸ್ಕಾರ ಮಾಡದಿ. ಒಪ್ದೇ ಇರ ಮನಸ್ನಿಂದ,ಆಯಿ ನನ್ನ ಕಳುಹಿಸಿ ಕೊಡ್ತಾ ಇದ್ದು ಅನ್ನದು ನಂಗೆ, ಇನ್ನೇನು ಜಾರಲೆ ತಯಾರಿದ್ದ  ಅವಳ ಕಣ್ಣೀರೇ ಸಾರಿ-ಸಾರಿ ಹೇಳ್ತಾ ಇತ್ತು. ಅಪ್ಪಯ್ಯಂಗೂ ನಮಸ್ಕಾರ ಮಾಡ ಮನಸ್ಸಿದ್ರೂ, ಮಾಡ ಧೈರ್ಯಸಾಲಿದ್ದಿಲ್ಲೆ. ಊರು ತಣ್ಣಗೆ ನನ್ನ ಬೀಳ್ಕೊಡ್ತು.
      
     ಅಪ್ಪ ಮೌನವಾಗೇ ಸ್ಕೂಟರ್ ನಡಸ್ತಾ ಇದ್ದಿದ್ದ. ನಾನೂ ಅಷ್ಟೇ ಸುಮ್ಮಂಗೇ ಕುತ್ಗಂಡಿದ್ದೆ. ದಾರಿಮಧ್ಯದಲ್ಲಿ ಗಾಡಿನ ನಿಲ್ಲಸ್ದಾಅಂವ ಇಳಿಯ ಮುನ್ಸೂಚನೆಯನ್ನ ನೋಡಿ, ನಾನೂ ಇಳ್ದೆ. ಗಾಡೀನ್ನ ಸ್ಟೇಂಡ್ ಹಾಕಿ, ನನ್ನ ಹತ್ರ ಬಂದು ಗಟ್ಟಿಯಾಗಿ  ತಬ್ಕ್ಯಂಡ್ಬಿಟ್ಟ. ನಂಗೆ ಆಶ್ಚರ್ಯನೂ, ಮತ್ತೆ ಹೆದರಿಕೆನೂ ಆಗೋತು. ನನ್ನ ಹೆಗಲು ತಂಪಾಗ್ತಾ ಇರದು ಅನುಭವಕ್ಬಂದು, ಅಪ್ಪಯ್ಯ  ಅಳ್ತಾಇದ್ದ ಹೇಳದು ಗೊತ್ತಾತು. ಗಟ್ಟಿಮನಸ್ಸಿನ ಅಪ್ಪಾ ಹೀಂಗೆ ಕರಗ್ತಾ ಇರದ್ನ ನೋಡಿ ನಂಗೆ, ಎಂತಾ ಮಾಡಲೂ ತೋಚ್ದೇ ಹಂಗೇ ಸುಮ್ನೇ ನಿಂತಿದ್ದೆ. ಅವಂಗೇ ಅವ್ನೇ ಸಮಾಧಾನ ಮಾಡ್ಕ್ಯಂಡ ಅನಸ್ತು, ನನ್ನ ಹೆಗ್ಲಮೇಲೆ ಕೈ-ಹಾಕಿ, ಪಾದದಿಂದ ಶಿರದವರೆಗೆ ನನ್ನ ನೋಡಿ, ’ನಿನ್ನಂತ ಮಗನ್ನ ಪಡಿಯಲೆ ನಾನೆಷ್ಟು ಜನ್ಮದ್ಪುಣ್ಯ ಮಾಡಿದ್ನೇನೋ!’ ಅಂತೇಳ್ದ. ನಂಗೆ ಒಂದ್ಸುತ್ತು ಆಶ್ಚರ್ಯದ ಮೇಲೆ ಆಶ್ಚರ್ಯ.”ಊರಿನವೆಲ್ಲಾ ಪೆದ್ದು, ಪೆದ್ದು ಎಂದು ಹಂಗಿಸ್ತಾ ಇರಕಿರೆ.ಆಯಿ ಜನ್ಮ-ಜನ್ಮದ ಕರ್ಮಗಳ್ನ ನೆನೆನ್ಸಿ ಕೊರಗ್ತಿರಕಿರೆ, ಅಪ್ಪಯ್ಯಾ ಮಾತ್ರಾ ಪುಣ್ಯ ಅಂತೇಳ್ತಾ ಇದ್ನಲಿ! ಇವಂಗೆಂತಾತು ಈಗ?’ ಅಂದ್ಕಳ್ತಾ ಅವನ್ನೇ ನೋಡ್ದೆ.
   
     ಮತ್ತೆ ಸ್ವಲ್ಪ ನಗೆಯಾಡಿ ಹೇಳಲೆ ಶುರುಮಾಡ್ದ, "ನನ್ನ ರೀತಿಂದ ನಿಂಗೆ ಆಶ್ಚರ್ಯ ಆಗಿರ್ತು. ಯಾವತ್ತೂ ಹೆಚ್ಚುಮಾತ್ನಾಡದಂವ, ಇವತ್ತೆಂತಕ್ಕೆ ಹಿಂಗಾಡ್ತಾ ಇದ್ದ ಅಂತೇಳಿ!?, ಯಾವತ್ತೂ ಪ್ರೀತೀಂದ ಮಾತ್ನಾಡ್ಸದೇ ಇದ್ದಂವ, ಇವತ್ತೆಂತಕ್ಕೆ ತಬ್ಕೊಂಡಾಂತೇಳಿ!? ಗಂಭೀರ ಮುಖಭಾವದ ಅಪ್ಪಾ ಇವತ್ತೆಂತಕ್ಕೆ ಅಳ್ತಾಇದ್ದಾಂತೇಳಿ!?  ಊರಲ್ಲಲ್ಲೆಲ್ಲಾ ನೀನು ’ನನ್ಮಗನಾಗಿ ಹುಟ್ಟಿ ಬರಕಾಗಿತ್ತಿಲ್ಲೆಅಂತೇಳಿ, ನಿನ್ಬಗ್ಗೆ ಸಲ್ಲದ ಮಾತಾಡ್ತಾ ಇರಕಿರೆ, ಈಗೆಂತಕ್ಕೆ ಪುಣ್ಯದ ಮಾತ್ನಾಡ್ತಾ ಇದ್ದ ಅಂತೇಳಿ!? ಮಗನೇ, ನಾನು ಯಾವತ್ತೂ, ಯಾರತ್ರಾನೂ ನನ್ಮನಸ್ನ ಬಿಚ್ಚಿಟ್ಟಿದ್ದಿಲ್ಲೆ. ಎಲ್ರೂ ಒಂದೊಂದು ಮುಖವಾಡನ ಧರಿಸಿ ನಿಂತ್ಗಂಡಿದ್ದ. ನನ್ನ ಗಂಭೀರತೆನೂ ಒಂದು ಮುಖವಾಡನೇ! ನಿನ್ನ ಪೆದ್ದುತನದ ಮುಖವಾಡದಂಗೇ ಇರ ನನ್ನೊಂದು!
      ನಂಗೆ ಗೊತ್ತಿದ್ದು, ನೀನು ಪೆದ್ದ ಅಲ್ಲಹೇಳಿ. ನಾನು ನಿನ್ನ ಪ್ರಕೃತಿಯ ಮಡ್ಳಲ್ಲಿ ಒಂದಾಗಿ, ಮೈ-ಮರೆತಿದ್ನ ಗಮನ್ಸಿದ್ದಿ. ದೇವರ ಪೂಜೆ ಸಮಯ್ದಲ್ಲಿ,  ಧ್ಯಾನದಲ್ಲಿ ತನ್ಮಯಆಗಿರದನ್ನ ಗಮನ್ಸಿದ್ದಿ. ಆಯಿ ಮಡ್ಳಲ್ಲಿ ಮಲ್ಕಂಡಿದ್ದಾಗ,  ಕರುಳಿನ ಕುಡಿಯಾದ್ದನ್ನ ಗಮನ್ಸಿದ್ದಿ. ನನ್ನ ಸೇವೆ ಮಾಡಕಿರೆ ನಿನ್ಕಣ್ಣಲ್ಲಿ ನನ್ನ ನಾಕಂಡಿದ್ದಿ. ನಿನ್ನ ಪುಸ್ತಕದ ಕೊನೆಯ ಹಾಳೇಲ್ಲಿ ಬರ್ಕಂಡಿದ್ದ "ನಾಮವನ್ನ ಹಾಕಿಕೊಂಡಿರುವರೆಲ್ಲಾ ಪಂಡಿತರೇನು ಅಲ್ಲಾ! ಕಾವಿಗಳ ಧರಿಸಿಬಿಟ್ಟರೆ ತ್ಯಾಗಿಯಾಗಲಾರ! ಅಂತಸ್ತನ್ನ ಕಟ್ಟಿಸಿದವನು ಶ್ರೀಮಂತನೇನು ಅಲ್ಲಾ! ತನ್ನ ತಾನರಿತವನೇ ಎಲ್ಲದಕ್ಕೂ ಈಶ" ಎನ್ನುವ ವಾಕ್ಯನೂ ಓದಿದ್ದಿ.
     ಇದ್ನೆಲ್ಲಾ ತಿಳ್ಕಂಡ ನಾನೆಂಗೆ ಹೇಳ್ಳೋ, ನೀನು ಪೆದ್ದು ಅಂತೇಳಿ? ನೀನು ಬುದ್ಢಿವಂತರಲ್ಲಿ, ಬುದ್ಧಿವಂತ. ನಿನಗಿಟ್ಟ ಚೈತನ್ಯಹೇಳ  ಹೆಸರು ಸಾರ್ಥಕವಾಜು. ಈಗನಿನ್ನ ಮುಖವಾಡನ ಕಳಚ ಸಮಯ ಬಂಜು. ನೀನು ನಿಜವಾಗ್ಲೂ ಯಾರು ಅಂತೇಳದ್ನ ಎಲ್ರಿಗೂ ತಿಳಿವಂಗೆ ಮಾಡು. ಪ್ರಬುದ್ಧತೆ ಎನ್ನುವುದು ಹಂಗೇ ಎಲ್ಲರಿಗೂ ಬರುವಂತದ್ದಲ್ಲ. ಇದೇ ವಯಸ್ಸಿನಲ್ಲಿ ಬರ್ತು ಅಂತೇನೂ ಇಲ್ಲೆ. ಅದೊಂದು ಮಾಯಾಜಿಂಕೆಹಂಗೇಎಲ್ಲರನ್ನೂ, ತಾನೇ ಪ್ರಬುದ್ಧನೆಂಬ ಭ್ರಮೆಯಲ್ಲಿ ಬೀಳಿಸಿ ಉಸಿರುಗಟ್ಟಿಸ್ತಾ ಇರ್ತು. ಅದು ನಿಜವಾದ ಪ್ರಬುದ್ಧತೆಯಲ್ಲ ಅಂತೇಳಿ ತಿಳಿಯುವ ಹೊತ್ತಿಗೆ ಕಣ್ಣು ಮಂಜಾಗಿರ್ತು, ಮಾತು ನಡಗ್ತಾ ಇರ್ತು. ಚರ್ಮ ಸುಕ್ಕುಗಟ್ಟಿ ತನ್ನ ಸೌಂದರ್ಯನೆಲ್ಲಾ ಕಳೆದುಕೊಂಡಿರ್ತು, ಆದ್ರೆ ನನ್ನಮಗ ಈಗಲೇ ಪ್ರಬುದ್ಧ ಆಗೋಜ. ಹೇಳು, ನೀನ್ನಂತ ಮಗನ್ನ ಪಡೆದಿದ್ದಕ್ಕೆ, ನಾನು ಪುಣ್ಯವಂತನೇ ಅಲ್ದಾ? ಇದು ನಿನ್ನ ಒಂದು ಘಟ್ಟದ ಉನ್ನತಿ. ನೀನು ಮನಸ್ಸಿನಲ್ಲಿ  ಸುಖವಾಗಿ ಬದುಕುವುದನ್ನ ಕಲಿತಿದ್ದೆ. ಬೇರೆವ್ರ ಮನಸ್ಸಿಗೆ ಆನಂದನೂ ಕೊಡಬಲ್ಲೆ. ಆದ್ರೆ ನೀ ಇನ್ನೂ ಆಧುನಿಕನಾಜಿಲ್ಲೆ. ಅದನ್ನ ಕಲ್ಸಲೇ ಹೇಳೆ ನಿನ್ನ ಮುಂಬೈಗೆ ಕಳಸ್ತಾ ಇದ್ದಿ. ಅಲ್ಲಿ ನನ್ನ ಸ್ನೇಹಿತ ನರಸಿಂಹ ಇದ್ದ, ಅಂವ ನಿಂಗೆ ಆಧುನಿಕವಾಗುವುದನ್ನ ಕಲಿಸಿ ಕೊಡ್ತಾ." ಅಂತೇಳ್ತಾ ಇದ್ದಂಗೆ, ಅಳುವ ಪಾಲು ಈಗ ನಂದಾತು. "ನನ್ನ ಅಪ್ಪಯ್ಯಾ, ನಂಗೆ ತಿಳಿದೇ ಇದ್ದಂಗೇಯಾ, ನನ್ನ ಗಮನಿಸ್ತಿದ್ದಿದ್ದ. ಮೌನದಿಂದ ಇದ್ದ  ಅಂದತಕ್ಷಣ ಅವಂಗೆ ನನ್ಮೇಲೆ ಪ್ರೀತಿನೇ ಇಲ್ಲ ಅಂತರ್ಥಲ್ಲ! ಮತ್ತಲ್ದೇ, ನನ್ನ ಎಂದೆಂದಿಗೂ ಕಾಡಿಸ್ತಾ ಇದ್ದ ಬುದ್ದಿವಂತನಾರು!?’ ಎಂಬ ಪ್ರಶ್ನೆಗೆ ಉತ್ತರ ನಂಗೀಗ ಸಿಕ್ಕಿದ್ದು! ’ನಾನೇ ಬುದ್ದಿವಂತ!’ ನನ್ನ ಮನಸ್ಸಿನ ಆನಂದಕ್ಕೆ ಪಾರವೇ ಸಿಕ್ಕಿದ್ದಿಲ್ಲೆ. ಆ ಸಂತೋಷನ್ನ ಹೇಂಗೆ ತೋರಿಸ್ಕಳವು ಹೇಳದೇ ತೋಚ್ದೇನೇ, ಅವೆಲ್ಲವೂ ಕಣ್ಣಿನ ಮೂಲಕ ಹೊರಜಿಗಿತಾ ಇದ್ದಂಗೆ, ಕಣ್ಣಲ್ಲಿ ನೀರು ತುಂಬಿ ತುಂಬಿ ಬರ್ತಾ ಇತ್ತು. ಅಪ್ಪಯ್ಯನ್ನ ಹಂಗೇ ತಬ್ಬಿನಿಂತಿದ್ದೆ. ಅಂವ ತನ್ನ ಕೈ-ಗಳಿಂದ ನನ್ನ ಬೆನ್ನನ್ನ ಪ್ರೀತಿಯಿಂದ ಸವರ್ತಿದ್ದ



        "ಪಪ್ಪಾ.." ಎಂದು ಮುದ್ದಾಗಿ ಕರೆದ ನನ್ನ ಎರಡು ವರ್ಷದ ಪುಟ್ಟ ಆನಂದಿಯ ತೊದಲು ಮಾತಿಗೆ ಮತ್ತೆ ವಾಸ್ತವಕ್ಕೆ ಬಂದಿಳ್ದಿ ನಾನು. ಅವಳು ತನ್ನ ಪುಟ್ಟ-ಪುಟ್ಟ ಹೆಜ್ಜೆಗಳನ್ನಿಡ್ತಾ ನನ್ನಹತ್ರಕೆ ಓಡಿಬರ್ತಿದ್ಲು. ನಾನು ಆ ಕ್ಷಣ ಕೈಯಲ್ಲಿದ್ದ ಬುಟ್ಟಿನ್ನ ಕೆಳಗಿಟ್ಟು ಅವಳನ್ನ ಎತ್ಕಂಡಿ. ಅಲ್ಲೇ ಅಂಗಳದ ಅಟ್ಟದ ಮ್ಯಾಲೆ ಚಳಿ ಕಾಸಲು ನಿಂತ ಅಪ್ಪಯ್ಯ ನಂಗ್ಳನ್ನೇ ನೋಡ್ತಾ ಇದ್ದ. ನಾ ಅದ್ನ ಗಮನ್ಸಿದ್ದ ನೋಡಿ ಮತ್ತೆಲ್ಲೋ ನೋಡ್ತಾ ಇದ್ದಂಗೆ ಮಾಡ್ತಿದ್ದ ಅನ್ನದು ನನ್ ಗಮನಕ್ಕೆ ಬಂಜಿಲ್ಲೆ ಅಂತೇನಿಲ್ಲೆ. ಜೊತೆ-ಜೊತೆ ಅವ್ನ ಮುಖದ ಮಂದಹಾಸನೂ....!!



 

         ಮುಗಿಯಿತು..
ಮೊದಲ ಚಿತ್ರಕೃಪೆ: ದಿನೇಶ ಹೇಗಡೆ.
ಎರಡನೆಯದು: ಗೂಗಲ್, ಧನ್ಯವಾದಗಳು.

ಮಂಗಳವಾರ, ಡಿಸೆಂಬರ್ 13, 2011

ಬೃಂದಾವನ-2.


                     ತಂಪು ಕೊಡುವ ಮರವು ಬರಿದಾಗುವಿಕೆಯನ್ನೇ ಕಾಯುತ್ತಿರುವಂತಿದ್ದ ಚಿಂತೆಯೆಂಬ ದೆವ್ವವು, ಚಿತೆಗೆ ಬೆಂಕಿಗಾಹುತಿ ನೀಡಲು ಅಣಿಮಾಡತೊಡಗಿತು ವಸುದೇವನ ದೇಹವನ್ನು. "’ನಿನ್ನ ಪಾದತಳದ ಧೂಳಿನ ಸ್ಥಳದಲ್ಲಿ ನನ್ನ ಕಂದಮ್ಮಗಳನ್ನಿರಿಸುವೆ, ದಯವಿರಲಿ ನಮ್ಮಲ್ಲಿ. ಬದುಕಿಸು ನಮ್ಮನ್ನು’ ಎನ್ನುತ್ತಾ ಪರಿ-ಪರಿಯಾಗಿ ಬಾವನ ಪದತಲದಲ್ಲಿ ಬೇಡಿ ಬದುಕಿಕೊಂಡೆವು. ಯಾವ ಪುರುಷಾರ್ಥದ ಸಾಧನೆಗೆ? ಹುಟ್ಟಿ, ಬೆಳೆದು, ಜಗದ ಸೌದಂರ್ಯವನ್ನೆಲ್ಲಾ ಕಣ್ಣೊಳಗಿನ ಗೋಲದಲ್ಲಿ ತುಂಬಿ, ವಿದ್ಯೆಯೆಂಬ ಶಾರದೆಯನ್ನ ನಾಲಿಗೆಯ ಮೇಲೆ ನಲಿಸಿ, ಅರಿಯ ರಕುತದಲ್ಲಿ ಶೌರ್ಯದಿಂದ ಬಸಿದ ಬೆವರು ತೊಳೆಸಿ,  ನೀರೆಯ ಸೀರೆಯ ನೆರಗು; ಅಂಚು ಕಾಣದಂತೆ ಮಾಡಿ, ಸೂರ್ಯಸದೃಶಕ್ಕೆ ಯದುಕುಲದ ಪತಾಕೆಯ ಹಾರಿಸಿ, ಕೊನೆಯ ಕಾಲದ ನಾರುಬಟ್ಟೆಯ ಶಾಂತ್ಯುದರಕ್ಕೆ ಆಹಾರವಾಗಬೇಕಿದ್ದ ಕಂದಮ್ಮಗಳೆಲ್ಲಾ, ಪೃಥಿವಿಯನ್ನ ಆಘ್ರಾಣಿಸುವುದರೊಳಗೇ, ಗೋಡೆಗೆ ಶಿರವ ಬಡಿಸಿ, ನೆತ್ತರನ್ನೆಲ್ಲಾ ಸೆರೆಯ ಕಂಭಿಕಳಿಗೆ ಅಭಿಶೇಕಿಸಿ, ಕೇಳಲಾಗದೇ ಇದ್ದರೂ, ಕಿವಿಗೆ ಬಂದು ಬಡಿಯುವ ಆ ಆಕ್ರಂದನ, ನಿದ್ರಾದೇವಿಗೆ ಬರದಂತೆ ನೀಡಿದ ಕಟ್ಟಪ್ಪಣೆಯಂತಿದ್ದು, ಘಳಿಗೆಯ ಸಮಾಧಾನತೆಯನ್ನೂ ದೂರ ಮಾಡಿಬಿಟ್ಟಿದೆ. ಯಾಕೆ ಬೇಕಿತ್ತು ಈ ಜನುಮದ ನರಕ? ಕಂಸನ ಓರೆಯನ್ನು ಬಿಟ್ಟ ಕತ್ತಿ, ಪತ್ನಿಯ ಕತ್ತಿನ ರುಚಿಯನ್ನ ನೋಡುವ ದೆಸೆಯಿಂದ ಮೇಲೇರಿದಾಗ ನನ್ನೆದೆಯಾದರೋ ಸಡ್ಡುಹೊಡೆದು ನಿಂತಿದ್ದರೆ, ವೀರಸ್ವರ್ಗವನ್ನಾದರೂ ಏರಬಹುದಿತ್ತೇನೋ!? ಎಂದಿನವರೆಗೆ ಬೆಳಕಿಗೆ ಹೆದರಿ ಓಡುವ ಹೇಡಿ ಕತ್ತಲಲ್ಲಿ ಮರೆಯಾಗಿನಿಲ್ಲುವುದು?" ಎನ್ನುವ ಪರಿತಾಪದಿಂದ ದಹಿಸುತ್ತಿರುವ ಮನವು ಒಂದೇಸವನೆ ಚಡಪಡಿಸುತ್ತಿದ್ದರೆ, ತೊಡೆಯನ್ನು ಆಶ್ರಯಿಸಿದ ದೇವಕಿಯ ನಿದ್ದೆಗೆ ಎಲ್ಲಿ ಭಂಗತರುವುದೋ ಎನ್ನುವ ಕಾರಣಕ್ಕೆ ದೇಹವು ಅಲುಗಾಡದೇ ಕುಳಿತಿತ್ತು.

                     ಕಾಲವು ತಾನು ಯಾರಪ್ಪಣೆಗೂ ಕಾಯದೇ ಆ ರಾತ್ರಿಯ ಮುಸುಕನ್ನ ತೊರೆದು, ಬೆಳ್ಳನೆಯ ಬೆಳಕಿನ ಹಾಸಿಗೆಗೆ ಹೊರಳಲು ಅಣಿಯಾಗುತಿತ್ತು. ರಾತ್ರಿಯೇ ವಸುದೇವನಲ್ಲಿ ಚರ್ಚಿಸಿ, ಕೈ-ಗೊಂಡ ನಿರ್ಧಾರದತ್ತ ಕಾರ್ಯೋನ್ಮತ್ತರಾಗಿದ್ದರು ಗರ್ಗರು. ಸೀದಾ ರೋಹಿಣಿಯಿರುವಲ್ಲಿ ತೆರಳಿ, ವಸುದೇವನ ಮನದಿಂಗಿತವನ್ನ ಅವಳಲ್ಲಿ ತಿಳಿಸಿ, ಗೊಲ್ಲತಿಯರ ವೇಷವನ್ನ ಧರಿಸುವಂತೆ ತಿಳಿಸಿ, ಬೆಳ್ಳಂ ಬೆಳಗ್ಗೆನೇ ಗೋಕುಲದಿಂದ ಹಾಲು, ಮೊಸರು, ಬೆಣ್ಣೆ ಮಾರಲು ಬರುವ ಗೊಲ್ಲ ಸ್ತ್ರೀಯರಲ್ಲಿ, ಅವಳನ್ನೂ ಯಾರಿಗೂ ಅನುಮಾನಬಾರದಂತೆ ಮಥುರಾ ನಗರವನ್ನ ಬಿಡಲು ಸಕಲ ಏರ್ಪಾಡುಗಳನ್ನೂ ಮಾಡಿಸಿದರು. ಹಾಗೇ ನಗರವನ್ನ ಬಿಟ್ಟ ಗೊಲ್ಲತಿಯರ ಸಮೂಹ ಯಮುನಾ ನದಿಯನ್ನ ದಾಟಿತು.


                  ಹಿಮೇಶ್ವರನು ನದಿಯಾಗಿ ಹರಿದು, ಎಲ್ಲರ ತನು, ಮನವನ್ನ ತಣ್ಣಗೆ ಇರಿಸುತ್ತಿರಲಾಗಿ, ತಾನು ಇನ್ನೊಂದು ರೂಪವನ್ನ ಧರಿಸಿ, ಮುಕ್ಕೋಟಿದೇವತೆಗಳು ಆಶ್ರಯಿಸಲ್ಪಟ್ಟು ಪೂಜಿಸಲ್ಪಡುವ ಗೋ-ಮಾತೆಯ ಕೆಚ್ಚಲಿನಲ್ಲಿ ಹರಿದು, ಹಸು-ಗೂಸುಗಳಿಗೆ, ಚಪಲಚಿತ್ತ ನಾಲಿಗೆಗೆ ನಾ ನಾ ವಿಧಗಳಲ್ಲಿ ರುಚಿಯನ್ನ ಉಣುಬಡಿಸುತಿದ್ದನು ಆ ಊರಿನಲ್ಲಿ.
ಗೋವರ್ಧನ ಗಿರಿಯ ತಪ್ಪಲಿನಲ್ಲಿ ಬೆಳೆದು ನಿಂತ ಹಸಿ-ಹಸಿ ಹಸಿರು; ತಾನು ಏನೂ ನಿನಗೆ ಕಮ್ಮಿ ಇಲ್ಲ ಎನ್ನುವಂತೆ ದಷ್ಟಪುಷ್ಟತೆಯನ್ನ ಹಸುವಿಗೂ ನೀಡಿ, ಹಿಂಡಲ್ಪಟ್ಟು, ಕಸುವಿನಿಂದ ಕೂಡಿದ ರಟ್ಟೆಯಲ್ಲಿ ಹೋಗಿ ಆಶ್ರಯಿಸುತ್ತಿದ್ದವು ಆ ಊರಿನ ಜನರಲ್ಲಿ. ಮಾಂದಾರ,ಮಲ್ಲಿಗೆ, ಕ್ಯಾದಿಗೆ, ಪಾರಿಜಾತಾದಿ ಪುಷ್ಪಗಳು ತಮ್ಮ ಸೌಗಂಧಬರಿತ ಉಸಿರಾಟ ಸಗಣಿಯ ವಾಸನೆ ಹತ್ತಿರ ಸುಳಿಯದಂತೆ ಮಾಡುತ್ತಿದ್ದವು. ಕಿನ್ನರ-ಕಿಂಪುರುಷರ ಸುಮಧುರ ಧನಿಗಳು ಹಾಡಿ, ನಲಿಯುತ್ತಿರುವ ಗೊಲ್ಲರ ವೇಷದಲ್ಲಿ ಸುತ್ತುತ್ತಿದ್ದರೆ, ಪಕ್ಷಿಗಳೆಲ್ಲಾ ಹಿಮ್ಮೇಳನಕ್ಕೆ ತಮ್ಮ ಧನಿಗಳನ್ನ ಸೇರಿಸಿ ಕಳೆಕಟ್ಟುತಿದ್ದವು. ಕೆಂಪಾದ ಕೆಮ್ಮಣ್ಣು ಅಲ್ಲಿನ ಗೋಡೆಗಳಲ್ಲಿ ಬಳಿಯಲ್ಪಟ್ಟು, ಅದರ ಮೇಲೆ ಚಿತ್ತಾರವಾಗಿನಿಂತ ಶೇಡಿ ಪ್ರತಿಯೊಂದು ಮನೆಯನ್ನೂ ಕಲ್ಯಾಣ ಮಂಟಪೋಪಾದಿಯಲ್ಲಿ ಸಿಂಗರಿಸಿದ್ದವು. ಅವುಗಳಲ್ಲಿ ನೋಡಿದರೆ, ಜಗವನ್ನೇ ಮರೆಸುವ, ಅಲಂಕಾರವೇ ವಿಹರಿಸುವ ನೆವವೊಡ್ಡಿ, ಕಿಲ-ಕಿಲ ನಗುವಿನೊಡನೆ, ಸ್ವರ್ಗವನ್ನೇ ಧರೆಗಿಳಿಸಿ, ಅಪ್ಸರೆಯರ ಸಮೂಹವೇ ನೆರೆದಂತೆ, ನೆರೆತ ಮಂದಾಕಿನಿಯರು ನಲಿದಾಡುತ್ತಿದ್ದರಲ್ಲಿ.  ಆಡುತ್ತಾ, ಛೇಡಿಸುತ್ತಾ ದನ-ಕರುಗಳೊಡನೆ, ಸಂಜೆಗೆ ಮನೆ ಹಿಂತಿರುಗುತ್ತಿರುವ ಗೊಲ್ಲಹುಡುಗರ ಕುಚೇಷ್ಟೆಯನ್ನ ಕೇಳಿ, ಸೂರ್ಯನೂ ಕೂಡ ತನ್ನ ರಂಗನ್ನ ಮುಖದತುಂಬಾ ತುಂಬಿಕೊಂಡು, ರಸಿಕರ ನೋಟಕ್ಕೆ ನೀರಾದ ನೀರೆಯ ಮೊಗದಂತೆ ಮುಖಮಾಡಿಕೊಂಡು ಪಶ್ಚಿಮದಲ್ಲಿ ಕರಗುತ್ತಿರಲಾಗಿ,    ನಂದಗೋಕುಲವನ್ನ ಪ್ರವೇಶಿಸಿದರು ಗೊಲ್ಲತಿಯರು.

                        ಮೊದಲೇ ಆಗಮಿಸಿದ ಗರ್ಗರು, ಆ ಸಮೂಹದಲ್ಲಿದ್ದ ರೋಹಿಣಿಯನ್ನ ನಂದ-ಯಶೋಧರಿಗೆ ಪರಿಚಯಿಸಿ, ಅವಳ ಹಾಗು ಅವಳ ಉದರವನ್ನಾಶ್ರಯಿಸಿದ ಮಗುವಿನ ಯೋಗಕ್ಷೇಮವನ್ನ ಅವರ ಕೈಗಳಿಗೆ ಹಸ್ತಾಂತರಿಸಿ, " ನೀವೇನು ಭಯಪಡುವ ಅವಶ್ಯಕತೆ ಇಲ್ಲಾ ಆಚಾರ್ಯರೇ, ನನ್ನ ಸ್ನೇಹಿತನ ಪತ್ನಿಗೆ ಏನೂ ಕುಂದು-ಕೊರತೆಗಳು ಬಾರದಂತೆ ಸಲಹುತ್ತೇವೆ" ಎನ್ನುವ ವಾಗ್ದಾನವನ್ನ ಪಡೆದು, ಒಂದು ಜೀವ ಉಳಿಸಿದ ನೆಮ್ಮದಿಯ ಉಸಿರನ್ನ ರೋಹಿಣಿಯಲ್ಲಿ ಆಶೀರ್ವಾದ ರೂಪದಲ್ಲಿ ಬಿಟ್ಟು ಹಿಂತಿರುಗಿದರು. ಶಾಂತ ಚಿತ್ತದ ರೋಹಿಣಿಯು ತನ್ನ ಪ್ರಸವದ ದಿನಗಳನ್ನ ಎದುರು ನೋಡುತ್ತಾ ಹಾಯಾದ ಘಳಿಗೆಗಳನ್ನ ಆ ಊರಿನಲ್ಲಿ ಕಳೆದು, ನವ ಮಾಸಗಳನ್ನೂ ದಾಟಿಬಿಟ್ಟಳು. ಆದರೆ, ಅನುದಿನವೂ ರಾತ್ರಿಯ ನಿದ್ದೆಯ ಸಮಯದಲ್ಲಿ, ತನ್ನ ಯೋಗಕ್ಷೇಮವನ್ನ ನೋಡಿಕೊಳ್ಳಲು  ಸಹಸ್ರ-ಸಹಸ್ರ ಮುಖಗಳ ಹೆಡೆಗಳನ್ನ ಚಾಚಿ, ಬಸುರಿಯ ಮೊದ್ದು ಮುಖವನ್ನೇ ನೊಡುತ್ತಾ ಕುಳಿತಿರುವ ಸರ್ಪವು  ಗಮನಿಸುತ್ತಿರುವಂತೆ ಆಗುವ ಅನುಭವವನ್ನ ಅವಳು ಯಾರಲ್ಲಿಯೂ ತಿಳಿಸಲೇ  ಇಲ್ಲಾ!

                   ಈಕಡೆ ಮಾತ್ರಾ ಮಥುರಾ ನಗರಾಧಿಪತಿಯನ್ನ, ಅರೆನಿದ್ದೆಯ ಕನಸಿನಲ್ಲಿ ತಾನು ಮಾಡಿದ ಪಾಪವೆಲ್ಲಾ   ಹಾವಿನ ರೂಪವ ತಾಳಿ, ಅದರ ಬಾಲವೆಂಬ ಉರುಳಿಗೆ ಸಿಕ್ಕಿಬಿದ್ದು, ಉಸಿರುಗಟ್ಟಿದ ಅನುಭವವನ್ನ ಪಡೆಯುತ್ತಾ, ಬೆಚ್ಚಿಬೀಳಿಸುತ್ತಾ ಎಬ್ಬಿಸಿಬಿಡುವಂತೆ ಮಾಡುತಿತ್ತು ಆ ಹಾವು!!  ಹಾಗೇ ಆ ದಿನವೂ, ಕೆಮ್ಮುತ್ತಾ , ದಡ್ಡನೆ ಎದ್ದು ಕುಳಿತ ಕಂಸ. ರಾಜವೈದ್ಯರಿಂದ ತಿಳಿಸಲ್ಪಟ್ಟಂತೆ, ಈ ದಿನ ದೇವಕಿಯ ಸಪ್ತಮ ಗರ್ಭ ಇಳಿಯುವ ದಿನ, ಎನ್ನುವುದನ್ನ ನೆನಪಿಗೆ ತಂದುಕೊಳ್ಳುತ್ತಾ, ಗರ್ಭಸ್ರಾವ ಆಗಿರುವ ವಿಚಾರ ತಿಳಿಯದೇ ಇರುವ ಅವನು, ಸೇವಕರು ತರುವ ವಾರ್ತೆಗಾಗಿ ಕಾಯುತ್ತಾ ಕುಳಿತಾದವನಾದ!


ಮುಂದುವರೆಯುತ್ತದೆ......

ಬುಧವಾರ, ಡಿಸೆಂಬರ್ 7, 2011

ಬೃಂದಾವನ- 1.


                     ಕಾರ್ಮುಗಿಲನ್ನೆಲ್ಲಾ ಮರೆಯಾಗಿಸಿ ಕರಿಮೋಡವು, ವಾರಿಧಿಯ ಜಲವನ್ನೇಲ್ಲಾ ಜಗಚ್ಛಕ್ಷುವಿನಾ ಬಿಸಿನೊಟದಿಂದ ಹೀರಿ, ದ್ರುಮಿಲಕುಮಾರನ ಮಂಗಾಟದಿಂದಾ ಬೆದರಿ ಓಡುತ್ತಿರುವ ರಸ-ಋಷಿಗಳ ಎದುರುಸುರಿಗೆ ಹಾರಿ, ಜಗದುಸುರಿನ ಹಸಿರು ತೋರಣದಾ, ಮುಗಿಲೆತ್ತರಕೆ ಮೊಗವಹೂಡಿ ನಿಂತ ಹಿಮಶಿಖರದಾ ತಂಪು-ತಪ್ಪಲಿಗೆ ನಡುಗಿ, ತರ-ತರ ಗುಡುಗಿ, ಏನು ಮಾಡಬೇಕೆಂದರಿಯದೇ ಮುಗ್ಧಮಗುವಿನಾ ಕಣ್ಣೀರಧಾರೆಯಂತೆ ಒಂದೇಸವನೆ ಕರಗಿ ನೀರಾಗಿ ಆರ್ಯಾವರ್ತವನ್ನ ತೋಯಿಸುತಿತ್ತು. ಬಿದ್ದ ಜಲ, ಭೂ-ತಾಯಿ, ಪತಿಯ ಆಣತಿಗೆ ಹೆದರಿ ಒಡಲಿಗೆ ಸಾಗಿಸಿ,ರಕ್ಕಸರ ಕೂಟದ ಅಟ್ಟಹಾಸದ  ಬಾಯಾರಿದ ಕೆಂಪುನಾಲಿಗೆಗೆ ಆಹಾರವಾಗಿ ಎಲ್ಲಿ ನೀಡುವುದೋ ಎಂದು ಬೆದರಿ, ಕಪ್ಪು ಪಾತಾಳದಾ ನರಕ ಭಯದಿಂದ ಒಂದೇಸವನೇ ಸಿಕ್ಕ-ಸಿಕ್ಕ ಕೊರಕಲ್ಲೆಲ್ಲಾ ಹರಿದಾಡಿ ಯಮುನೆಯ ಒಡಲಸೇರಲು ಧಾವಿಸುತಿದ್ದವು. ನೊರೆಬೆಳ್ಳಗೆ ಹರಿಯುತ್ತಿರುವ ಹಿಮಪುತ್ರಿಯಾದರೋ ಹಸುಗೂಸಿನ ಎಳೆರಕುತದಾ ಬಣ್ಣಕ್ಕೆ ತಿರುಗುವ ಭೀತಿಗೆ ಭೆದರಿ, ಬೆಂಡಾಗಿಯಾದರೂ ತಪ್ಪಿಸಿಕೊಂಡರೂ... ತನ್ನನ್ನೇ ಆಶ್ರಯಿಸಿ ನಿಂತ ಮಥುರಾ ಪಟ್ಟಣದತ್ತ ತಿರುಗಿಯೂ ನೋಡದೇ ತನ್ನಾಂತಿಮ ಗುರಿಯತ್ತ ತಣ್ಣಗೆ ಸಾಗುತಿತ್ತು. ಪುಟ್ಟ-ಪುಟ್ಟ ದೇಗುಲದಂತಿರುವ ಮನೆಯಿದ್ದರೂ, ಸೆರೆಮನೆಯಂತಿರುವ, ಎಳೆಮಗುವಿನ ಬೇಲಿದಾಟಿದಾ ನಗುವಿನ ಸದ್ದನ್ನ ಮರೆತೇ ಹೋದಾ ಆ ನಗರವು, ಕಂಸನ ಭಯದಿಂದ ನಡುಗುತ್ತಾ, ಕಂದಮ್ಮಗಳ ರಾತ್ರಿಯ ಅಳುವನ್ನ ಅವನ ಕಿವಿಗೆ ತಾಕದಂತೆ ಎಚ್ಚರವಹಿಸುತ್ತಾ, ನಿದ್ದೆಗೆಟ್ಟೋ ಅಥವಾ ರಾಜನ ಮೇಲಿನ ಉಗ್ರಕ್ಕೋ ಕಡು ಕೆಂಪಾದ ಕಣ್ಣುಗಳಿಂದ  ಕೂಡಿದ  ಪುರಜನರಿಂದ ಕಡುರಾತ್ರಿಯಲ್ಲಿ ತನ್ನಿರುವಿಕೆಯನ್ನ ನೆನಪಿಸುತಿತ್ತು. ಸುಖದ ಸುಪ್ಪತ್ತಿಗೆಯ ಮೇಲೆ ಹಾಯಾಗಿ ಮಲಗಿದ ಕಣ್ಣು, ಮುಚ್ಚಿ ಮಲಗಿದ್ದರೂ, ಸಾವಿನಾಂಜಿಕೆಯ ಮನವು,  ಒಡಹುಟ್ಟಿದ ದೇವಕಿಯ ಗರ್ಭದ ಪ್ರಸವದ ನೋವಿನ ನರಳುವಿಕೆಗೆ ಕಾತರಿಸುತ್ತಾ ಕಿವಿಯನ್ನಾ ಎಚ್ಚರವಾಗಿಸಿಯೇ ಇತ್ತು. ರಾಜನಾಗಿ ಮೆರೆಯಬೇಕಿದ್ದ ತನ್ನ ಪತಿರಾಯನಾದ ವಸುದೇವನ ದೆಶೆಯನ್ನ ಹಳಿಯುತ್ತಾ, ಹುಟ್ಟಿ ಕ್ಷಣವಾಗದೇ ತನ್ನಾರೂ ಮಕ್ಕಳನ್ನ  ಕಳೆದುಕೊಂಡು, ತನ್ನ ಗರ್ಭವ ಆಶ್ರಯಿಸಿ ನಿಂತ ಏಳನೆಯ ಮಗುವಿನ ಭವಿಷ್ಯತ್ತಿನಲ್ಲಿ ಸಂಭವಿಸುವ ಕರ್ಮವ ನೆನೆಯುತ್ತಾ.   ಕಣ್ಣೀರುಹಾಕುತ್ತಾ, ನೊಂದ ಕಣ್ಣುಗಳಿಂದ ಪತಿಯನ್ನೇ ನೋಡುತ್ತಿದ್ದಳು. 
                                                                 ********************
                     
                   ಭಿರ-ಭಿರನೆ ವೇಗದಿಂದ ಬೀಳುತ್ತಿರುವ ಹೆಜ್ಜೆಗೆ ನಡುಗಿದ ಧೂಳುಗಳು ಪವಿತ್ರ ಪಾದಗಳಿಗೆ ದಾರಿಮಾಡಿಕೊಡುತ್ತಿದ್ದವು. ತಮ್ಮ ಆಪ್ತ ಗುಪ್ತಚರರಿಂದ ಕಿವಿಗೆ ತಾಕಿದ ವಿಷಯದಿಂದ, ಮನದಾಳದಲ್ಲೇ ಏಳುತ್ತಿರುವ ಆಲೋಚನೆಗೆ ಲಗಾಮು ಹಾಕುತ್ತಿರುವ ಮನಸ್ಸಿನ ಪ್ರಯತ್ನ ಒಂದು ಕಡೆ ಸಾಗುತ್ತಿದ್ದರೆ, ಕಣ್ಣು ಮುನ್ನೋಟದತ್ತ ತನ್ನ ಪ್ರಕಾಶವನ್ನ ಬೀರಲು ಪ್ರಯತ್ನಿಸುತ್ತಿತ್ತು. ನೆರೆತು ಬಿಳಿಯಾದ ಗಡ್ದ ಮೀಸೆ ಅವರ ಅನುಭವವನ್ನ ಸಾರಿ-ಸಾರಿನುಡಿಯುವಂತಿತ್ತು. ತನ್ನ ಪುರವನ್ನ ಕಾಪಾಡುವ ಮಾರ್ಗದತ್ತ ಸಾಗಿ ಹೋಗುವಂತಿತ್ತು ಅವರ ದೇಹ. ಅದು ತನ್ನ ಕಾರ್ಯವೂ ಹೌದೆಂದೂ ಗೊತ್ತಿತ್ತು. ಹಾಗೇ ಬರುತ್ತಿರುವ ಯಾದವರ ಕುಲಗುರುವಾದ ಗರ್ಗಾಚಾರ್ಯರನ್ನು ನೋಡಿದ ಕಾವಲುಗಾರರು ಗೌರವದಿಂದ ದಾರಿ ಬಿಟ್ಟು ನಿಲ್ಲುತ್ತಿದ್ದರು. ಗುರುಗಳು ಸೀದಾ ಪ್ರವೇಶಿಸಿದ್ದರು ವಸುದೇವ-ದೇವಕಿಯನ್ನಿರಿಸಿದ ಸೆರೆಯೊಳಗೆ. 


                    ಆಗತಾನೇ ವಸುದೇವನು, ಗರ್ಭಪಾತ ಆಗಲ್ಪಟ್ಟು ಉದರದ ಭಾರವನ್ನೆಲ್ಲಾ ಕಣ್ಣಿನಿಂದಲೇ ಕರಗಿಸಿಕೊಳ್ಳುತ್ತಿರುವ ತನ್ನ ಪತ್ನಿಯ ಕಣ್ಣೀರನ್ನ ಒರೆಸಿ, ಒದ್ದೆಯಾದ ಕೈಯನ್ನ-ಮನದಲ್ಲಿ ಏಳುತ್ತಿರುವ ಹೇಡಿತನದ ಬೆಂಕಿಯನ್ನ ಆರಿಸಲು ಪ್ರಯತ್ನಿಸುತ್ತಾ ಕುಳಿತಿದ್ದ. ತರಾ-ತುರಿಯಲ್ಲಿ ಪ್ರವೇಶಿಸಿದ ಕುಲಗುರುವನ್ನ ನೋಡಿ ಎದ್ದು ನಿಂತು ನಮಸ್ಕರಿಸಿದ. ಪ್ರತಿವಂದನೆ-ಆಶೀರ್ವದಿಸಿದ ಗುರುಗಳು, ತನ್ನ ಕಿವಿಗೆ ಬಿದ್ದ ದೇವಕಿಯ ಗರ್ಭಪಾತದ ವಿಷಯವನ್ನ ಖಾತ್ರಿಮಾಡಿಕೊಂಡು,ತಿಳಿಯಲ್ಪಟ್ಟ ರೋಹಿಣಿಯ ಗರ್ಭಧರಿಸಿದ ಸೂಕ್ಷ್ಮತೆಯನ್ನ ಐದನೆಯ ಕಿವಿಗೆ ಬೀಳದಂತೆ ತಿಳಿಸಿದರು. ಇದನ್ನ ಕೇಳಿದ ವಸುದೇವನ ಕಣ್ಣುಗಳು ಅರಳಿನಿಂತವು. ಒಂದು ಕಡೆ, ತನ್ನ ಕಣ್ಣೆದುರಿಗೇ ಮಕ್ಕಳನ್ನೆಲ್ಲಾ ಕಳೆದುಕೊಂಡು ಇಹ-ಪರದ ನರಕ ಭೀತಿಯಲ್ಲಿರುವಾಗ, ಗುರುಗಳಿಂದ ತಿಳಿಸಲ್ಪಟ್ಟ ವಿಷಯವು, ತನ್ನಾರೂ ನೋಡದೇ, ಒಂಟಿಯಾಗಿ ಕುಳಿತಿರುವಾಗ, ದೂರದಿ ದುಂಭಿಯ ಝೇಂಕಾರದ ಸದ್ದಿನ ಭ್ರಮೆ-ಭ್ರಮಿಸಿದಾಗ, ತಾನರಳಿದ ಸಾರ್ಥಕತೆಗೆ ನಲಿಯುವಂತಿರುವ ಹೂವಿನಂತ ಮನಸ್ಸಿಗೆ ಮಧುವನ್ನ ಚೆಲ್ಲಿದಂತಾಯಿತು. ಆ ಸಂತೋಷ ಹೆಚ್ಚುಹೊತ್ತುನಿಲ್ಲದೇ, ಮುಖದಲ್ಲಿ ಭೀತಿಯು ಆವರಿಸಿ ನಿಂತಿತು.
             ಅದನ್ನ ಗ್ರಹಿಸಿದ ಆಚಾರ್ಯರು, "ಹೌದು ವಸುದೇವ, ನಿನ್ನ ಆಲೋಚನೆಯ ಮಾರ್ಗ ಸರಿಯಾಗಿಯೇ ಇದೆ, ದೇವಕಿಯ ಗರ್ಭಪಾತವಾಗಿರುವಿಕೆ ಕಂಸನ ಕಿವಿಗೆ ತಲುಪಿ, ಅಭ್ಯಾಸವಾಗಿ ಹೋದ ಹತ್ಯೆಯ ಪ್ರವೃತ್ತಿಯ ದೃಷ್ಟಿ ರೋಹಿಣಿಯ ಮೇಲೆ ತಿರುಗುವ ಸಂಭವ ಇದ್ದೇ ಇದೆ" ಎನ್ನುವ ಮೂಲಕ, ಅವನು ಅರಿತದ್ದನ್ನ ಹೌದೆಂದು ತಲೆಯಾಡಿಸಿ ಅವನ ಮನದಲ್ಲಿ ಮೂಡಿದ ಆಲೋಚನೆಗೆ ಪುಷ್ಟಿಯನ್ನ ನೀಡಿದರು. ಇದರಿಂದ ಮತ್ತೂ ಭೀತಿಗೆ ಒಳಗಾಗಿ ವಸುದೇವನು ಇದಕ್ಕೆ ಪರಿಹಾರ ಏನೆಂಬಂತೇ ಅವರನ್ನೇ ದೃಷ್ಟಿಸುತ್ತಾ ನಿಂತ. 
               "ಹೆದರ ಬೇಡ. ರೋಹಿಣಿಯ ಗರ್ಭದ ವಿಷಯ ಇನ್ನೂ ಅವನಲ್ಲಿ ಹೋಗಿ ತಲುಪಿಲ್ಲ. ಇದಿನ್ನೂ ನಮ್ಮೊಳಗೆ ಮಾತ್ರಾ ಇದೆ. ಅಷ್ಟರೊಳಗೆ ಇದಕ್ಕೆ ಪರಿಹಾರವನ್ನ ಊಹಿಸಬೇಕಷ್ಟೇ! ನಿನ್ನ ಸ್ನೇಹಿತನಾದ ಗೋಕುಲದ, ನಂದನ ನೆನಪಿರಬೇಕಲ್ಲವೇ ನಿನಗೆ?" ಗರ್ಗರ ಪ್ರಶ್ನೆಗೆ, ಹೌದೆನ್ನುವಂತೆ ತಲೆಯಾಡಿಸಿದ ವಸುದೇವ. " ಹೌದು. ಅವರ ಮನೆಗೆ ಅವಳನ್ನ ಒಯ್ದು, ಬಿಡಲು ಆಲೋಚಿಸಿದ್ದೇನೆ" ಎನ್ನುತ್ತಾ, ಪುನಃ ಅವನತ್ತಲೇ ನೋಡಿದರು. 
               ಈ ಮಾತನ್ನ ಕೇಳಿ ಸ್ವಲ್ಪ ಸಮಾಧಾನ ಪಡೆದ ವಸುದೇವ ಕಂಸನಿಗೆ ಅನುಮಾನ ಬಾರದಂತೆ ಕರೆದೊಯ್ಯಲು ತಿಳಿಸಿ, ಚಿತ್ತ ಸಂತೋಷದಿಂದ ಆಚಾರ್ಯರನ್ನ ಬೀಳ್ಕೊಟ್ಟು, ಅತ್ತು-ಅತ್ತು ದಣಿದು, ನಿದ್ದೆಯಲ್ಲೇ ಕನವರಿಸುತ್ತಿರುವ ದೇವಕಿಯ ತಲೆಯನ್ನ ನಿಧಾನವಾಗಿ ಎತ್ತಿ, ತನ್ನ ತೊಡೆಯಮೇಲಿರಿಸಿಕೊಂಡು ಕಣ್ಣುಮುಚ್ಚಿ ಆಲೋಚಿಸುತ್ತಾ ಕುಳಿತ.  

                   
                                                                                                                            ಮುಂದುವರೆಯುತ್ತದೆ........